Homeಸುದ್ದಿಗಳುಅಭಿಜ್ಞಾ ಸ್ಕೂಲ್ ಡ್ಯಾನ್ಸ್ ಸ್ಮೃತಿ ೨೦೨೫  ನೃತ್ಯೋತ್ಸವ

ಅಭಿಜ್ಞಾ ಸ್ಕೂಲ್ ಡ್ಯಾನ್ಸ್ ಸ್ಮೃತಿ ೨೦೨೫  ನೃತ್ಯೋತ್ಸವ

spot_img

ಭರತನಾಟ್ಯ ಕಲೆಯನ್ನು ಆರಾಧಿಸಿ ಪೋಷಿಸುವ  ಸ್ಮೃತಿ ೨೦೨೫ ನೃತ್ಯ ಕಾರ‍್ಯಕ್ರಮ ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ನಿನ್ನೆ ಭಾನುವಾರ ನಡೆಯಿತು.  ಅಭಿಜ್ಞಾ ಸ್ಕೂಲ್ ಆಫ್ ಡ್ಯಾನ್ಸ್ ನ ಮತ್ತು ಅದರ ಪ್ರಧಾನ ಗುರುಗಳಾದ ವಿದುಷಿ ಸಮೀಕ್ಷಾ ಅವರ ಶಿಷ್ಯ ವೃಂದದಿಂದ ಮೂಡಿಬಂದ ಈ ಕಾರ‍್ಯಕ್ರಮವು  ಶಿಸ್ತು ಮತ್ತು ಭಾವಪೂರ‍್ಣ ಅಭಿನಯದ ಒಂದು ಸುಂದರ ಸಂಗಮವಾಗಿತ್ತು. ಗುರು ಸಮೀಕ್ಷಾ ಅವರ  ನಿರ‍್ದೇಶನ ಮತ್ತು ವಿದ್ಯಾರ‍್ಥಿಗಳ ಅದ್ಭುತ ಪ್ರತಿಭೆಯು ಪ್ರೇಕ್ಷಕರಿಗೆ ಕಲಾ ಆಸ್ವಾದನೆಯ ಪರಾಕಾಷ್ಠೆಯನ್ನು ನೀಡಿತು.

ನೃತ್ಯ ಪ್ರದರ‍್ಶನಕ್ಕೆ ಮುನ್ನ, ಪ್ರಕಾಶ್ ಸ್ಕೂಲ್ ಆಫ್ ಪರ‍್ಫಾರ‍್ಮಿಂಗ್ ಆರ‍್ಟ್ಸ್ ಶಾಲೆಯ ಮಕ್ಕಳಿಂದ ಇಂಪಾದ ಕೊಳಲು ವಾದನ ಕಾರ‍್ಯಕ್ರಮಕ್ಕೆ ಹೊಸ ಆಯಾಮ ನೀಡಿತು. ಭರತನಾಟ್ಯ ನೃತ್ಯ ಕಾರ‍್ಯಕ್ರಮವು ಸಾಂಪ್ರದಾಯಿಕ ಮಲ್ಲಾರಿ ಪ್ರಸ್ತುತಿಯೊಂದಿಗೆ ಆರಂಭವಾಗಿ ಗಣಪತಿ ಆರಾಧನೆಗೆ ಮೀಸಲಾದ ಭಾಗಗಳಲ್ಲಿ ಸಾಗಿತು.

ಶ್ರೀ ಗಣೇಶ ಶರಣು ಕೃತಿ ಮತ್ತು ಸದ್ಗುರು ಗಣಪತಿ ಸಚ್ಚಿದಾನಂದ ಸ್ವಾಮೀಜಿ ರಚನೆಯ ಪ್ರಸಿದ್ಧ ಪಾಹಿ ಪಾಹಿ ಗಜಾನನ ಕೃತಿಗೆ ಮಾಡಿದ ನೃತ್ಯವು ಭಕ್ತಿಯ ಭಾವವನ್ನು ಅಭಿವ್ಯಕ್ತಿಸಿತು.

ಷಣ್ಮುಖ ಕೌತ್ವಂ ಕಲಾಭಿಮಾನಿಗಳ ಮನ ಸೆಳೆದ ನೃತ್ಯ ಪ್ರದರ‍್ಶನ ಷಣ್ಮುಖಪ್ರಿಯ ರಾಗದಲ್ಲಿ ಪ್ರಸ್ತುತಗೊಂಡಿತು. ಕೌತ್ವಂ ಎಂದರೆ ದೇವತಾ ಸ್ತುತಿಯುಳ್ಳ ಪ್ರಾರ‍್ಥನಾ ಗೀತೆ. ನೃತ್ಯದಲ್ಲಿ ಇದು ನೃತ್ಯ ಮತ್ತು ಅಭಿನಯ ಎರಡರ ಮನಮೋಹಕ ಮಿಶ್ರಣವಾಗಿತ್ತು. ಈ ನೃತ್ಯದಲ್ಲಿ ಗುರು ವಿದುಷಿ ಸಮೀಕ್ಷಾ ಅವರು ತಮ್ಮ ಲಯಜ್ಞಾನದಿಂದ ನಟುವಾಂಗ ನಿರ‍್ವಹಿಸಿದರು. ಅವರ ಲಯಬದ್ಧವಾದ  ಸೊಲ್ಲುಗಟ್ಟುಗಳಿಗೆ  ವಿದ್ಯಾರ‍್ಥಿಗಳ ಕಾಲು ಹೆಜ್ಜೆ ಸುಂದರವಾಗಿ ಮೇಳೈಸಿದವು. ವಿದ್ಯಾರ‍್ಥಿಗಳ ಸ್ಪಷ್ಟ ಅಂಗಮುದ್ರೆ, ಭಾವ ಮತ್ತು ತಾಳಬದ್ಧತೆಯು ಅವರ ಭವಿಷ್ಯದ ಬಗ್ಗೆ ಭರವಸೆ ಮೂಡಿಸಿತು.

ಕಾರ‍್ಯಕ್ರಮದಲ್ಲಿ ಪುಟ್ಟ ಮಕ್ಕಳ ನೃತ್ಯವು ಮನೋಹರ ಗಾಯನಕ್ಕೆ ಸೊಗಸಾಗಿ ಮೂಡಿಬಂದಿ ನೋಡುಗರ ಚಪ್ಪಾಳೆ ಗಿಟ್ಟಿಸಿತು. ಬೃಂದಾವನ ಸಾರಂಗ ರಾಗದ ಹರಿವಾಣ ಪ್ರಸ್ತುತಿಯಲ್ಲಿ ಬಾಲಕೃಷ್ಣರ ನೃತ್ಯವು ಮೋಹಕವಾಗಿತ್ತು. ಕೃಷ್ಣನನ್ನು ಸ್ಮರಿಸುವ ಭಾವಪೂರ‍್ಣ ಗೀತೆಗಳು ಕಲಾಕ್ಷೇತ್ರಕ್ಕೆ ರಾಧೇ ಶ್ಯಾಮರನ್ನು ಕರೆತಂದಂತೆ ಭಾಸವಾಗಿತ್ತು. ಹರಿ ನಾರಾಯಣ ಸ್ಮರಣೆಯು ಭಕ್ತಿ ರಸ ಉಕ್ಕಿ ಹರಿಯುವಂತೆ ಮೋಹಕವಾಗಿತ್ತು. ವಿದ್ವಾಂಸರು ಲಾಲ್ಗುಡಿ ಜಯರಾಮನ್ ರಚಿಸಿದ ವರ‍್ಣದ ಪ್ರಸ್ತುತಿ ಆಕರ್ಷಣೀಯವೇ ಸೈ. ಇದು ಭರತನಾಟ್ಯದ ಸಂಪೂರ‍್ಣ ಕಲೆಯನ್ನು ಪ್ರದರ‍್ಶಿಸುವ ಒಂದು ಮುಖ್ಯ ಅಂಗ. ಈ ವರ‍್ಣವು ನವ ರಾಗಗಳಲ್ಲಿ ಜಗನ್ಮಾತೆಯನ್ನು ಆರಾಧಿಸುವ ವಿಶಿಷ್ಟ ಸಂಯೋಜನೆ. ​ಈ ಭಾಗದಲ್ಲಿ ನೃತ್ಯ ಶಾಲೆಯ ಹಿರಿಯ ನೃತ್ಯಪಟುಗಳು ನವರಸಗಳನ್ನು ಒಳಗೊಂಡ ಅದ್ಭುತ ಆಂಗಿಕಾಭಿನಯ ವಾಚಿಕಾಭಿನಯ ವೀರ ರಸದ ಅಭಿವ್ಯಕ್ತಿ ಮನ ಸೆಳೆಯಿತು. ಪಾರ‍್ವತಿ ಕಲ್ಯಾಣ ಮನಮೋಹಕ ಪ್ರಸಂಗಗಳು, ದೇವಿ ಮಹಾತ್ಮೆಯಲ್ಲಿ ಬರುವ ಚಂಡ-ಮುಂಡ ವಧೆಯಂತಹ ಘಟನೆಗಳು ನೃತ್ಯದ ಮೂಲಕ ಕಣ್ಣಿಗೆ ಕಟ್ಟುವಂತೆ ಪ್ರದರ‍್ಶನಗೊಂಡವು.

ಈ ರಸಪ್ರಸ್ತುತಿಯ ಹಿನ್ನೆಲೆಯಲ್ಲಿ ಮೂಡಿಬಂದ ಕೊಳಲು ವಾದನವು ನೃತ್ಯಕ್ಕೆ ಮತ್ತಷ್ಟು ಕಂಪು ನೀಡಿತು. ನೃತ್ಯ ಕಾರ್ಯಕ್ರಮವು ಅಂತಿಮವಾಗಿ ತಿಲ್ಲಾನ ನೃತ್ಯ ಪ್ರದರ್ಶನ ಸಮಾಪ್ತಿಗೊಂಡಿತು. ನೃತ್ಯ ಗುರು ಸಮೀಕ್ಷಾ ಅವರ ಅಸಾಧಾರಣ ನಟುವಾಂಗದ ನಿರ‍್ದೇಶನದೊಂದಿಗೆ ಪ್ರದರ್ಶಿತ ನೃತ್ಯ ಪ್ರದರ್ಶನವನ್ನು ಪ್ರೇಕ್ಷಕರು ನೋಡಿ ಆನಂದಿಸಿದರು.  ಅಭಿಜ್ಞಾ ಸ್ಕೂಲ್ ಆಫ್ ಡ್ಯಾನ್ಸ್‌ನ ಸ್ಮೃತಿ ೨೦೨೫ ಕಾರ‍್ಯಕ್ರಮವು ನೃತ್ಯ ಕಲೆಯ ಶ್ರೇಷ್ಠತೆಯನ್ನು ಬಿಂಬಿಸಿತು.


ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯
ವಿಳಾಸ: ಹುಣಸಿನಕರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ-೫೭೩೨೦೧.

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group