ರಾಯಬಾಗ: ರೈತರಿಗೆ ಒಳ್ಳೆಯದಾಗಬೇಕು ಎಂಬ ನಿಟ್ಟಿನಲ್ಲಿ ಚುನಾವಣೆಯಲ್ಲಿ ಸಚಿವ ಸತೀಶ ಜಾರಕಿಹೊಳಿ, ಡಾ.ಪ್ರಭಾಕರ ಕೋರೆ, ರಮೇಶ ಜಾರಕಿಹೊಳಿ, ಲಕ್ಷ್ಮಣ ಸವದಿ, ಅಣ್ಣಾಸಾಹೇಬ ಜೊಲ್ಲೆ ಅವರ ಮುಂದಾಳತ್ವದಲ್ಲಿ ಬಿಡಿಸಿಸಿ ಬ್ಯಾಂಕ್ ಚುನಾವಣೆ ಮಾಡಲು ತೀರ್ಮಾನಿಸಿದ್ದೇವೆ. ಯಾವುದೇ ಪಕ್ಷ ಇಲ್ಲದೆ, ಸಮಾನತೆ ಮಾಡಿಕೊಂಡು ಜಾತ್ಯತೀತವಾಗಿ ಚುನಾವಣೆಯನ್ನು ಎದುರಿಸಲು ನಾವೆಲ್ಲ ಸಜ್ಜಾಗಿದ್ದೇವೆ ಎಂದು ಬೆಮುಲ್ ಅಧ್ಯಕ್ಷ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ರಾಯಬಾಗ ಪಟ್ಟಣದ ಮಹಾವೀರ ಭವನದಲ್ಲಿ ಮಂಗಳವಾರ ನಡೆದ ರಾಯಬಾಗ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಆಡಳಿತ ಮಂಡಳಿಯ ಸೌಹಾರ್ದಯುತ ಸಭೆಯಲ್ಲಿ ಅವರು ಮಾತನಾಡಿದರು. ಅಪ್ಪಾಸಾಹೇಬ ಕುಲಗೋಡೆ ಅವರು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಸಂದರ್ಭದಲ್ಲಿ ಸಾಕಷ್ಟು ರೀತಿಯ ಆರೋಪಿಗಳು ಬಂದವು. ಅವರು ಅಧ್ಯಕ್ಷರಾದ ಮೇಲೆ ಬ್ಯಾಂಕ್ ಉನ್ನತಿ ಕೂಡ ಆಗುತ್ತಿದೆ. ಕೆಲವರು ಇವರ ಬಳಿ ಅಧಿಕಾರ ಹೋದರೆ ಬ್ಯಾಂಕ್ ಮುಳುಗುತ್ತೆ, ಬ್ಯಾಂಕ್ ಕುಂಠಿತವಾಗುತ್ತದೆ ಎಂದು ಸುಮ್ಮನೆ ಆರೋಪ ಮಾಡಿದರು. ಆದರೆ, ಬ್ಯಾಂಕ್ ಎಂದಿಗೂ ಮುಳುಗುವುದಿಲ್ಲ. ಬ್ಯಾಂಕ್ ಹಾಗೆ ಉನ್ನತಿ ಕಾಣುತ್ತಲೇ ಇರುತ್ತದೆ. ರಾಜಕೀಯವಾಗಿ ಹೇಳುವುದಕ್ಕಾಗಿ ಹೇಳುತ್ತಲೇ ಇರುತ್ತಾರೆ ಎಂದರು.
ಮೊದಲಿನ ಡಿಸಿಸಿ ಬ್ಯಾಂಕಿನ ಸ್ಥಿತಿ ನೋಡಿದಾಗ, ಈ ರೀತಿ ಅಧ್ಯಕ್ಷರು, ನಿರ್ದೇಶಕರು, ಸದಸ್ಯರನ್ನು ಕರೆದು ಸಭೆಗಳನ್ನು ಮಾಡುತ್ತಿರಲಿಲ್ಲ. ಆದರೆ ಈಗ ಹೊಸ ಪದ್ಧತಿ ಬೆಳಗಾವಿಯಲ್ಲಿ ಆರಂಭ ಮಾಡಿದ್ದೇವೆ. ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಪದ್ಧತಿಯನ್ನು ಈಗ ಆರಂಭಿಸಿದ್ದೇವೆ ಎಂದು ಹೇಳಿದರು.
ನಮ್ಮೆಲ್ಲರ ಉದ್ದೇಶವೊಂದೇ ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದು ಮತ್ತು ಬಿಡಿಸಿಸಿ ಬ್ಯಾಂಕಿನ ಶ್ರೇಯೋಭಿವೃದ್ಧಿ ಮಾಡುವುದು. ಅಣ್ಣಾಸಾಹೇಬ ಜೊಲ್ಲೆ ಅವರು ಬೀರೇಶ್ವರ ಸೊಸೈಟಿ ನಿರ್ಮಿಸಿ ಅದರಲ್ಲಿ 4 ಸಾವಿರ ಕೋಟಿ ಹಣ ಠೇವಣಿ ಆಗುವಂತೆ ನೋಡಿಕೊಂಡರು. ಅಂತಹವರ ಸಲಹೆಗಳನ್ನು ಕೂಡ ಪರಿಗಣನೆ ಮಾಡಿಕೊಂಡು ಬ್ಯಾಂಕ್‌ನ ಉನ್ನತಿಗೆ ಶ್ರಮಿಸುತ್ತಿದ್ದೇವೆ. ಈ ರೀತಿ ಬ್ಯಾಂಕಿನ ಬಗ್ಗೆ ತಿಳಿವಳಿಕೆ ಉಳ್ಳವರು, ಜ್ಞಾನ ಉಳ್ಳವರನ್ನು ನಿರ್ದೇಶಕರಾಗಿ ಆಯ್ಕೆಯಾಗಿ ಬಂದರೆ ಅದು ಕೂಡ ಬೆಳೆಯುತ್ತದೆ ಎಂಬ ಆಶಯ ನಮ್ಮದು. ಇದರಿಂದ ರೈತರಿಗೂ ಹೆಚ್ಚು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲ ಪಿಕೆಪಿಎಸ್‌ನ ಸದಸ್ಯರಿಗೆ ಮನವಿ ಮಾಡುವುದೊಂದೆ ನಮ್ಮ ಗುಂಪಿನ ಅಭ್ಯರ್ಥಿಯಾಗಿರುವ ಅಪ್ಪಾಸಾಹೇಬ ಕುಲಗೋಡೆ ಅವರಿಗೆ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.
ಬ್ಯಾಂಕ್ ಗಟ್ಟಿಯಾದರೆ ರೈತರಿಗೆ ಒಳ್ಳೆಯದಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ತಂಡ ಅದರ ಏಳಿಗೆಗಾಗಿ ಶ್ರಮಿಸಲು ಸದಾ ಸಿದ್ಧವಾಗಿದೆ. ಈಗಿರುವ ಯೋಜನೆಗಳ ಜತೆ ಜತೆಗೆ ಇನ್ನೂ ಹಲವಾರು ಯೋಜನೆಗಳನ್ನು ಜಾರಿಗೆ ತರುವ ಆಲೋಚನೆ ನಮ್ಮದಾಗಿದೆ ಎಂದ ಅವರು, ಈಗಾಗಲೇ ಸಾವಿರಾರು ಕೋಟಿ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಿದ್ದೇವೆ. ಇನ್ನೂ ಹೆಚ್ಚಿನ ಸಾಲ ನೀಡಲು ಅನುಕೂಲವಾಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ನಮ್ಮ ತಂಡ ಸನ್ನದ್ಧವಾಗಿದೆ ಎಂದು ವಿವರಿಸಿದರು.
ಡಿಸಿಸಿ ಬ್ಯಾಂಕಿನ ಪ್ರಚಾರವನ್ನು ಖಾನಾಪುರದಿಂದ ಆರಂಭಿಸಲಾಯಿತು. ಅ.19ಕ್ಕೆ ಚುನಾವಣೆ ದಿನಾಂಕ ನಿಗದಿಯಾಗಿದ್ದರಿಂದ, ಆರಂಭದಲ್ಲೇ ಖಾನಾಪುರದಿಂದ ಪ್ರಚಾರ ಕೈಗೊಳ್ಳಲಾಯಿತು. ಈಗ ರಾಯಬಾಗದಲ್ಲಿ ಪ್ರಚಾರ ಆರಂಭಿಸಿದ್ದೇವೆ. ಕಿತ್ತೂರು, ನಿಪ್ಪಾಣಿ, ಬೈಲಹೊಂಗಲದಲ್ಲಿ ಪ್ರಚಾರ ಮಾಡಿದರೆ 11 ತಾಲೂಕಿನಲ್ಲಿ ಪ್ರಚಾರ ಕಾರ್ಯ ಮುಗಿದಂತೆ ಆಗುತ್ತದೆ ಎಂದರು.
ಈ ವೇಳೆ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ,ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಪ್ಪಾಸಾಹೇಬ ಕುಲಗೋಡೆ, ರಾಜೇಂದ್ರ ಅಂಕಲಗಿ, ಎಸ್.ಎಸ್.ಢವಣ, ಸಂಜೀವ ಬಾನೆ, ಅರ್ಜುನ ನಾಯಿಕವಾಡಿ ಸೇರಿದಂತೆ ಇತರರಿದ್ದರು.
——————————
ಹೆದರಿಸಿ, ಬೆದರಿಸಿ ಮತ ಹಾಕಿಸಲು ಬರುವುದಿಲ್ಲ.
ಯಾರನ್ನೂ ಹೆದರಿಸಿ ಬೆದರಿಸಿ ಮತ ಹಾಕಿಸಲು ಬರುವುದಿಲ್ಲ. ಗುಪ್ತ ಮತದಾನ ಇರುವುದರಿಂದ ಮತದಾರರನ್ನು ಹೇಗೆ ಹೆದರಿಸಲು ಸಾಧ್ಯ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಶ್ನಿಸಿದರು.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಯಾರನ್ನು ಅಧ್ಯಕ್ಷರಾಗಿ ಮಾಡುತ್ತಿರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಮತದಾನ ಮುಗಿದ ನಂತರ ಎಲ್ಲ ಹಿರಿಯರು ಇರುತ್ತಾರೆ. ಅಲ್ಲಿರುವ ಹಿರಿಯರು ಅಧ್ಯಕ್ಷರು, ಉಪಾಧ್ಯಕ್ಷರು ಯಾರಾಗಬೇಕು ಎಂದು ತೀರ್ಮಾನ ಮಾಡುತ್ತಾರೆ. ಆದರೆ, ಒಬ್ಬರೇ ಇದನ್ನು ತೀರ್ಮಾನಿಸಲು ಬರುವುದಿಲ್ಲ. ಅದನ್ನು ಅಕ್ಟೋಬರ್ ಕೊನೆಯಲ್ಲಿ ನೋಡುತ್ತೇವೆ ಎಂದು ಉತ್ತರಿಸಿದರು.
ಸತೀಶ ಜಾರಕಿಹೊಳಿ ಉಸ್ತುವಾರಿ ಸಚಿವರು ಇರುವುದರಿಂದ ಅವರು ಎಲ್ಲಿಯೂ ಬರುವುದಿಲ್ಲ. ರಮೇಶ ಜಾರಕಿಹೊಳಿ ಬರುವುದಿಲ್ಲ. ಲಕ್ಷ್ಮಣ ಸವದಿ ಅವರು ಬೆಂಗಳೂರಿಗೆ ಮೀಟಿಂಗ್ ಇದೆ ಎಂದು ಹೋಗಿದ್ದರು. ಹೀಗಾಗಿ ನಮ್ಮ ತಂಡ ಉತ್ತಮವಾಗಿ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಸಭೆಗೆ ಬರುವಂತೆ ಮನವಿ ಮಾಡುತ್ತೇವೆ ಎಂದರು.
ರಾಯಬಾಗದಲ್ಲಿ ಅಪ್ಪಾಸಾಹೇಬ ಕುಲಗೋಡೆ ನಮ್ಮ ತಂಡದಲ್ಲಿದ್ದಾರೆ. ನಮ್ಮ ಹೆಸರು ಹೇಳಿಕೊಂಡು ಕೆಲವರು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅದೆಲ್ಲ ಸುಳ್ಳು. ಅದು ನಮಗೆ ಸಂಬಂಧ ಇಲ್ಲದ್ದು. ಅಪ್ಪಾಸಾಹೇಬ ಅವರೇ ನಮ್ಮ ಅಭ್ಯರ್ಥಿ. ಇದರಲ್ಲಿ ಎರಡು ಮಾತಿಲ್ಲ ಎಂದು ಊಹಾಪೋಹಗಳಿಗೆ ತೆರೆ ಎಳೆದರು.