Homeಲೇಖನಡಕಾಯಿತ 'ರತ್ನ' ವಾಲ್ಮೀಕಿಯಾದ !

ಡಕಾಯಿತ ‘ರತ್ನ’ ವಾಲ್ಮೀಕಿಯಾದ !

spot_img

ಭಾರತ ಶ್ರೀಲಂಕಾ ದೇಶಗಳ ಮಧ್ಯೆ ರಾಮಾಯಣ ಕಾಲಕ್ಕೆ ನಿರ್ಮಿಸಲಾದ ರಾಮಸೇತುವೆ ಆಧಾರ ದೊರಕಿದ್ದಲ್ಲದೇ ಕಳೆದ ಹಲವು ವರ್ಷಗಳ ಹಿಂದೆ ಚಿನ್ನೈನ ಸಸ್ಯ ವಿಜ್ಞಾನಿಗಳಾದ ಎಂ.ಅಮೃತಲಿಂಗಂ ಹಾಗೂ ಪಿ.ಸುಧಾಕರ ಇವರು ರಾಮ, ಸೀತೆ, ಲಕ್ಷ್ಮಣ ವನವಾಸ ಆರಂಭಿಸಿದ ಅಯೋಧ್ಯೆಯಿಂದ ಹಿಡಿದು ಚಿತ್ರಕೂಟ, ದಂಡಕಾರಣ್ಯ, ಪಂಚವಟಿ, ಕಿಷ್ಕಿಂದಾ, ಲಂಕೆ ಹೀಗೆ ಅನೇಕ ಸ್ಥಳಗಳನ್ನು ಸಂದರ್ಶಿಸಿ ಮಹಾಕಾವ್ಯದಲ್ಲಿ ನಡೆದಿರುವ ಘಟನೆಗಳಿಗೆ ಆಧಾರ ಸಹಿತ ಮಾಹಿತಿಯನ್ನು ಕಲೆಹಾಕಿದ್ದು “ಪ್ಲಾಂಟ್ ಆ್ಯಂಡ್ ಅನಿಮಲ್ ಡೈವರ್ಸಿಟಿ ಇನ್ ವಾಲ್ಮಿಕೀಸ್ ರಾಮಾಯಣ”ಎಂಬ ಕೃತಿಯನ್ನು ಹೊರತಂದಿದ್ದು. ವಾಲ್ಮೀಕಿ ರಾಮಾಯಣ ಖಚಿತತೆ ಕುರಿತಂತೆ ಸಂಶೋಧನೆಗಳ ಮೂಲಕ ದೃಡಪಟ್ಟಿವೆ.

ವಾಲ್ಮೀಕಿ ಕುರಿತಂತೆ ಅನೇಕ ದಂತಕಥೆಗಳಿವೆ. ಅದರಲ್ಲಿ ಒಂದು ಕಥೆಯ ಪ್ರಕಾರ ವಾಲ್ಮೀಕಿ ಋಷಿಯಾಗುವ ಮೊದಲು “ರತ್ನ” ಎಂಬ ಹೆಸರಿನ ಒಬ್ಬ ಡಕಾಯಿತನಾಗಿದ್ದನು. ಕಾಡಿನ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರನ್ನು ದೋಚಿ ಜೀವನ ನಡೆಸುತ್ತಿದ್ದನು.ಒಮ್ಮೆ “ನಾರದ” ಮಹರ್ಷಿಗಳು ಆ ಮಾರ್ಗದಲ್ಲಿ ಸಂಚರಿಸಲು ಅವರನ್ನು ಕೂಡ ದರೋಡೆ ಮಾಡಲು ಹೋದಾಗ ಅವರ ಉಪದೇಶದಿಂದ “ರತ್ನ”ನಿಗೆ ಜ್ಞಾನೋದಯವಾಯಿತು. ವಾಲ್ಮೀಕಿ ಮಹರ್ಷಿಗಳು “ಪ್ರಚೇತ¸”ಮುನಿಯ ಮಗ. ಹೀಗಾಗಿ ಅವರಿಗೆ “ಪ್ರಾಚೇತಸ” ಎಂಬ ಹೆಸರಿದೆ. ಪರಮಾತ್ಮನನ್ನು ಕುರಿತು ಬಹಳ ವರ್ಷ ಕಾಲ ತಪಸ್ಸು ಮಾಡುತ್ತಿದ್ದಾಗ ಅವರ ಸುತ್ತ ಹುತ್ತ ಬೆಳೆಯಿತು. ಹುತ್ತ(ಸಂಸ್ಕೃತದಲ್ಲಿ ವಲ್ಮೀಕ)ವನ್ನು ಭೇದಿಸಿಕೊಂಡು ಹೊರಗೆ ಬಂದಿದ್ದರಿಂದ ವಾಲ್ಮೀಕಿ ಎಂಬ ಹೆಸರು ಬಂದಿತು.

ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ

ಯತ್ರೌö್ಕಂಚ ಮಿಥುನಾದೇಕಮವಧೀಃ ಕಾಮಮೋಹಿತಮ್

ಇದು ರಾಮಾಯಣ ರಚನೆಗೆ ಪ್ರೇರಣೆಯಾದ ಘಟನೆ ಹಾಗೂ ಆ ಸಂದರ್ಭದಲ್ಲಿ ವಾಲ್ಮೀಕಿಯವರ ಮುಖದಿಂದ ಹೊಮ್ಮಿದ ಮಾತುಗಳು “ಅಕಾರಣವಾಗಿ ಹಕ್ಕಿಯನ್ನು ಕೊಂದ ಹೇ ಅನ್ಯಾಯಿ, ನಿನ್ನ ಪಾಪದ ಫಲವಾಗಿ ನೀ ಈ ಕೂಡಲೇ ಸಾಯಿ”.

ಅಂದರೆ ವಾಲ್ಮೀಕಿ ಮಹರ್ಷಿಗಳು “ತಮಸಾ” ನದಿ ತೀರದಲ್ಲಿ ಸಂತೋಷವಾಗಿ ಹಾರಾಡುತ್ತಿದ್ದ ಕ್ರೌಂಚ ಪಕ್ಷಿಗಳನ್ನು ನೋಡುತ್ತಿದ್ದಾಗ ಬೇಡನೊಬ್ಬನು ಬಂದು ಬಾಣ ಹೂಡಿ ಗಂಡು ಹಕ್ಕಿಯನ್ನು ಕೊಲ್ಲಲು ಅದರ ಸಂಗಾತಿ ಹೆಣ್ಣು ಹಕ್ಕಿಯು ಸಂಕಟದಿಂದ ಕೂಗಲಾರಂಭಿಸುತ್ತದೆ. ಈ ಹೃದಯ ವಿದ್ರಾವಕ ಸನ್ನಿವೇಶವನ್ನು ನೋಡಿ ಕರುಣೆ, ದುಃಖ, ಕೋಪದಿಂದ ಮಹರ್ಷಿಗಳು ಬೇಡನನ್ನು ಶಪಿಸಿ ಆಶ್ರಮಕ್ಕೆ ಬರುತ್ತಾರೆ. ಹಿಂದೆ ನಾರದರು ತಮಗೆ ಸಂಗ್ರಹವಾಗಿ ಹೇಳಿದ್ದ ರಾಮನ ಕಥೆಯನ್ನು ನೆನಪಿಸಿಕೊಂಡು 24000 ಶ್ಲೋಕಗಳನ್ನೊಳಗೊಂಡ ರಾಮಾಯಣ ಮಹಾಗ್ರಂಥವನ್ನು ಬರೆದರು.

ಇತ್ತೀಚಿನ ಸಂಶೋಧನೆಗಳಂತೆ ರಾಮಾಯಣ ರಚನಾ ಕಾಲ ಕ್ರಿ.ಪೂ 5 ನೇ ಶತಮಾನದಿಂದ ಕ್ರಿ.ಪೂ 1ನೇ ಶತಮಾನವೆಂದು ನಿರ್ಧರಿಸಲಾಗಿದೆ.ಈ ಕಾಲವು ಮಹಾಭಾರತದ ಮೊದಲ ಆವೃತ್ತಿಗಳಿಗೆ ಹತ್ತಿರವಾದ ಕಾಲವೆಂದು ಹೇಳಲಾಗುತ್ತಿದೆ. ಪ್ರಾಚೀನ ಭಾರತದ ಪ್ರಮುಖ ಸಾಹಿತ್ಯಕ ಕೃತಿಗಳಲ್ಲೊಂದಾದ ರಾಮಾಯಣವು ಭಾರತ ಉಪಖಂಡದ ಕಲೆ ಮತ್ತು ಸಂಸ್ಕೃತಿಯ ಮೇಲೆ ಆಳವಾದ ಪ್ರಭಾವ ಬೀರಿದೆ. ರಾಮನ ಕಥೆಯು ಅನೇಕ ಭಾಷೆಗಳಲ್ಲಿ ಬಹಳಷ್ಟು ಸಾಹಿತ್ಯಕ್ಕೆ ಪ್ರೇರಣೆಯಾಗಿದೆ.

16 ನೇ ಶತಮಾನದ ಹಿಂದಿ ಕವಿ ತುಳಸೀದಾಸರು ರಾಮಾಯಣವನ್ನು ರಾಮಚರಿತ ಮಾನಸಂ (೧೯೫೫), 13 ನೇ ಶತಮಾನದ ತಮಿಳು ಕವಿ ಕಂಬ ರಾಮಾವತಾರಂ ಬ0ಗಾಲಿ ಕವಿ ಕೃತ್ತಿದಾಸರು, ಓರಿಯಾ ಕವಿ ಬಲರಾಮದಾಸರು, ತೆಲಗು ಕವಿ ರಂಗನಾಥ, ಗುಜರಾತಿ ಕವಿ ಪ್ರೇಮಾನಂದರು, ರಾಮಾಯಣ ಕುರಿತ ಗ್ರಂಥಗಳನ್ನು ರಚಿಸಿರುವರು.

20 ನೇ ಶತಮಾನದ ಕನ್ನಡದ ರಾಷ್ಟ್ರಕವಿ ಕುವೆಂಪು(ರಾಮಾಯಣ ದರ್ಶನಂ) ಮತ್ತು ತೆಲಗು ಕವಿಯಾದ ವಿಶ್ವನಾಥ ಸತ್ಯನಾರಾಯಣ “ರಾಮಾಯಣ ಕಲ್ಪವೃಕ್ಷಮಂ” ಕೃತಿ ರಚಿಸುವ ಮೂಲಕ ಆ ಕೃತಿಗಳಿಗೆ ಜ್ಞಾನಪೀಠ ಪಡೆದಿರುವರು. ಕನ್ನಡದಲ್ಲಿ ಇನ್ನೂ ಅನೇಕ ಸಾಹಿತಿಗಳು ರಾಮಾಯಣ ಕುರಿತು ಕೃತಿ ರಚಿಸಿದ್ದು ಅವುಗಳಲ್ಲಿ ಪ್ರಮುಖವಾಗಿ ಕುಮಾರ ವಾಲ್ಮೀಕಿ ತೊರವೆ ರಾಮಾಯಣ.ರಂಗನಾಥ ಶರ್ಮರ ಕನ್ನಡ ವಾಲ್ಮೀಕಿ ರಾಮಾಯಣ ಪ್ರಸಿದ್ದವೆನಿಸಿವೆ.

ಅಶೋಕ ಬ್ಯಾಂಕರ್ ಎಂಬ ಆಂಗ್ಲ ಲೇಖಕರು ರಾಮಾಯಣವನ್ನು ಆಧರಿಸಿ ಆರು ಸರಣಿ ಕಾದಂಬರಿಗಳನ್ನು ಹೊರತಂದಿದ್ದು. ರಮಾನಂದ ಸಾಗರ ದೂರದರ್ಶನಕ್ಕಾಗಿ ಧಾರಾವಾಹಿ ರೂಪದಲ್ಲಿ ಒದಗಿಸಿದ್ದು ಅದು ಅಪಾರ ಜನಪ್ರೀಯತೆ ಗಳಿಸಿ ಬೇರೆ ಬೇರೆ ಭಾಷೆಗಳಲ್ಲಿ ಪ್ರಸಾರವಾಗಿದ್ದು ಈಗ ಇತಿಹಾಸ. ಕನ್ನಡ, ತಮಿಳು, ತೆ ಲಗು ಮುಂತಾದ ಬಾಷೆಗಳಲ್ಲಿ 1950 ರ ಮೊದಲು ಚಲನಚಿತ್ರ ರೂಪದಲ್ಲಿ “ವಾಲ್ಮೀಕಿ” ಹೆಸರಿನ ಸಿನೇಮಾ ಕೂಡ ತಯಾರಾಗುವ ಮೂಲಕ ವಾಲ್ಮೀಕಿ ಬದುಕನ್ನು ಕಟ್ಟಿಕೊಟ್ಟಿವೆ.

ಅಷ್ಟೇ ಅಲ್ಲ ದಕ್ಷಿಣಪೂರ್ವ ಏಷ್ಯಾದ ಜಾವಾ, ಸುಮಾತ್ರಾ, ಕಾಂಬೋಡಿಯಾ, ಮಲೇಷಿಯ, ಥಾಯ್ಲೆಂಡ್, ವಿಯೆಟ್ನಾಮ್,ಲಾಓಸ್ ಇಂಡೋನೇಷಿಯಾ ದೇಶಗಳ ಸಾಹಿತ್ಯ ಶಿಲ್ಪಕಲೆ ಮತ್ತು ನಾಟಕ ಮಾಧ್ಯಮಗಳಲ್ಲಿಯೂ ಮೂಡಿಬಂದಿದೆ. ಬಾಲಕಾಂಡ ಅಯೋಧ್ಯ ಕಾಂಡ ಕಿಷ್ಕಿಂದಾ ಕಾಂಡ,ಅರಣ್ಯಕಾಂಡ ಸುಂದರಕಾಂಡ.ಯುದ್ದಕಾಂಡ ಮತ್ತು ಉತ್ತರಕಾಂಡ ಹೀಗೆ ಏಳು ಕಾಂಡಗಳಲ್ಲಿ ರಚನೆಯಾಗಿದೆ.

ವಾಲ್ಮೀಕಿಯು ತನ್ನ ರಾಮಾಯಣದಲ್ಲಿ ರಾಮನ ಮೂಲಕ ಮಾನವನ ಬಾಳುವೆಯ ರೀತಿಯ ಕುರಿತು ತನ್ನ ನೀತಿಯನ್ನು ವ್ಯಕ್ತಪಡಿಸಿದ್ದು, ಜೀವನವು ಕ್ಷಣಭಂಗುರವಾಗಿದ್ದು ಭೋಗಲಾಲಸೆಯ ನೀತಿಯು ಅರ್ಥ ಹೀನವಾಗಿದ್ದು ಹಾಗೆಂದು ಯಾವುದೇ ವ್ಯಕ್ತಿಯು ಪುರಾತನ ಶಾಸ್ತ್ರಗಳಲ್ಲಿ ಹೇಳಿದ ಹಕ್ಕುಬಾಧ್ಯತೆಗಳಿಗೆ ವಿಮುಖನಾಗಬಾರದು. ವೇದದಲ್ಲಿ ಉಕ್ತವಾದದ್ದೇ ಧರ್ಮ. ವ್ಯಕ್ತಿಯು ಧರ್ಮವನ್ನು ಧರ್ಮಕ್ಕಾಗಿ ಪಾಲಿಸಬೇಕೇ ಹೊರತು ಅದರಿಂದ ಉಂಟಾಗುವ ಲಾಭ ನಷ್ಟಗಳಿಂದ ಅಲ್ಲ ಎಂಬುದನ್ನು ರಾಮಾಯಣದ ಕಥೆಯ ಮೂಲಕ ನೈತಿಕತೆಯನ್ನು ಬಿಂಬಿಸಿರುವರು. ಅಂಥ ಮಹಾನ್ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸುವ ನಾವೆಲ್ಲ ಮಹರ್ಷಿಯ ಬದುಕಿನ ಮೌಲ್ಯಗಳ ಜೊತೆಗೆ ರಾಮಾಯಣದಲ್ಲಿನ ಮೌಲ್ಯಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಲ್ಲಿ ಇಂಥ ಆಚರಣೆಗಳ ಸಾರ್ಥಕತೆ ಬರುವುದು.


ಡಾ. ವೈ. ಬಿ. ಕಡಕೋಳ
ಮಾರುತಿ ಬಡಾವಣೆ ಸಿಂದೋಗಿ ಕ್ರಾಸ್ ಮುನವಳ್ಳಿ
ಸವದತ್ತಿ ತಾಲೂಕು
ಬೆಳಗಾವಿ ಜಿಲ್ಲೆ
591117

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group