ದೀಪವನ್ನು ‘ಜ್ಞಾನ’ವೆಂದು ಭಾವಿಸುವುದರಿಂದ ‘ದೀಪಾರಾಧನೆ ‘ ಪರೋಕ್ಷವಾಗಿ ಜ್ಞಾನದ ಪೂಜೆಯೇ ಆಗಿರುತ್ತದೆ. ಬಂಧು-ಬಾಂಧವರಲ್ಲಿ ಆತ್ಮೀಯತೆ ಮಾನವೀಯತೆಯ ಎಳೆಗಳನ್ನು ಗಟ್ಟಿಗೊಳಿಸುವುದು ಈ ಹಬ್ಬದಿಂದ ಸಾಧ್ಯವಾಗಿದೆ. ಆಪ್ತೇಷ್ಟರ ಸಮ್ಮಿಲನ ಸಾಮೂಹಿಕ ಆರತಿ ಅರ್ಚನೆ ಉಡುಗೊರೆ ವಿನಿಮಯ ಇವು ಸ್ವಾಭಾವಿಕವಾಗಿ ಆತ್ಮೀಯರ ನಡುವಿನ ಸಂಬಂಧಗಳನ್ನು ಇನ್ನಷ್ಟು ಮಧುರಗೊಳಿಸುವುದು ಸಹಜಾನುಭವ. ಈ ಹಬ್ಬದಂದು ಮಾಡುವ ಆರತಿ ಹಾಗೂ ವಿತರಿಸುವ ಉಪಹಾರಗಳಲ್ಲಿ ಹತ್ತಿರದ ಮಿತ್ರರು ಬಂಧು ಬಳಗದವರು ಪಾಲ್ಗೊಂಡು ಸಂಭ್ರಮ ಸಡಗರವನ್ನು ಇಮ್ಮಡಿಗೊಳಿಸುವುದು ವಾಸ್ತವಿಕ ಚಿತ್ರಣ.
ಹಬ್ಬಗಳಲ್ಲೆಲ್ಲ ಹಿರಿಯ ಹಬ್ಬ ದೀಪಾವಳಿ ಸೊಗಸಿನ ಸ್ನೇಹ ಸಮ್ಮೇಲನ. ಆನಂದ ವಿನೋದ ಅಭ್ಯಂಜನ ಆಟ ನೋಟ ಸವಿಯೂಟ ವಿಧ ವಿಧದ ತಿಂಡಿ ತಿನಿಸುಗಳು ಕ್ರೀಡೆಗಳು ಪ್ರಿಯ ಜನರ ಸಮಾಗಮವುಳ್ಳ ಬಾಂಧವ್ಯದ ಹಿರಿಮೆಯ ವಿಶಿಷ್ಟ ಹಬ್ಬವಿದು. ಹಿಂಗಾರಿ ಮಳೆಯು ಪ್ರಾರಂಭವಾಗಿ ಬಿತ್ತಿಗೆಗಳೆಲ್ಲ ಮುಗಿದು ಸಸಿಗಳು ತಲೆಯೆತ್ತಿ ಗರಿ ಬಿಡುತ್ತಿರಲು ಬರುವ ದೊಡ್ಡ ಸಂಪ್ರದಾಯದ ಹಬ್ಬವೆಂದರೆ ಈ ‘ಹಟ್ಟಿ ಹಬ್ಬ’. ನಾರಿಯರು ‘ನೀರು ತುಂಬುವ ಹಬ್ಬ’ವೆಂದೂ ಕರೆಯುವರು. ಆಗ ಮನೆಯಲ್ಲಿ ದೀಪಾರಾಧನೆಯಾಗುವುದು. ಮಹಿಳೆಯರು ಆರತಿ ಎತ್ತುವರು. ಪಾಂಡವರು ಅಜ್ಞಾತವಾಸ ಮುಗಿಸಿಕೊಂಡು ವಿಜಯ ದಶಮಿಯಾದ ನಂತರ ದಕ್ಷಿಣ ಭರತ ಖಂಡವನ್ನು ಬಿಟ್ಟು ಉತ್ತರಕ್ಕೆ ಹಸ್ತಿನಾವತಿಯನ್ನು ಸೇರುವರೆಂದು ಪೌರಾಣಿಕ ಕಥೆಯುಂಟು. ಹೀಗಾಗಿ ಒಕ್ಕಲಿಗರು ಪ್ರತಿಪದೆಯ ದಿನ ಶಗಣಿಯ ಪಾಂಡವರನ್ನು ಮಾಡಿ ಅವರನ್ನು ಊರಲ್ಲಿ ಬರಮಾಡಿಕೊಳ್ಳುವರು. ಒಕ್ಕಲಿಗರ ಮನೆಯಲ್ಲಿ ಹಟ್ಟಿಯಲ್ಲಿಯೂ ಪಾಂಡವರೇ ಪಾಂಡವರು. ಸುತ್ತಮುತ್ತಲೂ ಪಾಂಡವರ ಹೆಜ್ಜೆಗಳೇ ಹೆಜ್ಜೆಗಳು.
ಈ ಹಬ್ಬಕ್ಕೆ ತವರು ಮನೆಗೆ ಹೆಣ್ಣು ಮಕ್ಕಳು ಬರುವದರಿಂದ ಹೆಣ್ಣು ಮಕ್ಕಳ ದೊಡ್ಡ ಹಬ್ಬವೂ ಇದಾಗಿದೆ. ಜಾನಪದ ಗರತಿಯ ಪದವೊಂದು ಇದಕ್ಕೆ ಉತ್ತಮ ನಿದರ್ಶನದಂತಿದೆ.
“ಕಾರಹುಣವಿ ಹಬ್ಬಕ ಕರಿಲಾಕ ಬರಬ್ಯಾಡ
ಕಾರ ಬಾಡೀಗಿ ಕೊಡಬ್ಯಾಡ/ ನನ್ನಣ್ಣ
ಹೊನ್ನ ದೀವಳಿಗಿ ಮರಿಬ್ಯಾಡ.”
ಎಂದು ತಂಗಿಯು ಅಣ್ಣನಿಗೆ ಹೊನ್ನ ದೀವಳಿಗೆಗೆ ಕರೆಯಲು ಬರುವುದನ್ನು ಮರೆಯಬ್ಯಾಡೆಂದು ಎಚ್ಚರಿಸಿದ್ದಾಳೆ. ವರುಷದ ಗಳಿಕೆಯ ಲೆಕ್ಕವು ಈ ಹಬ್ಬದಲ್ಲಿ ಆಗುವುದರಿಂದಾಗಲಿ,ಲಕ್ಷ್ಮೀ ಪೂಜೆಯು ನಡೆಯುವುದರಿಂದಾಗಲಿ ಹೆಣ್ಣು ಮಕ್ಕಳು ‘ಹೊನ್ನ ದೀವಳಿಗೆ ಹಬ್ಬ’ವೆಂದು ಕರೆದಿದ್ದಾರೆ.
‘ನಾಲ್ಕು ದಿಕ್ಕಿಗೆ ಹಬ್ಬ ಬಂದಿತು ಒಳ್ಳೇ ದೀವಳಿಗೆ
ನಾಚುತಲಿ ನಲಿಯುತ ಹೆಣ್ಮಕ್ಕಳು ಬಂದರು ತಮ್ಮ ತವರು ಮನೆಗೆ.’ ಎಂದು ನಾಡಹೆಣ್ಣಿನ ಈ ಹಬ್ಬದ ಮನದಾಶೆಯನ್ನು ಲಾವಣಿಗಾರರು ಹಾಡಿದ್ದಾರೆ. ಹೆಣ್ಣು ಮಕ್ಕಳು ಬನದೂಟವನ್ನು ಸೌರಿಸುವರು. ಎಲ್ಲರೂ ಕೂಡಿಕೊಂಡು ಅಲ್ಲಿಕೇರಿಯನ್ನು ಸಂಭ್ರಮ ಸಡಗರದಿಂದ ಆಚರಿಸಿ ಸಾಯಂಕಾಲ-
‘ಅಲ್ಲಿಕೇರಿಗೆ ಹೋಗೂನು ಬರತೀರೇನ್ರೀ
ಒಲ್ಲದಿದ್ದರೆ ಇಲ್ಲೆ ನೀವು ಇರತೀರೇನ್ರೀ.’
ಎಂದು ಹಾಡುತ್ತಾ ಮನೆಯನ್ನು ಸೇರುವರು. ತನಗೆ ನಿಸರ್ಗ ಸಂಪರ್ಕವಿರಬೇಕೆಂದು ಮನಕುಲದವರು ಪರಂಪರಾಗತವಾಗಿ ಇಂತಹ ಅಮೂಲ್ಯ ಸಂಪ್ರದಾಯಗಳನ್ನು ಹುಟ್ಟು ಹಾಕಿರುವುದನ್ನು ಕಾಣಬಹುದಾಗಿದೆ .ಒಕ್ಕಲಿಗರು ದನಕರುಗಳಿಗೆ ರೋಗ ಬಾರದಂತೆ ಕಿಚ್ಚು ಹಾಯಿಸುವರು
ಪೌರಾಣಿಕ ಐತಿಹಾಸಿಕ ಹಾಗೂ ಜಾನಪದೀಯ ಅಂಶಗಳು ಸೇರಿಕೊಂಡು ಪ್ರದೇಶದಿಂದ ಪ್ರದೇಶಕ್ಕೆ ಜನಾಂಗದಿಂದ ಜನಾಂಗಕ್ಕೆ ಭಿನ್ನ ವಿಭಿನ್ನ ರೂಪವನ್ನು ಪಡೆದುಕೊಂಡ ಹಬ್ಬವಿದಾಗಿದೆ. ಕರ್ನಾಟಕದ ಕೆಲವೆಡೆಗಳಲ್ಲಿ ಆಣೀ ಪೀಣಿ, ಕೋಲಾಟ ಪಗಡೆಯಾಟ, ದಾಂಡಿಯಾ ನೃತ್ಯ,ಮೊದಲಾದ ಆಚರಣೆಗಳಿರುತ್ತವೆ. ದನಕಾಯುವ ಹುಡುಗರ ಮತ್ತು ದನ ಸಾಕುವವರ ನಡುವೆ ಇರುವ ಬಾಂಧವ್ಯವನ್ನು ಬೆಸೆಯುವ ಹಬ್ಬವಿದಾಗಿದೆ. ಬಿಜಾಪುರ ಬೀದರ ಗುಲ್ಬರ್ಗ ಧಾರವಾಡ ಬೆಳಗಾವಿ ಭಾಗಗಳಲ್ಲಿ ಈ ಆಣಿಪೀಣಿ ಆಚರಣೆಯು ಇಂದಿಗೂ ಜೀವಂತವಾಗಿರುತ್ತದೆ.
ಸರ್ವ ಜನಾಂಗದವರು ಅತ್ಯಂತ ವಿಜೃಂಭಣೆಯಿಂದ ಆಚರಿಸುವ ದೀಪಾವಳಿಯ ಮೊದಲ ದಿನ ‘ ನರಕ ಚತುರ್ದಶಿ.’ ಈ ದಿನ ನರಕಾಸುರನೆಂಬ ರಾಕ್ಷಸನನ್ನು ಶ್ರೀ ಕೃಷ್ಣನು ವಧೆ ಮಾಡಿ, ಆತನು ಸೆರೆಮನೆಯಲ್ಲಿರಿಸಿದ 16,000 ಗೋಪಿಕಾ ಸ್ತ್ರೀಯರನ್ನು ಬಿಡುಗಡೆ ಮಾಡಿದನೆಂದು ಪುರಾಣಗಳಲ್ಲಿ ಕಥೆ ದಾಖಲಾಗಿದೆ.ಇದರ ನೆನಪಿಗಾಗಿ ಬೆಳಿಗ್ಗೆ ಎಲ್ಲರೂ ಅಭ್ಯಂಜನ ತಲೆ ಸ್ನಾನ ಮಾಡಿ ದೇವರಿಗೆ ಮಂಗಳಾರತಿ ಬೆಳಗುತ್ತಾರೆ. ಸಹೋದರರಿಗೆ ಅಕ್ಕ ತಂಗಿಯರು ಆರತಿ ಮಾಡುತ್ತಾರೆ. ಇಂದು ಭಗವಾನ ಮಹಾವೀರನು ಮುಕ್ತಿ ಹೊಂದಿದ ದಿನವೆಂದು ಜಿನ ಮಂದಿರಗಳಲ್ಲೆಲ್ಲ ದೀಪೋತ್ಸವ ಮಾಡುತ್ತಾರೆ.
ದೀಪಾವಳಿಯ ಎರಡನೆಯ ದಿನವೇ’ ಲಕ್ಷ್ಮೀ ಪೂಜೆ’. ವ್ಯಾಪಾರಸ್ಥರು ಉದ್ಯೋಗಸ್ಥರು ಅಂಗಡಿ ಕಾರ್ಖಾನೆಗಳನ್ನು ಅಲಂಕರಿಸಿ ಪೂಜಿಸಿ ದಾನ ದಕ್ಷಿಣೆ ಪ್ರಸಾದ ತಾಂಬೂಲವಿತ್ತು ಸತ್ಕರಿಸುತ್ತಾರೆ. ಮಕ್ಕಳು ಪಟಾಕಿ ಹಾರಿಸಿ ರಂಜಿಸುತ್ತಾರೆ. ಮೂರನೆಯ ದಿನ ‘ಬಲಿಪಾಡ್ಯಮಿ’.ವಿಷ್ಣು ವಾಮನ ಅವತಾರವನ್ನು ತಳೆದು ಬಲಿಚಕ್ರವರ್ತಿಯನ್ನು ಪಾತಾಳಕ್ಕೆ ತುಳಿದ ದಿನವಿದಾಗಿದೆ. ಹೊಸದಾಗಿ ಮದುವೆಯಾದ ಅಳಿಯನನ್ನು ಆಮಂತ್ರಿಸಿ ಗೌರವಿಸುವ ಸಂಪ್ರದಾಯವು ಪರಂಪರಾಗತವಾಗಿ ಬೆಳೆದು ಬಂದಿರುವುದನ್ನು ಕಾಣುತ್ತೇವೆ. ಗೋವುಗಳನ್ನು ಪೂಜಿಸುವ ಸಂತೋಷಪಡಿಸುವ ದಿನವಿದಾಗಿದೆ. ದೇಶಾದ್ಯಂತ ವಿವಿಧ ವರ್ಗದ ಜನರಿಗೂ ಆನಂದ ಸಂತಸ ಇಮ್ಮಡಿಸುವ ಹಬ್ಬವೆಂದರೆ ಭರತ ಖಂಡದ ಹಬ್ಬ ‘ದೀಪಾವಳಿ ಹಬ್ಬ’. ವಿದಾಗಿದೆ. ಮೂರು ದಿನಗಳಿಂದ ಐದು ದಿನಗಳವರೆಗೆ ವೈವಿಧ್ಯಮಯವಾಗಿ ವಿಶಿಷ್ಟ ಪೂರ್ಣವಾಗಿ ವೈಭವದಿಂದ ಆಚರಿಸುವ ದೊಡ್ಡ ಹಬ್ಬ ,’ಬೆಳಕಿನ ಹಬ್ಬ ದೀಪಾವಳಿ’ಯು ಉಳಿದೆಲ್ಲ ಹಬ್ಬಗಳಿಗಿಂತ ವೈಶಿಷ್ಟಮಯ ಹಬ್ಬವೆನಿಸಿರುತ್ತದೆ.

ಪ್ರೊ.ಶಕುಂತಲಾ.ಚನ್ನಪ್ಪ. ಸಿಂಧೂರ.
ನಿವ್ರೃತ್ತ ಕನ್ನಡ ಪ್ರಾಧ್ಯಾಪಕರು.
ಗದಗ.