ಮೂಡಲಗಿ – ಹಳೆಯ ಮೂಡಲಗಿಯ ವಂಟಗೂಡಿ ವಠಾರದ ಹಿಂದುಗಡೆ ಇರುವ ಪತ್ತಾರ ಅವರ ಹಳೆಯ ಕಟ್ಟಡಗಳು ಕುಸಿದಿರುವ ಕಾರಣ ಕಲ್ಲು ಮಣ್ಣು ಎಲ್ಲ ದಾರಿಗೆ ಬಂದು ಅಡ್ಡಾಡಲು ಕಷ್ಟವಾಗುತ್ತಿದ್ದು ಅದನ್ನು ಬೇಗ ತೆರವುಗೊಳಿಸಬೇಕಾಗಿದೆ.
ವಾರ್ಡ್ ನಂ. ೧೦ ರಲ್ಲಿ ಇರುವ ಪತ್ತಾರ ಓಣಿಯಲ್ಲಿನ ವಡೆಯರ ಮನೆಯ ಹತ್ತಿರ ಹಳೆಯ ಕಟ್ಟಡಗಳು ಕುಸಿದು ಹೋಗಿದ್ದು ಅವುಗಳ ಕಲ್ಲು ಮಣ್ಣು ರಸ್ತೆಗೆ ಬಂದಿದೆ. ಅದೇ ಮಣ್ಣಿನಲ್ಲಿ ಗಿಡಗಂಟಿಗಳು ಬೆಳೆದು ಹಾವು ಚೇಳುಗಳಿಗೆ ಆವಾಸ ಸ್ಥಾನವಾಗಿದೆ. ಇದರ ಮೇಲೆ ಹಂದಿಗಳು ಕೂಡ ಮನೆ ಮಾಡಿಕೊಂಡು ಅಲ್ಲಿನ ವಾತಾವರಣ ಗಬ್ಬೆದ್ದು ಹೋಗಿದೆ. ಈ ಬಗ್ಗೆ ಪುರಸಭೆಯವರು ಕಣ್ಣು ಮೂಗು ಮುಚ್ಚಿಕೊಂಡಿದ್ದು ಅಹವಾಲು ಕೂಡ ಆಲಿಸದೇ ಕಿವಿ ಮುಚ್ಚಿಕೊಂಡಿದ್ದಾರೆ.
ಬರುಬರುತ್ತ ಕಲ್ಲು ಮಣ್ಣು ರಸ್ತೆಯತ್ತ ಜರುಗಿ ರಸ್ತೆ ಪೂರ್ತಿ ಬಂದ್ ಆಗುವ ಹಂತದಲ್ಲಿದೆ.
ಆದಷ್ಟು ಬೇಗ ಪುರಸಭೆಯವರು ಈ ಕಲ್ಲು ಮಣ್ಣು ಅಲ್ಲಿಂದ ತೆಗೆಸಿ ನಾಗರಿಕರಿಗೆ ಅನುಕೂಲ ಮಾಡಿಕೊಡಬೇಕಾಗಿದೆ.
ಈ ವಾರ್ಡ್ ಸದಸ್ಯರು ಈ ಕಡೆಗೆ ಬರುವುದಿಲ್ಲವಾದ್ದರಿಂದ ಅವರಿಗೆ ಈ ಸಮಸ್ಯೆ ಅರ್ಥವಾಗುವುದಿಲ್ಲ. ಇಲ್ಲಿನ ನಿವಾಸಿಗಳ ನೋವನ್ನು ಅರ್ಥ ಮಾಡಿಕೊಂಡು ಪುರಸಭೆಯವರು ಈ ಕಲ್ಲು ಮಣ್ಣು ತೆಗೆದು ದಾರಿಯನ್ನು ಸುಗಮ ಮಾಡಿಕೊಡಬೇಕು ಎಂದು ಇಲ್ಲಿನ ನಿವಾಸಿಗಳು ಆಗ್ರಹಿಸಿದ್ದಾರೆ.