ಮೂಡಲಗಿ: ಜಿಲ್ಲೆಯ ಹಿರಿಯ ಧುರೀಣರು, ಧೀಮಂತ ರಾಜಕಾರಣಿ, ಅಜಾತಶತ್ರು, ರಾಜ್ಯ ವಿಧಾನಸಭಾ ಉಪ ಸಭಾಪತಿಗಳು ಹಾಗೂ ಆತ್ಮೀಯರಾದ ಆನಂದ ಚಂದ್ರಶೇಖರ ಮಾಮನಿ ಅವರ ಅಕಾಲಿಕ ನಿಧನ ತೀವ್ರ ಆಘಾತವನ್ನುಂಟು ಮಾಡಿದೆ ಎಂದು ರಾಜ್ಯಸಭಾ ಸಂಸದ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಅವರು ಸಂತಾಪ ವ್ಯಕ್ತಪಡಿಸಿದರು.
ಆನಂದ ಮಾಮನಿ ಅವರು ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಸಹಕಾರಿ ಕ್ಷೇತ್ರದಲ್ಲಿ ಕೂಡಾ ಒಳ್ಳೆಯ ಕೆಲಸ ಮಾಡಿ ತಾಲೂಕಿನಲ್ಲಿ ಅತಿ ಹೆಚ್ಚು ಪಿ.ಕೆ.ಪಿ.ಎಸ್ ಗಳನ್ನು ಸ್ಥಾಪಿಸಿ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಾಲಗಳ ವಿತರಣೆ ಮಾಡಿದ್ದು ಒಂದು ದೊಡ್ಡ ದಾಖಲೆಯಾಗಿದೆ. ಸತತ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು, ಯಲ್ಲಮ್ಮ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ, ಪ್ರಸಕ್ತ ವಿಧಾನಸಭೆ ಉಪಸಭಾಧ್ಯಕ್ಷರ ಹುದ್ದೆ ನಿಭಾಯಿಸುತ್ತಿದ್ದ ಮಾಮನಿ ಅವರು ಸೋಲಿಲ್ಲದ ಸರದಾರ ಎನಿಸಿದ್ದರು. ಸವದತ್ತಿ ಮೋದಿ, ಜನಪರ ನಾಯಕ ಎಂಬ ಹಲವು ಅಂಕಿತಗಳೂ ಅವರದಾಗಿದ್ದವು ಎಂದು ಸ್ಮರಿಸಿದರು.
ಆನಂದ ಮಾಮನಿ ನಿಧನದಿಂದ ಪಕ್ಕಕ್ಕೆ ಮತ್ತು ರಾಜ್ಯಕ್ಕೆ ತುಂಬಲಾರದ ಹಾನಿಯಾಗಿದೆ. ಭಗವಂತ ಅವರ ಕುಟುಂಬಕ್ಕೆ ದುಃಖವನ್ನು ಸಹಿಸುವ ಶಕ್ತಿ ನೀಡಲಿ ಮತ್ತು ಅವರ ಆತ್ಮಕ್ಕೆ ಚಿರಶಾಂತಿ ನೀಡಲೆಂದು ಪ್ರಾರ್ಥಿಸುತ್ತೇನೆಂದು ಸಂಸದ ಈರಣ್ಣ ಕಡಾಡಿ ಸಂತಾಪ ಸೂಚಿಸಿದರು.