ಮೈಸೂರು – ಪರಿಸರ ಸಂರಕ್ಷಿಸದಿದ್ದರೆ ಮಾನವಕುಲದ ವಿನಾಶ ಉಂಟಾಗಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿ ಪುರಸ್ಕೃತರಾದ ಡಾ.ಭೇರ್ಯ ರಾಮಕುಮಾರ್ ಆತಂಕ ವ್ಯಕ್ತಪಡಿಸಿದರು.
ಅಕ್ಕ ಅಭಿಮಾನಿಗಳ ಬಳಗ ಹಾಗೂ ಅಮ್ಮ ವಸುಂಧರೆ ಕಲಾ ತಂಡದ ವತಿಯಿಂದ ಮೈಸೂರು ಜಿಲ್ಲೆಯ ಕೆ.ಆರ್.ನಗರ ಪಟ್ಟಣದ ಆಂಜನೇಯ ಬ್ಲಾಕ್ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ವಿದ್ಯಾರ್ಥಿ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಅವರು ಮಾತನಾಡುತ್ತಿದ್ದರು.
ಮನುಷ್ಯ ತನ್ನ ಸ್ವಾರ್ಥದಿಂದ ನಿರಂತರವಾಗಿ ಪರಿಸರ ನಾಶ ಮಾಡುತ್ತಿದ್ದಾನೆ.ರಸ್ತೆಗಳ ನಿರ್ಮಾಣಕ್ಕೆ,ರೆಸಾರ್ಟ್ ಗಳ ನಿರ್ಮಾಣಕ್ಕೆ ಕಾಡಿನ ನಾಶ ಮಾಡುತ್ತಿದ್ದಾರೆ.ಕಾಡಿನ ನಾಶದಿಂದಾಗಿ ಬೆಟ್ಟಗುಡ್ಡಗಳು ಕುಸಿಯುತ್ತಿವೆ. ಜಲ ಪ್ರವಾಹ ಉಂಟಾಗಿ ಸಾವುನೋವುಗಳು ಉಂಟಾಗುತ್ತಿವೆ. ಆನೆ,ಚಿರತೆ,ಹುಲಿ ಮೊದಲಾದ ಕಾಡುಪ್ರಾಣಿಗಳು ಆಹಾರ ಅರಸುತ್ತಾ ಗ್ರಾಮಗಳಿಗೆ ಬರುತ್ತಿವೆ. ಜನರು ಪ್ರತಿಕ್ಷಣವೂ ಪ್ರಾಣಬೀತಿಯಲ್ಲಿ ಬದುಕುತ್ತಿದ್ದಾರೆ.ಇದೆಲ್ಲವೂ ಮಾನವನ ದುರಾಸೆಯ ಫಲ ಎಂದವರು ನುಡಿದರು.
ನಮ್ಮ ಹಿರಿಯರು ಪರಿಸರವನ್ನು ದೇವರೆಂದು ನಂಬಿದ್ದರು. ತಮ್ಮ ಹೊಲಗದ್ದೆಗಳಲ್ಲಿ,ಮನೆ ಮುಂದೆ,ತೋಟಗಳಲ್ಲಿ ಮರಗಿಡಗಳನ್ನು ನೆಟ್ಟು ತಮ್ಮ ಮಕ್ಕಳಂತೆ ಕಾಪಾಡುತ್ತಿದ್ದರು. ಆದರೆ ಇಂದಿನ ಯುವ ಜನಾಂಗ ಹಣ,ಅದಿಕಾರ,ಮೋಜಿನ ಹಿಂದೆ ಬಿದ್ದಿದ್ದಾರೆ.ಹಿಂದಿನ ತಲೆಮಾರಿನವರು ನಮಗೆ ಉತ್ತಮ ಪರಿಸರ ನೀಡಿದ್ದಾರೆ. ನಾವು ಸ್ವಾರ್ಥದಿಂದಾಗಿ ಪರಿಸರ ನಾಶ ಮಾಡಿದರೆ ಮುಂದಿನ ತಲೆಮಾರು ನಮ್ಮನೆಂದೂ ಕ್ಷಮಿಸುವುದಿಲ್ಲ ಎಂದವರು ವಿದ್ಯಾರ್ಥಿಗಳಿಗೆ ಕಿವಿಮಾತು ನುಡಿದರು.
ಪರಿಸರ ಸಂರಕ್ಷಣೆ ಕೇವಲ ಸರ್ಕಾರದ ಕರ್ತವ್ಯ ಎಂದು ಕಣ್ಣು ಮುಚ್ಚಿ ಕೂರಬಾರದು. ಪ್ರತಿಯೊಬ್ಬರೂ ತಮ್ಮ ಜನ್ಮದಿನದಂದು, ತಮ್ಮ ತಂದೆ – ತಾಯಿಯ ಜನ್ಮದಿನದಂದು, ತಂದೆ – ತಾಯಿಗಳ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ , ತಮ್ಮ ಹಿರಿಯರ ನೆನಪಿನಲ್ಲಿ ಪ್ರತಿವರ್ಷವೂ ಒಂದೊಂದು ಸಸಿ ನೆಡಬೇಕು. ಆ ಮೂಲಕ ಪರಿಸರ ಸಂರಕ್ಷಣೆ ಮಾಡಬೇಕು ಎಂದು ಡಾ.ಭೇರ್ಯ ರಾಮಕುಮಾರ್ ಕರೆನೀಡಿದರು.
ರಾಷ್ಟ್ರಪ್ರಶಸ್ತಿ ವಿಜೇತ ಗಾಯಕರಾದ ಅಮ್ಮ ರಾಮಚಂದ್ರ ಅವರು ಮಾತನಾಡಿ ಮಕ್ಕಳು ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ಭಯ ಪಡಬಾರದು. ಜೀವಹಾನಿ ಮಾಡಿಕೊಳ್ಳಬಾರದು.ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ಬದುಕಿನಲ್ಲಿ ಜಯ ಸಾಧಿಸಬೇಕು. ಹತ್ತನೇ ತರಗತಿಯಲ್ಲಿ ಅನುತೀರ್ಣರಾದ ತಾವು ದುಃಖಿಸುತ್ತ ಕೂರದೆ ಛಲದಿಂದ ಬದುಕಿ ಸ್ವಪ್ರಯತ್ನದಿಂದ ಗಾಯಕರಾಗಿ ರಾಷ್ಟ್ರ ಮಟ್ಟದಲ್ಲಿ, ಅಂತರ ರಾಷ್ಟ್ರೀಯ ಮಟ್ಟದಲ್ಲಿ ಬೆಳೆದ ಬಗೆಯನ್ನು ಮಕ್ಕಳಿಗೆ ತಿಳಿಸಿದರು.
ಹತ್ತನೇ ತರಗತಿ ಅನುತ್ತೀರ್ಣ ಆದ ತಾವು ಅದನ್ನೇ ಛಲವಾಗಿ ತೆಗೆದುಕೊಂಡು ಪದವಿ, ಸ್ನಾತಕೋತ್ತರ ಪದವಿ ಗಳಿಸಿ ಇದೀಗ ಡಾಕ್ಟರೇಟ್ ಪದವಿ ಪಡೆಯಲು ನಿರಂತರ ಪ್ರಯತ್ನ ನಡೆಸಿರುವುದಾಗಿ ಅಮ್ಮ ರಾಮಚಂದ್ರ ತಿಳಿಸಿದರು.ಜೊತೆಗೆ ಸುಶ್ರಾವ್ಯವಾಗಿ ಕನ್ನಡ ಜಾನಪದ ಹಾಗೂ ಭಾವಗೀತೆಗಳನ್ನು ಹಾಡುವ ಮೂಲಕ ಮಕ್ಕಳ ಮನ ರಂಜಿಸಿದರು. ಸಭೆಗೆ ಕಳೆ ನೀಡಿದರು.
ಸಮಾಜಸೇವಕಿ ಶ್ರೀಮತಿ ಚೆಲುವಂಬಿಕ ಅವರು ಮಾತನಾಡಿ,
ವಿದ್ಯಾರ್ಥಿಗಳು ಮೊಬೈಲ್ಗಳನ್ನು ಸದುಪಯೋಗ ಮಾಡಿಕೊಳ್ಳಬೇಕು. ಮಕ್ಕಳ ಏಳಿಗೆಗಾಗಿ ತಂದೆ ತಾಯಿ , ಗುರುಗಳು ಅಪಾರ ಶ್ರಮ ಪಡುತ್ತಾರೆ. ತಂದೆ ತಾಯಿಗಳು ತಮ್ಮ ಮಕ್ಕಳ ಪ್ರಗತಿ ಬಗ್ಗೆ ಪ್ರತಿಕ್ಷಣವೂ ಕನಸು ಕಾಣುತ್ತಾರೆ. ತಮ್ಮ ಮಕ್ಕಳ ಅಭ್ಯುದಯಕ್ಕಾಗಿ ತಮ್ಮ ಜೀವನವನ್ನೇ ಮೀಸಲಿಡುತ್ತಾರೆ. ಗುರುಗಳು ಎಲ್ಲಾ ಮಕ್ಕಳಿಗೂ ತಮ್ಮ ಮಕ್ಕಳೆಂದೇ ಬಾವಿಸಿ ಅವರಿಗೆ ಶಿಕ್ಷಣ ನೀಡುತ್ತಾರೆ.ಮಕ್ಕಳು ಕಷ್ಟಪಟ್ಟು ವಿದ್ಯೆ ಕಲಿತು ಹೆತ್ತವರಿಗೆ ಹಾಗೂ ಗುರುಗಳಿಗೆ ಕೀರ್ತಿ ತರಬೇಕೆಂದು ಕಿವಿಮಾತು ನುಡಿದರು.
ಬಾಗಲಕೋಟೆಯ ಶಿಕ್ಷಕರಾದ ಶಶಿಧರ್ ಅವರು ಮಾತನಾಡಿ ಪ್ರತಿಯೊಬ್ಬ ಸಾಧಕನೂ ತನ್ನ ಜೀವನದಲ್ಲಿ ಸ್ವನಿರ್ದಾರ, ಸಮಯ ಪ್ರಜ್ಞೆ,ಕರ್ತವ್ಯ ನಿಷ್ಠೆ ಹೊಂದಿ ಸಾಧನೆಯ ಶಿಖರ ಏರಿದ್ದಾರೆ.ಮಕ್ಕಳು ಸಹ ತಾವು ಬರಿ ಓದಿದರೆ ಸಾಲದು. ಜೀವನದಲ್ಲಿ ಉತ್ತಮ ಗುರಿ, ಅದನ್ನು ಸಾಧಿಸುವ ಛಲ ಹಾಗೂ ತಮ್ಮ ಕರ್ತವ್ಯದ ಬಗ್ಗೆ ನಿಷ್ಠೆ ಇವುಗಳನ್ನು ಇಟ್ಟುಕೊಂಡು ವಿದ್ಯಾಬ್ಯಾಸ ಮಾಡಬೇಕು. ಆ ಮೂಲಕ ಜೀವನದಲ್ಲಿ ಅತ್ಯುತ್ತಮ ಸಾಧನೆ ಮಾಡಬೇಕು ಎಂದು ನುಡಿದರು.
ಅಂತರರಾಷ್ಟ್ರೀಯ ಯೋಗ ಶಿಕ್ಷಕರಾದ ಕುಮಾರಿ ಅರ್ಚನಾ ಅವರು ಮಾತನಾಡಿ ಮಕ್ಕಳು ಓದಿನಲ್ಲಿ ಏಕಾಗ್ರತೆ ಸಾಧಿಸಲು ಯೋಗ ಸಹಕರಿಸುತ್ತದೆ. ಯೋಗದಿಂದ ಉತ್ತಮ ಆರೋಗ್ಯ, ನೆನಪಿನಶಕ್ತಿ ದೊರೆಯುತ್ತವೆ.ಆದ್ದರಿಂದ ಮಕ್ಕಳು ಯೋಗ ಕಲಿಯಬೇಕು ಎಂದು ಕರೆ ನೀಡಿದರು.
ಕ್ಷೇತ್ರ ಸಂಪನ್ಮೂಲ ಅಧಿಕಾರಿಗಳಾದ ವೆಂಕಟೇಶ್ ಅವರು ಮಾತನಾಡಿ ಮಕ್ಕಳು ಶಿಕ್ಷಣ ಪಡೆಯುವತ್ತ ಮನಸ್ಸು ನೀಡಬೇಕು.ಮೊಬೈಲ್ ನ್ನು ಒಳ್ಳೆಯ ಉದ್ದೇಶಕ್ಕೆ ಮಾತ್ರ ಬಳಸಬೇಕು.ನಾವು ಪುಸ್ತಕವನ್ನು ತಲೆಬಗ್ಗಿಸಿ ಇಂದು ಓದಿದರೆ ನಾಳೆ ಆ ಜ್ಞಾನ ನಮ್ಮನ್ನು ಜೀವನದಲ್ಲಿ ತಲೆ ಎತ್ತಿ ನಿಲ್ಲುವಂತೆ ಮಾಡುತ್ತದೆ ಎಂದು ಮಕ್ಕಳಿಗೆ ಕಿವಿಮಾತು ನುಡಿದರು.
ಆಂಜನೇಯ ಬ್ಲಾಕ್ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ಲತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬನ್ನಿಮಂಟಪ ಬಾಲಕಿಯರ ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ಅನುಸೂಯ, ಭಗತ್ಸಿಂಗ್ ಯೂತ್ ಫೌಂಡೇಷನ್ ಪ್ರದಾನ ಕಾರ್ಯದರ್ಶಿ ರಕ್ಷಿತ್ ಸಭೆಯಲ್ಲಿ ಉಪಸ್ಥಿತರಿದ್ದರು.ಶಿಕ್ಷಕರಾದ ಮಹದೇವು ಕಾರ್ಯಕ್ರಮ ನಿರ್ವಹಿಸಿದರು.ರಕ್ಷಿತ್ ಸಭೆಗೆ ಅತಿಥಿಗಳ ಪರಿಚಯ ಮಾಡಿಕೊಟ್ಟರು.
ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಡಾ.ಭೇರ್ಯ ರಾಮಕುಮಾರ್, ಗಾಯಕರಾದ ಅಮ್ಮ ರಾಮ ಚಂದ್ರ, ಸಮಾಜಸೇವಕಿ ಚೆಲುವಾಂಬಿಕ, ಶಿಕ್ಷಕರಾದ ಶಶಿಧರ್, ಯೋಗ ತರಬೇತಿದಾರರಾದ ಅರ್ಚನಾ ಅವರನ್ನು ಸನ್ಮಾನಿಸಲಾಯಿತು.