ನಾವು – ನಮ್ಮವರು
ಆರ್. ಎಸ್. ಬಿರಾದಾರ ದಂಪತಿಗಳು ನಮ್ಮ ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರ – ಪುಣೆಯ ಆಜೀವ ಸದಸ್ಯರು ಮತ್ತು ದತ್ತಿ ದಾಸೋಹಿಗಳು.ಇಬ್ಬರೂ ಅಕ್ಕನ ಅರಿವು ವೇದಿಕೆಯ ಪ್ರಾಮಾಣಿಕ, ನಿಷ್ಠೆಯುಳ್ಳ, ಒಮ್ಮನದ ಭಕ್ತಿಯುಳ್ಳ, ಯಾವತ್ತೂ ಏನೊಂದೂ ಯೋಚನೆ ಮಾಡದೆ, ಫಲಾಪೇಕ್ಷೆ ಇಲ್ಲದೆ, ಬಸವಣ್ಣನವರ ಯಾವುದೇ ಕೆಲಸಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಳ್ಳುವ ಧೀಮಂತ ದಂಪತಿಗಳು.
ಬಿರಾದಾರ ಅವರು ಬಸವ ನಾಡಿನ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಶಿಗಣಾಪುರ ಗ್ರಾಮದ ಶರಣರಾದ ಸಿದ್ಧನಗೌಡ ಹಾಗೂ ಗಂಗಾಬಾಯಿ ಇವರ ಉದರದಿಂದ 01 – 04 -1961 ರಲ್ಲಿ ಜನಿಸಿದರು.ಇವರ ತಂದೆಯವರು ಮುಲ್ಕಿ ಪರೀಕ್ಷೆಯವರೆಗೆ ಓದಿದರೆ ತಾಯಿ ನಿರಕ್ಷರಿಯಾಗಿದ್ದರು. ಇವರು ಒಟ್ಟು ಒಂಬತ್ತು ಜನ ಮಕ್ಕಳು. ಅವರೆಲ್ಲರಿಗೂ ಅವರ ತಂದೆ-ತಾಯಿಯವರು ಸಂಸ್ಕಾರದಿಂದ ಬೆಳೆಸಿದರು. ಇವರ ಮೂಲ ಉದ್ಯೋಗ ಕೃಷಿ. ಪ್ರತಿದಿನ 18 ತಾಸುಗಳ ವರೆಗೆ ಸತ್ಯ ಶುದ್ಧ ಕಾಯಕ ಮಾಡುವ ಮೂಲಕ ಜೋಳ, ಗೋಧಿ, ಹತ್ತಿ,ಬಾಳೆ, ಇತ್ಯಾದಿ ಬೆಳೆಗಳನ್ನು ಬೆಳೆಯುತ್ತಿದ್ದರು. ರಾಶಿಯ ವೇಳೆಯಲ್ಲಿ ಬೆಳೆದ ಹತ್ತನೇ ಒಂದು ಭಾಗ ಕಸಬುದಾರರಿಗೆ ಸಲ್ಲಿಸುತ್ತಿದ್ದರು. ಅವರ ತಂದೆಯ ಈ ಕೃಷಿ ಕಾರ್ಯದಲ್ಲಿ ಅವರ ತಾಯಿಯವರು ಅಕ್ಕರೆಯಿಂದ ಭಾಗವಹಿಸುತ್ತಿದ್ದರು. ಒಟ್ಟಾರೆ ಇವರ ಕೃಷಿ ಇತರರಿಗೆ ಮಾದರಿಯಾಗಿತ್ತು.ಪಶು ಆರೋಗ್ಯ ಚಿಕಿತ್ಸಕರು ಆಗಿದ್ದ ಇವರ ತಂದೆಯವರು ಜಾನುವಾರುಗಳಿಗೆ ಕಣ್ಣಿನ ಪೊರೆ, ಬಾಯಿಬೇನೆ, ನರತೊಡಕು ಈ ಮುಂತಾದ ರೋಗಗಳಿಗೆ ಔಷಧೋಪಚಾರ ಮಾಡುವ ಮೂಲಕ ಪ್ರಾಣಿ ಪ್ರಿಯರು ಹಾಗೂ ಜೀವ ರಕ್ಷಕರಾಗಿದ್ದರು.
ಅವರ ಅಜ್ಜನವರು ಬಸವಂತರಾಯ ಪಾಟೀಲ ಇವರು ಕ್ರಿಸ್ತಶಕ 1942 ರಿಂದ 1950ರವರೆಗೆ ಅನಿವಾರ್ಯ ಸಂದರ್ಭ ಹಾಗೂ ಹಕ್ಕಿನಡಿಯಲ್ಲಿ ಸುಮಾರು 9 ವರ್ಷಗಳವರೆಗೆ ಶಿಗಣಾಪುರ ಗ್ರಾಮದ ದಳಪತಿಯಾಗಿ ಸೇವೆ ಸಲ್ಲಿಸಿದರು. ಅವರ ಪ್ರಜೆಗಳಿಗೆ ಯಾರ ಹಂಗಿಲ್ಲದೆ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದರು ಎಂದು ಆಗಾಗ ಬಿರಾದಾರ ಅವರಿಗೆ ಅವರ ತಂದೆ ಹೇಳುತ್ತಿದ್ದರು. ಇದು ಸತ್ಯವೆಂದು ಊರಿನ ಹಿರಿಯರು ಸಹ ಇoದಿಗೂ ಹೇಳುತ್ತಾರೆ. ಇಲ್ಲಿ ” “ನ್ಯಾಯನಿಷ್ಠುರಿ ದಾಕ್ಷಿಣ್ಯ ಪರ ನಾನಲ್ಲ ” ಎಂಬ ಬಸವಣ್ಣನವರ ತತ್ವಕ್ಕೆ ಬದ್ಧರಾಗಿದ್ದಾರೆಂದು ಸ್ಪಷ್ಟವಾಗುತ್ತದೆ. ಇದು ಬಿರಾದಾರ ಅವರಿಗೆ ಹೆಮ್ಮೆಯ ಸಂಗತಿಯಾಗಿದೆ.
ಇವರ ತಾಯಿಯವರು ಬೀಸುವಾಗ ಕುಟ್ಟುವಾಗ ” ನೀ ಬೇಗನೆ ಬಾರೋ ಬಸವಣ್ಣ ನೀ ಬರೆದಿದ್ದರೆ ಜಗವೆಲ್ಲ ಅಳಿಗಾಲವಣ್ಣ ” ಎಂಬ ಹಾಡು ಹಾಡುತ್ತಿದ್ದರು. ಹೀಗೆ ಕಾಯಕ ಸತ್ಯ ನ್ಯಾಯಗಳಲ್ಲಿ ದೇವರಿದ್ದಾನೆ ಎಂಬ ಅವರ ಅರಿವು ಆಚಾರಗಳನ್ನು ಗಮನಿಸಿದರೆ ಅವರು ಪರಮ ಸುಖಿಯಾಗಿದ್ದರೆಂದು ಸ್ಪಷ್ಟವಾಗುತ್ತದೆ. ಹೀಗಿರುವಾಗ ತಾಯಿಯವರು 2017ರಲ್ಲಿ ಮತ್ತು ತಂದೆಯವರು 2019ರಲ್ಲಿ ಬಯಲಲ್ಲಿ ಬಯಲಾದರು. ಇದು ಅವರೆಲ್ಲರಿಗೂ ಆಘಾತ ತಂದಿತು.ಆದರೆ ನೆರೆದ ಜನರು ಅವರ ಕಣ್ಣೀರು ಒರೆಸಿದರು. ಅವರ ಆತ್ಮಕ್ಕೆ ಶಾಂತಿ ಮತ್ತು ಮನೆಯವರೆಲ್ಲರಿಗೆ ತಾಳ್ಮೆ ನೀಡಲೆಂದು ಬಸವಾದಿ ಶರಣರಲ್ಲಿ ಬೇಡಿಕೊಂಡರು. ಹೀಗೆ ಅವರ ಪರುಷ ವ್ಯಕ್ತಿತ್ವದ ಸ್ಮರಣಾರ್ಥವಾಗಿ ಹಾಗೂ ಅವರ ಮೇಲಿನ ಅವರ ಋಣ ಕಡಿಮೆ ಮಾಡಿಕೊಳ್ಳಲು ದಾಸೋಹವನ್ನು ಇಟ್ಟಿದ್ದೇನೆ ಎನ್ನುವುದನ್ನು ಬಿರಾದಾರ ಅವರು ” ಭೂಮಿಗಿಂತ ದೊಡ್ಡವಳು ತಾಯಿ, ಅಂತರಿಕ್ಷಕ್ಕಿಂತ ವಿಶಾಲ ಮನಸ್ಸುಳ್ಳವರು ತಂದೆ ಎನ್ನುವುದರ ಮೂಲಕ ಅಭಿಮಾನದಿಂದ ಹೇಳುತ್ತಾರೆ.
ಅವರು ಮಾಧ್ಯಮಿಕ ಶಿಕ್ಷಣ ಬಳ್ಳೊಳ್ಳಿಯಲ್ಲಿ, ಪಿಯುಸಿ ಶಿಕ್ಷಣ ಬೋಳೆಗಾವ್ ನಲ್ಲಿ, ವಿಜಯಪುರ ಅಂಜುಮನ್ ಮಹಾವಿದ್ಯಾಲಯದಲ್ಲಿ ಪದವಿ ಶಿಕ್ಷಣ ಮತ್ತು ಕರ್ನಾಟಕ ವಿ.ವಿ ಧಾರವಾಡದಲ್ಲಿ ಇತಿಹಾಸ ವಿಷಯದಲ್ಲಿ ಎಂ.ಎ ಪದವಿಯನ್ನು 1990ರಲ್ಲಿ ಪಡೆದರು. ಈ ಪದವಿಯ ಹಾಜರಾತಿ 100 ಪರ್ಸೆಂಟ್ ಪಡೆದಿರುವ ನಿಮಿತ್ತ ವಿಭಾಗದ ಚೇರ್ಮನರಾದ ಡಾ. ಶ್ರೀನಿವಾಸ್ ರೆಡ್ಡಿ ಅವರು ವಾರ್ಷಿಕ ಬೀಳ್ಕೊಡುವ ಸಮಾರಂಭದಲ್ಲಿ ಅವರಿಗೆ 100 ರೂ ಪ್ರಶಸ್ತಿ ನೀಡಿ ಗೌರವಿಸಿದ್ದನ್ನು ನೆನಪಿಸಿಕೊಳ್ಳುತ್ತಾರೆ.ಮುಂದೆ ಪ್ರತಿಷ್ಠಿತ ಬಿ.ಎಲ್.ಡಿ. ಇ ಸಂಸ್ಥೆ ನೂತನ ಕಲಾ ಮಹಾವಿದ್ಯಾಲಯದಲ್ಲಿ ತಾತ್ಕಾಲಿಕ ಇತಿಹಾಸ ಉಪನ್ಯಾಸಕರಾಗಿ 1990ರಲ್ಲಿ ಸೇವೆಗೆ ಸೇರಿದರು. ತದನಂತರ ಎಸ್.ಬಿ.ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಸುಪ್ರೀಂ ಕೋರ್ಟ್ ಮೂಲಕ 2004ರಲ್ಲಿ ಯು.ಜಿ.ಸಿ ವೇತನ ಶ್ರೇಣಿಯಲ್ಲಿ ಕಾಯಂಗೊಳಿಸಲಾಯಿತು. ಸರ್ ನಿಮ್ಮ ಕೌಶಲ್ಯ ಬೋಧನೆ ಹಾಗೂ ನಡೆ ನುಡಿಗಳು ನಮಗೆ ತೃಪ್ತಿ ಹಾಗೂ ಸಂತೋಷ ತರುತ್ತದೆ ಎಂದು ವಿದ್ಯಾರ್ಥಿಗಳು ಅವರಿಗೆ ಹೇಳಿದಾಗ ಅವರಿಗೆ ಕಾಯಕದಲ್ಲಿಯೇ ಕೈಲಾಸ ಕಂಡoತೆ ಆಗುತ್ತಿತ್ತು.ತದನಂತರ ಎಸ್.ಬಿ.ಎಸ್ ಕಲಾ, ವಾಣಿಜ್ಯ ಹಾಗೂ ವಿಜ್ಞಾನಮಹಾವಿದ್ಯಾಲಯದಲ್ಲಿ ದಿನಾಂಕ 31- 3- 20 21ರಂದು ನಿವೃತ್ತಿ ಹೊಂದಿದರು.
ಇದೇ ವಿಶ್ವವಿದ್ಯಾಲಯದಲ್ಲಿ ಡಾ. ಶಾಂತಕುಮಾರಿ ಇವರ ಮಾರ್ಗದರ್ಶನದಲ್ಲಿ ” ಕುಕನೂರ ಒಂದು ಸಾಂಸ್ಕೃತಿಕ ಅಧ್ಯಯನ “ಎಂಬ ಪ್ರಬಂಧವನ್ನು ಮoಡಿಸಿ ಆಗಸ್ಟ್ 1993ರಲ್ಲಿ ಎಂ.ಫಿಲ್ ಪದವಿ ಪ್ರಥಮ ಶ್ರೇಣಿಯಲ್ಲಿ ಪಾಸಾದರು.ತದನಂತರ ಕರ್ನಾಟಕ ವಿ.ವಿ ಪಿ. ಜಿ. ಸೆಂಟರ್ ವಿಜಯಪುರ ಇದರ ನಿರ್ದೇಶಕರಾಗಿದ್ದ ಡಾ. ಸುಂದರ್ ಇವರ ಮಾರ್ಗದರ್ಶನದಲ್ಲಿ1994 ರಿಂದ 1998 ರವರೆಗೆ ವಿಲೇಜ್ ಟು ವಿಲೇಜ್ ಸರ್ವೆ ಯೋಜನೆ ಅಡಿಯಲ್ಲಿ ಭೀಮಾ ತೀರದ ಹದಿಮೂರು ಹಳ್ಳಿಗಳನ್ನು ಅನ್ವೇಷಣೆ ಮಾಡುವ ಮೂಲಕ ಪ್ರಾಚ್ಯ ವಸ್ತುಗಳನ್ನು ಬೆಳಕಿಗೆ ತರಲಾಯಿತು.
ಇದುವರೆಗೂ ಸುಮಾರು 40 ಸಂಶೋಧನಾ ಲೇಖನಗಳನ್ನು ಬರೆಯಲಾಗಿದ್ದು ಅವುಗಳಲ್ಲಿ 10 ಲೇಖನಗಳು ಗ್ರಂಥ ಹಾಗೂ ಜರ್ನಲ್ ಗಳಲ್ಲಿ ಪ್ರಕಟಣೆಗೊಂಡಿವೆ. ಇನ್ನುಳಿದವುಗಳು ರಾಜ್ಯ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಹಾವಿದ್ಯಾಲಯ ವಿಶ್ವವಿದ್ಯಾಲಯ ಹಾಗೂ ಸಮಿತಿಗಳ ಮಟ್ಟದಲ್ಲಿ ಜರುಗಿದ ವಿವಿಧ ಸಮಾವೇಶಗಳಲ್ಲಿ ಸಾದರ ಪಡಿಸಿದ್ದಾರೆ.
ಬಸವ ಜಯಂತಿ ಬೆಂಗಳೂರು ಇವರು ದಿನಾಂಕ 10.05.2024ರಂದು ವಿಶ್ವಗುರು ಬಸವಣ್ಣನವರ ಜಯಂತಿ ಅಂಗವಾಗಿ ಆಯೋಜಿಸಿದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯ ಪ್ರಜಾಪ್ರಭುತ್ವ ಹಾಗೂ ಶರಣರ ಪ್ರಜಾಪ್ರಭುತ್ವ ಎಂಬ ಲೇಖನ ಸಾದರ ಪಡಿಸಿದರಿಂದ ಅವರಿಗೆ ಪುಸ್ತಕ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಿದರು. ಎರಡನೆಯದಾಗಿ 2017ರಲ್ಲಿ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರ ಇಲ್ಲಿ ನಿಯೋಜಿಸಿದ ಒಂದು ದಿನದ ಅಂತರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಲೇಖನ ಸಾಗರ ಪಡಿಸಿದರಿಂದ ಅವರಿಗೆ ಪುಸ್ತಕ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಿದರು. 2017ರಲ್ಲಿ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರ ಇಲ್ಲಿ ನಿಯೋಜಿಸಿದ ಒಂದು ದಿನದ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಲೇಖನ ಮಂಡಿಸಲಾಯಿತು. ಮೂರನೇಯದಾಗಿ ಬಾಗಲಕೋಟೆ ವಿಶ್ವವಿದ್ಯಾಲಯದ ಪ್ರಸಾರಂಗ ವತಿಯಿಂದ ದಿನಾಂಕ 29. 8:2025ರಂದು ಬುದ್ಧ ಬಸವ ಹಾಗೂ ಅಂಬೇಡ್ಕರ್ ಅವರ ಸಮ ಸಮಾಜದ ಮೌಲ್ಯಗಳು ಕುರಿತು ಒಂದು ದಿನದ ವಿಚಾರ ಸಂಕೀರ್ಣ ಏರ್ಪಡಿಸಲಾಗಿತ್ತು ಅದರಲ್ಲಿ ಅವರು ಭಾಗವಹಿಸಿದ್ಧರು.
ಬಿರಾದಾರ ಅವರು ಡಾ.ಶಶಿಕಾಂತ ಪಟ್ಟಣ ಇವರ ಅಧ್ಯಕ್ಷತೆಯಲ್ಲಿ ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ಇದರ ಅಡಿಯಲ್ಲಿ ಅಕ್ಕನ ಅರಿವು ವೇದಿಕೆಯ ಮೂಲಕ ನಡೆಯುವ ಗೂಗಲ್ ಮೀಟ್ ಗಳಲ್ಲಿ ಪ್ರತಿ ಶನಿವಾರ ಮತ್ತು ರವಿವಾರ ತಪ್ಪದೇ ಭಾಗವಹಿಸಿ, ಬಸವ ತತ್ವ ಪ್ರಸಾರದ ಜೊತೆಗೆ ಬಸವ ಧರ್ಮಕ್ಕೆ ಮಾನ್ಯತೆ ಸಿಗುವವರೆಗೆ ಅವರದು ಈ ವಿಷಯದಲ್ಲಿ ಹೋರಾಟದ ನಿಲುವು ಹಾಗೂ ಯಾವತ್ತೂ ಕಳಕಳಿಯ ವಿಷಯವಾಗಿದೆ ಎನ್ನುವುದನ್ನು ಮನದಟ್ಟು ಮಾಡುತ್ತಾರೆ.
ಬಿರಾದಾರ ಅವರ ಪತ್ನಿ ರತ್ನಾಬಾಯಿ. ಆರ್ ಬಿರಾದಾರ ಇವರು ವಿಜಯಪುರ ಜಿಲ್ಲೆಯ ಗುಂದಗಿ ಗ್ರಾಮದ ಶರಣ ದಂಪತಿಗಳಾದ ಶಾಮರಾಯ ಹಾಗೂ ಮಹಾದೇವಿ ಉದರದಿಂದ 15.04.1973 ರಲ್ಲಿ ಜನಿಸಿದರು. ಇವರು 10ನೇ ತರಗತಿವರೆಗೆ ಓದಿದ್ದು ಇದೇ ವೇದಿಕೆಯ ಗೂಗಲ್ ಮೀಟ್ ನಲ್ಲಿ ತಪ್ಪದೇ ಹಾಜರಾಗುತ್ತ ಶರಣು ಸಮರ್ಪಣೆ, ವಚನಗಳನ್ನು ಹಾಡುವ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾರೆ.ಅವರ ಮಕ್ಕಳಾದ ಭುವನೇಶ್ವರಿ ಹಾಗೂ ಅಶೋಕ ಬಿರಾದಾರ ಇವರೆಲ್ಲರೂ ಅವರ ನಿಲುವು ಮತ್ತು ಕಳಕಳಿಗೆ ಕೈ ಜೋಡಿಸುತ್ತಿದ್ದಾರೆ.
ಒಟ್ಟಿನಲ್ಲಿ ಬಿರಾದಾರ ದಂಪತಿಗಳು ನಿಜ ಶರಣರು, ಗಟ್ಟಿತನದ ಧ್ವನಿಯುಳ್ಳವರು, ಕಟ್ಟುನಿಟ್ಟಿನ ಬಸವಾಚರಣೆ ಮಾಡುವವರು, ತಮಗೆ ಸಿಕ್ಕ ಎಲ್ಲರಿಗೂ ಹಿಂದೆ ಮುಂದೆ ನೋಡದೆ ಮುನ್ನುಗ್ಗಿ ಬಸವತತ್ವದ ಬಗೆಗೆ ತಿಳಿ ಹೇಳುವ ಅಪರೂಪದ ದಂಪತಿಗಳು.
ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರ- ಪುಣೆ

