ರಾಜ್ಯದಲ್ಲಿ ಇನ್ನೂ ಸರ್ಕಾರ ಅಸ್ಥಿತ್ವಕ್ಕೇ ಬಂದಿಲ್ಲ. ಸಂಪುಟ ಸಭೆ ನಡೆಯುವ ಮೊದಲೇ ಕಾಂಗ್ರೆಸ್ ಪಕ್ಷವು ಪತ್ರಿಕೆಗಳ ಮುಖಪುಟದ ಜಾಹೀರಾತಿನಲ್ಲಿ ಐದು ಗ್ಯಾರಂಟಿಗಳನ್ನು ಜಾರಿಗೆ ತಂದೇ ಬಿಟ್ಟರು ಎಂಬಂತೆ ‘ ನುಡಿದಂತೆ ನಡೆದಿದ್ದೇವೆ,’ ಎಂದು ಹಾಕಿಕೊಳ್ಳುವುದು ಸರಿಯೇ ? ಇದು ಆತ್ಮ ವಂಚನೆ ಅಂತ ಮುಖ್ಯಮಂತ್ರಿ ಸಿದ್ಧರಾಮಯ್ಯ, ಡಿಕೆಶಿ, ರಾಹುಲ್ ಗಾಂಧಿಯವರಿಗೆಲ್ಲ ಅನ್ನಿಸುವುದೇ ಇಲ್ಲವೆ?
ಜಾಹೀರಾತಿನಲ್ಲಿ ಸ್ಪಷ್ಟವಾಗಿ ಬರೆಯಲಾಗಿದೆ; “ಸನ್ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಘೋಷಿಸಿದ್ದ ‘ಪಂಚ’ ಖಾತ್ರಿ ಯೋಜನೆಗಳನ್ನು ಶೀಘ್ರವೇ ಜಾರಿಗೆ ತರುವುದಾಗಿ ಪ್ರಕಟಿಸಿದ್ದಾರೆ. ಈ ಮೂಲಕ ಮತ್ತೊಮ್ಮೆ ತಮ್ಮದು ‘ನುಡಿದಂತೆ ನಡೆವ’ ಬಹುಮತದ ಜನಪರ ಸರ್ಕಾರ ಎನ್ನುವುದನ್ನು ದೃಢಪಡಿಸಿದ್ದಾರೆ. ನಾಡಿನ ಸರ್ವ ಜನರ ಶ್ರೇಯೋಭಿವೃದ್ಧಿಗಾಗಿ ರೂಪಿಸಿದ್ದ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತಿರುವ ಸ್ಥಿರ ಸರ್ಕಾರ ಎಂಬ ಹೆಮ್ಮೆಗೆ ಪಾತ್ರವಾಗಿದೆ” ಎಂದು ಬರೆಯಲಾಗಿದೆ.
ಅಲ್ಲ ಸ್ವಾಮಿ, ಇದು ಯಾವ ರೀತಿಯ ಕನ್ನಡ ? ಯೋಜನೆಗಳನ್ನು ಶೀಘ್ರವಾಗಿ ಜಾರಿಗೆ ತರುವುದಾಗಿ ಪ್ರಕಟಿಸಿದ್ದಾರೆ ಎಂದರೆ ನುಡಿದಂತೆ ನಡೆದಂತಾಯಿತೆ ? ಇದು ಶುದ್ಧ ಬೊಗಳೆ ಅಲ್ಲವೆ ? ಮೊದಲು ಸಿದ್ಧರಾಮಯ್ಯನವರು ತಮ್ಮ ಸಂಪುಟ ರಚನೆ ಮಾಡಿಕೊಂಡು ಸಭೆ ನಡೆಸಲಿ, ಚುನಾವಣೆಯ ಪೂರ್ವದಲ್ಲಿ ಬಡಾಯಿ ಕೊಚ್ಚಿಕೊಂಡಂತೆ ಐದು ಗ್ಯಾರಂಟಿಗಳನ್ನು ಯಾವುದೇ ಶರತ್ತು ಹಾಕದೇ ಜಾರಿಗೆ ತರಲಿ. ಆಮೇಲೆ ಹೇಳಬಹುದು. ನುಡಿದಂತೆ ನಡೆವ ಸರ್ಕಾರ ಎಂದು !
ಇನ್ನೂ ಹಾಲಿಲ್ಲ, ಬಟ್ಟಲಿಲ್ಲ… ಗುಟಕ್ ಎಂದು ಕುಡಿದಂತೆ ಆಯಿತಲ್ಲ ! ಮೊದಲೇ ಸಾಲದಲ್ಲಿ ಸಿಲುಕಿ ಒದ್ದಾಡುತ್ತಿರುವ ರಾಜ್ಯವನ್ನು ಮತ್ತಷ್ಟು ಸಾಲದಲ್ಲಿ ಸಿಲುಕಿಸದೇ ಮೊದಲು ರಾಜ್ಯಭಾರ ನಡೆಸಲಿ. ಈ ಐದು ಗ್ಯಾರಂಟಿಗಳಿಗೆ ಬೇಕಾಗುವ ಸಾವಿರಾರು ಕೋಟಿ ರೂಪಾಯಿಗಳನ್ನು ರಾಜ್ಯಕ್ಕೆ ಯಾವುದೆ ಬಾಧಕವಾಗದಂತೆ ವ್ಯವಸ್ಥೆ ಮಾಡಿಕೊಳ್ಳಲಿ. ಒಟ್ಟಿನಲ್ಲಿ ಅಧಿಕಾರ ಹಿಡಿಯಲೆಂದು ಜನರ ತಲೆಯಲ್ಲಿ ತುಂಬಲಾದ ಈ ಪುಕ್ಕಟ್ಟೆ ಯೋಜನೆಗಳಿಂದಾಗಿ ರಾಜ್ಯದಲ್ಲಿ ಅರಾಜಕತೆ ಉಂಟಾಗದಿರಲಿ.
ಉಮೇಶ ಬೆಳಕೂಡ, ಮೂಡಲಗಿ