ಆಗುಂಬೆ ಎಸ್. ನಟರಾಜ್ ನಾಡಿನ ಹಿರಿಯ ಲೇಖಕರು. ವಿಶೇಷವಾಗಿ ಇತಿಹಾಸ ಅಧ್ಯಯನಕಾರರು. ನಿವೃತ್ತ ಕೆನರಾ ಬ್ಯಾಂಕ್ ಉದ್ಯೋಗಿ. ಐತಿಹಾಸಿಕ ಸ್ಥಳಗಳ ಅನ್ವೇಷಣೆ ಪ್ರವಾಸ ಇವರ ಹವ್ಯಾಸ. ವೃತ್ತಿಯಲ್ಲಿ ನೋಟು ಎಣಿಸಿದವರು ಪ್ರವೃತ್ತಿಯಲ್ಲಿ ದೇಶ ಸುತ್ತಿ ನೋಟ್ಸ್ ಮಾಡಿ ಪುಸ್ತಕ ಬರೆದವರು, ಸಾಕ್ಷ್ಯ ಚಿತ್ರ ತಯಾರಿಸಿದವರು. ಇವರ ಪುಸ್ತಕಗಳ ಸಂಖ್ಯೆ 41. ಇವರ ವಯಸ್ಸು ಇದಕ್ಕೂ ಡಬಲ್ (ಜನನ 1939).
ಪೋನ್‍ಗೆ ಸಿಕ್ಕ ಅವರು ಅನಂತರಾಜು, ನಾನು ಕೇವಲ ಒಬ್ಬ ಪ್ರವಾಸಿಯಾಗಿ ಭಾರತ ದೇಶ, ಯೂರೋಪ್ ಅಮೇರಿಕಾ, ಕೆನಡಾ ಬಾಂಗ್ಲಾದೇಶ ಸುತ್ತಿಲ್ಲ. ಒಬ್ಬ ಇತಿಹಾಸ ಸಂಶೋಧಕನಾಗಿ ಪ್ರಪಂಚ ಸುತ್ತಿ ಬಂದಿದ್ದೇನೆ. ಪ್ರವಾಸ ಕಥನ ಬರೆದಿರುವೆ ಎಂದು ಕೆಲ ಸಾಕ್ಷ್ಯ ಚಿತ್ರಗಳನ್ನು ಕಳಿಸಿದ್ದರು. ಗಾಂಧೀಜಿ ಜಾಡಿನಲ್ಲಿ ನೌಖಾಲಿಗೊಂದು ಪಾದಯಾತ್ರೆ, ಅಥೇನ್ಸ್, ಡೆಲ್ಫಿ, ಇಸ್ತಾನ್‍ಬುಲ್, ಗ್ರೀಕ್, ಪೆಟ್ರಾರ್ಕ್, ರೋಮ್ ನಗರದ ಇತಿಹಾಸ, ಓ ಜೆರೂಸೆಲಂ, ಕದಂಬರ ಗೋವ, ಅಂಡಮಾನ್ ಸೆರೆಮನೆಯಲ್ಲಿ ನರಗುಂದ ಸಿಪಾಯಿಗಳು, ಹೊರನಾಡಿನ ಮೂರು ಕರ್ನಾಟಕ ರಾಜ್ಯಗಳು ಸಾಕ್ಷ್ಯಚಿತ್ರಗಳು ಇವರ ಫೀಲ್ಡ್ ವಕ್ರ್ಸ್ ಸಾಕ್ಷೀಕರಿಸಿವೆ.
ಇದು ದಿಲ್ಲಿ, ಇದು ಕಾಶಿ, ಓಹ್ ಕಲ್ಕತ್ತಾ, ಇದು ಗೋವಾ, ಇದು ಹಳೆಯ ಮದ್ರಾಸ್, ದಿಲ್ಲಿಯಿಂದ ತಾಮ್ಡಿ ಸುರ್ಲಾಗೆ, ಇದು ಬರ್ಲಿನ್, ಅಮ್‍ಸ್ಟರ್‍ಡ್ಯಾಮ್‍ನಿಂದ ಆವಿಗ್ನಾನಕ್ಕೆ, ಅಥೇನ್ಸ್‍ನಿಂದ ಇಸ್ತಾನ್‍ಬುಲ್‍ಗೆ, ನ್ಯೂಯಾರ್ಕ್‍ನಿಂದ ನ್ಯೂ ಆರ್ಕ್‍ಗೆ..ಹೀಗೆ ಇವರ ಪ್ರವಾಸಿ ಕೃತಿಗಳು ನಮಗೆ ಗೈಡ್‍ಗಳಾಗಿವೆ. ಪ್ರಸ್ತುತ ಇವರು ನನಗೆ ಕಳಿಸಿರುವ ಕೃತಿ ಹೊರನಾಡಿನ ಮೂರು ಕರ್ನಾಟಕ ರಾಜ್ಯಗಳು. ಇದರಲ್ಲಿ ಮೂರು ಪ್ರಮುಖ ಲೇಖನಗಳು ಮಿಥಿಲಾ, ಬಂಗಾಳದ ಸೇನರು ಮತ್ತು ತಮಿಳುನಾಡಿನಲ್ಲಿ ಹೊಯ್ಸಳರು.
ಕೃತಿಯಲ್ಲಿ ಹೊರನಾಡಿನಲ್ಲಿ ಕರ್ನಾಟಕದ ಮೂರು ರಾಜವಂಶಗಳ ಬಗ್ಗೆ ವಿವೇಚಿಸಲಾಗಿದೆ. ಲೇಖಕರ ಯಾತ್ರಾ ಅನುಭವವೇ ಸ್ವಾರಸ್ಯಕರವಾಗಿ ಓದಿಸಿಕೊಳ್ಳುತ್ತದೆ.
ಮಿಥಿಲೆಯ ಕರ್ನಾಟಕ ರಾಜವಂಶ ಬಗ್ಗೆ 7 ಅಧ್ಯಾಯಗಳು ಬಂಗಾಳದ ಸೇನರ 3 ಮತ್ತು ತಮಿಳುನಾಡಿನ ಹೊಯ್ಸಳರ ಬಗ್ಗೆ ಒಂದು ಅಧ್ಯಾಯವಿದೆ. ಬಿಹಾರ ರಾಜ್ಯದ ಮಿಥಿಲಾ ನಮಗೆಲ್ಲರಿಗೂ ಚಿರಪರಿಚಿತ. ರಾಮಾಯಣದ ಸೀತೆ ಮಿಥಿಲಾ ರಾಜಕುಮಾರಿ. ಈ ಮಿಥಿಲಾ ರಾಜ್ಯವನ್ನು ಕರ್ನಾಟಕದ ಒಂದು ವಂಶ ಸುಮಾರು 900 ವರ್ಷಗಳ ಹಿಂದೆ 225 ವರ್ಷಗಳು ಆಳಿತೆಂದರೆ ಆಶ್ಚರ್ಯವಲ್ಲವೇ..? ಏನೇ ಆಗಲಿ ಅಲ್ಲಿಗೆ ಹೋಗಿ ನೋಡಿಯೇ ಬರೋಣವೆಂದು ಲೇಖಕರು ಹೊರಡುತ್ತಾರೆ. ಚರಿತ್ರೆಯ ಪುಟಗಳಲ್ಲಿ ಸಿಂಹರಾಯನಗಢ ಬಿಹಾರಿನ ಚಂಪಾರಣ್ ಜಿಲ್ಲೆಯಲ್ಲಿದೆ ಎಂದಷ್ಟೇ ಹೇಳಿದೆ. ಚಂಪಾರಣ್ ಗಾಂಧೀಜಿಯವರ ಸತ್ಯಾಗ್ರಹಕ್ಕೆ ಹೆಸರಾಗಿದೆ. ಅಂತೆಯೇ ಡಕಾಯಿತರಿಂದ ಪ್ರಚಾರ ಪಡೆದುಕೊಂಡಿದೆ ಎಂದೂ ಪೊಲೀಸ್ ಸಹಾಯ ಕೇಳಿದರೆ ಅಲ್ಲಿ ಯಾರಿದ್ದಾರೆ.? ಎಲ್ಲಿಂದ ಬಂದಿದ್ದೀರಿ.? ಯಾರನ್ನೂ ನೋಡಬೇಕು..? ಹೀಗೆ ಪ್ರಶ್ನೆಗಳ ಸುರಿಮಳೆ ಎದುರಾಗುತ್ತದೆ. ಕಡೆಗೆ ಪೊಲೀಸರ ಉತ್ತರ ಸಿಂಹರಾಯನಗಢ ಎಲ್ಲಿದೆ ಗೊತ್ತಿಲ್ಲ. ನಟರಾಜರ ಹ್ಯಾಪ್‍ಮೋರೆ ನೋಡಿ ಪೊಲೀಸ್ ಕನಿಕರದಿಂದ ಪತ್ರಕರ್ತರೊಬ್ಬರಿಗೆ ಪೋನ್ ಹಚ್ಚಿ ‘ಏನು ರಕ್ಸೌಲ್ ಹತ್ತಿರ ಗೋಡಾಸಹನ್‍ನಿಂದ ಭಾರತದ ಗಡಿ ದಾಟಿ 10 ಕಿ.ಮಿ. ಆಚೆ ನೇಪಾಳದಲ್ಲಿದೆಯಾ..! ಚಿನ್ನ ಸಿಕ್ಕಿದೆಯಾ..! ಹಿಡಿದಿರಾ..ಕೋಟೆ ಕೊತ್ತಲವಿದೆಯಾ..? ಅವರ ಮೈಥಿಲಿ ಮಿಶ್ರಿತ ಹಿಂದಿ ಭಾಷೆಯ ಸಂವಾದ ನಟರಾಜರಿಗೆ ಮನದಟ್ಟಾಗಿ ಚಡಪಡಿಸುತ್ತಾರೆ. ಕಡೆಗೆ ಪೊಲೀಸ್ ನೇಪಾಳದಲ್ಲಿದೆಯಂತೆ ನಿಮ್ಮ ಸಿಂಹರಾಯನಗಢ. ಪಾಳು ಬಿದ್ದಿರುವ ಕೋಟೆ ಪ್ರದೇಶದಲ್ಲಿ ಚಿನ್ನ ಸಿಕ್ಕಿದರೆ ನಮಗೆ ಸುದ್ಧಿ ತಿಳಿಸಲಿಕ್ಕೆ ಮರೆಯಬೇಡಿ..ಹೀಗೆ ಲೇಖಕರ ಅನ್ವೇಷಣೆಯ ಸೀರಿಯಸ್ ವಿಷಯ ತಮಾಷೆಯಾಗಿ ನಿರೂಪಿತವಾಗಿದೆ.
ಒಂದು ಕಾಲದಲ್ಲಿ ಕರ್ನಾಟಕದ ರಾಜಧಾನಿಯಾಗಿ ಮೆರೆದ ಸಿಂಹರಾಯನಗಢ ಈಗ ಒಂದು ಕುಗ್ರಾಮ. ಗಲ್ಲಿ ಸಂದುಗಳಲ್ಲಿ ಕೆಲವೇ ಮನೆ ಗುಡಿಸಲುಗಳನ್ನು ಹೊಂದಿದ್ದು ಸುತ್ತಲೂ ಗದ್ದೆ ಹೊಲ ಕಾಡುಗಳಿಂದ ಕೂಡಿತ್ತು. ಸುತ್ತಾ ಕಣ್ಣು ಹಾಯಿಸಲು ಮುರಿದು ಬಿದ್ದ ಆಲಯವೊಂದು ಗೋಚರಿಸಿ ನಾನು ಕರ್ನಾಟಕದ ಯಾವ ಕುರುಹಿಗಾಗಿ ಪರಿತಪಿಸುತ್ತಿದ್ದನೋ ಅದು ನನ್ನ ಕಣ್ಣ ಮುಂದೆ ರಾರಾಜಿಸುತ್ತಿತ್ತು. ನಾಲ್ಕು ಸುಂದರ ಶಿಲಾಮೂರ್ತಿಗಳು ಅಲ್ಲಿ ವಿರಾಜಿಸುತ್ತಿತ್ತು. ಕರಿ ಕಲ್ಲಿನಿಂದ ಕಡೆದಿದ್ದು ಬೇಲೂರು ಹಳೇಬೀಡು ಶಿಲಾಬಾಲಿಕೆಯರ ಸೊಗಸು ಅಲ್ಲಿ ಮೂಡಿ ಬಂದಿಲ್ಲವಾದರೂ ಸರಳ ನೈಜತೆಯ ಆ ಮೂರ್ತಿಗಳು ಭಗ್ನಗೊಂಡು ನಶಿಸಿ ಹೋಗುತ್ತಿದ್ದವು. ಛಾವಣಿ ಇಲ್ಲದ ಮುರಿದ ಮಂಟಪ, ಪೂಜೆ ಇಲ್ಲದ ವಿಗ್ರಹಗಳು, ಪ್ರಕೃತಿಯ ನಿರ್ದಯತನ ಈ ಕಲೆಯ ಬೀಡನ್ನು ಹಾಳು ಕಡೆವಿತ್ತು. ಸಿಂಹರಾಯನಗಢ ಹಾಳು ಸುರಿಯುತ್ತಿತ್ತು. ಕೋಟೆ ನೆಲಸಮವಾಗಿತ್ತು.. ವಸ್ತುಸ್ಥಿತಿ ನೋಡಿ ಲೇಖಕರು ಸುಸ್ತಾಗಿ ಕುಸಿದು ಕೂರುತ್ತಾರೆ. ಒಂದಿಷ್ಟು ಸುಧಾರಿಸಿಕೊಂಡು ಗತಕಾಲದ ಇತಿಹಾಸ ನೆನೆಯುತ್ತಾರೆ.
ಈ ಕೋಟೆಯನ್ನು ಹರಿಸಿಂಘನೆಂಬ ರಾಜ ಕಟ್ಟಿಸಿದ. ದೆಹಲಿ ಸುಲ್ತಾನ್ ಘಿಯಾಸುದ್ಧೀನ್ ತೊಘಲಖ್ ಈ ಕೋಟೆಯನ್ನು ಹಾಳುಗೆಡಿಸಿದ. ಯುದ್ಧದಲ್ಲಿ ಸೋತ ಹರಿಸಿಂಘ್ ನೇಪಾಳಕ್ಕೆ ಓಡಿಹೋದ. ಇತ್ತ ಇದನ್ನೆಲ್ಲಾ ಹುಡುಕಿಹೋದ ಲೇಖಕರ ಏಳು ಅಧ್ಯಾಯಗಳಲ್ಲಿ ಪೌರಾಣಿಕ, ಐತಿಹಾಸಿಕ ಸಂಗತಿಗಳನ್ನು ವಿವರಿಸುತ್ತಾರೆ. ವಿದೇಹ ಅಥವಾ ಮಿಥಿಲಾ ರಾಜ್ಯದ ಅವನತಿ ಜನಕ ರಾಜನಿಂದ ಆಯಿತೆಂದು ವಿದ್ವಾಂಸರ ಅಭಿಪ್ರಾಯ. ಮುಂದೆ ಕಾಶೀರಾಜರು ಮತ್ತು ಉಜ್ಜಯಿನಿಯ ರಾಜ ಒಡಂಬಡಿಕೆಗೆ ಮಿಥಿಲಾ ಒಳಗಾಯಿತು. ಈ ರಾಜವಂಶದ ಪತನದಿಂದ ಮಿಥಿಲಾ ತನ್ನ ಸ್ವಾತಂತ್ರ್ಯ ಕಳೆದುಕೊಂಡುದರ ಪರಿಣಾಮ ವೈಶಾಲಿಗೆ ವರ್ಗವಾಯಿತು.
ಇನ್ನೂ ಐತಿಹಾಸಿಕವಾಗಿ ವಂಗ ದೇಶದ ಗೋಪಾಲ ಪಾಲ ವಂಶದ ಮೊದಲಿಗ. ಈತ ಕ್ರಿ.ಶ.756 ರಿಂದ 763ವರೆಗೆ ವಂಗ ದೇಶವನ್ನಾಳಿದ. ಮಗಧ ರಾಜ್ಯದವರೆಗೂ ಸಾಮ್ರಾಜ್ಯ ವಿಸ್ತರಿಸಿದ. ಇವನ ಮಗ ಧರ್ಮಪಾಲ (ಕ್ರಿ.ಶ.783-818) ಈತನ ಕಾಲದಲ್ಲಿ ಮಿಥಿಲೆ ಅಥವಾ ತಿರುಭುಕ್ತಿ, ಪಾಲ ರಾಜ್ಯಕ್ಕೆ ಸೇರಿತೆಂಬ ವಿಷಯ ಪಾಲರ ತಾಮ್ರ ಶಾಸನಗಳಲ್ಲಿ ಸಿಗುತ್ತದೆ. ಈತನ ಕಾಲದಲ್ಲಿ ಕರ್ನಾಟಕವರು ಆಸ್ಥಾನಗಳಲ್ಲಿ ಉನ್ನತ ಸ್ಥಾನ ಹೊಂದಿದ್ದರೆಂದು ನಲಂದ ಶಾಸನಗಳು ಸಾರುತ್ತವೆ. ರಾಷ್ಟ್ರಕೂಟರ ರಾಜ ಪ್ರಬಲನ ಮಗಳು ಕನ್ಯಾದೇವಿಯನ್ನು ಧರ್ಮಪಾಲನು ಮದುವೆಯಾದನೆಂದು ಶಾಸನಗಳು ಹೇಳಿವೆ. ಕರ್ನಾಟಕ ವಂಶದ ಶ್ರೀ ನಾನ್ಯದೇವನ ಉದಯ ಮಿಥಿಲೆಯಲ್ಲಾಯಿತು. (ಕ್ರಿ.ಶ.1097). ಕ್ರಿ.ಶ.770 ಸುಮಾರಿಗೆ ಪ್ರವರ್ಧಮಾನಕ್ಕೆ ಬಂದ ಕರ್ನಾಟಕದ ವಂಶಜ ವಿಜಯಸೇನನಿಂದ ಪಾಲರು ಅವನತಿಗೊಂಡಾಗ ನಾನ್ಯದೇವ ಮಿಥಿಲೆಯನ್ನು ಜಯಿಸಿ ತನ್ನ ವಂಶಕ್ಕೆ ಅಸ್ಥಿಭಾರ ಹಾಕಿದ. ಚರಿತ್ರೆಕಾರರಾದ ಸಿ.ಪಿ.ಎನ್.ಸಿನ್ಹಾರ ಹೇಳಿಕೆಯಂತೆ ಮಿಥಿಲಾ ರಾಜ್ಯ ಕರ್ನಾಟಕ ವಂಶಜನಾದ ನಾನ್ಯದೇವನಿಂದ ಪ್ರಾರಂಭವಾಗಿ ಅದರ ಸರ್ವತೋಮುಖ ಏಳಿಗೆಯಾಯಿತು ಮತ್ತು ಅದು ದೃಢವಾದ ರಾಜಕೀಯ ಶಕ್ತಿಯಾಗಿ ಪರಿವರ್ತನೆಗೊಂಡಿತು. ಕ್ರಿ.ಶ.1097ರಲ್ಲಿ ನೇಪಾಳದ ತೆರಾಯಿ ಬಿಹಾರಿನ ಚಂಪಾರಣ್ ಜಿಲ್ಲೆಗೆ ತಾಗಿಕೊಂಡಂತೆ, ಸಿಂಹರಾಯನಪುರ ಅಥವಾ ಸಿಂಹರಾನ್ ಎಂಬಲ್ಲಿ ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡು ನಾನ್ಯದೇವ ರಾಜ್ಯಸ್ಥಾಪನೆ ಮಾಡಿದನೆಂದೂ ಹಲವಾರು ಶಾಸನಗಳು, ಸಾಹಿತ್ಯ ಮತ್ತು ಸ್ಥಳೀಯ ಪುರಾಣಗಳು ಸಾರುತ್ತವೆ. ಈ ಮಾಹಿತಿ ಏಳು ಅಧ್ಯಾಯಗಳಲ್ಲಿ ನಿರೂಪಿತವಾಗಿದೆ.
ಕೃತಿಯ 2ನೇ ವಿಷಯ ಬಂಗಾಳದ ಸೇನರು. ಮೊಹ್ಮದ್ ಭಕ್ತಿಯಾರ್ ಖಿಲ್ಚಿ ಕ್ರಿ.ಶ.1206ರಲ್ಲಿ ಬಂಗಾಳಕ್ಕೆ ನುಗ್ಗಿ ಹಿಂದೂ ರಾಜನಾದ ಲಕ್ಷ್ಮಣಸೇನನನ್ನು ನದಿಯಾ ನಗರದಿಂದ ಹೊಡೆದೋಡಿಸಿ ಬಂಗಾಳದಲ್ಲಿ ಮಸ್ಲಿಂರಾಜ್ಯ ಸ್ಥಾಪಿಸುತ್ತಾನೆ. ಬಂಗಾಳದ ಈ ಸೇನರು ಕರ್ನಾಟಕದ ಮೂಲದವರು. ಸುಮಾರು 750 ವರ್ಷಗಳ ಹಿಂದೆ ಕರ್ನಾಟಕದ ರಾಜರು ನದಿಯಾ ನಗರವನ್ನು ಆಳುತ್ತಿದ್ದರು. ಬಂಗಾಳದಲ್ಲಿ ಆಳಿದ ಪಾಲರ ನಂತರ ಸೇನರ ವಂಶದ ಆಳ್ವಿಕೆ ಆರಂಭವಾಯಿತು. ಈ ವಂಶದವರು ಕರ್ನಾಟಕದಿಂದ ಬಂಗಾಳಕ್ಕೆ ವಲಸೆ ಬಂದು ಪಾಲರನ್ನು ಸೋಲಿಸಿ ರಾಜ್ಯವನ್ನು ಕೈವಶ ಮಾಡಿಕೊಂಡು ಆಳಿದರು. ಕರ್ನಾಟಕ ಸೇನರ ವಂಶದ ಮೂಲ ಪುರುಷನಾದ ಸಾಮಂತಸೇನ ಕಾಲವಾದ ನಂತರ ಹೇಮಂತ ಸೇನನ ಹೆಸರನ್ನು ಬ್ಯಾರಕ್‍ಪುರ್ ತಾಮ್ರ ಶಾಸನದಲ್ಲಿ ಕಾಣಬಹುದು. ಇವನ ಮಗ ವಿಜಯಸೇನನ ಬಗ್ಗೆ ದೇವಪಾರಾ ಶಿಲಾಶಾಸನ ವರ್ಣಿಸಿದೆ. ಸೇನ ವಂಶದ ಆಳ್ವಿಕೆಯ ವಿಜೃಂಭಣೆಯನ್ನು ಸಾರಿದ ವೀರ ಪುರುಷ ವಿಜಯ ಸೇನ. ಈತ ಇಡೀ ಬಂಗಾಳವನ್ನು ಜಯಿಸಿ ತನ್ನ ಹತೋಟಿಯಲ್ಲಿರಿಸಿಕೊಂಡ ವೀರ. ಈತ ಮತ್ತೊಂದು ಕರ್ನಾಟಕ ವಂಶದವನಾದ ಮಿಥಿಲೆಯ ನಾನ್ಯದೇವನ ಸಮಕಾಲೀನ.
ಹೊಯ್ಸಳರ ರಾಜನಾದ ವೀರ ಸೋಮೇಶ್ವರನು (ಕ್ರಿ.ಶ.1235) ತಮಿಳುನಾಡಿನ ಕಣ್ಣಾನೂರನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡು ತನ್ನ ಪೂರ್ವಿಕರು ಗೆದ್ದಿದ್ದ ತಮಿಳು ಪ್ರಾಂತವನ್ನು ಆಳುತ್ತಿದ್ದನು ಎಂದು ಚರಿತ್ರೆಯಲ್ಲಿ ಓದಿದ ಲೇಖಕರು ಮತ್ತೆ ಕಣ್ಣಾನೂರು ಎಲ್ಲಿದೆ ಅಂತ ಅತ್ತ ಕಡೆ ಹೊರಟಿದ್ದೆ ತಮಿಳನಾಡಿನಲ್ಲಿ ಹೊಯ್ಸಳರು 3ನೇ ವಿಷಯ. ಹೊಯ್ಸಳರು 11ನೇ ಶತಮಾನದಲ್ಲಿ ರಾಜ್ಯಭಾರ ಆರಂಭಿಸಿ ಚೋಳರು ಕರ್ನಾಟಕದ ಒಂದು ಭಾಗವಾದ ತಲಕಾಡನ್ನು ಆಳುತ್ತಿದ್ದ ಕಾಲದಲ್ಲಿ ಬಿಟ್ಟಿದೇವ ಚೋಳರನ್ನು ಅಲ್ಲಿಂದ ಓಡಿಸಿ ಕೊಂಗು ದೇಶವನ್ನು ಆಕ್ರಮಿಸಿ ನೀಲಗಿರಿ ಅಣ್ಣಾಮಲೈ ಪ್ರದೇಶವನ್ನು ಸ್ವಾಧಿನಪಡಿಸಿಕೊಂಡ. ಹೊಯ್ಸಳರ ಬಲ್ಲಾಳ ಶ್ರೀರಂಗಂನ್ನು ಆಕ್ರಮಿಸಿ ಸುಂದರಪಾಂಡ್ಯನ ಪ್ರಾಬಲ್ಯ ಕುಗ್ಗಿಸುತ್ತಾನೆ. 2ನೇ ಬಲ್ಲಾಳನ ನಂತರ 2ನೇ ನರಸಿಂಹ ತಮಿಳುನಾಡಿನ ರಾಜಕೀಯದಲ್ಲಿ ಬಲವಾದ ಪ್ರಭಾವ ತೋರಿದನೆಂದು ಚರಿತ್ರೆಕಾರರ ಅಭಿಪ್ರಾಯ. ಕ್ರಿ.ಶ.1222 ರಿಂದ 1214ವರೆಗೆ ಸೇಲಂ, ಅರ್ಕಾಟ್ ಪ್ರದೇಶದೊಳಗೆ ನುಗ್ಗಿ ವಶಪಡಿಸಿಕೊಳ್ಳುತ್ತಾನೆ. ನರಸಿಂಹನ ಮರಣಾನಂತರ ಇವನ ಮಗ ವೀರ ಸೊಮೇಶ್ವರ (ಕ್ರಿ.ಶ.1235-52) ರಾಜ್ಯಭಾರ ವಹಿಸಿಕೊಂಡು ತಮಿಳುನಾಡಿನಲ್ಲಿ ಆಳ್ವಿಕೆ ಮಾಡಿದ್ದು ಸೋಮೇಶ್ವರನ ಹಲವಾರು ಶಾಸನಗಳು ಶ್ರೀರಂಗಂ, ತಿರುವನ್ನಾಕೋಯಿಲ್, ತಿರುವಲವಾಡಿ, ಕಾಮರಸದಲ್ಲಿ ದೊರೆತಿದ್ದು ಈತನ ರಾಜ್ಯ ವಿಸ್ತರಣಾ ಕಾರ್ಯವನ್ನು ದೃಡೀಕರಿಸುತ್ತವೆ. ಇವನ ದಂಡನಾಯಕರ ಶಾಸನಗಳು ಮನ್ನಾರ್‍ಗುಡಿ, ವೇದಾರಣ್ಯಂನಲ್ಲಿ ದೊರೆತ ವಿಷಯದಿಂದ ಸೋಮೇಶ್ವರನು ಚೋಳ ರಾಜ್ಯದಲ್ಲಿ ತನ್ನ ಪ್ರಭಾವ ಮೆರೆಸಿರುವ ಸಂಗತಿ ತಿಳಿಯುತ್ತದೆ. ಈಗಿನ ಪರೈಯೂರ್, ಪುದುಕೊಟೈ ಸೋಮೇಶ್ವರನ ವಶವಾಗಿ ಅಲ್ಲಿ ಹೊಯ್ಸಳ ಸೈನ್ಯದ ಪಾಳೆಯವಿದ್ದಿತು. ಹೀಗೆ ಹತ್ತು ಹಲವು ಐತಿಹಾಸಿಕ ಮಾಹಿತಿಗಳನ್ನು ಒಳಗೊಂಡ ಈ ಪುಸ್ತಕ ಇತಿಹಾಸ ವಿದ್ಯಾರ್ಥಿಗಳಿಗೆ ಉಪಯುಕ್ತ. ಬೆನ್ನುಡಿಯಲ್ಲಿ ಎಂ.ಚಿದಾನಂದಮೂರ್ತಿಯವರು ಬರೆದಂತೆ ಬಿಹಾರ (ಮತ್ತು ನೇಪಾಳ), ಬಂಗಾಳ, ತಮಿಳುನಾಡುಗಳಲ್ಲಿ ಕನ್ನಡ ದೊರೆಗಳು ಆಳಿದ, ಆ ರಾಜ್ಯಗಳ ರಾಜಧಾನಿ ಅವಶೇಷಗಳನ್ನು ಕಣ್ಣಾರೆ ಕಂಡು ತಮ್ಮ ಕುತೂಹಲವನ್ನು ತಣಿಸಿಕೊಳ್ಳುವ ನಟರಾಜರ ಶ್ರಮ ಶ್ಲಾಘನೀಯ. ಇತಿಹಾಸದ ಪುಟಗಳಲ್ಲಿ ಕೆಲವು ಸಂಗತಿಗಳನ್ನು ಓದುವುದು ಬೇರೆ ಆ ಜಾಗಗಳಿಗೇ ಹೋಗಿ ಅಲ್ಲಿನ ಅನುಭವವನ್ನು ಹಿಡಿದಿಟ್ಟುದನ್ನು ಓದುವುದು ಬೇರೆ. ಪ್ರವಾಸದ ಅನುಭವ ಕಥನದ ಜೊತೆಗೆ ಲೇಖಕರು ಮಿಥಿಲ, ಸೇನ, ಹೊಯ್ಸಳ ರಾಜ ಮನೆತನಗಳ ಸಂಕ್ಷಿಪ್ತ ಚರಿತ್ರೆ, ಅವರು ನೀಡಿದ ಸಾಂಸ್ಕøತಿಕ ಕೊಡುಗೆಗಳನ್ನು ಚಿತ್ರಿಸಿದ್ದಾರೆ.
–ಗೊರೂರು ಅನಂತರಾಜು, ಹಾಸನ.
ಮೊಬೈಲ್: 9449462879.
ವಿಳಾಸ: ಹುಣಸಿನಕೆರೆ ಬಡಾವಣೆ, 29ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.