ಬೆಳಗಾವಿ- ಬರುವ ಅಕ್ಟೋಬರ್ ೧೯ ರಂದು ನಡೆಯುವ ಬಿಡಿಸಿಸಿ ಬ್ಯಾಂಕ್ ಚುನಾವಣೆಯನ್ನು
ಸಮರ್ಥವಾಗಿ ಎದುರಿಸಲು ಶಾಸಕ ಬಾಲಚಂದ್ರ ಜಾರಕಿಹೊಳಿಯವರ ನೇತೃತ್ವದಲ್ಲಿ ಮಾಜಿ ಸಂಸದ ಜೊಲ್ಲೆಯವರ ಯಕ್ಸಂಬಾ ಬ್ಯಾಂಕಿನಲ್ಲಿ ಮಂಗಳವಾರದಂದು ಸಭೆಯನ್ನು ನಡೆಸಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ರಾಜ್ಯಸಭಾ ಮಾಜಿ ಸದಸ್ಯ ಡಾ. ಪ್ರಭಾಕರ ಕೋರೆ, ಗೋಕಾಕ ಶಾಸಕ ರಮೇಶ ಜಾರಕಿಹೊಳಿ, ಮಾಜಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ, ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಅವರ ನೇತೃತ್ವದಲ್ಲಿ ಬಿಡಿಸಿಸಿ ಬ್ಯಾಂಕಿನ ಚುನಾವಣೆಯು ನಡೆಯಲಿದೆ.
ಚುನಾವಣೆಗೆ ಇನ್ನೂ ಮೂರು ತಿಂಗಳ ಬಾಕಿ ಇರುವಾಗಲೇ ಈಗಿಂದಲೇ ಚುನಾವಣೆಯ ಅಖಾಡವು ಸಿದ್ಧಗೊಂಡಿದೆ. ಈಗಾಗಲೇ ಮೊದಲ ಹಂತದಲ್ಲಿ ಪ್ರಚಾರ ಕಾರ್ಯವನ್ನು ಕೈಕೊಂಡಿದ್ದು, ಬಾಕಿ ಉಳಿದಿರುವ ರಾಯಬಾಗ, ನಿಪ್ಪಾಣಿ, ಬೈಲಹೊಂಗಲ ಮತ್ತು ಚೆನ್ನಮ್ಮನ ಕಿತ್ತೂರು ತಾಲ್ಲೂಕುಗಳಲ್ಲಿ ಇದೇ ಅಗಸ್ಟ್ ತಿಂಗಳಲ್ಲಿ ಪ್ರಚಾರ ಕಾರ್ಯವು ನಡೆಯಲಿದೆ.
ಜತೆಗೆ ಹುಕ್ಕೇರಿ ಮತ್ತು ಕಾಗವಾಡ ತಾಲ್ಲೂಕುಗಳಲ್ಲಿ ಚುನಾವಣೆಯನ್ನು ನಡೆಸಲು ಸಭೆಯು ತೀರ್ಮಾನಿಸಿದೆ.
ಜಿದ್ದಾಜಿದ್ದಿನಿಂದ ಕೂಡಿರುವ ಈ ಬಿಡಿಸಿಸಿ ಬ್ಯಾಂಕಿನ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡು ನಮ್ಮ ಎಲ್ಲ ಅಭ್ಯರ್ಥಿಗಳ ಗೆಲುವಿಗೆ ಈಗಾಗಲೇ ರಣತಂತ್ರಗಳನ್ನು ಹೆಣೆಯಲಾಗಿದ್ದು, ಮತ್ತೊಂದು ಅವಧಿಗೆ ನಮ್ಮ ಬಣವು ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.
ವಿರೋಧಿಗಳು ಯಾರೇ ಆಗಿದ್ದರೂ ಅವರನ್ನು ಸಮರ್ಥವಾಗಿ ಎದುರಿಸಲು ನಮ್ಮ ಬಣವು ಸಿದ್ಧಗೊಂಡಿದೆ. ಅಧಿಕಾರವನ್ನು ಹಿಡಿದು ರೈತರಿಗೆ ಅನುಕೂಲ ಮಾಡಿಕೊಡುತ್ತೇವೆ. ಈ ಚುನಾವಣೆಯು ಪಕ್ಷಾತೀತವಾಗಿದ್ದು, ಎಲ್ಲ ಪಕ್ಷಗಳ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆಗೆ ಅಣಿಯಾಗುತ್ತಿದ್ದೇವೆ ಎಂದು ಅವರು ತಿಳಿಸಿದರು.
ಸಭೆಯಲ್ಲಿ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಪ್ಪಾಸಾಹೇಬ ಕುಲಗೋಡೆ, ಮಾಜಿ ಶಾಸಕರಾದ ಮಹಾಂತೇಶ ದೊಡ್ಡಗೌಡ್ರ, ಅರವಿಂದ ಪಾಟೀಲ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜೇಂದ್ರ ಅಂಕಲಗಿ, ಅಪ್ಪಾಸಾಹೇಬ್ ಜೊಲ್ಲೆ, ವಿಕ್ರಮ ಇನಾಂದಾರ, ಶಂಕರಗೌಡ ಪಾಟೀಲ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.