ಪ್ರಸಕ್ತ ಹಂಗಾಮಿನಲ್ಲಿ ೩ ಲಕ್ಷ ಮೆ.ಟನ್ ಕಬ್ಬು ನುರಿಸುವ ಗುರಿ- ಶಾಸಕ ಬಾಲಚಂದ್ರ ಜಾರಕಿಹೊಳಿ
ಘಟಪ್ರಭಾ : ಈ ಭಾಗದ ರೈತರ ಜೀವನಾಡಿಯಾಗಿರುವ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯು ಪ್ರಸಕ್ತ ಕಬ್ಬು ನುರಿಸುವ ಹಂಗಾಮಿನಲ್ಲಿ 3 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ಗುರಿಯನ್ನು ಹೊಂದಿದ್ದೇವೆ ಎಂದು ಕಾರ್ಖಾನೆಯ ಮಾರ್ಗದರ್ಶಕರೂ ಆಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಸೋಮವಾರದಂದು ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಕಾರ್ಮಿಕರ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ರೈತರು ಉತ್ತಮ ಇಳುವರಿಯ ಕಬ್ಬನ್ನು ನಮ್ಮ ಕಾರ್ಖಾನೆಗೆ ಪೂರೈಸುವ ಮೂಲಕ ಕಾರ್ಖಾನೆಯ ಪ್ರಗತಿಗೆ ಕೈಜೋಡಿಸುವಂತೆ ರೈತರನ್ನು ಕೋರಿಕೊಂಡರು.
ಈ ಬಾರಿ ಮಳೆ ಕೈಕೊಟ್ಟಿದ್ದರಿಂದ ನಿರೀಕ್ಷಿಸಿದ ಪ್ರಮಾಣದಷ್ಟು ಕಬ್ಬು ಬೆಳೆದಿರುವುದಿಲ್ಲ. ಆದಾಗ್ಯೂ ಪ್ರತಿ ವರ್ಷದಂತೆ ಈ ವರ್ಷವೂ ನಮ್ಮ ರೈತ ಸಮೂಹ ತಮ್ಮ ಕಬ್ಬನ್ನು ನಮ್ಮ ಕಾರ್ಖಾನೆಗೆ ಪೂರೈಕೆ ಮಾಡಬೇಕು. ಜೊತೆಗೆ ಪ್ರಸಕ್ತ ಹಂಗಾಮಿನಲ್ಲಿ ಕಬ್ಬು ಪೂರೈಸುತ್ತಿರುವ ರೈತರಿಗೆ ಪ್ರತಿ ಟನ್ ಕಬ್ಬಿಗೆ 3000 ರೂ. ನೀಡಲು ತೀರ್ಮಾಣ ತೆಗೆದುಕೊಳ್ಳಲಾಗಿದೆ. ಇದೇ ನವ್ಹೆಂಬರ್ 20 ರವರೆಗೆ ಕಬ್ಬನ್ನು ಪೂರೈಸಿದ ರೈತರಿಗೆ ಈಗಾಗಲೇ ಬಿಲ್ಲನ್ನು ಸಂದಾಯ ಮಾಡಲಾಗಿದೆ. ಆದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಕಬ್ಬನ್ನು ಪೂರೈಸುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮನವಿ ಮಾಡಿಕೊಂಡಿದ್ದಾರೆ.
ಕಾರ್ಮಿಕರಿಗೆ ದೀಪಾವಳಿ ಬಂಪರ್ : ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರಿಗೆ ಶೇ 13 ರಷ್ಟು ಬೋನಸ್ ನೀಡಲಾಗಿದೆ. ಇದರ ಜೊತೆಗೆ ಅವರ ವೇತನವನ್ನು ಶೇ 10 ರಷ್ಟು ಹೆಚ್ಚಿಸಲಾಗಿದೆ. ಕಾರ್ಖಾನೆಯ ಅಭಿವೃದ್ಧಿಯಲ್ಲಿಯೂ ಕಾರ್ಮಿಕರು ಮತ್ತು ಸಿಬ್ಬಂದಿಗಳ ಪಾತ್ರವೂ ಕೂಡ ಅಷ್ಟೇ ಮುಖ್ಯವಾಗಿದೆ ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಕಾರ್ಖಾನೆಯ ಕಾರ್ಮಿಕರು ಸತ್ಕರಿಸಿದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯರು, ಕಾರ್ಖಾನೆಯ ಸಿಇಓ ನಿತೀನ ಪಾಟೀಲ, ಲೆಕ್ಕ ಪರಿಶೋಧಕ ಸೈದಪ್ಪ ಗದಾಡಿ, ಮುಖಂಡ ಅಮೂಲ ನಾಯಿಕ, ಕಛೇರಿಯ ಅಧೀಕ್ಷಕ ಈರಣ್ಣ ಜಂಬಗಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.