ಹೌ ದು,ಸೋಲನ್ನು ಸಂಭ್ರಮಿಸುವುದು ಎಂದರೇನು? ನಮ್ಮ ಸೋಲನ್ನು ನಾವು ಸಂಭ್ರಮಿಸಿದರೆ ಮತ್ತಷ್ಟು ನಮ್ಮ ಬಗ್ಗೆ ನಮಗೆ ಆತ್ಮವಿಶ್ವಾಸ ಹೆಚ್ಚಾಗಿದೆ, ಸೋಲನ್ನು ಗೆಲುವಿನಂತೆ ಸ್ವೀಕರಿಸಬೇಕು. ಮತ್ತೇನನ್ನೋ ಸಾಧಿಸಬಲ್ಲೆನು ಎಂಬ ಗಟ್ಟಿತನ ನಮ್ಮಲ್ಲಿದೆ ಹಾಗಾಗಿ ಸೋಲನ್ನು ಸಂಭ್ರಮಿಸುವುದನ್ನು ಕಲಿಯಬೇಕು ಎಂದರ್ಥ. ಆದರೆ ಅದೇ ನಾವು ಮತ್ತೊಬ್ಬರ ಸೋಲನ್ನು ಸಂಭ್ರಮಿಸಿದರೆ ನಮಗೆ ಗೊತ್ತಿಲ್ಲದೇ ನಾವು ಸೋತಂತೆ ಎಂದರ್ಥ.
ಅರೆರೆ ಹೇಗಾದ್ರು ಮಾಡಿ ನಾನು ಅಡಿ ಇಟ್ಟಲ್ಲೆಲ್ಲಾ ಗೆಲುವು ಸಿಗಬೇಕು ಎನ್ನುವುದು ಗೆಲುವಾ? ಅಲ್ಲವೇ ಅಲ್ಲ. ಗೆಲುವು ಎಂದರೆ ಸಿಕ್ಕತಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಯಾರಿಗೂ ತೊಂದರೆ ಕೊಡದೆ ಪ್ರಾಮಾಣಿಕವಾಗಿ ಗೆದ್ದರೆ ಅದೇ ಗೆಲುವು. ಆದರೆ ನಮ್ಮಲ್ಲಿ ಹಲವರಲ್ಲಿ ಕೆಲವರು ತಾವು ಗೆಲ್ತಾರೋ ಇಲ್ವೋ ಗೊತ್ತಿಲ್ಲ ಬೇರೆಯವರ ಸೋಲು ಕಾಣುವ ಹಂಬಲ ಇಟ್ಕೊಂಡಿರ್ತಾರೆ. ಎಷ್ಟರಮಟ್ಟಿಗೆ ಎಂದರೆ ಅವರು ಬದುಕಿನಲ್ಲಿ ಗೆದ್ದರು ಖುಷಿಪಡದಷ್ಟು ಬೇರೆಯರ ಸೋಲನ್ನು ನೋವನ್ನೂ ಕಂಡು ಸಂಭ್ರಮಿಸುವವರಿದ್ದಾರೆ ಅಂತಹ ಸಂಭ್ರಮ ಸಾವಿಗಿಂತಲೂ ಕೆಟ್ಟದ್ದು.
ಬದುಕಿನಲ್ಲಿ ಸೋತರೆ ಗೆಲ್ಲಲು ಎದ್ದು ನಿಲ್ಲಬಹುದು ಆ ಸೋಲು ಗೆಲುವಿಗೆ ಸೂತ್ರವನ್ನು ಹೆಣೆಯಲು ಮಾರ್ಗ ಸೂಚಿಸಬಲ್ಲದು. ಯಾರೋ ಕುಹುಕದ ಮಾತುಗಳನ್ನಾಡಿದರೆ, ಇನ್ನ್ಯಾರೋ ಬಿದ್ದು ಬಿದ್ದು ನಕ್ಕರೆ, ಮತ್ತ್ಯಾರೋ ಶಿಳ್ಳೆ, ಕೇಕೆ ಹಾಕಿ ಬೊಬ್ಬೆ ಹೊಡೆದು ನಕ್ಕರೆ ಅವುಗಳನ್ನು ಕಿವಿಗೂ, ಮನಸಿಗೂ ತಾಕಿಸಿಕೊಳ್ಳದೆ ನಿಮ್ಮದೇ ಕಾಯಕದಲ್ಲಿ ಮಗ್ನರಾಗಿ. ಏಕೆಂದರೆ ಅವರು ಯಾರು ನಿಮ್ಮ ಗೆಲುವಿನಪರ್ವ ಆಚರಿಸುವವರಲ್ಲ. ನಿನ್ನನ್ನು ನಿನ್ನ ಸಾಮರ್ಥ್ಯವನ್ನು ಕುಗ್ಗಿಸಲು ಅವುಗಳ ಕುತಂತ್ರವಷ್ಟೇ ಎಂಬುದನ್ನು ಮರೆಯದಿರಿ. ಯಾರೋ ನಿಮಗೆ ಕೊಡುವ ಯಶಸ್ಸಿನ ನಾಮಫಲಕಗಳು, ಗೆಲುವಿನ ಕಿರೀಟಗಳು ಇವುಗಳಿಗಾಗಿ ಹವಣಿಸದೆ ಕೆಲಸ ಮಾಡಬೇಕು ಆ ಕೆಲಸ ಅವುಗಳನ್ನು ಹೊತ್ತುತರುತ್ತದಲ್ಲದೆ ಅವು ನೆತ್ತಿಗೇರದಂತೆ ನೋಡಿಕೊಳ್ಳುವ ಸರಳತನವು ಇರಬೇಕಾಗುತ್ತದೆ.
ಗೌರವ ಎನ್ನುವಂತದ್ದು ನಮ್ಮ ಸ್ಥಾನದಲ್ಲಿ ಇರುವುದಿಲ್ಲ, ವ್ಯಕ್ತಿತ್ವ ಮತ್ತು ಒಳಿತು ಬಯಸುವ ಮನಸ್ಥಿತಿಯಿಂದಲೂ ಗೌರವ ಕೂಡಿರುತ್ತದೆ. ಯಾರನ್ನೂ ಹಂಗಿಸಿ ಅಪಹಾಸ್ಯ ಮಾಡಿಯೂ ಸಮಯ ಹಾಳು ಮಾಡಿಕೊಳ್ಳಬಾರದು. ನಿನ್ನ ಬಗ್ಗೆ ಸಂಪೂರ್ಣವಾಗಿ ತಿಳಿಯದೆ ಮೂರ್ಖರು ಮಾತನಾಡಿದಾಗ ಅದನ್ನ ಉದಾಸೀನ ಮಾಡಿಬಿಡು ಅವರಿಂದ ನಿನಗೇನು ಆಗಬೇಕಾಗಿಲ್ಲ. ಎಲ್ಲರೂ ಎಲ್ಲರಿಗೂ ಒಳ್ಳೆಯವರಾಗಲು ಸಾಧ್ಯವಿಲ್ಲ. ಯಾರಿಗೋ ನೀನೂ ಕೆಟ್ಟವನೆಂದರೆ ಅದು ಅವರು ಹೇಳಿದ ತಾಳಕ್ಕೆ ನೀನು ಹೆಜ್ಜೆ ಹಾಕಿಲ್ಲವೆಂದು ಅರ್ಥ. ನಿನ್ನ ಬಗ್ಗೆ ತಿಳಿಯದೆ ಮೂರನೇ ವ್ಯಕ್ತಿ ಹೇಳಿದ ಮಾತನ್ನೇ ನಂಬಿ ನಿನ್ನೆದುರು ಇರುವ ಎರಡನೇ ವ್ಯಕ್ತಿಯು ನಿನ್ನನ್ನು ಕೆಟ್ಟವನನ್ನಾಗಿ ನೋಡಿದರೂ ತಲೆಕೆಡಿಸಿಕೊಳ್ಳದಿರು ಏಕೆಂದರೆ ಅದು ಅವರ ಜ್ಞಾನ ಅಲ್ಲ ಅವರಿಗೆ ಮತ್ತೊಬ್ಬರು ತುಂಬಿದ ಅಜ್ಞಾನ. ಮತ್ತೊಬ್ಬರ ಏಳಿಗೆ ನೋಡಿ ಸಹಿಸಿಕೊಳ್ಳಲಾಗದ ಮನಸ್ಥಿತಿ ಇದ್ದವರು ಎಂದಿಗೂ ಬೆಳೆಯಲಾರರು. ಏಕೆಂದರೆ ಅವರ ಬೆಳವಣಿಗೆಗೆ ಮಾಡಬೇಕಾದ ತಯಾರಿ ಮತ್ತು ಆಲೋಚನೆಯ ಸಮಯವನ್ನೆಲ್ಲ ನಿಮಗೆ ವ್ಯಯಿಸುತ್ತಿರುತ್ತಾರೆ. ಅಲ್ಲದೆ ಮನುಷ್ಯರನ್ನು ಹಣದಿಂದ ಅಳೆಯುವ ಕಾಲವಿದು, ಮನುಷ್ಯ,ಮನುಷ್ಯತ್ವಕ್ಕಿಂತ, ಗುಣಕ್ಕಿಂತ ಹಣಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುವ ಕಾಲವಿದು. ಹಣವೊಂದಿದ್ದರೆ ಪ್ರಪಂಚವೇ ಕಾಲ್ಗೆಳಗೆ ಇರುತ್ತದೆಂಬ ಕನಸಿನಲ್ಲಿರುವರೇ ಹೆಚ್ಚು. ಆದರೆ ಮುಂದೊಂದು ದಿನ ಹಣಕ್ಕಿಂತ ಮನುಷ್ಯತ್ವ ಇರುವ ಮನುಷ್ಯ ಮೇಲು ಎನ್ನುವ ಕಾಲವೂ ಬರುತ್ತದೆ. ನಮ್ಮ ಯಶಸ್ಸಿಗಾಗಿ ಯಾರ ಸೋಲನ್ನು ಸಂಭ್ರಮಿಸಬಾರದು. ಇನ್ನು ಗೆಲುವಿನ ನಿಚ್ಚಣಿಗೆ ಏರಲು ಹೊರಟವರು ಸಣ್ಣ ಸಣ್ಣ ಸೋಲು, ಗೆಲುವುಗಳನ್ನು ಸಂಭ್ರಮಿಸಿ ಒಂದೇ ತೆರನಾಗಿ ಸ್ವೀಕರಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ಆಸೆಗಳು ಮನುಷ್ಯನನ್ನು ಬದುಕಿಸುತ್ತೆ. ಅತಿ ಆಸೆಗಳು ಬದುಕನ್ನೇ ಕೊಲ್ಲುತ್ತೆ.
ಆಸೆ ಬದುಕಿನ ನಡುವೆ ಬರುವುದನ್ನು ಸ್ವೀಕರಿಸಿ. ಬಾರದ್ದನ್ನು ಬಯಸದೆ ಇರುವುದರಲ್ಲೇ ಖುಷಿ ಕಾಣುವವರೆಗೆ ನರಕವೂ ಸ್ವರ್ಗದಂತೆ ಭಾಸವಾಗುತ್ತದೆ .ಖುಷಿ ಸಂಭ್ರಮ ದುಃಖ ನೋವು ನಲಿವುಗಳೆಲ್ಲವೂ ನಮ್ಮ ಆಸೆ, ಆಲೋಚನೆ, ಅರಿವುಗಳ ಮೇಲೆ ನಿಂತಿರುತ್ತದೆ. ಖುಷಿ ಬಯಸಿದ್ದೆಲ್ಲ ಸಿಗುವುದರಲ್ಲಿ ಇಲ್ಲ. ಸಿಕ್ಕಿದ್ದರಲ್ಲೆ ಖುಷಿ ಕಾಣುವುದರಲ್ಲಿದೆ. ನಿನ್ನ ಸೋಲನ್ನೇ ಬಯಸುವ ಹಿತ ಶತ್ರುಗಳಿಗೂ ಪ್ರೀತಿಯಿಂದ ಕಂಡುಬಿಡಿ ಹಗೆಗೆ ಅಲ್ಲಿ ಅವಕಾಶವೇ ಇರುವುದಿಲ್ಲ. ಅವರಷ್ಟಕ್ಕೆ ಅವರು ಅದನ್ನು ಖುಷಿಪಡಲಿ ಅವರ ಹಗೆತನ ಅವರನ್ನೇ ಸುಡುತ್ತದೆ. ಅನ್ಯಥಾ ಭಾವಿಸುವವರನ್ನು ಅಪರಿಚಿತ ಎಂದು ತಿಳಿದುಬಿಡಿ. ಅನುಮಾನಿಸುವವರ ನಡುವೆ ಅನುಬಂಧ ಬಯಸದಿರಿ. ನಿನ್ನೆಲ್ಲ ಕೆಲಸದಲ್ಲೂ ಪ್ರಶ್ನೆ ಹುಡುಕುವವರ ನಡುವೆ ಉತ್ತರ ಕೊಡುವ, ಮೆಚ್ಚಿಸುವ ಕೆಲಸಕ್ಕೆ ಹೋಗದೆ ಪ್ರಶ್ನೆಯಾಗಿಯೇ ಉಳಿದುಬಿಡು. ಬದುಕಿಗೆ ಅರ್ಥ ಹುಡುಕಲು ಹೊರಟಾಗ ಪ್ರಶ್ನೆಗಳಲ್ಲಿ ಕಾಲ ಕಳೆದು ಉತ್ತರ ಸಿಗದೆ ಪ್ರಶ್ನೆಯಾಗಿಯೇ ಉಳಿಯುವ ಬದಲು ನೀನೇ ಉತ್ತರವಾಗಲು ಪ್ರಯತ್ನಿಸು. ಮಾಡುವ ಕೆಲಸ ಎಲ್ಲರಿಗೂ ಮೆಚ್ಚುಗೆಯಗದೆ ಹೋದರು ಇಬ್ಬರಿಗೆ ಮೆಚ್ಚುಗೆಯಾಗಲಿ ಎಂದು ಮಾಡು ಒಂದು ಪರಮಾತ್ಮನಿಗೆ ಮತ್ತೊಂದು ನಿನ್ನೊಳಗಿನ ಅಂತರಾತ್ಮನಿಗೆ ಅವರಿಬ್ಬರಿಗೆ ನೀನು ಉತ್ತರ ಕೊಡುವಷ್ಟು ಎತ್ತರಕ್ಕೆ ಬೆಳೆಯಬೇಕಿದೆ.
ಬೇಡದ ವಿಷಯಗಳಿಗೆ ಕಿವಿಗೊಡಬೇಡಿ. ಬದುಕಲಿ ಎಂದೂ ನಟಿಸಲು ಹೋಗಬೇಡಿ. ನೀವು ನಟಿಸದಿದ್ದರೂ ನಿಮ್ಮನ್ನು ಒಬ್ಬ ಕಲಾವಿದರನ್ನಾಗಿ ಮಾಡುವ ಶಕ್ತಿ ನಿನ್ನೆದುರಿಗಿರುವವರಿಗಿದೆ .ಕಾಣದಿರುವ ಸಂಗತಿಗಳನ್ನು ಕಂಡವರಂತೆ ಬಿಂಬಿಸುವ ಗುಣ ಕೆಲವರಿಗೆ ರಕ್ತಗತವಾಗಿಯೇ ಅವರಲ್ಲಿ ಜನನಿತವಾಗಿರುತ್ತದೆ. ಎಲ್ಲರಿಗೂ ಒಳ್ಳೆಯವರಾಗಲು ಪ್ರಯತ್ನಿಸದಿರರಿ. ನಿಮ್ಮ ಚಿಂತನೆಗಳು. ನಿಮ್ಮ ಕಾರ್ಯಗಳು ನಿನ್ನನ್ನು ಏನೆಂದು ಗುರುತಿಸುತ್ತವೆ. ಬದುಕಿನ ಸಂತೆಯಲ್ಲಿ ಅತಿಥಿಗಳು ಎಲ್ಲರು. ಒಂದೆರಡು ದಿನದ ಜಾತ್ರೆಯಲ್ಲಿ ಬಂಧುಗಳು ಹಲವರು. ಬಂದು ಹೋಗುವ ನಡುವೆ ಬಂದವರು ಬದುಕ ನಡೆಸುವ ನಾವಿಕರು. ಇದೆಲ್ಲದರ ನಡುವೆ ಕೆಲವು ಔದಾರ್ಯ. ಹಲವು ಅನಿವಾರ್ಯ. ಅದೆಷ್ಟೋ ಅನಿರೀಕ್ಷಿತ. ಎಷ್ಟಿದ್ದರೂ ಆಸೆ ಪಡುವವರು ಎಷ್ಟು ಗಳಿಸಿದರು ನೆಮ್ಮದಿಯಿಂದ ಇರಲಾರರು. ಏನೂ ಬಯಸದೆ ಇರುವವರು ಇರುವುದನ್ನೇ ದೊಡ್ಡದೆಂದು ನಿಟ್ಟುಸಿರು ಬಿಡುವರು. ಇದ್ದೂ ಇರದವರ ನಡುವೆ ಸರ್ವ ಕಾಲಕೂ ಸತ್ಯ ತಿಳಿಯದಿರುವುದೇನೆಂದರೆ ಇದ್ದವರು ಇರದವರು ಎಲ್ಲರೂ ದಿಗಂತದ ಬಂಧುಗಳೆಂಬುದು. ಆದರೆ ಒಬ್ಬರನ್ನ ಕಂಡರೆ ಇನ್ನೊಬ್ಬರಿಗೆ ಆಗದೆ ಇರುವಷ್ಟು ಹಗೆ, ತಾತ್ಸಾರ ಇವುಗಳೇ ಎಲ್ಲೆಡೆ ತುಂಬಿ ತುಳುಕುತ್ತಿವೆ. ತನ್ನ ಮುಂದಿರುವ ಆಳವನ್ನು ಗಮನಿಸದವರು ಮತ್ತೊಬ್ಬರ ಬದುಕಿನ ಆಳವನ್ನು ಕಾಣಲು ಬಯಸುವರು. ತನ್ನದೇ ಬದುಕಿನ ಬವಣೆಗಳನ್ನು ಬಗೆಹರಿಸಿಕೊಳ್ಳಲಾಗದವರು ಮತ್ತೊಬ್ಬರ ಜೀವನದ ವರ್ತಮಾನಗಳನ್ನು ಕುರಿತು ಮಾತನಾಡುವರು ಹೆಚ್ಚಿದ್ದಾರೆ. ತನ್ನದೇ ಭವಿಷ್ಯದ ಚಿಂತನೆ ಮಾಡದವರು ಮತ್ತೊಬ್ಬರ ಬದುಕಿನ ಕುರಿತಾಗಿ ಬ್ರಹ್ಮಾಂಡವನ್ನೇ ಸೃಷ್ಟಿಸುವವರಿದ್ದಾರೆ ಅವುಗಳಿಗೆ ಎಂದಿಗೂ ಸ್ಪಂದಿಸಬೇಡಿ. ಯಾರದೋ ಅಸ್ತಿತ್ವದ ಹುಡುಕಾಟದ ಪತ್ತೇದಾರಿ ಕೆಲಸ ನಿಮ್ಮನ್ನೇ ದಾರಿತಪ್ಪಿಸುತ್ತದೆ .ಏಕೆಂದರೆ ನಿಮ್ಮ ಪತ್ತೇದಾರಿ ಕೆಲಸದಲ್ಲಿ ನೀವು ನಿಮ್ಮ ಗುರಿ ಮುಟ್ಟುವ ದಾರಿಯ ಹುಡುಕಾಟದ ಶೋಧನೆ ಮಾಡದೆ ಇರುವುದರಿಂದ ಸೋಲಿಗೆ ಹತ್ತಿರವಾಗಬಹುದು ಹಾಗಾಗಿ ಅಂತೆ, ಸಂತೆ, ಕಂತೆಗಳನ್ನು ಮೂಟೆ ಕಟ್ಟಿ ಎಸೆದುಬಿಡಿ. ಮೊದಲು ನಿನ್ನನ್ನು ನೀನು ಕಂಡುಕೊಳ್ಳಬೇಕು. ಪರರ ಕುರಿತು ನಿಂದನೆ ಬಿಡಬೇಕು. ಅದ್ಯಾವುದು ನಿನ್ನತನವಲ್ಲ. ಒಳ್ಳೆಯ ಆಲೋಚನೆ ಮತ್ತು ಕಾರ್ಯ ಮಾತ್ರ ನಿನ್ನ ಕಾಯಕ. ಒಂದು ಹನಿ ಜೇನನ್ನು ತಯಾರಿಸಲು ಜೇನು ಹುಳು ನೂರು ಹೂಗಳನ್ನು ಸ್ಪರ್ಶಿಸಿ ಬರುವುದಂತೆ. ನೂರು ಹೂಗಳ ಸಿಹಿ ಕಹಿ ಮಿಶ್ರ ಫಲವನ್ನು ಎಣೆದು ಜೇನನ್ನು ಸಂಗ್ರಹಿಸುವುದು ಜೇನುಹುಳ. ಅದರಂತೆಯೇ ಒಬ್ಬ ಮನುಷ್ಯನ ಯಶಸ್ಸಿನ ಹಿಂದೆ ನೂರು ಜನರು ನೂರೊಂದು ರೀತಿಯಲ್ಲಿ ಆತನನ್ನು ಎಚ್ಚರಿಸುತ್ತಲೆ ಇರುತ್ತಾರೆ ಅದು ನಿಂದನೆಯೂ ಆಗಿರಬಹುದು ಅಥವಾ ಅಲ್ಲಗಳೆಯುವಿಕೆ ಮಾತುಗಳು, ಕುಗ್ಗಿಸುವ ಕೈವಾಡಗಳೆ ಆಗಿರಬಹುದು. ಅದರಿಂದ ಗಟ್ಟಿತನ ಹೆಚ್ಚುವುದೇ ಹೊರತು ಘನತೆ ಕುಂದುವುದಿಲ್ಲ ಅದನ್ನು ನಿಮಗೆ ಅವರ ವರ, ದಯೆ, ಹರಸುವಿಕೆ ಎಂದು ಬಯಸಿ ಮುಂದೆ ಸಾಗುತ್ತಲಿರಬೇಕು. ಬದುಕಿನಲಿ ಭಾರದ ಚಿಂತೆಗಳ ಕಂತೆ ಹೊತ್ತು ನಡೆಯದಿರಿ. ಕೆಡುಕು ಬಯಸುವವರು ಜೇಡರ ಹುಳುಗಳಂತೆ ಜೇಡ ತನ್ನ ಹಸಿವನ್ನು ನೀಗಿಸಿಕೊಳ್ಳಲು ಬಲೆಯನ್ನು ಹೆಣೆದು ಇತರೆ ಕೀಟಗಳಿಗೆ ಕಾಯುವುದು. ಕೆಲವರು ಜೇಡದಂತೆ ತಮ್ಮ ಕಾರ್ಯ ಸಾಧನೆಗಾಗಿ ಬಲೆಯನ್ನು ಎಣೆದು ಕಾಯುತ್ತಲೇ ಇರುತ್ತಾರೆ. ವಾಸ್ತವ ಏನೆಂದರೆ ಕೊನೆಗೆ ಜೇಡ ತಾನೇ ಎಣೆದ ಬಲೆಯಲ್ಲಿ ಚಕ್ರವ್ಯೂಹದಿಂದ ಹೊರಬರಲಾಗದೆ ಒದ್ದಾಡಿ ತನ್ನ ಕೈಯಾರೆ ತನ್ನನ್ನೇ ತಾನು ಬಲಿಕೊಟ್ಟುಕೊಳ್ಳುವುದು. ಅಂತೆಯೇ ಅವರವರ ಅಂತಿಮ ದಿನಗಳನ್ನು ಅವರೇ ಅವರಿಗೆ ತಿಳಿಯದಂತೆ ನಿರ್ಧರಿಸಿಕೊಳ್ಳುತ್ತಾರೆ. ಎಲ್ಲರಿಗೂ ಸಾವಿದೆ ಯಾರು ಶಾಶ್ವತವಲ್ಲ. ಆದರೆ ಚಿರಾಯು ಎಂಬಂತೆ ವರ್ತಿಸುವ, ಹಗೆ ಸಾಧಿಸುವ ವಿಷಕಾರಿ ವ್ಯಕ್ತಿಗಳಿಂದ ದೂರ ಸರಿದುಬಿಡಿ. ತರಾವರಿಯ ತಕರಾರು ಎತ್ತುವ ವಕ್ತಾರರು ಇದ್ದೆ ಇರುತ್ತಾರೆ. ಆದರೆ ನಿಮ್ಮ ತನಕ್ಕೆ ನೀವೇ ಮಾಲೀಕರು ಎಂಬುದನ್ನು ಎಂದಿಗೂ ಮರೆಯದಿರಿ. ಕೆಲವರಿಗೆ ವಕ್ತಾರಿಕೆ ಮಾಡುವ ಗುಣಗಳು ಜನ್ಮಗತ ಜನನಿತವಾಗುರುತ್ತವೆ .ಏಕೆಂದರೆ ಅದು ಅವರ ಹುಟ್ಟು ಗುಣ. ಅದು ಎಂತಹ ಅಗ್ನಿ ಸ್ಪರ್ಶಿಸಿದರೂ ಸುಡಲಾರದು ಹಾಗಾಗಿ ಅಂತವರನ್ನು ಲೆಕ್ಕಕ್ಕೆ ಇಡಬೇಡಿ. ಶ್ರಮ ಸಂಭ್ರಮ ಎರಡೂ ಅವಳಿಗಳಿದ್ದಂತೆ ಎಷ್ಟು ಶ್ರಮವಿರುತ್ತದೋ ಅಷ್ಟು ಸಂಭ್ರಮ ಹೊತ್ತು ಬರುತ್ತದೆ. ಶ್ರಮವಿರದ ಸಂಭ್ರಮ ಕೈಗೆಟುಕದ ಚಂದ್ರನಂತೆ ಎಂಬುದನ್ನು ಮೊದಲು ನಾವು ಅರ್ಥೈಸಿಕೊಳ್ಳಬೇಕಿದೆ. ನೀನು ಎಷ್ಟು ನಿಖರವಾಗಿ ನೇರವಾಗಿ ಮಾತನಾಡುವೆಯೋ ಅಷ್ಟೇ ನಿಂದನೆ ಮಾಡುವವರು ಇದ್ದೇ ಇರುತ್ತಾರೆ. ಎಷ್ಟು ದಿಟ್ಟತನದಿಂದ ಸಾಗುವೆಯೋ ಅಷ್ಟೇ ದಿಕ್ಕೆಡುವಂತೆ ಕಂಗಾಲಾಗುವಂತೆ ಮಾಡುವವರು ಇದ್ದೇ ಇರುತ್ತಾರೆ. ನಿತ್ಯ ನಿರಂತರ ಸಾಗುವ ಈ ಜೀವನದಲ್ಲಿ ಬಗೆ ಬಗೆಯ ಗಾಳಿಗಳು ನಿಮ್ಮನ್ನು ಅದರ ಸುಳಿಯಲ್ಲಿ ಸಿಲುಕುವಂತೆ ಮಾಡಲು ಆತೊರೆಯುತ್ತಿರುತ್ತವೆ. ಅಂತಹ ಬಿರುಗಾಳಿಗೆ ಬಾಗದಂತೆ ಬಲವಾಗಿ ನಿಲ್ಲುವ ಗಟ್ಟಿತನ ತಂದುಕೊಳ್ಳಬೇಕಷ್ಟೇ. ಯಾಕೆಂದರೆ ಎಲ್ಲೇ ಹೋದರೂ ಯಕಶ್ಚಿತ್ ನಂತವರು ಇದ್ದೇ ಇರುತ್ತಾರೆ ಅವರನ್ನು ಗಣಿಕೆಗೆ ತೆಗೆದುಕೊಳ್ಳದಿರಿ. ಅಂತರಂಗದ ಅರಮನೆಗಿಂತ ದೊಡ್ಡ ಅರಮನೆಯಿಲ್ಲ. ಆಂತರ್ಯದ ಸೌಂದರ್ಯದ ಮುಂದೆ ಬಾಹ್ಯ ಸೌಂದರ್ಯ ಏನೂ ಅಲ್ಲ. ಅಷ್ಟೈಶ್ವರ್ಯ ಕೋಟಿ ಇದ್ದರೂ ನೆಮ್ಮದಿ ಇರದ ಬದುಕು ಬದುಕೇ ಅಲ್ಲ. ನೀವೇ ಆತ್ಮೀಯರು ಎಂದುಕೊಂಡವರಿಗೆ ಕೊಡದ ಸಮಯ ಸಮಯವೇ ಅಲ್ಲ. ನೀವೇ ಎಲ್ಲ ಅಂದುಕೊಂಡ ಪರಿವಾರದ ಕುರಿತು ಚಿಂತಿಸದ ಚಿಂತೆ ಚಿಂತೆಯೇ ಅಲ್ಲ. ಎಲ್ಲವೂ ಕೈಮೀರಿದಾಗ ಹುಡುಕಾಟ ನಡೆಸಿದರೆ ಯಾವುದು ಸಿಗುವುದಿಲ್ಲ ಹಾಗಾಗಿ ಇರುವಷ್ಟು ಸಮಯ ಯಾರಿಗೆ ಕೊಡಬೇಕೋ ಅವರಿಗೆ ಅರ್ಹರಿಗೆ ಮಾತ್ರ ಕೊಡಿ. ಅಲ್ಲದೇ ನಿಮ್ಮ ಗೆಲುವಿಗಾಗಿ ಮಾತ್ರ ಹವಣಿಸಿ. ನಿಮ್ಮನ್ನು ನೋಡಿದರೆ ಕೆಂಡಕಾರುವವರು ಇದ್ದಾರೆ ಎಂದರೆ ಖುಷಿಪಡಿ. ಏಕೆಂದರೆ ಅವರ ಅಗ್ನಿತಾಪ ಅವರನ್ನೇ ಬೂದಿಯಾಗುವಂತೆ ಮಾಡುತ್ತದೆ. ಒಳ್ಳೆ ಆಲೋಚನೆಗಳು ಮನುಷ್ಯನನ್ನು ಮನಸ್ಸನ್ನು ತಂಪಾಗಿರುತ್ತವೆ.ದುರಾಲೋಚನೆಗಳು ಮತ್ತೊಬ್ಬರಿಗೆ ಕೆಡುಕ ಬಯಸುವ ಚಿಂತನೆಗಳು ಚಿತೆಯಂತೆ ಮನುಷ್ಯನನ್ನು ಕಿತ್ತುತಿನ್ನುತ್ತವೆ.
ಒಣ ಹರಟೆ ಮಾಡಿ ಮನವ ಗೀಳು ಮಾಡಿಕೊಳ್ಳಬೇಡಿ. ಅತಿಯಾಗಿ ಹಗೆ ತುಂಬಿಕೊಂಡು ಒಳ್ಳೆಯವರಂತೆ ನಟಿಸಲು ಹೋಗಬೇಡಿ. ನಿಮಗೆ ಹಿತ ಬಯಸುವವರಂತಿದ್ದು ಕೆಡುಕು ಬಯಸುವವರನ್ನು ಎಂದಿಗೂ ಪಕ್ಕದಲ್ಲಿರಿಸಿಕೊಳ್ಳಬೇಡಿ ಏಕೆಂದರೆ ಬೇರು ಗಟ್ಟಿ ಇಲ್ಲದಿರುವ,ಬೇಡದಿರುವ, ಗಿಡವನ್ನ ನೋಡಿ ಎಷ್ಟು ಚನ್ನಾಗಿದೆ, ಹಸಿರಾಗಿದೆ ಅನ್ಕೊಂಡ್ರೆ ಬೇರೆ ಗಿಡ ಹಾಳಾಗತ್ತೆ, ಹಾಗಾಗಿ ಬೇಡದಿರುವ ಗಿಡವನ್ನ ಕಿತ್ತೆಸೆದಾಗ ಒಳ್ಳೆ ಗಿಡ ಹಸಿರಾಗಿ ಬೆಳೆಯುತ್ತೆ. ಅದರಂತೆ ಮನುಷ್ಯನು ಹಾಗೆ ಅವರವರ ಯೋಗ್ಯತೆ ತಿಳಿದ ಮೇಲೆ, ಪ್ರತಿ ಬಾರಿ ನಿಮ್ಮನ್ನು ಬದಿಗಿರಿಸುವ, ತಿರಸ್ಕರಿಸುವವರನ್ನು ಮತ್ತ್ಯಾವತ್ತು ಸಿಂಹಾಸನ ಏರಲು ಬಿಡಬಾರದು, ಎಲ್ಲಿದ್ದವರನ್ನು ಅಲ್ಲೇ ಇರಿಸಬೇಕು. ಯಾರಾದರೂ ನಿನ್ನನ್ನು ದ್ವೇಷಿಸುತ್ತಿದ್ದಾರೆ ಎಂದರೆ ತಲೆಕೆಡಿಸಿಕೊಳ್ಳದೆ ಖಾಸ ಅದನ್ನು ಒಪ್ಪುತ್ತಲೇ ಮುನ್ನಡಿ. ಆದರೆ ನಿನ್ನ ಕೆಲಸ ನೀನು ಮಾಡುವ ಕೆಲಸವನ್ನು ಪ್ರೀತಿಸುವುದು ಮಾತ್ರ ಆಗಿರಲಿ, ದ್ವೇಷ, ಹಗೆತನ ನಿನ್ನ ಕಾಲ ಕೆಳಗಿರಲಿ. ನಿನ್ನ ತನ ನೋಡುಗರಿಗೆ ಅಹಂಕಾರವಾಗಿ ಪರಿಣಮಿಸಿದರೆ ಅದನ್ನು ಜೈಕಾರವೆಂದು ಭಾವಿಸು. ಯಾಕೆಂದರೆ ನಿನ್ನನ್ನು ದ್ವೇಶಿಸಲು ಶುರು ಮಾಡಿದ್ದಾರೆ ಎಂದರೆ ನೀನು ಅವರನ್ನು ಹತ್ತಿಕ್ಕಿರುವೆ ಎಂದರ್ಥ. ನಮಗೆ ನಾವು ಹೇಗಿದ್ದೇವೆ ಎಂದು ನೋಡಿಕೊಳ್ಳಲು ಕನ್ನಡಿಯ ಸಹಾಯ ಬೇಕು. ಆದರೆ ಮನಸ್ಸಿಂದ ನಾವು ಹೀಗಿದ್ದೇವೆ ಎಂಬುದನ್ನು ಅರಿಯಲು ನಮ್ಮನ್ನ ನಾವು ಅರಿತುಕೊಳ್ಳಲು ಪ್ರಯತ್ನಿಸಬೇಕು. ಏಕೆಂದರೆ ಕನ್ನಡಿ ನಿನ್ನನ್ನ ಕನ್ನಡಿಕರಿಸುವುದಿಲ್ಲ, ಬದಲಿಗೆ ನಿನ್ನ ಪ್ರತಿಬಿಂಬದ ಎರಕವನ್ನೇ ಹೊಯ್ದಿರುತ್ತದೆ. ಹಾಗೆ ಮನಸ್ಸು ನಿನ್ನ ಪ್ರತಿ ಕೆಲಸಗಳನ್ನು ನಿರ್ಧರಿಸುವುದಿಲ್ಲ ನಿನ್ನ ಆಲೋಚನೆಗಳು ಮನಸ್ಸಿಗೆ ಅವುಗಳನ್ನು ಬಿತ್ತುತ್ತವೆ. ಹಾಗಾಗಿ ಯಾರೋ ನಿಮ್ಮನ್ನು ಪ್ರಶಂಸಿಸಲಿ ಎಂದಾಗಲಿ, ಇನ್ನ್ಯಾರದೋ ಚಪ್ಪಾಳೆಗಳಿಗಾಗಲಿ, ಹೊಗಳಿಕೆಗಳಿಗಾಗಲಿ ಕಾಯ್ದು ಕೂರಬೇಡಿ. ಯಶಸ್ಸಿನ ಬಲವಾದ ಹೆಜ್ಜೆಗುರುತುಗಳನ್ನು ಊರಲು ಪ್ರಾರಂಭಿಸಿ.
ಯಾರನ್ನೂ ಅಲ್ಲೆಗಳೆದು, ಹಿಯ್ಯಾಳಿಸಿ ಮಾತನಾಡಲೇಬಾರದು. ಎಲ್ಲರಿಗೂ ಅವರವರದ್ದೇ ಆದ ಶಕ್ತಿ, ಸಾಮರ್ಥ್ಯ ಇದ್ದೇ ಇರುತ್ತದೆ. ಹಾಗೆ ನೋಡಿದರೆ ಕಾಗೆ ಕಪ್ಪೆಂದು ಮತ್ತು ಕಾಗೆ ಅಡ್ಡ ಬಂದರೆ ಒಳಿತಲ್ಲ ಎಂದು ಭಾವಿಸುವ ಜನರು ಸತ್ತಾಗ ಪಿಂಡ ಮುಟ್ಟಲು ಅದೇ ಕಾಗೆಗೆ ಕಾದು ಕುಳಿತುಕೊಳ್ಳುವರು. ಒಂದು ವೇಳೆ ಕಾಗೆ ಅದನ್ನ ಮುಟ್ಟದ ಹೊರತು ಕಾಗೆ ಕೂಡ ಮುಟ್ಟಲಿಲ್ಲ, ಕಾಗೆ ಮುಟ್ಟಿದರೆ ದೋಷ ಕಳೆಯುತ್ತಿತ್ತು ಎಂಬುವವರ ಮನಸಲ್ಲಿರುವ ಕಳೆ ಮಾತ್ರ ಕಿತ್ತಿರಲಿಲ್ಲ, ಕಾಗೆ ಇವರಿಗಂಟಿದ ದೋಷ ಕಳೆಯುವಷ್ಟು ಶ್ರೇಷ್ಠವೆಂದ ಮೇಲೆ ಅದನ್ನು ಕಂಡು ಮೂಗು ಮುರಿಯುವುದೇಕೆ? ಹಲವರಲ್ಲಿ ಕೆಲವರ ಬುದ್ದಿಯನ್ನು ಶುದ್ಧಿಮಾಡುವ ಔಷಧಿಯೂ ಇಲ್ಲದಾಗಿದೆ ಎಂದರ್ಥ. ಒಂದಗಳು ಅನ್ನ ಸಿಕ್ಕರೆ ತನ್ನಿಡೀ ಬಳಗವನ್ನ ಬಳಿಗರೆದು ಹಂಚಿ ತಿನ್ನುವ ಕಾಗೆಯ ಬುದ್ದಿಗೆ ಮತ್ತು ಬುದ್ದಿ ಇದ್ದ ನರರ ಬುದ್ದಿ ಇಲ್ಲದ ಚಿಂತನೆಗೂ ಸಾಕಷ್ಟು ವ್ಯತ್ಯಾಸವಿದೆ. ಹಾಗಾಗಿ ಜನರು ಎಲ್ಲದರಲ್ಲೂ ದೋಷ ಹುಡುಕುತ್ತಲೇ ಇರುತ್ತಾರೆ ಬದುಕನ್ನು ಬದುಕಿನಂತೆ ಬದುಕಲು ಸಾಧ್ಯವಾದಷ್ಟು ಪ್ರಯತ್ನಿಸಬೇಕು. ಅತಿಯಾಗಿ ಒಳ್ಳೆಯವರಂತೆ ಇದ್ದರೂ ಕಷ್ಟಗಳು ಬಾಧಿಸುವುದುಂಟು ಆದರೆ ಒಳಿತಾಗೆ ಆಗುತ್ತದೆ ಎಂಬ ನಂಬಿಕೆ ಜೊತೆಗಿರಬೇಕಿದೆ. ಬಹುತೇಕ ನಾವು ನಾವಾಗಿಯೇ ಇರಬೇಕು. “ದಯವೇ ಧರ್ಮದ ಮೂಲವಯ್ಯಾ” ಎಂಬ ಉಕ್ತಿಯಂತೆ ಸಕಲ ಜೀವಿಗಳಲ್ಲಿ ದಯೆ ತೋರುವುದು ತಪ್ಪಲ್ಲ, ನಿನ್ನ ತನಕೆ ಧಕ್ಕೆ ತರುವಂತಿರುವ ಸಂಧರ್ಭಗಳಲ್ಲಿ, ಸಕಲರು ನಿನ್ನನ್ನು ನಿನ್ನಂತೆ ಕಾಣದ ಸಂಧರ್ಭದಲ್ಲಿ ನಿನಗೆ ಕಂಡರೂ ಕಾಣದಂತೆ, ಯಾರ ಹಂಗಿಗೂ ಸಿಗದಂತೆ ನಿನ್ನದೇ ದಾರಿಯಲ್ಲಿ ಸಾಗು. ಏಕೆಂದರೆ ಸಕಲ ಜೀವಿಗಳಲ್ಲಿ ದಯೆ ತೋರೆಂಬ ಉಕ್ತಿಯಂತೆ ಎಲ್ಲವೂ ಸಮಾನವಾಗಿದ್ದಾಗ ತೋರಿದ ದಯೆ, ಕೊಟ್ಟ ಗೌರವ ಸಿಗುತ್ತದೆ…….. ಹೊರತಾಗಿ ಮಿಕ್ಕುಳಿದ ಸಂದರ್ಭಗಳಲ್ಲಿ “ಪರರ ಚಿಂತೆ ನಮಗೇಕಯ್ಯ” ಎಂಬಂತೆಯೇ ಇರುವುದು ಒಳಿತು. ನಾವು ಒಳಿತು ಮಾಡಲಾಗದಿದ್ದರು ಪರವಾಗಿಲ್ಲ ಕೆಡುಕು ಬಯಸದಂತೆ ಇದ್ದರೂ ಅದು ಒಳಿತು ಮಾಡಿದಂತೆ ಎಂಬುದನ್ನು ಅರಿಯಬೇಕು. ಕೆಲವರು ತಲೆಯ ಜೊತೆಗೆ ಸಮಯವನ್ನು ತಿನ್ನುತ್ತಾರೆ ಆದರೆ ಅದನ್ನ ಅರಿತು ನಡೆಯುವ ಚಾಣಾಕ್ಷ್ಯತನವಿರಬೇಕು. ಮಾಡುವ ಕೆಲಸವನ್ನು ಪ್ರೀತಿಯಿಂದ ಜೀವಿಸಿದರೆ ಆ ಕೆಲಸ ಖಂಡಿತ ನಿರೀಕ್ಷಿಸಿದಕ್ಕಿಂತ ಹೆಚ್ಚಾದ ಫಲ ನೀಡುತ್ತದೆ. ಒಂದೊಳ್ಳೆ ಆಲೋಚನೆಯುಳ್ಳವರು ಹೆಚ್ಚಾಗಿ ತಮ್ಮ ಬಗ್ಗೆ, ತಮ್ಮ ಬೆಳವಣಿಗೆ ಬಗ್ಗೆ ಯೋಚಿಸುವ ಕಾಳಜಿ ವಹಿಸಬೇಕೆ ವಿನಃ, ಜನ ನಮ್ಮ ಬಗ್ಗೆ ಏನು ಯೋಚಿಸ್ತಿದರೆ ಅಂತ ಅಲ್ಲ. ಕೆಲವರಿಗದು ಅಭ್ಯಾಸ ಅಂತಹ ಮನೋರೋಗಕ್ಕೆ ನಿಮ್ಮನ್ನು ಕುರಿತು ಮಾತನಾಡುವುದೇ ಒಂದು ಸಿರಪ್ (ಟಾನಿಕ್)ಇದ್ದ ಹಾಗೆ. ಪಾಪ ಹಾಗಾದರೂ ಬದುಕಲಿ ಬಿಡಿ, ನೀವ್ ತಲೆಕೆಡಿಸಿಕೊಳ್ಳದಿರಿ. ಸಹಜವಾಗಿ ಹಸಿವಾದವರಿಗೆ ಅನ್ನ ಮುಖ್ಯವಾಗುತ್ತದೆ. ಆದರೆ ಕೆಲವರಿಗೆ ಬೇರೆಯೇ ಹಸಿವಿರುತ್ತದೆ. ಅದೇನೆಂದರೆ ಕೆಲವು ಜನರು ಮಾತಿನ ಹಸಿವನ್ನ ನೀಗಿಸಿಕೊಳ್ಳಲು ನಿಮ್ಮನ್ನೇ, ನಿಮ್ಮ ಸಂಗತಿಗಳನ್ನೇ ಆಹಾರವನ್ನಾಗಿಸಿಕೊಳ್ಳುತ್ತಾರೆ. ಪಾಪ ನೀವು ಕೆಲವು ಪರರ ಕುರಿತ ಮಾತನಾಡುವ ಮಾನಸಿಕ ಒತ್ತಡದಿಂದ ಬಳಲುವವರುಗೆ ಔಷಧಿಯಂತೆ ಕೆಲಸ ಮಾಡುತ್ತೀರಿ ಅಂತ ಅರ್ಥ. ಗೆಲುವೆಂಬುದು ಬುದ್ದಿವಂತರ ಅಷ್ಟೈಶ್ವರ್ಯ ಆಸ್ತಿಯಲ್ಲ, ಕಠಿಣ ಪರಿಶ್ರಮ,ನಯ ವಿನಯ ಸರಳತೆ ಹಾಗೂ ಆತ್ಮವಿಶ್ವಾಸದ ಮುಂದೆ ಸಹಜವಾಗಿ ಬಾಗುವವರ ತಲೆಗೇರಿದ ಕಿರೀಟವಿದ್ದಂತೆ. ಕೆಲವೊಮ್ಮೆ ಸರಳತೆಯೂ ನೋಡುಗರಿಗೆ ಅಹಂಕಾರವಾಗಿ ಕಂಡಾಗ ಅದನ್ನ ಶೋಭೆ ಎಂದು ಭಾವಿಸಬೇಕು. ಅದೇನೇ ಇರಲಿ ಚಿರವಲ್ಲದ ಈ ಬದುಕಿನಲ್ಲಿ ಎಂದೋ ಒಂದು ದಿನ ನಮ್ಮ ಸಮಯ ಕರೆದಾಗ ಹೋಗಲೇಬೇಕು. ಹಾಗಾಗಿ ಇರುವಷ್ಟು ದಿನ ಪ್ರೀತಿ, ವಿಶ್ವಾಸ, ಮಮಕಾರ ಇವುಗಳನ್ನು ನಮ್ಮೊಳಗೆ ತಂದುಕೊಳ್ಳಬೇಕು. ಮೊದಲು ನಮ್ಮನ್ನು ನಾವು ಪ್ರೀತಿಸಬೇಕು. ಎಲ್ಲರನ್ನು ಗೌರವಿಸಬೇಕು. ಸಾಧ್ಯವಾದರೆ ಮತ್ತೊಬ್ಬರಿಗೆ ನಮ್ಮಿಂದ ಏನನ್ನೂ ಕೊಡಲಾಗದೆ ಇದ್ದರೂ ಅಂದರೆ ಸಹಾಯ ಮಾಡಲು ಆಗದಿದ್ದರೂ ಅಥವಾ ಹಣ, ವಸ್ತು ಏನೇ ಇರಲಿ ಇದ್ಯಾವುದನ್ನು ಕೊಡಲಾಗದೆ ಇದ್ದರೂ, ಸಮಯ ಸಂಧರ್ಭಕ್ಕೂ ಆಗದೆ ಇದ್ದರೂ ಪರವಾಗಿಲ್ಲ ಭೌತಿಕ ಬೆಂಬಲ ನೀಡುವುದನ್ನು ಕಲಿಯಬೇಕಿದೆ. ಹಗೆ ಎಂಬುದನ್ನು ಕೊಂದು ಪ್ರೀತಿ ಬೆಳೆಸಿಕೊಳ್ಳಬೇಕಿದೆ. ನಮ್ಮವರೆಂಬಂತೆ ಕಾಣುವ ಮನಸ್ಥಿತಿ ಬೆಳೆಸಿಕೊಳ್ಳಬೇಕಿದೆ. ಮನುಷ್ಯತ್ವವನ್ನು ನಮ್ಮೊಳಗೆ ತಂದುಕೊಳ್ಳಬೇಕಿದೆ. ಬರ ಬರುತ್ತಾ ಸ್ವಾರ್ಥಿಗಳಾಗುವ ನಮ್ಮ ಮಧ್ಯೆಯೇ ಇರುವ ನಮ್ಮವರೆಲ್ಲರೂ ಯಾರು ಶಾಶ್ವತವಲ್ಲ ಎಂಬ ಸತ್ಯ ಅರಿಯಬೇಕಿದೆ. ಯಾರೋ ಕಷ್ಟ ಎಂದು ನೋವುಪಡ್ತಿದ್ರೆ, ಇನ್ನ್ಯಾರೋ ಬದುಕಿನಲ್ಲಿ ಸೋಲನ್ನು ಕಂಡಿದ್ರೆ, ಸೋಲಿನ ಮೇಲೆ ಸೋಲು ಅನುಭವಿಸುತ್ತಿದ್ದರೆ ಯಾವತ್ತೂ ಅಂತವರನ್ನು ಮತ್ತಷ್ಟು ಕುಗ್ಗಿಸಬೇಡಿ. ಯಾರ ಸೋಲನ್ನು ಸಂಭ್ರಮಿಸಬೇಡಿ. ಸೋಲು, ಗೆಲುವು ಯಾರಿಗೂ ಸೀಮಿತವಲ್ಲ. ಯಾರಿಗೆ ಯಾವಾಗ ಹೇಗೆ ಅವು ಅಪ್ಪುತ್ತವೋ ತಿಳಿದಿಲ್ಲ ಅವೆರಡು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಮಾಯದ ಬದುಕಿದು ಅಹಂಕಾರ ಕಟ್ಟಿಟ್ಟು ಬದುಕಿ ಇದ್ದೂ ಇಲ್ಲದಂತೆ ಹೋಗಿಬಿಡಬೇಕು. ಅದೇನೇ ಇರಲಿ ಯಾರ ಸೋಲನ್ನು ಸಂಭ್ರಮಿಸದೆ ನಾವು ನಮ್ಮ ಗೆಲುವನ್ನು ಸಂಭ್ರಮಿಸುವವರಾಗೋಣ. ಎಲ್ಲಿಯವರೆಗೂ ನಾವು ಇನ್ನೊಬ್ಬರ ಗೆಲುವನ್ನು ಸಂಭ್ರಮಿಸುವುದಿಲ್ಲವೋ ಅಲ್ಲಿಯವರೆಗೂ ನಾವು ಗೆಲ್ಲುವುದಿಲ್ಲ. ಹಾಗಾಗಿ ನಾವು ನಾವಾಗಿದ್ದು ನಾವು ಗೆಲ್ಲೋಣ. ಗೆಲುವು ನಿಮ್ಮದಾಗಲಿ.
ಡಾ.ಮೇಘನ ಜಿ
ಕೂಡ್ಲಿಗಿ