spot_img
spot_img

ಬಲಹೀನರನ್ನು ಹೊಡೆಯಬೇಡಿ ನಿಮ್ಮನ್ನು ಭಗವಂತ ಹೊಡೆದಾನು

Must Read

spot_img
- Advertisement -

ಲಹೀನರು ಎಂದರೆ ಯಾರು? ಹೋ ಬಲಹೀನರು ಎಂದರೆ ಕೈಲಾಗದವರು ಎಂದರ್ಥವಾ ಅಥವಾ ಅಸಮರ್ಥರು, ದುರ್ಬಲರು ಹೀಗೆ ಯಾವುದಾದರು ಒಂದು ಇರಬಹುದಾ ? ಹೌದು ಇಂತಹ ನೂರಾರು ಅರ್ಥಗಳಿವೆ. ಹಾಗಾದ್ರೆ ಒಂದಷ್ಟು ವರ್ಗಗಳಿಗೆ ಕೈಲಾಗದವರು ಎಂಬ ಪಟ್ಟ ಕೊಟ್ಟವರೆಲ್ಲರೂ ಸಮರ್ಥರೇ? ಅಲ್ಲವೇ ಅಲ್ಲ. ನನ್ನ ಪ್ರಕಾರ ಬೊಬ್ಬೆ ಹೊಡೆದು, ಕಿಕ್ಕಿರಿದು ನಾನು, ನಾನೆ, ನನ್ನದು ಎಂದು ಹಣ, ಅಂತಸ್ತಿನಿಂದ ಬೀಗುವವರು ನಿಜವಾದ ಅಸಮರ್ಥರು.

ಅಸಮರ್ಥರೆಂಬ ಪದದೊಳಗೆ ಸಮರ್ಥರೆಂಬ ಅರ್ಥವಿದೆ ಅವರೇ ಮೈಮುರಿದು ಹಗಲಿರುಳೆನ್ನದೆ ದುಡಿದು ತಾವಾಯ್ತು ತಮ್ಮ ಕಾಯಕವಾಯ್ತು ಎಂದು ಬದುಕುವವರು. ನಿಷ್ಠಾವಂತರು, ಮನಸ್ಸಿನಿಂದ ಮಡಿವಂತರಾದ ಸತ್ಯ, ನೀತಿ, ನ್ಯಾಯವನ್ನೇ ತಮ್ಮ ಜೀವಾಳವಾಗಿಸಿಕೊಂಡವರು ಅಕ್ಷರಶಃ ಸಮರ್ಥರು. ಆದರೆ ಅಂತಹ ಶ್ರಮಜೀವಿಗಳನ್ನು ಹಣ, ಆಸ್ತಿ, ಅಂತಸ್ತಿನಿಂದ ಹಿಡಿತಕ್ಕೆ ತೆಗೆದುಕೊಂಡು, ಅವರ ಹಿಂದೆ ಧ್ವನಿ ಎತ್ತದವರು ಇರದ ಕಾರಣಕ್ಕೋ, ಅವರೇ ಧ್ವನಿ ಎತ್ತದ ಕಾರಣಕ್ಕೋ ಗೊತ್ತಿಲ್ಲ ಅವರು ಬಲಹೀನರೆಂಬ ಹಣೆಪಟ್ಟಿಯನ್ನು ಬಲವಂತವಾಗಿ ಹೇರಿಕೊಂಡು ಬದುಕುವುದನ್ನು ನಾವು ಸಮಾಜದಲ್ಲಿ ಬಹುತೇಕ ಸಂದರ್ಭಗಳಲ್ಲಿ ಕಾಣುತ್ತೇವೆ.

ತಮ್ಮ ತೆಕ್ಕೆಗೆ ತೆಗೆದುಕೊಂಡು ಸಣ್ಣ ಸಹಾಯವನ್ನು ಸ್ವಾರ್ಥಕ್ಕಾಗಿ ಮಾಡಿದರೂ ಸಹ ಅದರ ಪರಿಶ್ರಮ ಫಲಿಸಲು ವ್ಯಕ್ತಿಯೇ ಶ್ರಮ ಹಾಕಿರುತ್ತಾನೆ. ಆದರೆ ನಾನೇ ಮಾಡಿದ್ದು ನಾನೇ, ನನ್ನಿಂದಲೇ ಎಂಬ ಮಾತುಗಳು ಆ ವ್ಯಕ್ತಿಯನ್ನು ಮಾತಿನಿಂದಲೇ ಕೊಲ್ಲುತ್ತಿರುತ್ತವೆ. ಏನನ್ನಾದರೂ ಸಾಧಿಸಬಲ್ಲೆ ಎಂಬ ವ್ಯಕ್ತಿಯ ಛಲವನ್ನು ಕೊಲ್ಲುವವರು ಎಂದರೆ ಅವರೇ ಬಲವಂತರು ಅಯ್ಯಯ್ಯೋ ಬಲವಂತರು ಎಂದರೆ ಸಾಮರ್ಥ್ಯದಿಂದಲ್ಲ ಭೂಲೋಕದ ಸುರಪಾನವೆಂಬಂತೆ ಅಮೇಲೇರಿಸಿದ ಹಣದಿಂದ ಅಂಥವರು ಸಮರ್ಥರನ್ನು ಅಸಮರ್ಥರೆಂದು ಬಿಂಬಿಸಿ ಅವರ ತಲೆಯಲ್ಲಿ ಬಲವಾಗಿ ಅದನ್ನು ಬಿತ್ತಿದ್ದಾರೆ ಅದು ಇಂದು ಮರವಾಗಿ ಬೆಳೆದಿದೆ ಎನಿಸುತ್ತದೆ.

- Advertisement -

ಸ್ವಾರ್ಥವನ್ನೇ ಬದುಕಿನಲ್ಲಿ ಹಾಸುಹೊಕ್ಕಾಗಿರಿಸಿಕೊಂಡವರು, ನಾನು ಏನೋ ಸಾಧಿಸಿಬಿಟ್ಟಿದ್ದೀನಿ ಎಂದು ಬೀಗುವವರು ತಮ್ಮ ಬೆನ್ನ ಹಿಂದೆ ಬೆಂಬಲ ನೀಡುವವರು ಮತ್ತು ಕಿಸೆಯಲ್ಲಿರುವ ಹಣದಿಂದ ಮಾತ್ರ ಎಂಬುದು ಪ್ರಸ್ತುತ. ಈ ಹಿಂದೆ ಪ್ರೀತಿ, ವಿಶ್ವಾಸ ನಂಬಿಕೆಗಳ ಆಗರ ಬದುಕಲ್ಲೇನಾದರೂ ಸಾಧಿಸಬೇಕು ಎನ್ನುವವರಿಗೆ ನಾನಿದೀನಿ ನಿನ್ನಿಂದ ಆಗತ್ತೆ ಮಾಡು ಅನ್ನೋ ಬೆಂಬಲ, ಅವರ ಆಸೆ ಅಕಾಂಕ್ಷೆಗಳಿಗೆ ನೀಡುವ ಬೆಲೆ ಎಲ್ಲವೂ ಸಾಧಿಸುವವರಿಗೆ ಸ್ಫೂರ್ತಿಯ ಚಿಲುಮೆಗಳಾಗಿ ನಿಲ್ಲುತ್ತಿದ್ದವು. ಆದರೆ ಇಂದು ಕುಹುಕದ ಮಾತುಗಳನ್ನಾಡಿ ನಯವಾಗಿ ಬಗ್ಗುಬಡಿಯುವ ಜನರ ಮಧ್ಯೆ ಇದ್ದೇವೆ. ಈ ಹಿಂದೆ ಪ್ರೀತಿ, ವಿಶ್ವಾಸ, ನಂಬಿಕೆ, ಮಮತೆ ಎಲ್ಲವುಗಳು ಅವುಗಳನ್ನ ಕೊಟ್ಟರೆ ಅದೇ ಸುಂಕವಾಗಿ ವಾಪಸ್ ಬರುತಿತ್ತು ಆದರೆ ಅವುಗಳು ಈಗ ಹಣದ ಮೇಲೆ ನಿಂತಿವೆ. ನನಗೆ ಇದೆಲ್ಲ ನೋಡಿದರೆ ಒಂದು ಮಾತು ಪದೇ ಪದೇ ನೆನಪಾಗುತಿರತ್ತೆ.

“ಹಣಂ ಮೂಲಂ ಇದಂ ಜಗತ್ತು”
ಅಂದರೆ ಹಣ ಎಲ್ಲದಕ್ಕೂ ಮೂಲ, ಹಣ ಇದ್ರೆ ಮಾತ್ರ ಈ ಜಗತ್ತು. ಜಗತ್ತು ನಿಂತಿರೋದೇ ಹಣದ ಮೇಲೆ ಎಂಬ ಮಾತು ಅಕ್ಷರಶಃ ಸತ್ಯ ಎಂಬುದನ್ನು ಬಹುತೇಕ ಸಂಧರ್ಭದಲ್ಲಿ ನೋಡಿದ್ದೇನೆ ಮತ್ತು ಕೇಳಿದ್ದೇನೆ. ನಿಜಕ್ಕೂ ಆಸ್ತಿವಂತರು, ಹಣವಂತರೆಲ್ಲ ಕೆಟ್ಟವರಲ್ಲ ಆದರೆ ಅಂತವರಲ್ಲಿ ಬಹುತೇಕರು ತಮ್ಮ ಕೈಲಾಗದಿರುವುದನ್ನು ಹಣ ಮತ್ತು ತಮ್ಮ ಹಿಂದಿರುವ ಹಣದ ಬಲದಿಂದ ಹುಟ್ಟಿದ ಜನರಿಂದ ತಮ್ಮ ಕಾಯಕ ಮಾಡಿಕೊಳ್ಳುವವರೇ ಹೆಚ್ಚು. ಅನಿವಾರ್ಯ ಕಾರಣಗಳಿಂದಲೋ, ಸಂದರ್ಭಕ್ಕೆ ಕಟ್ಟುಬಿದ್ದೋ ಇನ್ನ್ಯಾವ ಕಾರಣಕ್ಕೋ ಹಣದ ಬಲವಿರದೆ ಹೋದರೂ ಬುದ್ದಿಯ ಬಲ ಇರುವವರು ಕೆಲವು ಸಂಧರ್ಭಗಳಲ್ಲಿ ಅಂತವರ ಮಾತುಗಳಿಗೆ ತಲೆದೂಗಲೇಬೇಕಾಗುತ್ತದೆ. ಅದನ್ನರಿಯದ ಶ್ರೀಮಂತಿಕೆಯ ಆಮೇಲೆರಿದ ಕೆಲವರು ಬುದ್ದಿವಂತರನ್ನು ಬಲಹೀನರನ್ನಾಗಿಸುವುದನ್ನು ನೋಡಬಹುದು.

ತಾವಾಯ್ತು, ತಮ್ಮ ಬದುಕಾಯ್ತು ಎಂದು ತಮ್ಮಷ್ಟಕ್ಕೆ ತಾವಿದ್ರು ಜನರು ಅಂತವರನ್ನು ಮಾತುಗಳಿಂದಲೇ ಚುಚ್ಚುವವರಿರುತ್ತಾರೆ, ಕತ್ತಿಗಿಂತಲೂ ಹರಿತವಾಗಿ ನಮ್ಮವರಂತಿದ್ದು ಇರಿಯುವವರು ಇರುತ್ತಾರೆ ಅಂಥವರಿಗೆ ತಲೆಕೆಡಿಸಿಕೊಳ್ಳದೆ ಮುಂದೆ ಸಾಗುತ್ತಲೇ ಇರಬೇಕು. ಮಾಡೋಕೆ ಕೆಲಸ ಬೊಗಸೆ ಏನಾದರೂ ಇದ್ದಿದ್ರೆ ಪಾಪ ಅದನ್ನಾದ್ರೂ ಮಾಡ್ತಿದ್ರು, ಅದಿರದ ಕಾರಣ ನಿಮ್ಮ ಗುಂಗಲ್ಲೇ ಇರ್ತಾರೆ ಜನ. ಆಡ್ಕೊಳೋರಿಗೋಸ್ಕರ ತಲೆಕೆಡಿಸ್ಕೊಳ್ತಾ ಕೂತರೆ ನಮ್ಮ ಮುಂದಿನ ಪ್ರತಿ ಕ್ಷಣಗಳನ್ನು ನಾವು ಕಳೆದುಕೊಳ್ತೀವಿ. ಪಾಪ ಅವ್ರಿಗೂ ಗೊತ್ತಿಲ್ಲ ಬೆಳೆದು ನಿಂತ ಮರ ಎಷ್ಟು ಚೆನ್ನಾಗಿ ನೆರಳನ್ನ ಕೊಡತ್ತೆ, ತಂಪಾಗಿದೆ ಅಂತ ಹೋಗಿದ್ ಕಡೆ ಎಲ್ಲ ತಂಪು, ನೆರಳು ಬೇಕು ಅಂತ ಮರನ ಕಡ್ಕೊಂಡ್, ಕಡ್ಕೊಂಡ್ ಹೋದ್ರೆ ಮರನು ಇರಲ್ಲ ನೆರಳು ಸಿಗಲ್ಲ ಅಂತ.

- Advertisement -

ವ್ಯಕ್ತಿ ಆದ್ರೂ ಅಷ್ಟೆ ಒಳ್ಳೆ ವ್ಯಕ್ತಿಯ ವ್ಯಕ್ತಿತ್ವ ಹಾಳು ಮಾಡಿ, ಧಕ್ಕೆ ತರೋದಕ್ಕೆ ನೋಡಿದ್ರೆ ಆ ವ್ಯಕ್ತಿಯ ಸಹನೆ ಮೀರಿದಾಗ ಅವನೊಳಗೆ ಜಾಗೃತವಾಗಿದ್ದ ರಾಕ್ಷಸ ಎಚ್ಚರಗೊಳ್ಳುತ್ತಾನೆ. ಅತಿಯಾಗಿ ಯಾರ ತಾಳ್ಮೆಯನ್ನು ಪರೀಕ್ಷಿಸಬಾರದು, ನಾನು ಎಲ್ಲಕಡೆಯಿಂದಲೂ ಗಟ್ಟಿಯಾಗಿ ನಿಂತಿದ್ದೇನೆ. ಧನ, ಕನಕ, ಸಂಪತ್ತು, ಜನಬಲ ಎಂಬಂತೆ ಮೆರೆಯುತ್ತಿದ್ದವರು ಒಮ್ಮಿಂದೊಮ್ಮೆಲೆ ಕೆಳಗುರುಳಿದ ಉದಾಹರಣೆಗಳು ನಮ್ಮ ಕಣ್ಣೆದುರಿಗಿವೆ. ನಮಗೆ ಯಾವುದೇ ಸ್ಥಾನವಿರಲಿ, ಎಲ್ಲಿಯೇ ಇರಲಿ ಅದನ್ನು ನೆತ್ತಿಗೇರಿಸಿಕೊಳ್ಳದೆ ಬದುಕುವ ಬದುಕಿದೆಯಲ್ಲ ಅದು ನಿಜವಾದ ಬದುಕು.

ಪ್ರತಿಯೊಬ್ಬರಿಗೂ ಅವರದೇ ಆದ ಗೌರವ, ಅವರ ಮಟ್ಟಕ್ಕೆ ತಕ್ಕ ಪ್ರತಿಷ್ಠೆ, ವಿಚಾರಗಳು ಇರುತ್ತವೆ ಅದನ್ನು ಗೌರವಿಸುವ ಗುಣವನ್ನು ಎಲ್ಲರೂ ಬೆಳೆಸಿಕೊಳ್ಳಬೇಕಿದೆ ಆದರೆ ಇಂದು ಅವುಗಳ ಅರ್ಥವೇ ತಿಳಿಯದಂತೆ ವ್ಯರ್ಥವಾಗಿ ಬದುಕನ್ನು ಬದುಕುವವರೇ ಹೆಚ್ಚಿದ್ದಾರೆ. ಅವರಿವರ ಹರಟೆ ಅಜೆಂಡಾಗಳಿಗೆ ತಲೆ ಹಾಕದಿದ್ದರು ಬೇರೆಯವರ ವಿಚಾರಕ್ಕೆ ತಲೆಹಾಕಿ ಅದರಲ್ಲೇ ಖುಷಿಕಾಣುವವರೆ ಹೆಚ್ಚು. ಅಷ್ಟು ಮಾತ್ರವಲ್ಲದೆ ಯಾರಾದರೂ ಒಂದೊಳ್ಳೆ ಕೆಲಸ ಮಾಡ್ತಾರೆ, ಯಾರಿಗು ತೊಂದರೆ ಕೊಡದೆ ಸಾಗ್ತಾ ಇದಾರೆ ಅಂದ್ರು ಸಹಿಸಿಕೊಳ್ಳೋಕಾಗದೆ ನೂರಾರು ಚುಚ್ಚು ಮಾತುಗಳನ್ನಾಡುವವರು ಇದ್ದೆ ಇರ್ತಾರೆ. ನಾಯಿಯ ಗುಣ ಬೊಗಳುವುದು, ಹಾವಿನ ಗುಣ ಕಚ್ಚುವುದು ಹೀಗೆ ಅವುಗಳ ಕೆಲಸ ಅವು ಮಾಡೇ ಮಾಡ್ತವೆ. ಮನುಷ್ಯನು ಹಾಗೆ ಕೊಂಕು ಮಾತುಗಳನ್ನ ಆಡಿಯೇ ಬಲಹೀನತೆಯನ್ನು ಸೃಷ್ಟಿಸಲು ನೋಡ್ತಾರೆ ಅವುಗಳಿಗೆ ಅಂಜದೆ ಸಾಗಬೇಕು. ನಮ್ಮತನ ಅನ್ನುವುದರ ಜೊತೆಗೆ ತನಗೆ ಬೆಲೆ ಸಿಗುವ ಕಡೆ ತಾನೂ ಬೆಲೆಕೊಟ್ಟು ಸಾಗುವ, ತನಷ್ಟಕ್ಕೆ ತಾನಿರುವವರನ್ನು ಕಂಡರೆ ಆತ್ಮರತಿ ಎಂದು ಬಿಂಬಿಸುವ ಜನರಿಗೆ ಉತ್ತರ ಕೊಡುವ ಗೋಜಿಗೆ ಹೋಗಬಾರದು. ಹಣಬಲ ಜೊತೆಯಿದ್ದರೆ ಸಾಲದು ಬುದ್ದಿವಂತಿಕೆಯು ಇರಬೇಕಾಗುತ್ತದೆ. ಕಂಡ ಕಂಡವರ ಕಂಡ ಕಂಡ ವಿಚಾರಗಳನ್ನು ಅಗಿದು ಹುಗಿಯುವ ಹಲವರಲ್ಲಿ ಕೆಲವರಿಗೆ, ನೆಮ್ಮದಿ ಕಿತ್ತು ತಿನ್ನುವ ಒಂದಷ್ಟು ನಯವಂಚಕ ಮಾತುಗಳನ್ನಾಡುವವರಿಗೆ ಜವಾಬ್ ಕೊಡುವ ಅವಶ್ಯಕತೆಯೇ ಇಲ್ಲ. ಯಾಕೆಂದರೆ ಹಣ, ಅಂತಸ್ತು, ಆಸ್ತಿ, ಪದವಿ ಇವ್ಯಾವುಗಳು ನೀಡದ ಖುಷಿ ಕೆಲವರಿಗೆ ಅವರಿವರಿಗೆ ಚುಚ್ಚಿ ಮಾತನಾಡುವ ಮಾತುಗಳು ನೀಡುತ್ತವೆ. ಅದನ್ನು ಹೊರತು ಅವುಗಳಿಗೆ ಇನ್ನ್ಯಾವ ಕಾಯಕವು ಇಲ್ಲ.

ಸಕ್ಸಸ್ ಯಾರಪ್ಪನ ಸ್ವತ್ತು ಅಲ್ಲ, ಗೆಲುವು ಯಾರ ಮನೆಯ ಲಾಕರ್ ನಲ್ಲೂ ಇಲ್ಲ. ಯಾರ ಮಾತಿಗೂ ಕಿವಿ ಕೊಡದೆ ಸಮಯ ಸಂಧರ್ಭಗಳನ್ನು ಪರಿಗಣಿಸಿ ಹೂಂ, ಹುಹೂಂ, ಹೌದಾ, ಇರಲಿ ಬಿಡಿ, ಹೋಗಲಿ ಬಿಡಿ, ಬೇಡದ ವಿಚಾರಗಳನ್ನ ತಗೊಂಡು ನಾನೇನ್ ಮಾಡ್ಲಿ ಎನ್ನುವುದನ್ನು ಕಲಿತರೆ ಸರಳಬದುಕಿನ ಸೂತ್ರ ಕಲಿತಂತೆ. ಇಲ್ಲದ, ಅಲ್ಲದ, ವಲ್ಲದ ಸಂಗತಿಗಳು ತಾತ್ಕಾಲಿಕ ಖುಷಿಯನ್ನು ನೀಡಬಹುದೇ ಹೊರತು ಬದುಕಿನುದ್ದಕ್ಕೂ ನೆಮ್ಮದಿ ತಂದುಕೊಡಲಾರವು. ಬದುಕಲು ಎಲ್ಲವೂ ಬೇಕು ಆದರೆ ಅದು ಒಳ್ಳೆಯ ಮಾರ್ಗದಿಂದ ಕಂಡುಕೊಂಡದ್ದು ಆಗಿರಬೇಕು. ಆಸ್ತಿಗಿಂತ ಆಪ್ತರನ್ನು ಸಂಪಾದಿಸಬೇಕಿದ್ದ ಈ ಕಾಲದಲ್ಲಿ ನಾನು ನಾನೇ ಎಂಬ ಅಹಂಗಳು ನೆತ್ತಿಹತ್ತಿ ತಾಂಡವವಾಡುತ್ತಿವೆ. ಎಲ್ಲರೊಳಗೂ ಅದ್ಭುತ ಶಕ್ತಿಗಳಿವೆ, ಪ್ರತಿಯೊಬ್ಬರೂ ಸಮರ್ಥರೇ ಆದರೆ ಅದನ್ನು ಪರಿಗಣಿಸದೆ ಬಲಹೀನರಾಗಿ ಬದುಕುವ ಪ್ರಸಂಗ ಹೆಚ್ಚಾಗಿದೆ. ಇದೆಲ್ಲವೂ ಹೆಚ್ಚು ದಿನವೇನಲ್ಲ ಹುಟ್ಟಿದವರು ಸಾಯಲೇಬೇಕು ಅದರ ಮಧ್ಯೆ ಬದುಕನ್ನು ಅರಿತು ನಡೆಯಬೇಕಿದೆ. ಯಾವುದೂ ಶಾಶ್ವತವಲ್ಲ ಇಂದು ಮೇಲಿದ್ದವರು ಕೆಳಗೆ, ಕೆಳಗಿದ್ದವರು ಮೇಲೆ ಕ್ಷಣಕಾಲದಲ್ಲೇ ಬದುಕು ತಿರುವು ಪಡೆಯಬಹುದು. ಅದಕ್ಕಾಗಿ ದೊಡ್ಡವರು ಯಾರನ್ನೂ ಹಿರಿಯಬೇಡಿ, ಚುಚ್ಚಿ ಮಾತನಾಡಬೇಡಿ “ಬಲಹೀನರನ್ನು ಬಲವಂತ ಹೊಡೆದರೆ ಬಲವಂತನನ್ನು ಭಗವಂತ ಹೊಡೆಯುತ್ತಾನೆ” ಎಂದು ಇದು ಸತ್ಯವಾದ ಮಾತು. ಹೊಡೆಯುವುದೆಂದರೆ ಕೈಯಿಂದ, ಬಡಿಗೆ, ಕೋಲಿನಿಂದ ಅಲ್ಲ ಕುಹುಕದ ಮಾತು, ಯಾರನ್ನೂ ಮುಂದುವರೆಯಲು ಬಿಡದೆ ಇರುವುದು, ಮತ್ತೊಬ್ಬರ ಗೆಲುವನ್ನು ತಡೆಯುವುದು ಇದು ಹೊಡೆತಕ್ಕಿಂತಲೂ ಹೆಚ್ಚಾದದ್ದು. ಅದು ದೇಹಕ್ಕೆ ಪೆಟ್ಟು ಕೊಟ್ಟರೆ ಇವು ಮನಸ್ಸಿಗೆ ಪೆಟ್ಟು ನೀಡುವಂತವು ಅಂತಹ ಪೆಟ್ಟನ್ನು ಬಲಹೀನರೆಂದು ಸುಖಾ ಸುಮ್ಮನೆ ನಿಂದನೆಗಳ ಮಳೆಗರೆದ್ರೆ ಅಂತವರ ಪಾಲಿಗೆ ಅವರು ನಂಬಿದ ಅವರ ಮೇಲಿನ ಆತ್ಮವಿಶ್ವಾಸ, ಭಗವಂತನಿಹನೆಂಬ ನಂಬಿಕೆ ಅವರ ಕೈ ಹಿಡಿದು ನಡೆಸಿದಾಗ ಅವರ ಗೆಲುವು ಸುನಾಮಿಯಂತೆ ನಿಮ್ಮನ್ನೇ ಕೊಚ್ಚಿಹೋಗಬಹುದು. ಹೌದು ಯಾರು ಬಲಹೀನರಲ್ಲಾ! ಇನ್ನಾದರೂ ನಿಮ್ಮೊಳಗಿನ ಅದ್ಭುತ ಶಕ್ತಿ ಪಾದರಸದಂತೆ ಪುಟಿಯಲಿ, ಗೆಲುವಿನ ಮಂತ್ರ ಮೊಳಗಲಿ, ಯಶಸ್ಸಿನ ರತ್ನಗಂಬಳಿ ಹಾಸಿರಲಿ. ನಾವು ಮಾಡುವ ಕಾಯಕ ಪರಮಾತ್ಮನಿಗೆ ನಮ್ಮೊಳಗಿನ ನಮ್ಮಾತ್ಮಕ್ಕೆ ಸರಿ ಎನಿಸಿದರೆ ಯಾರಿಗು ಉತ್ತರಿಸುವ ಅಗತ್ಯವಿಲ್ಲ, ಅವಶ್ಯಕತೆಯಿಲ್ಲ, ಅನಿವಾರ್ಯವಂತು ಮೊದಲೇ ಇಲ್ಲ. ಗೆಲ್ಲಬೇಕು ನಮ್ಮ ಬದುಕಿದು ನಾವೇ ಸಂಭ್ರಮಿಸಬೇಕು. ನಿಮ್ಮೆಲ್ಲ ಪ್ರಯತ್ನಗಳು ಫಲಿಸಿ ಸಕ್ಸಸ್ ನಿಮ್ಮನ್ನೂ ಹುಡುಕಿ ಬರಲಿ.

ಡಾ ಮೇಘನ ಜಿ
ಉಪನ್ಯಾಸಕರು

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಯತ್ನಾಳ ಉಚ್ಛಾಟನೆ ; ಪಂಚಮಸಾಲಿ ಸಮಾಜದಿಂದ ಪ್ರತಿಭಟನೆ

ಸಿಂದಗಿ; ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಪಕ್ಷದಿಂದ ಉಚ್ಚಾಟಿಸುವುದನ್ನು ಮರು ಪರಿಶೀಲಿಸುವಂತೆ ಆಗ್ರಹಿಸಿ ತಾಲೂಕು ಪಂಚಮಸಾಲಿ ಸಮಾಜದಿಂದ ಟೈರ್‌ಗೆ ಬೆಂಕಿ ಹಚ್ಚುವ ಮೂಲಕ...
- Advertisement -

More Articles Like This

- Advertisement -
close
error: Content is protected !!
Join WhatsApp Group