ಬೆಂಗಳೂರು – ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷ ಸ್ಥಾನಕ್ಕೆ ದಿನಾಂಕ ೧೪/೧೨/೨೦೨೫ರ ಭಾನುವಾರದಂದು ಅಶೋಕ ಶಿಶುವಿಹಾರ, ನಂ.೧೦೦, ೧ ನೇ ಅಡ್ಡರಸ್ತೆ, ಸೆಕ್ಟರ್ -೨, ಶಂಕರಪುರ, ಬೆಂಗಳೂರು. ಇಲ್ಲಿ ಮತದಾನ ನಡೆಯಲಿದ್ದು ತಾವೆಲ್ಲ ಸಕ್ರಿಯವಾಗಿ ಭಾಗವಹಿಸಿ ಮತ ಚಲಾಯಿಸುವಂತೆ ರಾಜ್ಯದ ಲೇಖಕಿಯರಲ್ಲಿ ಸ್ಪರ್ಧಿ ಡಾ. ನಿರ್ಮಲಾ ಸಿ ಯಲಿಗಾರ ವಿನಂತಿಸಿಕೊಂಡಿದ್ದಾರೆ.
ಕರ್ನಾಟಕದ ವಿವಿಧ ಜಿಲ್ಲೆಯ ಸದಸ್ಯ ಲೇಖಕಿಯರಿಗೆ ಅಂಚೆ ಮತದಾನದ ವ್ಯವಸ್ಥೆಯೂ ಇದೆ.
ಡಾ. ಯಲಿಗಾರ ಅವರು ಸ್ವತಃ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.ಅವರು ವೃತ್ತಿ ಜೀವನವನ್ನು ಕಾಲೇಜು ಪ್ರಾಧ್ಯಾಪಕಿಯಾಗಿ ಪ್ರಾರಂಭಿಸಿದರು. ನಂತರ ಆಕಾಶವಾಣಿ ಮತ್ತು ದೂರದರ್ಶನ ಹಾಗೂ ಮುದ್ರಣ ಮಾಧ್ಯಮದಲ್ಲಿ ಸೃಜನಾತ್ಮಕ, ಆಡಳಿತಾತ್ಮಕ ಮತ್ತು ಸಾರ್ವಜನಿಕ ಬದುಕಿನಲ್ಲಿ ಸಕ್ರಿಯ. ೩೫ ವರ್ಷಗಳ ಗಾಢವಾದ ಅನುಭವವನ್ನು ಆಡಳಿತ ಮತ್ತು ಸಾಹಿತ್ಯಕ್ಷೇತ್ರದಲ್ಲಿ ಹೊಂದಿದ್ದಾರೆ. ನಾಡಿನ ವಿವಿಧ ಸಂಘ, ಸಂಸ್ಥೆಗಳ ಸಂಸ್ಥಾಪಕರಾಗಿ, ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ, ಖಜಾಂಚಿಯಾಗಿ, ಸಕ್ರಿಯ ಸದಸ್ಯೆಯಾಗಿ ಕಾರ್ಯನಿರ್ವಹಿಸಿದ್ದಾರೆ.
ಡಾ. ನಿರ್ಮಲಾ ಅವರು ವಿಶ್ವ ಕನ್ನಡ ಸಮ್ಮೇಳನ, ದಸರಾ ಗೋಷ್ಠಿ, ಹಂಪಿ ಉತ್ಸವ, ಕಿತ್ತೂರು ಉತ್ಸವ ಒಳಗೊಂಡಂತೆ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಸಮ್ಮೇಳನ ಹಾಗೂ ವಿಚಾರ ಗೋಷ್ಠಿಗಳಲ್ಲಿ ಅಧ್ಯಕ್ಷೆಯಾಗಿ, ಕವಿಯಾಗಿ, ಸಂಪನ್ಮೂಲ ವ್ಯಕ್ತಿಯಾಗಿ, ನಿರೂಪಕಿಯಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದಾರೆ ಲೇಖಕಿಯಾಗಿ ಈಗಾಗಲೇ ಅವರ ೧೩ ಕೃತಿಗಳು ಲೋಕಾರ್ಪಣೆಗೊಂಡಿವೆ. ಮಹಿಳೆ ಪರ ಚಿಂತನೆಯೇ ನನ್ನ ಸಾಹಿತ್ಯದ ಮೂಲದ್ರವ್ಯ ಎನ್ನುತ್ತಾರೆ.
ಕರ್ನಾಟಕ ವಿ.ವಿ. ಯ ಪಿಎಚ್ ಡಿ, ಹಂಪಿ ವಿವಿಯ ಪಿಎಚ್ ಡಿ. ಕೂಡ ಮಹಿಳಾ ಆಧಾರಿತ ಸಂಶೋಧನೆಗಳಾಗಿವೆ.
ನಾಕಾಣೆ, ಕೌದಿ, ಯಶೋಧರೆ ಮಲಗಿರಲಿಲ್ಲ ಕವನ ಸಂಕಲನಗಳು, ಉದ್ಯೋಗ ವಾಹಿನಿ, ಪರೀಕ್ಷಾ ಸಿದ್ಧತೆ ಮಾಹಿತಿಯುಕ್ತ ಕೃತಿಗಳು. ಗರಿ, ಜೀವನ್ಮುಖಿ, ಸಾಂಪ್ರದಾಯಿಕ ಮಾಧ್ಯಮಗಳಲ್ಲಿ ಮಹಿಳೆ, ಕದಳಿಯ ಮಾರ್ಗ ಇನ್ನಿತರ ಕೃತಿಗಳು ಹಾಗೂ ನೀನೆಂಬೆ ಅದು ನಾನಲ್ಲ ಅಭಿನಂದನಾ ಗ್ರಂಥವು ಅವರಿಗೆ ಸಮರ್ಪಿತವಾಗಿದೆ.
ಆಕಾಶವಾಣಿಯಲ್ಲಿ ಸ್ತ್ರೀ ಜಾಗೃತಿ, ಓ ಸಖಿ, ಹೆಜ್ಜೆ ಗುರುತು, ಮಹಿಳಾ ಲೋಕ, ಬಾಲ ಜಗತ್ತು ಹಾಗೂ ಕ್ಷಿತಿಜ- ಸಾಹಿತ್ಯ ದಿಗ್ಗಜರೊಂದಿಗೆ ಸಂವಾದ ಸೇರಿದಂತೆ ಅನೇಕ ಜನಪ್ರಿಯ ಕಾರ್ಯಕ್ರಮಗಳು ಬಿತ್ತರಗೊಂಡಿವೆ.
ಇನ್ನು ದೂರದರ್ಶನದಲ್ಲಿ ಎಲ್ಲರ ಮನೆ ಮಾತಾದ ಶುಭೋದಯ ಕರ್ನಾಟಕ, ಸಂಗಾತಿ ಸಂಪ್ರೀತಿ, ಚಲುವಿಗೆ ಚಿತ್ತಾರ, ಓ ಸಖಿ, ಚಿನ್ನರ ಲೋಕ, ಶಕ್ತಿ, ಸ್ಮರಣಾಂಜಲಿ, ಕ್ಷಿತೀಜ- ಲಿಟರೆರಿ ಗುರು, ಜನನಾಯಕ, ತಿಂಗಳ ಬೆಳಕು ಸೇರಿದಂತೆ ಇದುವರೆಗು ೫ ಸಾವಿರಕ್ಕಿಂತ ಹೆಚ್ಚು ಕಾರ್ಯಕ್ರಮಗಳನ್ನು ಇವರು ನಿರ್ವಹಿಸಿದ್ದಾರೆ
ಡಾ. ನಿರ್ಮಲಾ ಯಲಿಗಾರ ಅವರು ಕಾರ್ಯನಿರ್ವಹಿಸಿರುವ ಜಿಲ್ಲೆಗಳು
ಕೆ.ಎಲ್.ಇ. ಸಂಸ್ಥೆ – ಹುಬ್ಬಳ್ಳಿ
ಆಕಾಶವಾಣಿ-ಧಾರವಾಡ
ಆಕಾಶವಾಣಿ-ಮಂಗಳೂರು
ಆಕಾಶವಾಣಿ-ಬೆಂಗಳೂರು
ದೂರದರ್ಶನ ಕೇಂದ್ರ-ಬೆಂಗಳೂರು
ಕರ್ನಾಟಕ ಲೇಖಕಿಯರ ಸಂಘದ ಅಭಿವೃದ್ಧಿಗಾಗಿ ಅವರ ಕನಸಿನ ಯೋಜನೆಗಳು ;
“ಯಾರು ಮುಖ್ಯರಲ್ಲ ಯಾರೂ ಅಮುಖ್ಯರಲ್ಲ” ಎನ್ನುವ ಧ್ಯೇಯಕ್ಕೆ ಸಂಘವನ್ನು ಒಳಪಡಿಸಿ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯನ್ನು ತರುವುದು.
ಪ್ರಸ್ತುತ ಚಾಮರಾಜಪೇಟೆಯ ೩ನೇ ಮಹಡಿಯಲ್ಲಿರುವ ಕಲೇಸಂ ಕಚೇರಿಗೆ ಬರಲು ಅತ್ಯಂತ ಹಿರಿಯ ಲೇಖಕಿಯರಿಗೆ ಮತ್ತು ದಿವ್ಯಾಂಗರಿಗೆ ಸಾಧ್ಯವಾಗುತ್ತಿಲ್ಲ ಈ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಲಾಗುವುದು. ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಿ, ಕಲೇಸಂನ್ನು ಸಂಖ್ಯಾಬಲದಿಂದ ಹಾಗೂ ಆರ್ಥಿಕವಾಗಿ ಸದೃಢ ಮಾಡುವುದು.
“ಹಳೆ ಬೇರು ಹೊಸ ಚಿಗುರು ಕೂಡಿದರೆ ಮರ ಸೊಬಗು” ಎಂಬಂತೆ ಸಂಘದ ಎಲ್ಲಾ ಕಾರ್ಯಕ್ರಮಗಳಲ್ಲಿ ಹೊಸ ಪ್ರತಿಭೆಗಳನ್ನು ಮತ್ತು ಹಿರಿಯ ಸಾಹಿತಿಗಳನ್ನು ಒಳಗೊಂಡು ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ಆರ್ಥಿಕವಾಗಿ ಕಷ್ಟದಲ್ಲಿರುವ ಹಿರಿಯ ಲೇಖಕಿಯರಿಗೆ ಸರ್ಕಾರ ಮತ್ತು ಇತರ ಸಂಘ ಸಂಸ್ಥೆಗಳಿಂದ ನೆರವು ಪಡೆದು ಧನ ಸಹಾಯ ನೀಡುವುದು.
ಸಂಘದಲ್ಲಿರುವ ದತ್ತಿ ಕಾರ್ಯಕ್ರಮ ಮತ್ತು ಪ್ರಶಸ್ತಿಗಳಿಗೆ ಹೊಸ ರೂಪವನ್ನು ತರುವುದು. ಕಲೇಸಂ ನ ಘನತೆ ಮತ್ತು ಗೌರವ ಮತ್ತು ವ್ಯಾಪ್ತಿಯನ್ನು ಹೆಚ್ಚಿಸಲು ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಮಹಿಳಾ ಸಾಹಿತ್ಯ ಸಮ್ಮೇಳನಗಳನ್ನು ಏರ್ಪಡಿಸುವುದು. ಲೇಖಕಿಯರ ಲೇಖನಿ ಶಕ್ತಿಯನ್ನು ಹೆಚ್ಚಿಸಲು ಕಾರ್ಯಾಗಾರ, ಸಂವಾದ, ತರಬೇತಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು.
ಸಂಘದ ಪುರವಣಿಗಳಿಗೆ ಹೊಸ ರೂಪ ಕೊಟ್ಟು ಚಂದಾದಾರರನ್ನು ಹೆಚ್ಚಿಸುವುದು. ಸಂಘ ಮತ್ತು ಸರ್ಕಾರದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿಸಿಕೊಂಡು ಸಂಘಕ್ಕಾಗಿ ನಿವೇಶನ ಮತ್ತು ಸದಸ್ಯರಿಗೆ ಬಡಾವಣೆಗಾಗಿ ಪ್ರಯತ್ನಿಸುವುದು. ಬದಲಾದ ತಂತ್ರಜ್ಞಾನವನ್ನು ಬಳಸಿಕೊಂಡು ಕಲೇಸಂ ಅನ್ನು ಸಾಮಾಜಿಕ ಜಾಲತಾಣವನ್ನು ಬಲಪಡಿಸುವುದು. ಮಾಧ್ಯಮ ಮತ್ತು ಸಾಹಿತ್ಯದಲ್ಲಿ ಸಮನ್ವಯತೆ ತರುವುದು.
ಈ ಎಲ್ಲ ಕನಸುಗಳನ್ನು ಹೊತ್ತು ನಾನು ಈ ಬಾರಿಯ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಕಲೇಸಂ ನ ಅಭಿವೃದ್ಧಿಗಾಗಿ ಶ್ರಮಿಸುವ ಭರವಸೆಯನ್ನು ಕೊಡುತ್ತೇನೆ. ಆದ್ದರಿಂದ ತಾವೆಲ್ಲರೂ ಈ ಕೆಳಗೆ ನಮೂದಿಸಿದ ದಿನ ಮತ್ತು ಸ್ಥಳವನ್ನು ಗುರುತಿಟ್ಟುಕೊಂಡು, ತಪ್ಪದೆ ಡಾ. ನಿರ್ಮಲಾ ಸಿ. ಯಲಿಗಾರ್ ಆದ ನನಗೆ ಮತವನ್ನು ನೀಡಿ, ಆಶೀರ್ವದಿಸಬೇಕೆಂದು ಅವರು ವಿನಂತಿಸಿಕೊಂಡಿದ್ದಾರೆ.

