ಕನ್ನಡದ ಕಟ್ಟಾಳು, ಕನ್ನಡದ ಆಸ್ತಿಯಾಗಿದ್ದ ದಿಟ್ಟ ಪತ್ರಕರ್ತರಾಗಿದ್ದ ದಿ.ಡಾ.ಪಾಟೀಲ ಪುಟ್ಟಪ್ಪನವರು ಶುದ್ಧ ಚಾರತ್ರ್ಯ ಕಾಪಾಡಿಕೊಂಡು ಸಾವಿಲ್ಲದ ಶರಣರಾಗಿ ಹೊರಹೊಮ್ಮಿದ್ದಾರೆಂದು ಡಾ. ಶರಣಮ್ಮ ಗೊರಬಾಳ ಹೇಳಿದರು
ಅಕ್ಕನ ಅರಿವು,ವಚನ ಅಧ್ಯಯನ ವೇದಿಕೆ, ಬಸವಾದಿ ಶರಣರ ಚಿಂತನಕೂಟದಿಂದ ಶರಣೆ ಪ್ರೊ. ಶಾರದಮ್ಮ ಪಾಟೀಲ – ಬದಾಮಿ ಇವರ ಶ್ರಾವಣ ಮಾಸದ ವಿಶೇಷ ದತ್ತಿ ಉಪನ್ಯಾಸದ ನಾಲ್ಕನೆಯ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು
ಕಟ್ಟಾಳು ಪುಟ್ಟಪ್ಪನವರ ಬಗೆಗೆ ಒಂದು ಘಂಟೆಗಳ ಕಾಲ ನಿರರ್ಗಳವಾಗಿ ಮಾತನಾಡಿದ ಅವರು, ಕನ್ನಡದ ಆಸ್ತಿ, ಪತ್ರಕರ್ತರು, ಹೋರಾಟಗಾರರು,ಬಹುಮುಖ ವ್ಯಕ್ತಿತ್ವದ ನಾಡೋಜ ಪುಟ್ಟಪ್ಪನವರನ್ನು ತಾವು ಭೆಟ್ಟಿ ಮಾಡಿದ ಅಪೂರ್ವ ಘಳಿಗೆಗಳನ್ನು ಹಂಚಿಕೊಂಡು, ಅವರು ಹುಟ್ಟಿದ್ದು, ಮುರುಘಾಮಠದಲ್ಲಿದ್ದು ಶಾಲಾ ಕಾಲೇಜು ವಿದ್ಯಾಭ್ಯಾಸ, ಕಾನೂನು ವ್ಯಾಸಂಗ, ವಕೀಲ ವೃತ್ತಿ, ನಿಜಲಿಂಗಪ್ಪನವರ ಪ್ರೋತ್ಸಾಹ, ಮುಂಬೈಗೆ ಹೋಗಿದ್ದು, ಸರ್ದಾರ ವಲ್ಲಭ ಬಾಯಿ ಪಟೇಲ ಅವರ ಪ್ರೋತ್ಸಾಹ ದೊರಕಿದ್ದು,ಫ್ರೀ ಪ್ರೆಸ್ ಜರ್ನಲ್ ನಲ್ಲಿ ಕೆಲಸ ಮಾಡಿದ್ದು, ಕ್ಯಾಲಿಫೋರ್ನಿಯಾದಲ್ಲಿ ಎಂ. ಎಸ್ ಮಾಡಿದ್ದು, ನಂತರ ಹುಬ್ಬಳ್ಳಿಗೆ ಬಂದು ಕೆ. ಎಫ್. ಪಾಟೀಲರ ಜೊತೆಗೆ ಕೆಲಸ ಮಾಡಿದ್ದನ್ನು ಹೇಳುತ್ತಾ ಹೋದರು.
ನಂತರ ಅವರು ವಿಶಾಲಕರ್ನಾಟಕ, ನವಯುಗ, ಸಂಗಮ, ಮನೋರಮಾ, ವಿಶ್ವವಾಣಿ, ಪ್ರಪಂಚ ಹೀಗೆ ಎಲ್ಲ ಪತ್ರಿಕೆಗೂ ಅವರು ದುಡಿದದ್ದು, ಎರಡು ಸಲ ರಾಜ್ಯಸಭಾ ಮೆಂಬರ್ ಆಗಿದ್ದು, ದೆಹಲಿಯಲ್ಲಿ ನಮ್ಮ ಕರ್ನಾಟಕದ ಆಗು -ಹೋಗುಗಳ ಬಗೆಗೆ ಧ್ವನಿ ಎತ್ತಿದ್ದು,ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ಅಧ್ಯಕ್ಷರಾಗಿ ಸತತವಾಗಿ ದುಡಿದದ್ದು,ಗೋಕಾಕ ಚಳವಳಿಯಲ್ಲಿ ಭಾಗವಹಿಸಿದ್ದು, ಕಾವಲು ಸಮಿತಿ ಅಧ್ಯಕ್ಷರಾಗಿದ್ದು, ಕನ್ನಡ ಪ್ರಥಮ ಭಾಷೆಗೆ ಉಗ್ರ ಹೋರಾಟ ಮಾಡಿದ್ದು, ಏಕೀಕರಣ ಚಳವಳಿ, ಪ್ರತಿಯೊಂದು ಕಚೇರಿಯಲ್ಲೂ ಕನ್ನಡ ಅನುಷ್ಠಾನಕ್ಕೆ ತಂದು, ದಿನನಿತ್ಯದ ಸರ್ಕಾರಿ ಸುತ್ತೋಲೆಗಳು, ಟಿಪ್ಪಣಿಗಳು ಕನ್ನಡದಲ್ಲಿ ಬರೆಯುವಂತೆ ಮಾಡಿದ್ದು, ಹೀಗೆ ಅವರ ಕನ್ನಡದ ಅಭಿಮಾನಕ್ಕೆ ಕೊನೆಯೇ ಇಲ್ಲವೇನೋ ಎನ್ನುವಷ್ಟು ಕನ್ನಡದ ಸಲುವಾಗಿ ದುಡಿದರು.
ಅವರ ಸಮಗ್ರ ಕಥೆಗಳ ಸಂಪುಟ, ಪಾಪು ಪ್ರಪಂಚ, ಪ್ರವಾಸ ಕಥನ, ಜೀವನ ಚರಿತ್ರೆ, ಸಂಪಾದಕೀಯಗಳು,ಅಭಿನಂದನಾ ಗ್ರಂಥಗಳ ಬಗೆಗೆ ಹೇಳುತ್ತಾ ಹೇಳುತ್ತಾ,ಬದುಕುವ ಮಾತು ಪುಸ್ತಕದ ಬಗೆಗೆ, ಅದರಲ್ಲಿನ ಉಕ್ತಿಗಳ ಸಾಲುಗಳನ್ನು ವಿಶೇಷವಾಗಿ ಉಲ್ಲೇಖಿಸಿದರು.
ಗಾಂಧೀಜಿಯವರನ್ನು ಭೆಟ್ಟಿಯಾಗಿ, ಸ್ವಯಂ ಸೇವಕರಾಗಿ ದೇಶ ಸಂಚಾರಮಾಡಿದ್ದು, ಮಾಡು ಇಲ್ಲವೆ ಮಡಿ ಎನ್ನುತ್ತಾ ಬಂಧನಕ್ಕೆ ಒಳಗಾಗಿದ್ದು, ಹೀಗೆ ಪುಟ್ಟಪ್ಪನವರ ಬಗೆಗೆ ಪ್ರತಿಯೊಂದು ವಿಷಯವನ್ನು ಕಟ್ಟಿಕೊಟ್ಟರು. ಅವರಿಗೆ ಪ್ರಶಸ್ತಿಗಳು ಒಂದರ ಹಿಂದೆ ಒಂದು ಅರಸಿ ಬಂದದ್ದು ಅಭಿಮಾನದಿಂದ ಹಂಚಿಕೊಂಡರು.
ಉಪನ್ಯಾಸದ ಬಳಿಕ ಡಾ. ಶಶಿಕಾಂತ ಪಟ್ಟಣ ಅವರು ಧಾರವಾಡದಲ್ಲಿ ತಾವು ಕಾಲೇಜು ಕಲಿಯುವಾಗ ಪುಟ್ಟಪ್ಪನವರನ್ನು ನೋಡಿದ್ದು, ತಮ್ಮ ಊರಾದ ರಾಮದುರ್ಗದಲ್ಲಿ ಭೆಟ್ಟಿಯಾಗಿದ್ದು ಹೇಳುತ್ತಾ, ಗ್ರೀಕ್ ನಾಟಕವನ್ನು ಕನ್ನಡದಲ್ಲಿ ತೋರಿಸಿದ್ದು, ನೈರುತ್ಯರೇಲ್ವೆ ಹೋರಾಟ, ಬೆಳಗಾವಿಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ,
ಸರೋಜಿನಿ ಮಹಿಷಿ ಆಯೋಗದಲ್ಲಿ ದುಡಿದದ್ದು, ಬೇರೆ ಬರಹಗಾರರನ್ನು ಪ್ರೋತ್ಸಾಹಿಸಿದ್ದು, ಹಂಚಿಕೊಂಡರು. ಸರಳ ವ್ಯಕ್ತಿತ್ವದ ಪುಟ್ಟಪ್ಪನವರಿಗೆ ದುಡ್ಡಿನ ಆಸೆ ಇರಲಿಲ್ಲ ಎನ್ನುವದನ್ನು ನೆನಪು ಮಾಡಿಕೊಂಡರು.
ಸಂವಾದದಲ್ಲಿ ಪಾಲ್ಗೊಂಡ ವೀಣಾ ಮೇಡಂ, ಪೊಲೀಸ್ ಪಾಟೀಲ್ ಅವರು ಪುಟ್ಟಪ್ಪನವರನ್ನು ಭೆಟ್ಟಿಯಾದ ಪ್ರಸಂಗಗಳನ್ನು ಹೆಮ್ಮೆಯಿಂದ ಹಂಚಿಕೊಂಡರು. ಇನ್ನುಳಿದ ಎಲ್ಲರೂ ಪುಟ್ಟಪ್ಪನವರ ಬಗೆಗೆ ಅಭಿಮಾನದ ನುಡಿಗಳನ್ನಾಡಿದರು.
ಮೊದಲಿಗೆ ಶರಣೆ ಮಂಗಲಾ ಪಾಟೀಲ ಅವರು ಮಡಿವಾಳ ಮಾಚಿದೇವರ ವಚನದೊಂದಿಗೆ ತಮ್ಮ ವಚನ ಪ್ರಾರ್ಥನೆ ಮಾಡಿದರು. ದತ್ತಿದಾಸೋಹಿಗಳಾದ ಪ್ರೊ ಶಾರದಮ್ಮ ಪಾಟೀಲ ಅವರು ಎಲ್ಲರನ್ನೂ ಸ್ವಾಗತಿಸಿ, ಅತಿಥಿ ಪರಿಚಯ ಮಾಡಿಕೊಟ್ಟು, ವೇದಿಕೆಯ ಬಗೆಗೆ ಅತ್ಯಂತ ಅಭಿಮಾನದಿಂದ ಮಾತನಾಡಿದರು
ಕಡೆಯಲ್ಲಿ ಡಾ. ಜಯಶ್ರೀ ಹಸಬಿ ಅವರ ಶರಣು ಸಮರ್ಪಣೆ ಮತ್ತು ಲಕ್ಷ್ಮಿ ಕಾಯಕದ ಅವರ ವಚನ ಮಂಗಳದೊಂದಿಗೆ ಕಾರ್ಯಕ್ರಮ ಮುಗಿಯಿತು. ಶರಣೆ ಶಾಂತಾ ಧುಳಂಗೆ ಅವರು
ಕಾರ್ಯಕ್ರಮ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ಮಾಡಿದರು.
ಸುಧಾ ಪಾಟೀಲ, ವಿಶ್ವಸ್ಥರು ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರ, ಪುಣೆ