spot_img
spot_img

ಸ್ವಂತ ಊರಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಅವಕಾಶ ಡಾ. ವೈ.ಎಂ.ಯಾಕೊಳ್ಳಿಯವರಿಗೆ

Must Read

spot_img
- Advertisement -

ಬಾಗಲಕೋಟೆ: ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಸಾಹಿತಿ ವೈ.ಎಂ. ಯಾಕೊಳ್ಳಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇವರ ಸುದೀರ್ಘ ಸಾಹಿತ್ಯ ಸೇವೆ ಪರಿಗಣಿಸಿ, ಮಾರ್ಚ್ 22, 23ರಂದು ಬಾದಾಮಿ ತಾಲ್ಲೂಕಿನ ನೀರಬೂದಿಹಾಳದಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ’ ಎಂದು ತಿಳಿಸಿದ್ದಾರೆ.

ಈ ಪ್ರಕಟಣೆ ಕಂಡ ತಕ್ಷಣ ಸವದತ್ತಿ ತಾಲೂಕಿನಾದ್ಯಂತ ಯಾಕೊಳ್ಳಿಯವರಿಗೆ ಅಭಿನಂದನೆಗಳ ಸುರಿಮಳೆ ಅಪಾರವಾಗಿ ಬರತೊಡಗಿತು. ವ್ಯಾಟ್ಸಪ್ ಫೇಸ್ಬುಕ್ ಹಾಗೂ ಪೋನ್ ಗಳ ಮೂಲಕ ಎಲ್ಲರೂ ಅಭಿನಂದನೆಗಳ ಮಹಾಪೂರ ಹರಿಸತೊಡಗಿದಾಗ ಅವರ ಬದುಕಿನ ಘಟ್ಟ ಹಾಗೂ ಜೀವನ ಸಾಧನೆ ಕುರಿತು ಸವದತ್ತಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಯಾಗಿ ನಾನು ಅವರೊಂದಿಗೆ ಹೊಂದಿರುವ ಒಡನಾಟವನ್ನು ಬರಹ ರೂಪಕ್ಕಿಳಿಸುವ ಒಂದು ಪುಟ್ಟ ಪ್ರಯತ್ನ ಮಾಡಿದೆ. ನನ್ನ ಅವರ ನಿಕಟ ಸ್ನೇಹಕ್ಕೆ ಈ ಬರಹ ಒಂದು ನಿದರ್ಶನ.
ಯಾಕೊಳ್ಳಿಯವರ ಮಾವ ಹೊಸಟ್ಟಿಯವರು ನಿವೃತ್ತಿ ನಂತರ ಗೋಕಾಕದಲ್ಲಿ ನೆಲೆಸಿದ್ದರೂ ಸವದತ್ತಿ ಗೆ ಬಂದಾಗ ನಮ್ಮ ಸ್ನೇಹಿತ ಬಳಗಕ್ಕೆ ಅದರಲ್ಲೂ ನನ್ನ ಹಿರಿಯ ಸನ್ಮಿತ್ರ ಚಿಕ್ಕುಂಬಿಯ ಚಿದಾನಂದ ಬಾರ್ಕಿಯವರ ಜೊತೆಗೆ ಒಡನಾಟ ತಮ್ಮ ಶಿಷ್ಯರ ಜೊತೆಗೆ ಅವರ ಪ್ರೀತಿ ವಾತ್ಸಲ್ಯ ಸಂಪರ್ಕಗಳು ಹೊಸಟ್ಟಿಯವರು ಯಾಕೊಳ್ಳಿಯವರ ಜೊತೆ ಅವಿನಾಭಾವ ಸಂಪರ್ಕವನ್ನು ಹೊಂದಲು ಕಾರಣ ಎಂಬುದನ್ನು ನೆನೆಯದಿದ್ದರೆ ತಪ್ಪಾದೀತು ಎಂದು ಈ ಬರಹದ ಸಂದರ್ಭದಲ್ಲಿ ಹೊಸಟ್ಟಿಯವರ ಮನೆತನ ಯಾಕೊಳ್ಳಿಯವರ ಧರ್ಮ ಪತ್ನಿ ಪ್ರೇಮಾ ಅವರ ಪ್ರೋತ್ಸಾಹ ಮಾವನ ಜೊತೆ ಮಗಳು ಎಂದರೆ ಯಾಕೊಳ್ಳಿಯವರಿಗೆ ತಪ್ಪಾಗದು ಅವರು ಕೂಡ ಅದನ್ನು ನೆನೆಯುವರು.ಈ ದಿಸೆಯಲ್ಲಿ ನನ್ನ ಪುಟ್ಟ ಬರಹ ಹಿರಿಯ ಸನ್ಮಿತ್ರರಿಗೆ.

- Advertisement -

ಡಾ.ಯಾಕೊಳ್ಳಿಯವರು ಮೂಲತಃ ಬಾಗಲಕೋಟ ಜಿಲ್ಲೆಯ ಬದಾಮಿ ತಾಲೂಕಿನ ನೀರಬೂದಿಹಾಳದವರಾದರೂ ಅವರ ಕರ್ಮಭೂಮಿಯನ್ನ ಸವದತ್ತಿಯನ್ನಾಗಿ ಮಾಡಿಕೊಂಡು ಈಗ ಸವದತ್ತಿಯವರೇ ಆಗಿದ್ದಾರೆ,ಇತ್ತೀಚಿಗಷ್ಟೇ ವೃತ್ತಿ ಬದುಕಿನಲ್ಲಿ ಸೇವಾ ನಿವೃತ್ತಿ ಹೊಂದಿರುವ ಇವರು ೧೨-೧೧-೧೯೬೪ ರಲ್ಲಿ ತಾಯಿಯ ತವರುಮನೆ ರಾಮದುರ್ಗ ತಾಲೂಕಿನ ಸಾಲಹಳ್ಳಿಯಲ್ಲಿ ಜನ್ಮ ತಾಳಿದರು. ತಂದೆ ದಿ.ಮಾಳಪ್ಪನವರು ತಾಯಿ ಶ್ರೀಮತಿ ಯಲ್ಲವ್ವ. ಮನೆಗೆ ಹಿರಿಯ ಮಗನಾಗಿ ಜನಿಸಿದ ಇವರ ಬಾಲ್ಯದ ಜೀವನ, ವಿದ್ಯೆ ಕಲಿಯಲು ಪೂರಕವಲ್ಲದ ವಾತಾವರಣದಿದ ಕೂಡಿತ್ತು ಕಾರಣ ಅವರ ಬಡತನ ಹಾಸಿ ಹೊದೆಯುವಷ್ಟು ಇದ್ದರೂ ತಮ್ಮ ಛಲ ಬಿಡದ ತ್ರಿವಿಕ್ರಮಗುಣದಿಂದಾಗಿ ವಿದ್ಯೆಯಂಬ ಅದ್ಭುತ ಅಲ್ಲಾವುದ್ದೀನನ ದೀಪದಂತೆ ಜ್ಞಾನವನ್ನು ದೊರಕಿಸಿಕೊಂಡವರು.

ಬಡತನ ಸಾಧಕರಿಗೆ ಅಡ್ಡಿಯೇನೂ ಆಗಲಾರದು ಎಂದು ಹೇಳಲು ಯಕೊಳ್ಳಿಯವರ ಜೀವನವೂ ಒಂದು ಉದಾಹರಣೆಯೇ. ವಿದ್ಯೆಯನ್ನು ಕಲಿಯಲು ದೇವರು ಯಾರನ್ನಾದರೂ ನಮ್ಮ ಬದುಕಿನಲ್ಲಿ ಕಳಿಸಿರುತ್ತಾನೆ ಎಂಬಂತೆ ನೀರಬೂದಿಹಾಳದ ದೇಸಾಯರ ಮನೆತನದ ಶ್ರೀಮಂತ ಆನಂದರಾವ ದೇಸಾಯಿವರ ಆಸರೆಯಿಂದಾಗಿ ಹೆಚ್ಚಿನ ವಿದ್ಯಾಭ್ಯಾಸ ಹೊಂದುವದು ಇವರಿಗೆ ಸಾಧ್ಯವಾಯಿತುಎಂದು ನೆನೆಯುವ ಡಾಃ ಯಾಕೊಳ್ಳಿಯವರು ತಂದೆ ಹೆಚ್ಚಿಗೆ ಕಲಿಸುವ ಶಕ್ತಿ ಇಲ್ಲದವರಾದರೂ ತನ್ನ ಮಗ ಕಲಿಯಲಿ ಎಂಬ ಸದಿಚ್ಛೆಯುಳ್ಳವರಾಗಿದ್ದರು.ಎಂಬುದನ್ನು ತಂದೆ-ತಾಯಿಯರ ಮಾತೃವಾತ್ಸಲ್ಯವನ್ನು ನೆನೆಯುವರು.

ಇವರು ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣವನ್ನು ತಮ್ಮ ಸ್ವಂತ ಊರಲ್ಲಿಯೇ ಪಡೆದರು. ಹೈಸ್ಕೂಲಿಗೇ ಹತ್ತನೆಯ ವರ್ಗಕ್ಕೆ ಪ್ರಥಮಿಗರಾಗಿ ಪಾಸಾದರು.ಪ್ರಾಥಮಿಕ, ಪ್ರೌಢ ಶಾಲೆಯಲ್ಲಿ ಗ.ರಾ.ಗೋರಯ್ಯನವರ, ಪಿ ಎಫ್ ಕುಂದರಗಿ ಮೊದಲಾದ ಶಿಕ್ಷಕರು ಇವರಿಗೆ ಮಾಡಿದ ಸಹಾಯ ಅಷ್ಟಿಷ್ಟಲ್ಲ, ಶ್ರೀಮಂತ ಆನಂದರಾವ ದೇಸಾಯರಂತೂ ತಮ್ಮ ಮನೆ ಮಗನಂತೆಯೇ ನೋಡಿಕೊಂಡು ವಿದ್ಯೆಗೆ ಆಸರೆಯಾದರು. ಹತ್ತನೆಯ ತರಗತಿ ಮುಗಿಸಿದಾಗ ಕಾಲೇಜಿಗೆ ಹಚ್ಚಲು ತಂದೆಯವರಿಗೆ ಆರ್ಥಿಕವಾಗಿ ಸಾಧ್ಯವಿರಲಿಲ್ಲ ಆದರೆ ದೇಸಾಯಿಯವರ ಸಹಾಯದಿಂದಾಗಿ ಗುಳೇದಗುಡ್ಡದಲ್ಲಿ ರೇವಡಿಯವರ ಉಚಿತ ಪ್ರಸಾದನಿಲಯ ದೊರಕಿದ ಕಾರಣ ವಿದ್ಯೆ ಮುಂದುವರಿಯುವದು ಸಾಧ್ಯವಾಯಿತು ಎಂದು ತಮ್ಮ ಬದುಕಿನಲ್ಲಿ ವಿದ್ಯೆಯ ಪಡೆದ ಬಗೆಯನ್ನು ವಿವರಿಸುತ್ತಾರೆ.
ಪಿಯುಸಿ ಮತ್ತು ಬಿ.ಎ ಪದವಿಯಲ್ಲಿ ಕನ್ನಡ ಪ್ರಧಾನ ವಿಷಯವಾಗಿ ತಗೆದುಕೊಂಡು ವಿಶ್ವವಿದ್ಯಾಲಯಕ್ಕೆ ಒಂಬತ್ತನೆಯ ರ‍್ಯಾಂಕ್‌ನೊಂದಿಗೆ ಉತ್ತೀರ್ಣರಾಗಿದ್ದು ಹೆಮ್ಮೆಯ ಸಂಗತಿ.ಗ್ರಾಮೀಣ ವಲಯದ ವಿದ್ಯಾರ್ಥಿಯೊಬ್ಬ ವಿಶ್ವವಿದ್ಯಾಲಯಕ್ಕೆ ರ‍್ಯಾಂಕ್ ಬರುವದು ಆಗ ಬಹು ದೊಡ್ಡ ಸಾಧನೆಯಾಗಿತ್ತು ಅಂಥದ್ದುರಲ್ಲಿ ಇವರ ಈ ರ‍್ಯಾಂಕ್ ಇವರ ಬದುಕಿನ ದಿಕ್ಕನ್ನು ಬದಲಿಸಿತು. ಎಂ ಎ ಕನ್ನಡ ಮಾಡಬೇಕೆಂಬ ಅವರ ಕನಸಿಗೆ ವಿದ್ಯಾ ಗುರುಗಳಾದ ಡಾ.ಎಂ.ಬಿ ಕಣವಿ (ಮೂಲತ: ಸಿಂದೋಗಿಯವರು) ಡಾ. ಹೂಗಾರವರು ಗೆಳೆಯರಾದ ಈರಣ್ಣ ಪಟ್ಟಣಶೆಟ್ಟಿಯವರು ಬಲ ತುಂಬಿದರು.

- Advertisement -

ಧಾರವಾಡ ಸೇರಿದ ಯಾಕೊಳ್ಳಿಯವರು ಯರಗಟ್ಟಿಯ ಧಣಿಗಳ ಮನೆಯ ಆಸರೆ ಪಡೆದು ಗೆಳೆಯ ಯಲ್ಲಾಪೂರದ ನಾಗರಾಜ ನಾಯಕ ಹಿರಿಯರಾದ ಡಾ ಗುಂಡಣ್ಣ ಕಲಬುರ್ಗಿಯವರ(ಸದ್ಯ ಬೆಳಗಾವಿ ಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರು) ಸಹಾಯದಿಂದ ಸ್ನಾತಕೋತ್ತರ ಪದವಿ ಪಡೆಯುವಂತಾಯಿತು.

ಡಾ ಬಿ.ಆರ್ ಹಿರೇಮಠರವರ ಅಂತರಂಗದ ಶಿಷ್ಯರಾದದ್ದು ಅವರ ಬದುಕಿನ ಭಾಗ್ಯವೆಂದೇ ನೆನೆಯುತ್ತಾರೆ. ಆ ದಿನಗಳಲ್ಲಿ ನಾಡಿನ ಬಹುದೊಡ್ಡ ಸಂಶೋಧಕರಾಗಿದ್ದ ಡಾ.ಎಂ ಎಂ ಕಲಬುರ್ಗಿ ಯವರ ಮಾರ್ಗದರ್ಶನದಲ್ಲಿ ಸಮಗ್ರ ಶರಣರ ಸಮಗ್ರ ವಚನ ಪ್ರಕಟಣಾ ಯೋಜನೆಯಲ್ಲಿ ಸಹಾಯಕ ಸಂಶೋಧಕರಾಗಿ ದುಡಿದರು. ಎಂ ಎ ಪದವಿಯ ನಂತರ ಅನ್ನ ಹುಡುಕಿ ಯರಗಟ್ಟಿಯ ಬೋಗರಾಜ ದೇಸಾಯಿ ಪದವಿ ಪೂರ್ವ ಕಾಲೇಜು ಅರಸಿ ಬಂದರು. ಆದರೆ ಕೆಲವೇ ವರ್ಷಗಳಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಉಪನ್ಯಾಸಕರಾಗಿ ನೇಮಕವಾಗಿ ಗುಲ್ಬರ್ಗಾ ಜಿಲ್ಲೆಯ ಮಾದನ ಹಿಪ್ಪರಗಿಗೆ ಹೋದರು.

ಆದರೆ ಇಂದಿಗೂ ಅವರ ವೃತ್ತಿ ಬದುಕಿನ ಸುವರ್ಣಯುಗ ಎಂದು ಅವರು ನೆನೆಯುವದು ಯರಗಟ್ಟಿಯಲ್ಲಿದ್ದ ಕಾಲವನ್ನೇ. ಅಲ್ಲಿನ ಗೆಳೆಯರು ಶಿಷ್ಯಬಳಗ ಇಂದಿಗೂ ಇವರನ್ನು ಮರೆತಿಲ್ಲ. ಅವರೂ ಅದನ್ನು ಮರೆತಿಲ್ಲ.

ಈ ನಡುವೆ ಡಾಃ ಬಿ.ಆರ್ ಹಿರೇಮಠರವರ ಮಾರ್ಗದರ್ಶನದಲ್ಲಿ *ಪ್ರಾಚೀನ ಕನ್ನಡ ಸಂಕಲನ ಕಾವ್ಯಗಳು* ವಿಷಯದಲ್ಲಿ ಸಂಶೋಧನೆ ಮಾಡಿ ಪಿ ಎಚ್ ಡಿ ಪದವಿ ಪಡೆದರು.

ಕನ್ನಡ ಸಾಹಿತ್ಯ ಪರಿಷತ್ತಿನ ಸವದತ್ತಿ ತಾಲೂಕಿನ ಅಧ್ಯಕ್ಷ ರಾಗಿ ಸಾಹಿತ್ಯಕ ಚಟುವಟಿಕೆಗಳಲ್ಲಿ *ಕನ್ನಡ ಸಾಹಿತ್ಯ ಪರಿಷತ್ತಿನ ನಡಿಗೆ ಶಾಲೆಯ ಕಡೆಗೆ* ಎಂಬ ಕಾರ್ಯಕ್ರಮ ಇತ್ತೀಚೆಗೆ ಜರುಗಿಸುತ್ತಿರುವ ಇವರಿಗೆ ಬಾಗಲಕೋಟೆ ಜಿಲ್ಲೆಯ ಜಿಲ್ಲಾ ಸಮ್ಮೇಳನದ ಅಧ್ಯಕ್ಷತೆ ದೊರೆತಿರುವುದು ಹೆಮ್ಮೆಯ ಸಂಗತಿ. ಅದೂ ಕೂಡ ತಮ್ಮ ಸ್ವಂತ ಸ್ಥಳದಲ್ಲಿ ಇದು ಯೋಗಾಯೋಗ.

ಈಗ ನಿವೃತ್ತಿ ಜೀವನ ಅವರದಾಗಿದ್ದು ಇಂತಹ ಸಂದರ್ಭದಲ್ಲಿ ಬಾಗಲಕೋಟೆಯ ಜಿಲ್ಲಾ ೧೨ನೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಇವರನ್ನು ಅರಸಿ ಬಂದಿರುವುದು ಅವರ ಸಾಹಿತ್ಯ ಚಟುವಟಿಕೆಗಳಿಗೆ ಹಿಡಿದ ಕೈಗನ್ನಡಿ.ಅವರ ಶ್ರೀಮತಿ ಡಾ ಪ್ರೇಮಾ ಯಾಕೊಳ್ಳಿಯವರು ಸವದತ್ತಿಯ ಕುಮಾರೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ಉಪನ್ಯಾಸಕರು. ಇಬ್ಬರು ಮಕ್ಕಳು ನಿರಂಜನ, ಮತ್ತು ನಿವೇದನ.ದೊಡ್ಡ ಮಗ ಡಾ.ನೀರಜ್ .MS (General surgery) ಮಾಡಿದ್ದು ಈಗ ಭುವನೇಶ್ವರದಲ್ಲಿ ವೈದ್ಯರಾಗಿ ಸೇವೆ. ಚಿಕ್ಕ‌ಮಗ ನಿವೇದನರಾಜಸ್ಥಾನದ BITS PILANI ಅಲ್ಲಿ MTech ನಂತರ ,PhD ಮಾಡುತ್ತಿದ್ದಾರೆ

ಯಾಕೊಳ್ಳಿಯವರ ಬದುಕು ಬರಹಗಳ ಬೆಳವಣಿಗೆಗೆ ಶ್ರೀಮತಿ ಡಾ ಪ್ರೇಮಾ ಬರೆದಿರುವ ಕೃತಿ *ಯಾತ್ರಿಕ* ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಲೋಕಾರ್ಪಣೆ ಆಗುತ್ತಿರುವುದು ಮತ್ತೊಂದು ಹೆಮ್ಮೆಯ ಸಂಗತಿ.

ಯಾಕೊಳ್ಳಿಯವರ ಬೆಂಬಲ ಮಾವನವರಾದ ಎ.ಎಚ್ ಹೊಸಟ್ಟಿಯವರು ಅವರ ಕುಟುಂಬ ವರ್ಗದ ಶ್ರೀರಕ್ಷೆ ಇದೆ ಎಂದು ಯಾಕೊಳ್ಳಿ ಕೃತಜ್ಞತೆಯಿಂದ ನೆನೆಯುತ್ತಾರೆ
ಡಾ .ಯಾಕೊಳ್ಳಿ ಒಳ್ಳೆಯ ಉಪನ್ಯಾಸಕರಾಗಿ ನೂರಾರು ಉತ್ತಮ ವಿದ್ಯಾರ್ಥಿಗಳನ್ನು ನೀಡಿದ್ದಾರೆ. ಪದವಿ ಕಾಲೇಜುಗಳ ಪ್ರಾಧ್ಯಾಪಕರಿಂದ ಹಿಡಿದು ಪೋಲಿಸ್ ಅದಿಕಾರಿಗಳು ವಕೀಲರು ಶಿಕ್ಷಕರು ಹೀಗೆ ನಾಡಿನ ಎಲ್ಲ ಕಡೆ ಅವರು ಹಬ್ಬಿದ್ದಾರೆ. ಇಂದಿಗೂ ಆ ಎಲ್ಲ ವಿದ್ಯಾರ್ಥಿಗಳ ಪ್ರೀತಿ ಯಾಕೊಳ್ಳಿವರೊಂದಿಗಿರುವದಕ್ಕೆ ಅನೇಕ ಸಾಕ್ಷಿಗಳಿವೆ.
ಸಾಹಿತಿಯಾಗಿ ಯಾಕೊಳ್ಳಿಯವರ ಸಾಧನೆ ಸಣ್ಣದಲ್ಲ. ಕವಿಯಾಗಿ ನಾಲ್ಕು ಸಂಕಲನ ವಿಮರ್ಶೆಯ ಐದಾರು ಕೃತಿಗಳು ಸಂಶೋಧನೆ ,ಸಂಪಾದನೆ ,ವ್ಯಕ್ತಿ ಚಿತ್ರ ಪ್ರಕಾರಗಳಲ್ಲಿ ಸುಮಾರು ೫೧ ಕೃತಿಗಳನ್ನು ಅವರು ಪ್ರಕಟಿಸಿದ್ದಾರೆ.
ಅವರ ಒಟ್ಟು ೫೧ ಪ್ರಕಟಿತ ಕೃತಿಗಳು ಹೀಗಿವೆ.

*ಕಾವ್ಯ*
೧) ಚಿಂದಿ ಅಯುವ ಹುಡುಗಿ
೨) ನಿಟ್ಟುಸಿರು ಬಿಡುತ್ತಿದೆ ಕವಿತೆ
೩) ತಪ್ಪಿತಸ್ಥನ ಅಫಿಡೆವಿಟ್ಟು
೪) ನಿಂತು ಹೋದ ನದಿಗಳು
೫) ಹಂಗಿನರಮನೆಯೊಳಗೆ
೬) ಅಪ್ಪನೆಂಬೋ ಆಗಸ

*ಚುಟುಕು ಸಂಕಲನ*
೧) ಹೆಸರೊಲ್ಲದ ಚಿತ್ರಗಳು

*ಸಂಪಾದಿತ ಕವನ ಸಂಕಲನ*
೧) ನಮ್ಮೊಳಗಿನ ನಾವು ( ಡಾ ಮೈನುದ್ದೀನ ರೇವಡಿಗಾರ ಅವರೊಂದಿಗೆ ಸೇರಿ )

*ಕಥಾ ಸಂಕಲನ* :
೧)ನಾದದ ನದಿಯೊಂದು ಹರಿದಾಂಗ(೨೦೧೭)

ಸಂಶೋಧನೆ
೧) ಪ್ರಾಚೀನ ಕನ್ನಡ ಸಂಕಲನ ಕಾವ್ಯಗಳು
೨) ಸಮಚಿತ್ತ (೨೦೧೩)
೩) ಸಮಕಟ್ಟು (೨೦೧೩)
೪) ಅನುಶೋಧ (೨೦೧೫)
೫) ಹಾಲ್ಗನ್ನಡ (೨೦೧೮)
ಮುನ್ನುಡಿ ಸಂಕಲನ :
೧) ಮೊದಲ ಸೊಲ್ಲು (೨೦೧೯)
೨) ಮುನ್ನುಡಿ ಲೋಕ(೨೦೨೨)
೩) ಓದಿನ ಬೆರಗು (೨೦೨೪)
ಚಿಂತನ ಸಂಕಲನ
೧) ಅಮೃತದ ತೊಟ್ಟು (೨೦೨೪)
ವಿಮರ್ಶೆ
೧) ಒರತೆ (೨೦೧೦) (೨೦೧೩)
೨) ಹೃದಯ ಸಾಕ್ಷಿ (೨೦೧೫)
೩) ಕಾವ್ಯಯೋಗ (೨೦೧೮)
೪) ಪ್ರತಿಸ್ಪಂದನ (೨೦೧೮)
೫)) ಕಾವ್ಯ ಸಂಗಾತ (೨೦೧೭)
೬) ಕನಕಸ್ಮೃತಿ (೨೦೧೭)
೭)ಕಾವ್ಯದೊಸಗೆ (೨೦೨೧)
೮) ಗದ್ಯಗೌರವ (೨೦೨೧)
೯) ಕವಿತೆ ಎಂಬ ವಿಸ್ಮಯ(೨೦೨೨)
ವಚನ ಸಾಹಿತ್ಯ ಚಿಂತನ
೧) ಹೃದಯ ಕೃಷಿ (೨೦೧೪)
೨) ಬೆಳಕಿನ ಬೀಜಗಳು (೨೦೧೫)
೩) ಉರದ ಮುಳ್ಳು (೨೦೧೫)
೪) ವಚನ ಶೋಧ (೨೦೧೬)
೫) ವಚನ ನೋಟ (೨೦೨೨)
೬) ಕಾಯಕಧೀರರು (೨೦೨೨)
೭) ಭುವಿಯ ಬೆಳಕು(೨೦೨೨)
ಸಮಗ್ರ ಸಾಹಿತ್ಯ ವಿಮರ್ಶೆ
೧) ಸುವೃತಾನುಸಂಧಾನ (೨೦೧೪)
೨) ಬೀಗಿ ಬೆಳೆದ ಗೊನೆ ಬಾಳೆ (೨೦೧೬)
೩) ದೇಶಿ ಪ್ರಜ್ಞೆ :ಡಾ ಶ್ರೀರಾಮ ಇಟ್ಟಣ್ಣವರ
ವ್ಯಕ್ತಿ ಚಿತ್ರ :
೧) ಆದರಣೀಯರು-ಸಹೃದಯರು (೨೦೧೪)
೨) ಉದ್ಯಮಶೀಲ (೨೦೧೬)
೩) ಚನ್ನಪ್ಪ ಯರಗಣವಿ
ಸ್ಥಳ ಅಧ್ಯಯನ
೧) ಸುಗಂಧ ವರ್ತಿ
ಸಂಪಾದನೆ : (ಸ್ವತಂತ್ರ)
೧) ಬೆಳ್ಳಿ ಬೆಳಕು (೧೯೯೭)
೨) ಮರೆಯಲಾಗದ ಚೇತನ (೨೦೧೩)
೩) ವೆಂಕಟಾತನಯ ನಂದಿ (೨೦೧೩)
೪) ರಜತ ಸೌರಭ (೨೦೧೫)
೫) ಉದಾತ್ತ ಚರಿತ (೨೦೧೬) (ವೈ ಬಿ ಕಡಕೋಳ ಹಾಗೂ ವೀರಣ್ಣ ಕೊಳಕಿಯವರೊಂದಿಗೆ)
೬) ಯುರೂಪು ಕಥನ :ಅವಲೋಕನ (೨೦೨೦)(ಡಾ.ಅಶೋಕ ನರೋಡೆಯವರ ಪ್ರವಾಸ ಕೃತಿ)
ಇತರರೊಂದಿಗೆ ಸಂಪಾದನಾ ಕೃತಿಗಳು
೧) ಚಂದ್ರಪ್ರಭಾ (೨೦೦೨) (ಇತರರೊಂದಿಗೆ)
೨) ಶರಣರ ದಾಂಪತ್ಯ ಧರ್ಮ (೨೦೧೭) (ಡಾ ಶಶಿಕಾಂತ ಪಟ್ಟಣರೊಂದಿಗೆ ಸೇರಿ ಸಂಪಾದನೆ)
೩ ) ಸಮಾಜಮುಖಿ (ಇತರರೊಂದಿಗೆ)
೪) ಜ್ಞಾನ ದಾಸೋಹಿ (ಇತರರೊಂದಿಗೆ)
ಇಂದು ನಾಡಿನ ಶ್ರೇಷ್ಠ ವಾಗ್ಮಿಗಳಾಗಿ ಡಾ,ಯಾಕೊಳ್ಳಿ ರೂಪಗೊಂಡಿದ್ದಾರೆ. ಸಾಮಾಜಿಕ ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಸಂದರ್ಭಗಳಲ್ಲಿ ನೂರಾರು ವೇದಿಕೆ ಹಂಚಿಕೊಂಡಿದ್ದಾರೆ. ವಿಷಯ ಸಂಪನ್ಮೂಲ ವ್ಯಕ್ತಿಯಾಗಿ ದುಡಿದಿದ್ದಾರೆ. ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ನಾನಾ ಹಂತದಲ್ಲಿ ಸೇವೆ ಮಾಡಿದ್ದಾರೆ. ವಿಶ್ವ ವಿದ್ಯಾಲಯಗಳು, ಸಾಹಿತ್ಯ ಅಕಾಡೆಮಿಗಳು, ಸಾಹಿತ್ಯ ಸಮ್ಮೇಳನಗಳು ನಡೆಸುವ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ. ಪತ್ರಿಕೆಗಳಲ್ಲಿ ಅಂಕಣ, ಲೇಖನ, ಕವನ ರಚಿಸುತ್ತಿದ್ದಾರೆ. ಉಪನ್ಯಾಸ ನೀಡಿದ್ದಾರೆ. ಸಾಹಿತ್ಯ ಸಮ್ಮೇಳನಗಳಲ್ಲಿ ಕವಿತೆ ವಾಚಿಸಿದ್ದಾರೆ. ೨೦೦೧, ೨೦೧೧ ರಲ್ಲಿ ಜನಗಣತಿ ಕಾರ್ಯದಲ್ಲಿ ಬೆಳಗಾವಿ ಜಿಲ್ಲಾ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಮಾಡಿದ್ದಲ್ಲದೇ ವೃತ್ತಿಯ ಜೊತೆಗೆ ಬೆಳಗಾವಿ ಜಿಲ್ಲಾ ವಯಸ್ಕರ ಶಿಕ್ಷಣ ಸಮಿತಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಹಲವು ವರ್ಷಗಳ ಸೇವೆ ಹಾಗೂ ೨೦೧೫ ರ ಕರ್ನಾಟಕ ರಾಜ್ಯ ಶೈಕ್ಷಣಿಕ ಸಾಮಾಜಿಕ ಗಣತಿಯಲ್ಲಿ ಸವದತ್ತಿ ತಾಲೂಕಾ ಸಂಪನ್ಮೂಲ ವ್ಯಕ್ತಿಯಾಗಿಯೂ, ಕಾರ್ಯ ನಿರ್ವಹಿಸಿರುವರು.
ಕಳೆದ ೩೦ ವರ್ಷಗಳಿಂದ ಸಾಮಾಜಿಕ, ಸಾಹಿತ್ಯಕ, ಶೈಕ್ಷಣಿಕ, ಧಾರ್ಮಿಕ ಸಭೆ ಸಮಾರಂಭಗಳಲ್ಲಿ ನಾಡಿನ ನಾನಾ ಜಿಲ್ಲೆಗಳಲ್ಲಿ ೫೦೦ ಕ್ಕೂ ಹೆಚ್ಚು ಉಪನ್ಯಾಸ ನೀಡಿರುವರು ಅಷ್ಟೇ ಅಲ್ಲ ಕರ್ನಾಟಕದ ಹಲವು ವಿಶ್ವವಿದ್ಯಾಲಯಗಳು ಯೋಜಿಸಿದ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡನೆ ಕೂಡ ಮಾಡಿದು ಮಡಿಕೇರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಬೆಳಗಾವಿ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ,ಮೈಸೂರ ದಸರಾ ಕವಿಗೋಷ್ಠಿ (೨೦೧೫)ಗಳಲ್ಲಿ ಭಾಗವಹಿಸಿ ಕವಿತಾ ವಾಚನ ಮಾಡಿರುವರು

ವೃತ್ತಿಯ ಜೊತೆಜೊತೆಯಲ್ಲಿಯೇ ಸಾಹಿತ್ಯದ ಪರಿಚಾರಕರಾಗಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಯಾಗಿರುವರಲ್ಲದೇ ಕಳೆದ ೧೫ ವರ್ಷಗಳಿಂದ ಸವದತ್ತಿ ತಾಲೂಕಾ ಸಾಂಸ್ಕೃತಿಕ ಸಂಪದದ ಅಧ್ಯಕ್ಷರಾಗಿ.ಸದ್ಯ ಸವದತ್ತಿ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಹಲವು ಸಾಹಿತ್ಯ ಕಾರ್ಯಕ್ರಮಗಳ ಆಯೋಜನೆ, ಸವದತ್ತಿಯಲ್ಲಿ ಅಖಿಲ ಕರ್ನಾಟಕ ಜಾನಪದ ಯಕ್ಷಗಾನ ಸಮ್ಮೇಳನ ಆಯೋಜನೆ ಮಾಡಿದ್ದು ಇತಿಹಾಸ¸.
ಅವರ ಸಾಹಿತ್ಯ ಕೃತಿಗಳು ನಾಡಿನ ವಿದ್ವಾಂಸರ ಗಮನ ಸೆಳೆದಿವೆ ಕೃತಿಗಳು ಪ್ರಶಸ್ತಿ ಪಡೆದಿವೆ. ಕವಿತೆಗಳಿಗೆ ಸಂಚಯ, ಸಂಕ್ರಮಣ ಪ್ರಶಸ್ತಿ ಬಂದಿದೆ ಕರ್ನಾಟಕ ರಾಜ್ಯ ಸರ್ಕಾರದ ಉತ್ತಮ ಉಪನ್ಯಾಸಕ ಪ್ರಶಸ್ತಿಯ ಗರಿ ಅವರ ಮುಕುಟವೇರಿದೆ.ಮುನವಳ್ಳಿ ಸೋಮಶೇಖರಮಠದಿಂದ ಕೊಡಮಾಡುವ “ಮುರುಘಶ್ರೀ” ಪ್ರಶಸ್ತಿಗೂ ಭಾಜನರಾಗಿದ್ದಾರೆ.

ಈಗ ಯಾಕೊಳ್ಳಿಯವರಿಗೆ ೬೦ ವರ್ಷ ಮುಗಿದು ೬೧ ವರ್ಷಕ್ಕೆ ಕಾಲಿರಿಸಿರುವರು. ಹಾಗೆಂದು ಅವರು ಮಾಡಬೇಕಾದ ಕೆಲಸ ಮುಗಿದಿಲ್ಲ ಇನ್ನೂ ಹೆಚ್ಚಿನ ಸಾಹಿತ್ಯ ಸಾಧನೆ ಮಾಡಿ ಸವದತ್ತಿ ನಾಡಿಗೆ ಕೀರ್ತಿ ತರಲಿ ಎಂದು ಹಾರೈಸುತ್ತೇನೆ. ಯಾಕೊಳ್ಳಿಯವರನ್ನು ಅಭಿನಂದಿಸಲು ಈ ಜಂಗಮವಾಣಿಗೆ ಕರೆ ಮಾಡಬಹುದು.
೭೮೯೨೫೬೮೭೦೨. ೭೩೪೮೯೧೫೭೮೨

ವೈ.ಬಿ.ಕಡಕೋಳ, ಮುನವಳ್ಳಿ                  ೯೪೪೯೫೧೮೪೦೦ / ೮೯೭೧೧೧೭೪೪೨

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಶಿವಮೊಗ್ಗ ರಾಷ್ಟ್ರಮಟ್ಟದ ಕನ್ನಡ ನುಡಿ ವೈಭವ ಐದು ಕೃತಿಗಳ ಲೋಕಾರ್ಪಣೆ ಸಾಧಕರಿಗೆ ಸನ್ಮಾನ

ಕರ್ನಾಟಕ ರಾಜ್ಯ ಬರಹಗಾರರ ಸಂಘ(ರಿ) ಹೂವಿನ ಹಡಗಲಿ, ಈ ಸಂಘವು ರಾಜ್ಯದ ೩೦ ಜಿಲ್ಲೆಗಳಲ್ಲಿ ಜಿಲ್ಲಾ ಘಟಕ ಸ್ಥಾಪನೆ ಮಾಡಿದ್ದು ಜಿಲ್ಲಾ ಅಧ್ಯಕ್ಷರ ನೇಮಕ ಮಾಡಲಾಗಿದೆ....
- Advertisement -

More Articles Like This

- Advertisement -
close
error: Content is protected !!
Join WhatsApp Group