ಹಾಸನದಲ್ಲಿ ನಡೆಯುತ್ತಿರುವ ಪೌರಾಣಿಕ ನಾಟಕೋತ್ಸವ ಅಂಗವಾಗಿ ಶುಕ್ರವಾರ ಹಾಸನದ ಶ್ರೀ ಚಾಮುಂಡೇಶ್ವರಿ ಜಾನಪದ ಮತ್ತು ರಂಗಭೂಮಿ ಕಲಾಸಂಘ ಇವರು ಎ.ಸಿ.ರಾಜು ನಿರ್ದೇಶನ ದಲ್ಲಿ ಹಾಸನಾಂಬ ಕಲಾಕ್ಷೇತ್ರದಲ್ಲಿ ಪ್ರದರ್ಶಿಸಿದ ಶ್ರೀದೇವಿ ಮಹಾತ್ಮೆ ನಾಟಕ ಪ್ರೇಕ್ಷಕರ ಮನ ಸೆಳೆಯಿತು.
ಇಂದಿನ ವೈಜ್ಞಾನಿಕ ಯುಗದಲ್ಲೂ ಭೂಮಿಯ ಉಗಮದ ಬಗ್ಗೆ ನಾನಾ ವಿಶ್ಲೇಷಣೆ ತರ್ಕ ನಡೆಯುತ್ತಿರುವಂತೆಯೇ ಪೌರಾಣಿಕ ಪರಿಕಲ್ಪನೆಯಲ್ಲಿ ರಮ್ಯ ಕಥೆಗಳೂ ಸೃಷ್ಟಿಗೊಂಡಿವೆ. ರಾಮಾಯಣ, ಮಹಾಭಾರತ, ಭಾಗವತ, ದೇವಿಪುರಾಣ ಇವೇ ಮೊದಲಾಗಿ ರಮ್ಯ ಕಥೆಗಳ ಪರಿಕಲ್ಪನೆ ಇಂದಿಗೂ ಜನಸಾಮಾನ್ಯರ ಮನದಲ್ಲಿ ಉಳಿದು ಬರುವಲ್ಲಿ ಪೌರಾಣಿಕ ನಾಟಕಗಳ ಪಾತ್ರವೂ ಗಮನಾರ್ಹ. ಮಾನವ ನಿರ್ಮಿತ ರಮ್ಯ ಕತೆಗಳೆಲ್ಲಾ ದೇವ ದಾನವ ಗುಣಗಳ ಮನುಷ್ಯ ನಡಾವಳಿಯ ಒಳಹೊರಗಿನ ಎರಡು ಮುಖಗಳೇ ಹೌದಷ್ಟೇ.! ಅದ್ಭುತ ಪ್ಯಾಂಟಸಿ ಪಾತ್ರಗಳು ಮಕ್ಕಳಿಗೆ ಪ್ರಿಯವಷ್ಟೇ. ನಾವು ಬಾಲ್ಯದಲ್ಲಿ ಚಂದಮಾಮದಲ್ಲಿ ಚಿತ್ರಿಸುತ್ತಿದ್ದ ಇಂತಹ ದೈತ್ಯ ಪಾತ್ರಗಳನ್ನೇ ನೋಡಿ ಓದಲು ಆಸಕ್ತರಾಗುತ್ತಿದ್ದೆವು.
ಇರಲಿ, ಶ್ರೀದೇವಿ ಮಹಾತ್ಮೆ ನಾಟಕದಲ್ಲಿ ಮಹಿಷಾಸುರ, ರಕ್ತಬೀಜಾಸುರ, ರಂಬೇಶ. ಶಿಂಬಾಸುರ, ನಿಶುಂಬಾಸುರ, ಚಂಡಾಸುರ, ಮುಂಡಾಸುರ, ಕರಂಬಾಸುರ, ಮಧು, ಕೈಟಪ, ದೂಮ ರಾಕ್ಷಸ.. ಹೀಗೆ ರಕ್ಕಸರದೇ ಆರ್ಭಟ. ಇವರ ಶಕ್ತಿ ಪ್ರದರ್ಶನದ ಮುಂದೆ ಅಮರಾವತಿಯ ಅಧಿಪತಿ ಇಂದ್ರನೇ ಸೋತು ಓಡಿ ಹೋಗುತ್ತಾನೆ. ಸೃಷ್ಟಿ, ಸ್ಥಿತಿ, ಲಯಕರ್ತರು ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಎದುರಿಸಲಾಗದ ಅಸಹಾಯಕತೆ, ತಪೋಬಲದಿಂದ ವರವ ಪಡೆದು ಮೆರೆವ ಅಸುರರ ಸಂಹಾರಕ್ಕೆ ದೇವಿಯ ಅವತಾರ, ದುಷ್ಟ ಸಂಹಾರ ಶಿಷ್ಟ ಪರಿಪಾಲನೆ ಎಂಬ ನಾರದದ ಸೂತ್ರ ತಂತ್ರಗಳ ನಡುವೆ ನಾಟಕ ಸಾಗುತ್ತದೆ. ಇಲ್ಲಿ ಮಾತಿಗಿಂತ ಹಾಡುಗಳೇ ಮೇಲುಗೈ ಸಾಧಿಸಿ ದೃಶ್ಯ ಗೌಣವಾಗುತ್ತದೆ. ರಕ್ಕಸನ ತಪಸ್ಸಿಗೆ ತಥಾಸ್ತು ಎಂದು ಸಾವಿಲ್ಲದ ವರವ ಕೊಡುವ ಬ್ರಹ್ಮ ಅದು ತಿರುಗುಬಾಣವಾದಾಗ ನಲುಗುತ್ತಾನೆ. ಇಂದ್ರ ಮೊಸಳೆಯಾಗಿ ಬಂದು ಕರಂಭಾಸುರನನ್ನು ಸಾಯಿಸುವುದು, ರಂಬೇಶನನ್ನು ಮೋಸದಿಂದ ಬೆನ್ನಿಂದೆ ಬಂದು ಇರಿದು ಕೊಲ್ಲುವುದು, ರಕ್ಕಸರ ರಕ್ಷಣೆಗೆ ನಿಂತ ಶುಕ್ಲಾಚಾರ್ಯರ ಸಪೋರ್ಟ್, ನಾರದನ ಜಾಣ ನಡೆ, ದೇವಿಯ ಸೌಂರ‍್ಯಕ್ಕೆ ಮರುಳಾಗಿ ಒಡೆದಾದಿ ಸತ್ತ ಶಂಬ ನಿಶುಂಬಾ ಬ್ರದರ‍್ಸ್, ಮಹಿಷಾಸುರನ ಮರ್ಧನ, ರಕ್ತಾ ಬಿಜಾಸುರನ ಮೈಯಿಂದ ಬೀಳುವ ರಕ್ತವು ನೆಲದ ಮೇಲೆ ಬೀಳದಂತೆ ನಾಲಿಗೆ ಚಾಚಿ ಹೀರಿ ಸಾಯಿಸಲು ಜನ್ಮಿಸಿದ ಕಾಳಿಯ ಭೀಭತ್ಸ ದೃಶ್ಯಾವಳಿ ಯೊಂದಿಗೆ ನಾಟಕ ಮುಕ್ತಾಯಗೊಳ್ಳುತ್ತದೆ. ಮಹಿಷನ ಆಸ್ಥಾನದಲ್ಲಿ ರಕ್ಕಸರ ಸುರಪಾನ, ರಂಗೇರಿಸಿದ ನರ್ತಕಿಯರ ನರ್ತನ ರಸಿಕ ಪ್ರೇಕ್ಷಕರಿಗೆ ಕಿಕ್ಕೇರಿಸುತ್ತದೆ. ನಾರದನಾಗಿ ಹೆಚ್.ಜಿ.ಗಂಗಾಧರ್ ಹಾಡುತ್ತಾ ಆಕಾಶದಿಂದ ಭೂಮಿಗೆ ಇಳಿಯುತ್ತಾರೆ. ಎಲ್ಲಾ ಮಧುರ ಹಾಡುಗಳು ಇವರಿಗೆ ಮೀಸಲಾಗಿವೆ. ರಂಬೇಶನ ಪಾತ್ರದಲ್ಲಿ ಕೆ.ವಿ.ಯೋಗೇಶ್ ಕೋರವಂಗಲ ಮತ್ತು ನಾಗರಾಣಿ ಪ್ರೇಮಗೀತೆಗಳು ಸೋಮರಾಜ್ ನಂಜನಗೂಡು ಅವರ ಕೀಬೋರ್ಡ್ ವಾದನದಲ್ಲಿ ಸೊಗಸಾಗಿ ಅಷ್ಟೇ ಏಕೆ ಇಡೀ ನಾಟಕದ ಹಾಡುಗಳು ಮೋಡಿ ಮಾಡುತ್ತವೆ. ನಿಜ ಸಂಗೀತ ಆರ್ಭಟದಲ್ಲಿ ನಟನಟಿಯರ ಹಾಡುಗಾರಿಕೆ ಪ್ರೇಕ್ಷಕರಿಗೆ ಸ್ಪಷ್ಟವಾಗಿ ಕೇಳಿಸದಿದ್ದರೂ ಸಂಗೀತವನ್ನೇ ಅರೆದುಕುಡಿದು ಖುಷಿ ಪಡುತ್ತಾರೆ. ನಾಗರಾಣಿ ಪಾತ್ರದಾರಣಿ ರಶ್ಮಿಕರ ‘ಓ ಪ್ರೇಮದ ಪೂಜಾರಿ.. ಹಾಡು ಸೇರಿದಂತೆ ಮಹಿಷಿ ಪಾತ್ರ ನಿರ್ವಹಿಸುವ ಭಾರತಿ, ಹೆಸರಿಗೆ ತಕ್ಕಂತೆ ಇದ್ದ ಗುಡಾಣಿ ಪಾತ್ರದಾರಿಣಿ ಲಕ್ಷ್ಮಿ ಶ್ರೀಧರ್ ಹಾಡಿದ ಹಳೆಯ ಸಿನಿಮಾ ಹಾಡುಗಳು ಅಥವಾ ಅನುಕರಿಸಿದ ಗೀತೆಗಳು ಹೌದಲ್ಲ..! ಹಳೆಯ ಸಿನಿಮಾ ಗೀತೆಗಳು ಅಂದಿಗೂ ಇಂದಿಗೂ ಅಮರ ಮಧುರ ಎನಿಸುವುದು ಸುಳ್ಳಲ್ಲ.
ಮಹಿಷಾಸುರ ಪಾತ್ರ ನಿರ್ವಹಿಸಿದ ಹೆಚ್.ಎಂ.ಪ್ರಭಾಕರ್ ಅಭಿನಯದಲ್ಲಿ ಮೆಚ್ಚುಗೆಗೆ ಪಾತ್ರರು. ದೈತ್ಯ ಪಾತ್ರ ನಿರ್ವಹಿಸುವ ಕಲಾವಿದ ತನ್ನ ಪ್ರತಿ ಮಾತು ಹಾವಬಾವಗಳಿಗೆ ಹೇಗೆ ಮೂಮೆಂಟ್ಸ್ ಇಡಬಹುದು ಎಂದು ಅಭಿನಯಿಸಿ ತೋರ್ಪಡಿಸುತ್ತಾರೆ. ಇವರ ಹಾಡು ಅಭಿನಯ ಸ್ಫಷ್ಟ ಸಮರ್ಪಕ. ದೇವೇಂದ್ರನ ಪಾತ್ರದಾರಿ ಅನಿಲ್ ಕೋರಮಂಗಲ ನಿಜಕ್ಕೂ ಮೇಕಪ್‌ನಲ್ಲಿ ಚೆನ್ನಾಗಿ ಕಾಣಿಸುತ್ತಾರೆ. ಅಷ್ಟೇ ಅವರ ಮಾತು ಹಾಡು ಚೆನ್ನಾಗಿ ಕೇಳಿಬರುತ್ತದೆ. ರಕ್ತ ಬಿಜಾಸುರ ಪಾತ್ರದಲ್ಲಿ ಆಲೂರು ರಾಜೇಗೌಡರಲ್ಲಿ ಹಾಡು ಅಭಿನಯ ಇದ್ದರೂ ರಂಗದ ಮೇಲೆ ಗೊಂದಲಕ್ಕೆ ಒಳಗಾಗುತ್ತಾರೆ. ದೇವಿಗೆರೆಯಿಂದ ಚಾಮುಂಡೇಶ್ವರಿ ಉತ್ಸವ ಮೂರ್ತಿಯನ್ನು ಮೆರವಣಿಗೆಯಲ್ಲಿ ತಂದು ರಂಗದ ಮುಂಭಾಗ ಪ್ರತಿ಼ಷ್ಠಾಪಿಸಿ ಅಲ್ಲಿಂದ ಕರ್ಪೂರದಾರತಿ ತಂದು ರಂಗದ ಮೇಲಿನ ದೇವಿ ಪಾತ್ರಕ್ಕೆ ಬೆಳಗುವಲ್ಲಿ ಈ ಗೊಂದಲಗಳು ಗೋಚರಿಸುತ್ತವೆ. ಇನ್ನೂ ಮೈದುಂಬಿ ದೇವಿ ಪಾತ್ರದಾರಿಯಿಂದ ಎಲ್ಲಿ ಅನಾಹುತ ಘಟಿಸಿಬಿಡುವುದೋ ಎಂದು ಭಯದಿಂದ ತಡೆಹಿಡಿಯುವುದು ಬ್ರಹ್ಮ ವಿಷ್ಣು ಪಾತ್ರಗಳಿಂದ ನಡೆಯುವುದು ಓಕೆ. ಆದರೆ ಕಾಳಿ ಪಾತ್ರವನ್ನು ಹಿಡಿಯಲು ವೇಷಭೂಷಣ ಇಲ್ಲದ ಮಹನೀಯರು ರಂಗದ ಮೇಲೆ ಬರುವುದು ಏಕೆ? ಇರಲಿ ಎಲ್ಲಾ ಕಲಾವಿದರಿಗೂ ಉತ್ತಮ ಮೇಕಪ್, ವಸ್ತ್ರಾಲಂಕಾರ, ಲೈಟಿಂಗ್, ರಂಗಸಜ್ಜಿಕೆಗಳನ್ನು ಒದಗಿಸುವ ಅರಸೀಕೆರೆಯ ಬಂದೂರು ಸೀನ್ಸ್ ನ ಚಂದ್ರಶೇಖರ್ ಅವರಿಗೆ ನಾವು ಹ್ಯಾಟ್ಸಪ್ ಹೇಳಬೇಕು. ನಾಟಕದಲ್ಲಿ ಎಲ್ಲಾ ಕಲಾವಿದರೂ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಲು ಶ್ರಮಿಸುತ್ತಾರಾದರೂ ಕೆಲವು ಪಾತ್ರಗಳನ್ನು ಮರೆಯುವಂತಿಲ್ಲ.
೨ನೇ ದೇವಿಯಾಗಿ ರಕ್ಕಸರೊಂದಿಗೆ ಯುದ್ಧ ಮಾಡುವ ಗೋವಿಂದೇಗೌಡರು, ಹಾಡಿನಲ್ಲಿ ಗಮನ ಸೆಳೆಯುವ ಬ್ರಹ್ಮ ಪಾತ್ರದಾರಿ ಪುಟ್ಟಸ್ವಾಮಿ, ದ್ವಂದ್ವರ್ಥ ಮಾತುಗಳಲ್ಲಿ ಕಚಗುಳಿ ಇಡುವ ರಂಬೇಶನ ಮಿತ್ರ ವ್ಯಾಘಸಿಂಹನಾಗಿ ಪುನಿತಾಚಾರ್ ಮಾತಿನಲ್ಲಿ, ಸೂತ್ರದಾರಿ ಪಾತ್ರದಾರಿ ರಮೇಶ್ ಹಾಡಿನಲ್ಲಿ ಉಳಿದುಕೊಳ್ಳುತ್ತಾರೆ. ಶುಕ್ಲಾಚಾರಿ ಪಾತ್ರದಲ್ಲಿ ಹೇಮೇಶ್ ಗೌರಿಕೊಪ್ಪಲು ಸ್ಪಷ್ಟ ಮಾತುಗಳಲ್ಲಿ ನೀಟಾಗಿ ಅಭಿನಯಿಸಿದರು. ಇನ್ನೂ ಅಸುರರಾಗಿ ಆರ್ಭಟಿಸುವ ಚಂದ್ರು ಸಿಗರನಹಳ್ಳಿ, ಸ್ವಾಮಿ ಗವೇನಹಳ್ಳಿ, ಟಿ.ಆರ್.ಪ್ರಕಾಶ್ ತಟ್ಟೇಕೆರೆ, ಯೋಗೇಶಾಚಾರ್, ಕೃಷ್ನೇಗೌಡ, ಪರಮೇಶ್, ಮಂಜುನಾಥ್ ಮದ್ದೂರು, ಬಸವರಾಜು, ಪ್ರವೀಣ ಮತ್ತು ಅರವಿಂದ್ ಕೋರವಂಗಲ ಇವರುಗಳಿಗೆ ಹರ‍್ಮೋನಿಯಂ ಮಾಸ್ಟರ್ ಎ.ಸಿ.ರಾಜು ಹಾಡು ಕಲಿಸಿ ಆರ್ಭಟಿಸಿ ನುಗ್ಗುವ ಗೂಳಿಗಳ ರಭಸಕ್ಕೆ ಮಧ್ಯೆ ಗೊದಮ ಕೊಟ್ಟಿದ್ದಾರೆ. ಉಳಿದಂತೆ ೧ನೇ ದೇವಿ ವೇದಾವತಿ, ಈಶ್ವರ:ದೇವರಾಜು ಕೋರವಂಗಲ, ವಿಷ್ಣು ಆನಂದ್ ಆಲೂರು, ದೇವೇಂದ್ರನ ಮಂತ್ರಿ ತಿಮ್ಮಪ್ಪ, ವರುಣ:ರಂಗಸ್ವಾಮಿ, ಯಮ:ಹರೀಶ್ ಕಾಮಸಮುದ್ರ, ಋದಗ್ರ:ಮಂಜುನಾಥ್ ಉದ್ದೂರು ಪೋಷಕ ಪಾತ್ರ ಪಾತ್ರದಾರಿಗಳು. ಕೆಲವು ಸ್ಟೂಡೆಂಟ್ಸ್ ಪಿ.ಧನ್ಯ ಪಾಳ್ಯ (ಬಲಬ್ರಹ್ಮ), ಖುಷಿ (ಬಾಲ ಈಶ್ವರ), ನಯನ (ಬಾಲವಿಷ್ಣು), ನಾಗಕನ್ಯೆ ಸಖಿಯರು ಖುಷಿ ಮತ್ತು ಮೇಘನಾ ಕೋರವಂಗಲ, ಬಾಲಕರೀಶ್ ಜಯವರ್ಧನ್ ಉದ್ದೂರು ಮತ್ತು ಬಾಲಮಹಿಷ ಪಿ.ತೇಜಸ್ ಪಾಳ್ಯ ನಟಿಸಿ ಸದ್ಯ ರಂಗದಲ್ಲಿ ಪಾಸಾಗಿದ್ದಾರೆ.
—
ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.