ಬಾಳಾ…ಏ ಬಾಳಾ ಕಾಮವಾಲಿ ಬಾಯಿ ಆಲಿ ನೈಕಾಯ್…. ಎವ್ವ ಎಷ್ಟ ಸಲ ಹೇಳುದು ಅಕಿಗಿ ಅರಾಮ್ ಇಲ್ಲ ಬರುದಿಲ್ಲ ಆಕಿ ಅಂತ ಮಯ್ಯಾ ಸ್ವಲ್ಪ ಜೋರಾಗಿ ಹೇಳಿದಾಗ ಆಸೂದೇ ರೆ ವರಡು ನಕೋ ಅಂದಳು ಈಠಾಬಾಯಿ…
ಕಾಕಾ ಓ ಕಾಕಾ ಐಕಾನಾ ಏನೋ ತಮ್ಮ ನಿನ್ನ ಕಿರಿಕಿರಿ ಕಚರೆವಾಲಾ ಇವತ್ತು ನಾಳೆ ಎರಡ ದಿನ ಬರುದಿಲ್ಲೋ ಮಾರಾಯಾ ಇಲ್ಲಿ ಕಸಾ ಹಾಕಬ್ಯಾಡ್ರಿ…ಅಂತ ಎಷ್ಟ ಹೇಳುದು ಅಂದರು ಪಾಟೀಲ ಮಾಸ್ತರು ಹೀಗೆ ದಿನವೂ ನಮ್ಮ ನಿಮ್ಮೊಂದಿಗೆ ದೂರದಲ್ಲಿ ಇದ್ದರೂ ಹತ್ತಿರದವರಾಗಿ ನಮ್ಮ ಅತೀ ಜರೂರಿನ ವ್ಯಕ್ತಿಗಳಾಗಿ ಅವರಿಲ್ಲದೆ ಇದ್ದರೆ ನಾವು ಇಲ್ಲವೇ ಇಲ್ಲ ಅನ್ನುವಷ್ಟರ ಮಟ್ಟಿಗೆ ಬೆರೆತು ಹೋಗುವವರು ಇಂತಹದೇ ಸಣ್ಣ ಪುಟ್ಟ ಕೆಲಸದ ಕಾರ್ಮಿಕರು.
ರೈತನೊಬ್ಬನ ಹತ್ತಾರು ಎಕರೆ ಜಮೀನಿನಲ್ಲಿ ಬೆಳೆಯುತ್ತಿರುವ ದ್ರಾಕ್ಷಿ ಬಳ್ಳಿಯ ಕುಡಿಯೊಡೆದ ಚಿಗುರು ಬಾಡದಂತೆಯೋ, ಕಬ್ಬಿನ ನಡುವೆ ಕಳೆ ಬೆಳೆದು ನಿಲ್ಲದಂತೆಯೋ,ಕಾಯುವ ಕೂಲಿ ಆಳುಗಳಿಂದ ಹಿಡಿದು ಗಾರೆ ಕೆಲಸ ಮಾಡುವ, ಗಾರ್ಡನ್ ಕಟಿಂಗ್ ಮಾಡಿ ಗಿಡಮರಗಳಿಗೆ ಆಕಾರ ಕೊಡುವ, ದೊಡ್ಡ ಬಂಗಲೆಗಳಿಗೆ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಬಣ್ಣ ಬಳಿಯುವ,ಬಸ್ ಸ್ಟಾಂಡಿನಲ್ಲಿ ಹಮಾಲಿ ಮಾಡುವ,ಸಣ್ಣದೊಂದು ಕಟಿಂಗ್ ಸಲೂನ್ ಇಟ್ಟುಕೊಂಡು ನಿಮ್ಮ ಬೆಳೆದು ನಿಂತ ಕೂದಲಿಗೆ ಕತ್ತರಿ ತಾಗಿಸಿ ಟ್ರಿಮ್ ಆಗಿಸಿ ಒಂದು ಲುಕ್ ಬರುವಂತೆ ಮಾಡುವ ಅಷ್ಟೆ ಯಾಕೆ ಕಿತ್ತುಹೋದ ಚಪ್ಪಲಿಯ ಉಂಗುಷ್ಟಕ್ಕೆ ಮೊಳೆ ಬಡಿಯುವ,ಮಳೆಗಾಲದಲ್ಲಿ ಕಿತ್ತು ಹೋದ ಚತ್ತರಿಯ ಕಡ್ಡಿ ಸರಿ ಪಡಿಸಿಕೊಡುವ ಹೀಗೆ ಹೇಳುತ್ತ ಹೋದರೆ ಹೊಟ್ಟೆಪಾಡೊಂದನ್ನೆ ನೆಪವಾಗಿ ಇಟ್ಟುಕೊಂಡು ಸಣ್ಣ ಪುಟ್ಟ ಕೆಲಸ ಮಾಡುತ್ತ ನೀವು ಕರೆದಾಗಲೆಲ್ಲ ಜೀ ಹುಜೂರ್ ಅನ್ನುವ ಆಫಿಸ್ ಬಾಯ್ ನಿಂದ ಹಿಡಿದು ಕಂಪನಿಯೊಂದರ ಸಿಇಓ ತನಕ ಎಲ್ಲರೂ ಕಾರ್ಮಿಕರೇ…
ಲೆಕ್ಕ ಹಾಕಿ ನೋಡಿದರೆ ಒಂದಲ್ಲ ಒಂದು ಕಾಲಕ್ಕೆ ತಮ್ಮ ಸ್ವಂತ ಊರಿನಿಂದ ಗುಳೆ ಹೊರಟು ಬದುಕು ಕಟ್ಟಿಕೊಳ್ಳುವ ಭರವಸೆಯಲ್ಲಿ ಅಪರಿಚಿತ ಊರುಗಳಿಗೆ ಬಂದು ಸಣ್ಣ ಪುಟ್ಟ ಕೆಲಸ ಮಾಡುವ ಕಾರ್ಮಿಕರಿಂದ ಹಿಡಿದು ನಮ್ಮಿಂದ ಅಸಾಧ್ಯ ಅನ್ನಿಸಿದ ಎಲ್ಲವನ್ನೂ ತಮ್ಮ ರೂಢಿಗತ ಚಾಕಚಕ್ಯತೆಯಿಂದ ಸಲೀಸಾಗಿ ಕೆಲಸ ಮುಗಿಸುವ ಪ್ರತಿಯೊಬ್ಬ ಕಾರ್ಮಿಕರ ಅಗತ್ಯವೂ ನಮಗಿದೆ.
ಟ್ರಾನ್ಸಪೋರ್ಟ ಏಜನ್ಸಿ ಒಂದರ ಚಾಲಕನಿಂದ ಹಿಡಿದು ಕ್ಲೀನರ್ ತನಕ,ಪತ್ರಿಕೆಯೊಂದರ ವರದಿಗಾರನಿಂದ ಹಿಡಿದು ಅದನ್ನು ಕಾಪಿ ಪೇಸ್ಟ ಮಾಡುವ ಮತ್ತು ಪ್ರಿಂಟಾಗಿ ಬಂದ ಬಳಿಕ ಸರ್ಕ್ಯೂಲೆಷನ್ ಕೆಲಸ ಮಾಡುವ ಪೇಪರ್ ಬಾಯ್ ತನಕ,ನಿಮ್ಮ ಮನೆಯ ಹುಟ್ಟು ಹಬ್ಬ,ಸೀಮಂತ,ಆರತಕ್ಷತೆ ಮದುವೆ,ಶಿವಗಣಾರಾಧನೆ ಯಿಂದ ಹಿಡಿದು ಎಲ್ಲ ಕಾರ್ಯಕ್ರಮಗಳ ಡೆಕಾರೇಷನ್ ಮಾಡುವ ಹುಡುಗರಿಂದ ಹಿಡಿದು ಕೆಟರಿಂಗ್ ಕೆಲಸದಲ್ಲಿ ನಿರತವಾಗಿ ಬಂದವರೆಲ್ಲ ಉಂಡು ಹೋದ ಬಳಿಕವೂ ಹಸಿದ ಹೊಟ್ಟೆಯಲ್ಲೆ ಪಾತ್ರೆ ಉಜ್ಜುವ ಹೆಣ್ಣುಮಕ್ಕಳ ತನಕ ಹಲವಾರು ವೃತ್ತಿಗಳನ್ನು ನಂಬಿಕೊಂಡು ಬದುಕುತ್ತಿರುವ ಬಹಳಷ್ಟು ಜನ ಕಾರ್ಮಿಕರು ಅಸಂಘಟಿತ ವಲಯಕ್ಕೆ ಸೇರುತ್ತಾರೆ.
ಕಟ್ಟಡ ನಿರ್ಮಾಣದಿಂದ ಹಿಡಿದು ಬಾತ್ ರೂಮ್ ಮತ್ತು ಟಾಯ್ಲೆಟ್ ಗಳಲ್ಲಿ ನಲ್ಲಿಯ ಟ್ಯಾಪು ತಿರುವುತ್ತಿದ್ದಂತೆಯೆ ನೀರು ಬೀಳುವಂತೆ ಪ್ಲಂಬಿಂಗ್ ಮಾಡುವವರಿಂದ ಹಿಡಿದು,ನೀವು ಸೆಲೆಕ್ಟ ಮಾಡಿದ ಡಿಜೈನ್ ಮಾರ್ಬಲ್ ಮತ್ತು ಟೈಲ್ಸ ಹಾಕುವ, ಸಿವಿಲ್ ಇಂಜನೀಯರು ಚಿತ್ರದಲ್ಲಿ ತೋರಿಸದಂತೆ ಕಟ್ಟಡ ಕಟ್ಟಿ ಬಣ್ಣ ಬಳೆದು ಮಾಲೀಕರಿಗೆ ಬೀಗದ ಕೈ ಒಪ್ಪಿಸುವ ಹಾಗೂ ಶಾಪಿಂಗ್ ಮಾಲ್ ಒಂದರಲ್ಲಿ ಸರ್ ಟ್ರೈ ದಿಸ್ ನಿಮಗೆ ಪರ್ಫೆಕ್ಟ ಮ್ಯಾಚ್ ಆಗುತ್ತೆ ಅಂತ ಬಟ್ಟೆಯೊಂದನ್ನು ನಿಮ್ಮತ್ತ ಹಿಡಿಯುವ ಸೇಲ್ಸ ಗರ್ಲ ಮತ್ತು ಬಾರೊಂದರಲ್ಲಿ ಸೇವೆನ್ ನಂಬರ್ ಕೌಂಟರ್ ನೈಂಟಿ ಎಮ್ ಸಿ ಒಂದ್ ವೋಡ್ಕಾ ತಗೋ ಇಲ್ಲಿ ಬಿಲ್ ಮಾಡದು ಅಂತ ಕೂಗುವ ಹಾಗೂ ಹೊಟೇಲ್ ಒಂದರಲ್ಲಿ ನೀರಿನ ಗ್ಲಾಸನ್ನು ಟೇಬಲ್ಲಿಗೆ ತಂದು ಇಡುತ್ತ ಏನಿದೆ ಅನ್ನುತ್ತಿದ್ದಂತೆಯೇ ಇಡ್ಲಿ, ವಡೆ,ಖಾಲಿ ದೋಸೆ,ಮಸಾಲ ದೋಸೆ,ಉತ್ತಪ್ಪ, ರೈಸ್ ಫಲಾವ್,ಚೌ ಚೌ ಬಾತ್ ಹೇಳಿ ಸರ್ ಏನ್ ಕೊಡ್ಲಿ ಅಂತ ಕೇಳುವ ಸಪ್ಲೈಯರುಗಳ ತನಕ ಪ್ರತಿಯೊಂದು ಕ್ಷೇತ್ರದಲ್ಲಿ ನಿಷ್ಟೆ ಮತ್ತು ಪ್ರಾಮಾಣಿಕತೆಯಿಂದ ದುಡಿಯುವ ಅದೆಷ್ಟೋ ಅಸಂಖ್ಯ ಕೆಳ ಮತ್ತು ಮಧ್ಯಮ ವರ್ಗದ ಕುಟುಂಬಗಳ ಯಾರದೋ ಅಪ್ಪ,ಅಮ್ಮ,ಅಣ್ಣ, ಅಕ್ಕ,ತಮ್ಮ ಅಥವಾ ತಂಗಿ ದುಡಯುತ್ತ ಇರುವದು ಒನ್ ಯಾಂಡ್ ಓನ್ಲಿ ಹೊಟ್ಟೆಪಾಡಿಗಾಗಿ…
ಆದರೂ ಕೂಡ ಹಲವಾರು ಟೇಬಲ್ಲುಗಳಿಗೆ ಸರ್ವಿಸ್ಸು ಕೊಡುವ ಹುಡುಗನೊಬ್ಬ ಮೂರನೆಯ ಪೆಗ್ಗು ತರಲು ತಡವಾಗುತ್ತಿದ್ದಂತೆಯೇ ನಾವೇನು ದುಡ್ಡು ಕೊಡಲ್ವಾ ?? ಅನ್ನುವ ಅಹಂಕಾರದಲ್ಲಿ ಅವರನ್ನು ಗದರಿಸುತ್ತಲೋ,ಬೋಳಿ ಮಗನೇ ಅಂತ ಕುಡಿದ ಮತ್ತಿನಲ್ಲಿ ಅವರ ಮೈ ಮೇಲೆ ಏರಿಹೋಗುವ, ಅಥವಾ ಸೆಕ್ಸ ವರ್ಕರ್ ಒಬ್ಬಳಿಗೆ ಕೇಳಿದಷ್ಟು ಹಣ ಕೊಟ್ಟಿಲ್ಲವಾ ಅಂತ ಸಿಗರೇಟಿನಿಂದ ಸುಡುವ ಅವಳು ಅದೆಷ್ಟು ಬೇಡವೆಂದರೂ ದೇಹದ ಸೂಕ್ಷ್ಮ ಭಾಗವನ್ನು ಜೋರಾಗಿ ಕಚ್ಚಿ ವೀಕೃತಿ ಮೆರೆಯುವ ಅದೆಷ್ಟೋ ಜನರ ನಡುವಿನಿಂದಲೇ ಇದೊಂದು ಬರಹವನ್ನ ನಿಮಗೆ ತಲುಪಿಸುವ ಪುಟ್ಟ ಪ್ರಯತ್ನ ನನ್ನದು.
ಯಾಕೆಂದರೆ ಕಡು ಕಷ್ಟದಲ್ಲಿ ಬೇಯುತ್ತಲೇ ಬಾಣಲೆಯಿಂದ ಬೆಂಕಿಗೆ ಬಿದ್ದ ಬದುಕಿನ ಕಾರಣದಿಂದ ಕಾಳಜಿ,ಕಾರುಣ್ಯ ಅನ್ನುವದನ್ನ ಎಲ್ಲಿಯೂ ಕಾಣದೇ ಬದುಕಿನ ಬಂಡಿ ಎಳೆಯಲು ತಮ್ಮ ಉಸಿರೇ ತಮಗೆ ಭಾರವಾಗಿದ್ದಾಗಲೂ ದೇಹಕೆ ಉಸಿರೇ ಸದಾ ಭಾರ ಇಲ್ಲ ಆಧಾರ ಅನ್ನುವ ಹಾಡು ತೇಲಿ ಬಂದಾಗೆಲ್ಲ ತಮ್ಮ ಅಸಹಾಯಕ ತೆಯನ್ನು ನೆನೆದು ಕಣ್ಣೀರಾಗುವ,ಅದೆಷ್ಟೋ ಜೀವಗಳು ನಿಮ್ಮಿಂದ ನಿರೀಕ್ಷಿಸುವದು ಏನ್ ರಾಮಣ್ಣ ಹೇಗಿದಿರಾ? ತಾಯವ್ವ ಮಗಳ ಮದುವೆ ಅಂತಿದ್ದೆ ಅಲ್ಲ ಇದಿಟ್ಟುಕೊ ಅಂತ ನೀವು ಕೊಡುವ ಒಂದೆರಡು ಸಾವಿರ ಹಣಕ್ಕಿಂತ ನೀವು ತೋರಿಸುವ ಅಕ್ಕರೆಯನ್ನ, ನಿಮ್ಮ ಮಗ ಅಥವಾ ಮಗಳ ಹುಟ್ಟು ಹಬ್ಬಕ್ಕೆ ರಾತ್ರಿ ಕತ್ತರಿಸಿ ಹಂಚಿದ ಬಳಿಕವೂ ಉಳಿದ ಕೇಕೊಂದನ್ನು ಪ್ರಿಡ್ಜಿನಲ್ಲಿ ಇಟ್ಟು ಮರುದಿನ ಮಧ್ಯಾಹ್ನ ಮನೆ ಕೆಲಸದವಳಿಗೆ ಕೊಡುವಾಗಲೋ ದೀಪಾವಳಿ ಅಲ್ಲವಾ ಅಂತ ಕಡೆ ಪಾಡ್ಯದ ದಿನ ಮನೆಯಲ್ಲಿ ಉಳಿದ ಸ್ವೀಟು ಮತ್ತು ಹಳೆಯ ಸೀರೆಯೊಂದನ್ನೆ ಡ್ರೈ ಕ್ಲೀನ್ ಮಾಡಿಸಿ ಐರನ್ ಹಾಕಿ ನೀವು ಈಗಷ್ಟೇ ಮಾರುಕಟ್ಟೆಯಲ್ಲಿ ಕೊಂಡ ಹೊಸಬಟ್ಟೆಯ ಬಾಕ್ಸಿನಲ್ಲಿ ಹಾಕಿ ಕೊಡುವ ಹಳೆಯ ಸೀರೆಯನ್ನು ಪಡೆಯುವಾಗಲೂ ಧನ್ಯತಾ ಭಾವದಿಂದ ನಮಸ್ಕರಿಸುವ ಅದೆಷ್ಟೋ ಜನ ಬಡವರು ದುಡಿಯುತ್ತಿರುವದು ಕೇವಲ ಅವರ ಮತ್ತು ಕುಟುಂಬದವರ ಹೊಟ್ಟೆಪಾಡಿಗಾಗಿ …
ಅವರ ವೃತ್ತಿ ಯಾವುದೇ ಇರಲಿ ಅವರು ಪರೋಕ್ಷವಾಗಿಯೋ ಅ-ಪರೋಕ್ಷವಾಗಿಯೋ ಅವರೆಲ್ಲ ದುಡಿಯುತ್ತಿರುವದು ಮಾತ್ರ ನಿಮ್ಮ ಸೇವಕರಾಗಿ ಅನ್ನುವದು ನೆನಪಿರಲಿ..
ತಮ್ಮ ಮಕ್ಕಳ ಬದುಕು ತಮ್ಮಂತೆ ಕಷ್ಟದ ಕಂದಕಕ್ಕೆ ಬೀಳದಿರಲಿ ಅಂತ ಕಾನ್ವೆಂಟೊಂದಕ್ಕೆ ಸೇರಿಸಿ ಫೀಜು ಕಟ್ಟಲು ಓವರ್ ಟೈಮ್ ದುಡಿಯುವ ಸೆಕ್ಯೂರಿಟಿ ಗಾರ್ಡ ನಿಂದ ಹಿಡಿದು, ನೀವು ರಾಮು ಕಾಕಾ ಜರಾ ಝಾಡು ಪೂಚಾ ಲಗಾಲೋ,ಅರೇ ಛೋಟು ಥೋಡಾ ಕಾರ್ ವಾಶ್ ಕರದೇನಾ ಅಂತ ಹೇಳಿದಾಗೆಲ್ಲ ಜೀ ಮೇಮ್ ಸಾಬ್ ಅಥವಾ ಹ್ಮಾ ಮಾಲೀಕ್ ಅನ್ನುತ್ತ ಕೆಲಸ ಮಾಡುವ ಪರರಾಜ್ಯದ ಭಯ್ಯಾಗಳಿಂದ ಹಿಡಿದು ಹತ್ತಾರು ವರ್ಷಗಳಿಂದ ಹಬ್ಬ ಹರಿದಿನಗಳಿಗೂ ಊರಿಗೆ ಹೋಗಲಾಗದೆ ತಮ್ಮವರೊಂದಿಗೆ ಪೋನಿನಲ್ಲಿಯೂ ಮನಸ್ಸು ತುಂಬುವಷ್ಟು ಮಾತನಾಡಲಾಗದೇ ಕೆಲಸ ಮಾಡುವ ಕಾರ್ಮಿಕರು ಮತ್ತು
ಮನೆಯ ಬಾಡಿಗೆ ಕಟ್ಟಲು, ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದಾಗಲೂ ಪಾತಾಳಕ್ಕೆ ಇಳಿದು ಬೆವರು ಸುರಿಸುತ್ತಲೇ ಕಲ್ಲಿದ್ದಲು ಅಗೆಯುವ ಕಾರ್ಮಿಕರ ತನಕ ಹಸಿವಾದಾಗ ಎಲ್ಲರಂತೆ ಮೂರು ಹೊತ್ತು ತಿನ್ನಲಾಗದೇ ದಣಿವು ನೀಗಿಸಿಕೊಳ್ಳುವ ನೆಪದಲ್ಲೇ ಕೇವಲ ನೀರು ಕುಡಿದು ಹೊಟ್ಟೆ ತುಂಬಿಸಿಕೊಳ್ಳುವ ಅದೆಷ್ಟೋ ಕಾರ್ಮಿಕರಿಗೂ ಅವರದೇ ಆದ ಬದುಕು ಮತ್ತು ಭಾವನೆಗಳಿವೆ ಅನ್ನುವದು ನೆನಪಿರಲಿ..
ಇಷ್ಟಕ್ಕೂ ಅವರೆಲ್ಲ ಬಯಸುವದು ಒಂದಷ್ಟು ಅಕ್ಕರೆ ತುಂಬಿದ ನಿಮ್ಮ ನೋಟ ಮತ್ತು ನೀವು ಕೊಡಬಹುದಾದ ಮಾನವೀಯ ಕಳಕಳಿಯ ಪ್ರೀತಿಯನ್ನಷ್ಟೇ ಅಲ್ಲವಾ?
ಬಹುಮಹಡಿ ಕಟ್ಟಡದಿಂದ ಬಿದ್ದು ಸೊಂಟ ಮುರಿದುಕೊಂಡ, ಕಾರ್ಖಾನೆ ಕೆಲಸಕ್ಕೆ ಹೊರಟಾಗ ರಸ್ತೆ ದಾಟಲು ಹೋಗಿ ಅಪಘಾತವೊಂದು ಸಂಭವಿಸಿ ಅಂಗ ವೈಕಲ್ಯಕ್ಕೆ ಒಳಗಾದ,ಆಕಸ್ಮಿಕ ಬೆಂಕಿ ಅವಘಡಕ್ಕೆ ಸಿಲುಕಿ ಅರೆಬೆಂದು ಹೋಗಿ ವಿಕಾರವಾದ ಮತ್ತು ಹುಟ್ಟಿನಿಂದಲೇ ಇರಬಹುದಾದ ದೇಹದ ಊನತೆಯ ನಡುವೆಯೇ ಸ್ವಾಭಿಮಾನದಿಂದ ದುಡಿದು ಬದುಕುವ ಛಲದಂಕ ಮಲ್ಲರನ್ನ ಸಾಧ್ಯವಾದಷ್ಟು ಗೌರವದಿಂದ ಕಾಣುವ ಪ್ರಯತ್ನವನ್ನ ನಾವು ನೀವೆಲ್ಲ ಮಾಡೋಣ.
ವರ್ಷಗಳಿಂದ ದುಡಿಯುವ ಕಾರ್ಮಿಕನೊಬ್ಬ ಅಪರೂಪಕ್ಕೆ ರಜೆ ಕೇಳಿದಾಗ ಷರತ್ತು ಹಾಕುವ ಗೋಜಿಗೆ ಹೋಗದೆ ಯಾಕೆ ಏನೂ ಅಂತ ಕೇಳಿದ ಬಳಿಕ ಅವರಿಗೆ ತುರ್ತು ರಜೆಯ ಅಗತ್ಯವಿದ್ದರೂ ಇವತ್ತಿನ ಕೆಲಸ ಮುಗಿಸಿಯೇ ಹೋಗಿ ಅನ್ನುವ ಮನಸ್ಥಿತಿ ನಮ್ಮದಾಗದಿರಲಿ…
ನಮ್ಮ ನಿಮ್ಮ ವೃತ್ತಿ ಯಾವುದೇ ಇರಲಿ,ನಮ್ಮ ನಿಮ್ಮ ಘನತೆ ಎಷ್ಟೇ ದೊಡ್ಡದು ಅಥವಾ ಚಿಕ್ಕದಿರಲಿ ನಮಗಿಂತ ಕೆಳಗಿನವರನ್ನ ಪ್ರೀತಿಯಿಂದ ಮಾತನಾಡಿಸುವ ಮನಸ್ಥಿತಿ ಮಾತ್ರ ಎಂದಿಗೂ ನಮ್ಮದಾಗಿರಲಿ ಮತ್ತು ನಮ್ಮ ಅಹಂಕಾರ,ಅಥವಾ ತಾತ್ಸಾರ ಭಾವನೆಯಿಂದ ಅವರ ಕಣ್ಣಲ್ಲಿ ನಾವು ಬಿದ್ದುಹೋಗದೇ ತುಂಬಾ ಒಳ್ಳೆಯವರು ಅಂತ ಅನ್ನಿಸಿಕೊಳ್ಳಲು ಆಗದಿದ್ದರೂ ಕನಿಷ್ಟ ಪಕ್ಷ ಅವರ ಮನಸ್ಸಿನಲ್ಲಿಯೂ ನಮ್ಮ ಬಗ್ಗೆ ಗೌರವದ ಭಾವನೆ ಉಳಿಯುವಷ್ಟಾದರೂ ನಮ್ಮ ನಡೆ ನುಡಿಗಳು ಸೌಮ್ಯವಾಗಿರಲಿ ಅಂತ ಆಶಿಸುತ್ತ ವಿಶ್ವ ಕಾರ್ಮಿಕ ದಿನದ ಹಾರ್ದಿಕ ಶುಭಾಶಯಗಳು…
ದೀಪಕ ಶಿಂಧೇ
9482766018

