ಇತ್ತೀಚೆಗೆ ನಡೆದ ಒಂದು ಘಟನೆಯಲ್ಲಿ ರಾಜ್ಯದ ರೈತರು ಹೈದರಾಬಾದ್ ನ ಉದ್ಯಮಿಯೊಬ್ಬನಿಗೆ ಮೆಕ್ಕೆ ಜೋಳ ಮಾರಾಟ ಮಾಡಿ ಎಷ್ಟೋ ದಿನಗಳಾದರೂ ಹಣ ಸಿಗಲಾರದೇ ಪೊಲೀಸ್ ದೂರು ಕೊಟ್ಟರೆ ಸಚಿವ ಜಮೀರ ಅಹ್ಮದ ಅವರು ಆ ಉದ್ಯಮಿ ತಮ್ಮ ಕೋಮಿನವನು ಎಂದು ಅರಿತು ದೂರು ಪಡೆದ ಪಿಎಸ್ಐ ಗೆ ಫೋನ್ ಮಾಡಿ ಸ್ವಲ್ಪ ಸಹಕರಿಸಿ ಉದ್ಯಮಿಯನ್ನು ಬಚಾವ್ ಮಾಡಿ ಎಂದಿರುವ ಆಡಿಯೋ ಬಹಿರಂಗವಾಗಿತ್ತು. ಸಚಿವರಿಗೆ ತಮ್ಮ ಕೋಮಿನ ಉದ್ಯಮಿಯೇ ಹೆಚ್ಚಾದನು ಹೊರತು ಉತ್ತಿ ಬಿತ್ತಿ ಬೆಳೆ ತೆಗೆದ ರೈತನ ಹಣ ಕೊಡಿಸಬೇಕು ಎಂದೆನಿಸಲಿಲ್ಲ. ಕೋಟಿಗಟ್ಟಲೇ ಹಣ ಸಿಗದೇ ಕಣ್ಣೀರು ಹಾಕುತ್ತ ಬೀದಿಗೆ ಇಳಿದ ರೈತರ ಪರವಾಗಿ ಮುಖ್ಯಮಂತ್ರಿಗಳಿಂದಾಗಲೀ, ಗೃಹ ಮಂತ್ರಿಗಳಿಂದಾಗಲೀ, ರೈತನ ಉದ್ಧಾರದ ಬೊಗಳೆ ಬಿಡುವ ಯಾವುದೇ ಸಚಿವನಿಂದಾಗಲೀ ಒಂದೇ ಒಂದು ಸಾಂತ್ವನದ, ಭರವಸೆಯ ಮಾತು ಬರಲಿಲ್ಲ.

ಇತ್ತ ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳ ರೈತರು ಪ್ರಸಕ್ತ ಕಬ್ಬು ನುರಿಸುವ ಹಂಗಾಮನ್ನು ಆರಂಭಿಸುವ ಮೊದಲು ಕಬ್ಬಿಗೆ ದರ ನಿಗದಿ ಮಾಡಬೇಕೆಂದು ಆಗ್ರಹಿಸುತ್ತ ಬೀದಿಗೆ ಇಳಿದಿದ್ದಾರೆ. ಯಾವ ಕಾರ್ಖಾನೆಯವರಾಗಲೀ, ರಾಜಕಾರಣಿಗಳಾಗಲೀ ತುಟಿ ಬಿಚ್ಚುತ್ತಿಲ್ಲ. ಕಬ್ಬು ಖರೀದಿಸಿ ಸಕ್ಕರೆ, ಎಥೆನಾಲ್, ಸ್ಪಿರಿಟ್ ಸೇರಿದಂತೆ ಅನೇಕ ಉಪ ಉತ್ಪನ್ನಗಳಿಂದ ಸಾಕಷ್ಟು ಲಾಭ ಗಳಿಸುವ ಉದ್ಯಮಿಗಳು ರೈತನಿಗೆ ನ್ಯಾಯವಾದ ಬೆಲೆ ನೀಡಬೇಕಾದ ಪ್ರಶ್ನೆ ಬಂದಾಗ ತುಟಿಗೆ ಹೊಲಿಗೆ ಹಾಕಿಕೊಳ್ಳುತ್ತಾರೆ.
ಹಾಗೆ ನೋಡಿದರೆ ಬೆಳಗಾವಿ ಜಿಲ್ಲೆಯಲ್ಲಿ ಪ್ರಭಾವಿ ಸಚಿವರಾದ ಸತೀಶ ಜಾರಕಿಹೊಳಿಯವರ ಎರಡು ಕಾರ್ಖಾನೆಗಳು, ಲಕ್ಷ್ಮೀ ಹೆಬ್ಬಾಳಕರ ನೇತೃತ್ವದ ಹಾಗೂ ಬಾಲಚಂದ್ರ ಜಾರಕಿಹೊಳಿಯವರ ನೇತೃತ್ವದ ಸಹಕಾರಿ ಕಾರ್ಖಾನೆಗಳಿ, ರಮೇಶ ಜಾರಕಿಹೊಳಿ, ಪ್ರಭಾಕರ ಕೋರೆ, ರಮೇಶ ಕತ್ತಿ, ಶಾಮನೂರು ಶಿವಶಂಕರಪ್ಪ ಬಾಗಲಕೋಟೆಯ ಮುಧೋಳದಲ್ಲಿ ಮುರುಗೇಶ ನಿರಾಣಿ, ಗುಡಗುಂಟಿ ಹೀಗೆ ಅನೇಕ ಘಟಾನುಘಟಿಗಳ ಸಕ್ಕರೆ ಕಾರ್ಖಾನೆಗಳಿದ್ದರೂ ರೈತನ ಕಬ್ಬಿಗೆ ಬೆಲೆ ನಿಗದಿ ಮಾಡಬೇಕು, ಬಹಿರಂಗವಾಗಿ ಅದನ್ನು ಘೋಷಿಸಬೇಕೆಂಬ ಮನಸು ಮಾಡುತ್ತಿಲ್ಲ ಹೋಗಲಿ ಪ್ರತಿಭಟನಾ ನಿರತ ರೈತರ ಜೊತೆ ಮಾತನಾಡುವ ಸೌಜನ್ಯವನ್ನೂ ಯಾವ ರಾಜಕಾರಣಿಗಳೂ ಪ್ರದರ್ಶಿಸುತ್ತಿಲ್ಲ.
   ಏನೇ ಆದರೂ ರೈತನಿಗೆ ಇಂಥ ಪರಿಸ್ಥಿತಿ ಬರಬಾರದು. ಮೊದಲಿನಿಂದಲೂ ಭಾರತದಲ್ಲಿ ರೈತನಿಗೆ ಹಾಗೂ ಸೈನಿಕನಿಗೆ ಅತ್ಯುನ್ನತ ಸ್ಥಾನ ಇದೆಯಾದರೂ ಅತ್ಯಂತ ಹೀನಾಯ ಸ್ಥಿತಿಯಲ್ಲಿರುವುದು ಇವರಿಬ್ಬರೇ. ಸರ್ಕಾರಗಳು ತನ್ನ ಕಲ್ಯಾಣ ಮಾಡುತ್ತವೆಯೆಂಬ ನಿರೀಕ್ಷೆಯಲ್ಲಿ ಹಣೆಗೆ ಕೈ ಹಚ್ಚಿಕೊಂಡು ದಾರಿ ನೋಡುವ ರೈತನ ನೆರವಿಗೆ ಧಾವಿಸುವ ಪ್ರಾಮಾಣಿಕ ಪ್ರಯತ್ನವನ್ನು ಸರ್ಕಾರಗಳು ಮಾಡಬೇಕು. ಯಾಕೆಂದರೆ, ಒಂದು ದೇಶದಲ್ಲಿ, ರಾಜ್ಯದಲ್ಲಿ ರೈತ ಬೀದಿಗೆ ಇಳಿದು ಹೋರಾಟ ಮಾಡುವ ಪರಿಸ್ಥಿತಿ ಬಂದಿದೆಯೆಂದರೆ ಅದು ಸರ್ಕಾರಕ್ಕೆ, ಆಡಳಿತಕ್ಕೆ ಆಗುವ ಘೋರ ಅವಮಾನ. ಪ್ರಸಕ್ತ ಮೇಲಿನ ಎರಡು ಪ್ರಕರಣಗಳಲ್ಲಿ ಕಣ್ಮುಚ್ಚಿಕೊಂಡು ಕುಳಿತಿರುವ ಆಳುಗರ, ನೇತಾರರ ನಡತೆ ಯಾವ ರೀತಿಯಲ್ಲಿಯೂ ಪ್ರಶಂಸನೀಯವಲ್ಲ.

ಉಮೇಶ ಬೆಳಕೂಡ
ತಾಲೂಕಾ ಅಧ್ಯಕ್ಷರು
ಭಾರತೀಯ ಕಿಸಾನ್ ಸಂಘ



