ಮೂಡಲಗಿ: ‘ಸಮಾಜದ ಎಲ್ಲ ಜನರಿಗೆ ಶಿಕ್ಷಣ ದೊರಕಿಸಿ ಕೊಡುವ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳು ಬೆಳೆಯಬೇಕು. ಸರ್ಕಾರ ಮತ್ತು ಸಮುದಾಯದ ಜನರು ಕೈಜೋಡಿಸಿದರೆ ಸರ್ಕಾರಿ ಶಾಲೆಗಳು ಖಂಡಿತವಾಗಿ ಬೆಳೆಯುತ್ತವೆ’ ಎಂದು ಅಪೆಕ್ಸ್ ಬ್ಯಾಂಕ್ ನಿರ್ದೇಶಕ ರಾಹುಲ ಸತೀಶ ಜಾರಕಿಹೊಳಿ ಹೇಳಿದರು.
ತಾಲ್ಲೂಕಿನ ಮುಸಗುಪ್ಪಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಮಕ್ಕಳಿಗೆ ಒಳ್ಳೆಯ ಗುಣಮಟ್ಟದ ಶಿಕ್ಷಣ ಕೊಡುವುದರ ಮೂಲಕ ಅವರನ್ನು ಬೆಳೆಸುವುದು ಅವಶ್ಯವಿದೆ. ಮುಸಗುಪ್ಪಿ ಗ್ರಾಮದ ಜನರು ಸರ್ಕಾರಿ ಶಾಲೆಯನ್ನು ಬೆಳೆಸಿದ್ದು ಶ್ಲಾಘನೀಯವಾಗಿದೆ ಎಂದರು.
ಶಾಲೆಯ ನವೀಕೃತ ಶಾಲಾ ಕಟ್ಟಡವನ್ನು ಉದ್ಘಾಟಿಸಿ ಯುವ ಧುರೀಣ ಸವೋತ್ತಮ ಜಾರಕಿಹೊಳಿ ಮಾತನಾಡಿ, ಒಂದು ಮಗು ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಂಡು ಸಮಾಜದಲ್ಲಿ ಸಾಧನೆ ಮಾಡಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದರು.
ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರು ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡುವ ಮೂಲಕ ಪ್ರತಿ ಮಗು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವುದು ಅವರ ಧ್ಯೇಯವಾಗಿದೆ. ಮೂಡಲಗಿ ವಲಯದಲ್ಲಿ ೩ ಹೊಸ ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ೩ ವರ್ಷಗಳ ವರೆಗೆ ಅದರ ಎಲ್ಲ ವೆಚ್ಚಗಳನ್ನು ಶಾಸಕರು ವಹಿಸಿಕೊಂಡಿದ್ದಾರೆ. ಅತಿಥಿ ಶಿಕ್ಷಕರ ಗೌರವ ಧನವನ್ನು ಸಹ ತಮ್ಮ ತಮ್ಮ ಹಣದಿಂದ ನಿಭಾಯಿಸಿರುವುದು ರಾಜ್ಯದಲ್ಲಿಯೇ ಮಾದರಿಯಾಗಿದೆ ಎಂದರು.
ಮುಖ್ಯ ಅತಿಥಿ ಚಿಕ್ಕೋಡಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸೀತಾರಾಮು ಆರ್.ಎಸ್. ಮಾತನಾಡಿ ಮಕ್ಕಳಲ್ಲಿ ಸ್ವಾಭಿಮಾನ ಬೆಳೆಸುವುದು, ಬಡತವನ್ನು ಹೇಗೆ ಮೆಟ್ಟಿ ನಿಲ್ಲಬೇಕು ಎನ್ನುವುದನ್ನು ಕಲಿಸಿಕೊಡೋದು ಸರ್ಕಾರಿ ಶಾಲೆಗಳು ಮಾತ್ರ ಎಂದರು. ಸರ್ಕಾರಿ ಶಾಲೆಗಳು ಉಳಿಯಬೇಕು ಮತ್ತು ಸಮುದಾಯ ಜನರು ಶಾಲೆಗಳನ್ನು ಬೆಳೆಸಬೇಕು ಎಂದರು.
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಶಿಕ್ಷಣದೊಂದಿಗೆ ಸಂಸ್ಕೃತಿ ಮತ್ತು ಸಂಸ್ಕಾರದಲ್ಲಿಯೂ ಮುಂದೆ ಇರುವುದು ವಿಶೇಷವಾಗಿದೆ. ಇಲ್ಲಿ ಒಳ್ಳೆತನ, ಶ್ರಮತೆ, ಪ್ರಾಮಾಣಿಕತೆ, ಪರೋಪಕಾರದ ಸಹಭಾಗಿತ್ವದಲ್ಲಿಯೂ ಮುಂದೆ ಇರುವುದು ಅಭಿಮಾನಪಡುವಂತಿದೆ ಎಂದರು.
ಸಾಹಿತಿ ಡಾ. ವಿ.ಎಸ್. ಮಾಳಿ ಅವರು ಮಾತನಾಡಿ ಗ್ರಾಮದಲ್ಲಿ ಒಂದು ಶಾಲೆಯನ್ನು ಕಟುವುದು ಎಂದರೆ ೧೨ನೇ ಶತಮಾನದಲ್ಲಿ ಬಸವಣ್ಣನವರು ಕಟ್ಟಿದ್ದ ಅನುಭವ ಮಂಟಪಕ್ಕೆ ಸಮನಾದದ್ದು. ಶಾಲೆ ನಿರ್ಮಿಸುವುದು ಪುಣ್ಯದ ಕೆಲಸವಾಗಿದೆ ಎಂದರು.
ಶಾಲೆಗೆ ಭೂದಾನ ಮಾಡಿರುವ ದಿ. ಸಿದ್ದನಗೌಡ ಪಾಟೀಲ ಅವರ ಚಿರಂಜೀವಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಬಾಳಗೌಡ ಎಸ್. ಪಾಟೀಲ, ಶಿವಾನಂದ ಪಾಟೀಲ, ರುಕ್ಮಿಣಿ ರಾಮನಗೌಡ ಪಾಟೀಲ ಹಾಗೂ ಗ್ರಾಮದ ಹಿರಿಯ ವ್ಯಕ್ತಿ ಕಲ್ಲಪ್ಪ ಮಳಲಿ ಹಾಗೂ ಸಾಧಕರನ್ನು ಸನ್ಮಾನಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವರಾಜ ಭುಜನ್ನವರ ಅಧ್ಯಕ್ಷತೆವಹಿಸಿದ್ದರು.
ಸಾನ್ನಿಧ್ಯವಹಿಸಿದ್ದ ಅರಭಾವಿಯ ದುರದುಂಡೀಶ್ವರ ಮಠದ ಗುರುಬಸವಲಿಂಗ ಸ್ವಾಮೀಜಿ, ಸುಣಧೋಳಿಯ ಶಿವಾನಂದ ಸ್ವಾಮೀಜಿ, ಬೈಲಹೊಂಗಲದ ಮೂರುಸಾವಿರಮಠದ ಪ್ರಭು ನೀಲಕಂಠ ಸ್ವಾಮೀಜಿ ಆಶೀರ್ವಚನ ನೀಡಿದರು.
ವೇದಿಕೆಯಲ್ಲಿ ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಭರಮಣ್ಣ ಉಪ್ಪಾರ, ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಅಶೋಕ ಮಲಬನ್ನವರ, ತಾಲ್ಲೂಕು ಪಂಚಾಯಿತಿ ಇಒ ಎಫ್.ಜಿ. ಚಿನ್ನನವರ, ಪಿಡಿಒ ಆರ್.ಎನ್. ಗುಜನಟ್ಟಿ, ಸಾಹಿತಿ ಬಾಲಶೇಖರ ಬಂದಿ, ಎಸ್‌ಡಿಎಂಸಿ ಅಧ್ಯಕ್ಷ ಬಾಳಗೌಡ ಪಾಟೀಲ, ಶಿಕ್ಷಣ ಸಂಯೋಜಕ ನಾಗರಾಜ ಗಡಾದ, ಶಿಕ್ಷಕರ ಸಂಘದ ಎಂ.ಜಿ. ಮಾವಿನಗಿಡದ, ಚನ್ನಪ್ಪ ಕುಂಬಾರ, ಗೋವಿಂದ ಸಣ್ಣಕ್ಕಿ, ಸಿಆರ್‌ಪಿ ಸಿದ್ರಾಮ್ ದ್ಯಾಗಾನಟ್ಟಿ ಇದ್ದರು.
ಸಂಗಮೇಶ ಸೊನ್ನದ ಸ್ವಾಗತಿಸಿದರು, ಶಾಲೆಯ ಮುಖ್ಯ ಶಿಕ್ಷಕ ಶಂಕರ ಗಾಡವಿ ಪ್ರಾಸ್ತಾವಿಕ ಮಾತನಾಡಿದರು, ರಮೇಶ ಮಿರ್ಜಿ ನಿರೂಪಿಸಿದರು, ಈಶ್ವರ ಗಾಡವಿ ವಂದಿಸಿದರು.
ಸಮಾರಂಭದ ಪೂರ್ವದಲ್ಲಿ ಕುಂಭ, ಆರತಿ, ವಿವಿಧ ವಾದ್ಯಗಳೊಂದಿಗೆ ಮುಖ್ಯ ರಸ್ತೆಯಿಂದ ಶ್ರೀಗಳನ್ನು, ಅತಿಥಿಗಳನ್ನು ವೇದಿಕೆ ಬರಮಾಡಿಕೊಂಡರು.

