ಬೆಂಗಳೂರಿನ ಜೈನ್ (ಡೀಮ್ಡ್ -ಟು -ಬಿ ಯೂನಿವರ್ಸಿಟಿ) ಯ ಜಯನಗರದ ಜೆ ಜಿ ಐ ನಾಲೇಡ್ಜ್ ಕ್ಯಾಂಪಸನ ಕನ್ನಡ ಭಾಷಾ ವಿಭಾಗವು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ನಾಡಿನ ಖ್ಯಾತ ಹನಿಗವಿಗಳು, ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿ ಪುರಸ್ಕೃತ ಎಚ್ .ದುಂಡಿರಾಜ್ ಅವರು ಮಾತನಾಡುತ್ತಾ “ಕನ್ನಡ ನುಡಿ ಸೊಬಗು ಭಾರತೀಯ ಇತರ ಭಾಷೆಗಳಿಗಿಂತ ಶ್ರೇಷ್ಠವಾದದ್ದು. ಇಲ್ಲಿ ಕವಿ ರಾಜಮಾರ್ಗಕಾರ ಹೇಳಿದಂತೆ ಅಕ್ಷರಭ್ಯಾಸ ಮಾಡದವರು ಕಾವ್ಯವನ್ನು ರಚಿಸುವ ಶಕ್ತಿ ಹೊಂದಿದ್ದಾರೆ ಎನ್ನುವುದಕ್ಕೆ ಶ್ರೀಮಂತಿಕೆಯಿಂದ ಕೂಡಿದ ಜನಪದ ಸಾಹಿತ್ಯವೇ ಸಾಕ್ಷಿಯಾಗಿದೆ. ಮೇಲಾಗಿ ಸಮಾಜದ ಸಮಸ್ತರು ವಿವೇಕದ ಮಾತುಗಳನ್ನು ಅರ್ಥೈಸಿಕೊಳ್ಳುವಂತ ಶಕ್ತಿಯನ್ನು ಹೊಂದಿದ್ದಾರೆ. ಕನ್ನಡದಲ್ಲಿ ಏನು ಗೀಚಿದರು ಅದು ಶ್ರೀಗಂಧದಂತೆ ಪರಿಮಳ ಬೀರುತ್ತದೆ ಬಗೆ ಬಗೆಯ ಸಾಹಿತ್ಯವಾಗುತ್ತದೆ ಎಂಬ ದಿನಕರ ದೇಸಾಯಿಯವರ ಮಾತನ್ನು ಸ್ಮರಿಸಿದರು.
ಕನ್ನಡಿಗರ ಹಾಸ್ಯ ಪ್ರಜ್ಞೆ ಶ್ರೀಮಂತವಾದದ್ದು.ಅವರಿಗೆ ಪದಗಳ ಕೂಡುವಿಕೆಯಿಂದ ಉಂಟಾಗುವ ಅರ್ಥ ಮತ್ತು ಧ್ವನಿಗಳು, ಪದಗಳ ವಿಭಜನೆಯಿಂದ ಉಂಟಾಗುವ ಅರ್ಥ ಮತ್ತು ಧ್ವನಿಗಳನ್ನು ಅರ್ಥೈಸುವ ಸಾಮರ್ಥ್ಯವಿದೆ. ಹಾಗಾಗಿ ಕನ್ನಡಿಗರ ಈ ಸಹೃದಯತೆಯಿಂದ ನಾನು ದೀರ್ಘಕಾಲಕಾವ್ಯ ರಚಿಸುವ ಕಾಯಕದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಿದ್ದು ಹೆಮ್ಮೆ ಎನಿಸುತ್ತದೆ ಎಂದು ಅಭಿಮಾನವನ್ನು ವ್ಯಕ್ತ ಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದ ಭಾಷಾ ವಿಭಾಗದ ಮುಖ್ಯಸ್ಥರಾದ ಪ್ರೊ.ಶ್ರೀಧರ್ ಎಂ ಕೆ ಕನ್ನಡದ ಮಹಾನ್ ಸಾಹಿತಿಗಳ ಸಾಲಿಗೆ ದುಂಡಿರಾಜ ಅವರು ತಮ್ಮ ಹಾಸ್ಯ ಹನಿಕವಿತೆಗಳ ಮೂಲಕ ಸರಿಸಾಟಿಯಾಗಿ ನಿಲ್ಲಬಲ್ಲ ಶಕ್ತಿಯನ್ನು ಹೊಂದಿದ್ದಾರೆ. ಇಂದಿನ ಯುವ ಜನತೆ ಇಂಥ ಹಿರಿಯರ ಪ್ರಭಾವಕ್ಕೆ ಪಾತ್ರರಾಗಿ ಬರವಣಿಗೆ ಎಂಬ ಸೃಜನ ಶೀಲ ಶಕ್ತಿಯನ್ನು ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.ಆರಂಭದಲ್ಲಿ ಕುಮಾರಿ ಅಮೂಲ್ಯ ಪ್ರಾರ್ಥನೆಯನ್ನು ಮಾಡಿದರು.
ಕನ್ನಡ ಭಾಷಾ ವಿಭಾಗದ ಸಂಯೋಜಕರಾದ ಶ್ರೀಮತಿ ರಾಜೇಶ್ವರಿ ವೈ ಎಂ ಸ್ವಾಗತಿಸಿದರು.ವಿವಿಧ ವಿಭಾಗದ ವಿದ್ಯಾರ್ಥಿಗಳಿಂದ ವಿವಿಧ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಪ್ರಾಧ್ಯಾಪಕರಾದ ಡಾ. ರಾಜಕುಮಾರ್ ಶ್ರೀ ನಾಗೇಂದ್ರ ಡಾ. ಮೀರಾ ಮೊದಲಾದವರು ಪಾಲ್ಗೊಂಡಿದ್ದರು.

