ಮೈಸೂರು ನಗರದಲ್ಲಿ ಆಂಗ್ಲ ಭಾಷಾ ನಾಮಫಲಕಗಳ ಹಾವಳಿ : ಮುಖ್ಯಮಂತ್ರಿಗಳಿಗೆ ಭೇರ್ಯ ರಾಮಕುಮಾರ್ ದೂರು

0
251

 

ಮೈಸೂರಿನಲ್ಲಿ ಆಂಗ್ಲ ಭಾಷಾ ನಾಮಫಲಕಗಳ ಹಾವಳಿ ಮಿತಿಮೀರಿರುವ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ  ದೂರು ಪತ್ರ ಬರೆದಿರುವ ಕನ್ನಡ  ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಹಾಗೂ ಹಿರಿಯ ಪತ್ರಕರ್ತರಾದ ಡಾ. ಭೇರ್ಯ ರಾಮಕುಮಾರ್  ಕನ್ನಡ ಬಗ್ಗೆ ಅಸಡ್ಡೆ ತೋರುತ್ತಿರುವ  ಸಂಸ್ಥೆಗಳ ವಿರುದ್ಧ ಶಿಸ್ತು ಕ್ರಮ ಕೈ ಗೊಳ್ಳಬೇಕೆಂದು ಒತ್ತಾಯ ಮಾಡಿದ್ದಾರೆ.

ಮೈಸೂರು ನಗರ ಇತಿಹಾಸದ ಕಾಲದಿಂದಲೂ ಸಾಂಸ್ಕೃತಿಕ ಕೇಂದ್ರ. ಕನ್ನಡ ಸಾಹಿತ್ಯ, ಸಂಸ್ಕೃತಿ, ಕಲೆಗಳಿಗೆ ಮೈಸೂರು ರಾಜರ ಆಶ್ರಯ ಅಪಾರ. ಇಂದಿಗೂ ಸಹ ಆಡಳಿತಾತ್ಮಕವಾಗಿ ಬೆಂಗಳೂರು ಕರ್ನಾಟಕದ  ರಾಜಧಾನಿಯಾದರೂ ಮೈಸೂರು ರಾಜ್ಯದ ಸಾಂಸ್ಕೃತಿಕ ರಾಜಧಾನಿ ಎಂದೇ ಪ್ರಸಿದ್ದಿ ಪಡೆದಿದೆ. ಮೈಸೂರಿನ ಯದು ವಂಶದ ದೊರೆ ನಾಲ್ವಡಿ ಕೃಷ್ಣರಾಜ  ಒಡೆಯರ್ ಅವರು ಕನ್ನಡ ಸಾಹಿತ್ಯ ಪರಿಷತ್ ಸ್ಥಾಪಿಸಿದರು. ಕನ್ನಡ ನಾಡು ನುಡಿಗೆ  ಮಹತ್ವದ ಸ್ಥಾನ ನೀಡಿದರು. ಇದೀಗ ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿ ಐವತ್ತು ವರ್ಷಗಳು ತುಂಬಿವೆ. ಕರ್ನಾಟಕ ಸುವರ್ಣ ವರ್ಷಾಚರಣೆ ಕಾರ್ಯಕ್ರಮಗಳು ರಾಜ್ಯದ ಎಲ್ಲೆಡೆ ನಡೆದಿವೆ.ಸುವರ್ಣ ಕರ್ನಾಟಕ ಆಚರಣೆಗೆ   ಕಪ್ಪು ಚುಕ್ಕೆ ಇಟ್ಟಂತೆ ಮೈಸೂರಿನ ಹಲವು ಪ್ರಮುಖ ಪ್ರದೇಶಗಳಲ್ಲಿ ಐ ಲವ್ ಮೈಸೂರ್ ಎಂಬಂತೆ ಆಂಗ್ಲಭಾಷಾ ಸೆಲ್ಫಿ ನಾಮಫಲಕಗಳು  ರಾರಾಜಿಸುತ್ತಿವೆ ಎಂದವರು ದೂರಿದ್ದಾರೆ.

ಮೈಸೂರಿನ ವಿಮಾನ ನಿಲ್ದಾಣದಲ್ಲಿ  ಮೈಸೂರಿನ ಘನತೆ ಸಾರುವ ಸೆಲ್ಫಿ ನಾಮಫಲಕ ಆಂಗ್ಲ ಭಾಷೆಯಲ್ಲಿದೆ. ಅದೇ ರೀತಿ ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು  ಆಗಮಿಸುವ ಮೈಸೂರು ರೈಲು ನಿಲ್ದಾಣದ ಆವರಣದಲ್ಲಿ ಐ ಲವ್  ಮೈಸೂರು ಎಂಬ ಆಂಗ್ಲ ಭಾಷೆಯ ಸೆಲ್ಫಿ ನಾಮಫಲಕ ಹಾಕಲಾಗಿದೆ. ಇಲ್ಲಿ ಕನ್ನಡ ಭಾಷೆಗೆ ಅಪಮಾನ ಮಾಡಲಾಗಿದೆ. ಸದರಿ ಸೆಲ್ಫಿ ನಾಮಫಲಕದ ಜೊತೆ ನಮ್ಮ ಪ್ರೀತಿಯ ಮೈಸೂರು ಎಂಬಂತೆ ಕನ್ನಡ ಭಾಷಾ ನಾಮಫಲಕ ಅಳವಡಿಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸೂಚಿಸಿದ್ದರ ರೈಲ್ವೆ ಅಧಿಕಾರಿಗಳು  ಈ ಬಗ್ಗೆ ಬೇಜವಾಬ್ದಾರಿ ತೋರಿಸುತ್ತಿದ್ದಾರೆ ಎಂದು ಭೇರ್ಯ ರಾಮಕುಮಾರ್ ತಿಳಿಸಿದ್ದಾರೆ.

ಇನ್ನು ಮೈಸೂರು ದಸರಾ ವಸ್ತುಪ್ರದರ್ಶನದ ಆವರಣದಲ್ಲಿ  ಐ ಲವ್ ದಸರಾ ಎಕ್ಸ್ಪೋ ಎಂಬ ಆಂಗ್ಲ ಸೆಲ್ಫಿ ನಾಮಫಲಕ ಅಳವಡಿಸಲಾಗಿದೆ. ಈ ಬಗ್ಗೆ ಹಲವು ಕನ್ನಡ ಸಂಘ ಸಂಸ್ಥೆಗಳು ಪ್ರತಿಭಟಿ ಸಿದರೂ ದಸರಾ  ವಸ್ತುಪ್ರದರ್ಶನದ ಅಧಿಕಾರಿಗಳು ಜನ ಕಿವುಡು ಪ್ರದರ್ಶಿಸುತ್ತಿದ್ದಾರೆ ಎಂದವರು ಆರೋಪಿಸಿದ್ದಾರೆ.

ಅದೇ ರೀತಿ ಮೈಸೂರಿನ ಚಾಮರಾಜ ಮೊಹಲ್ಲಾ, ಲಕ್ಷ್ಮಿಪುರಂ ಉದ್ಯಾನವನ ಸೇರಿದಂತೆ ವಿವಿಧ ಬಡಾವಣೆ ಗಳಲ್ಲಿ ಐ ಲವ್ ಮೈಸೂರು ಆಂಗ್ಲ ನಾಮಫಲಕಗಳು ನಿರಂತರವಾಗಿ ತಲೆ ಎತ್ತಿ ಕನ್ನಡಕ್ಕೆ ಅವಮಾನ ಮಾಡುತ್ತಿವೆ. ಸುವರ್ಣ ಕರ್ನಾಟಕ ವರ್ಷಾಚರಣೆ ಸಂದರ್ಭದಲ್ಲಿ  ಕನ್ನಡಕ್ಕೆ  ಉಂಟಾಗುತ್ತಿರುವ ಈ ಅವಮಾನವನ್ನು ನಿವಾರಿಸಬೇಕಾಗಿದೆ ಎಂದು ಅವರು ಒತ್ತಾಯಿಸಿದ್ದಾರೆ.

ಮೈಸೂರು ನಗರದ ಹೃದಯ ಭಾಗದಲ್ಲಿ ಇರುವ ಹಲವು ಖಾಸಗಿ ಉದ್ಯಮಗಳು, ಕೈಗಾರಿಕಾ ಕೇಂದ್ರಗಳು, ವಾಣಿಜ್ಯ ಮಳಿಗೆಗಳು ಹಾಗೂ ಮಾಲ್ ಗಳಲ್ಲಿ ಆಂಗ್ಲ  ಭಾಷಾ ನಾಮಫಲಕಗಳ  ಹಾವಳಿ ತೀವ್ರವಾಗಿದೆ. ಹಾಸನ ರಸ್ತೆಯಲ್ಲಿ ಇರುವ ಸೆಂಟ್ ಜೋಸೆಫ್  ಶಾಲೆಯ ಬಳಿ ಹಾಕಿರುವ ಎಲ್ ಇ ಡಿ ಜಾಹಿರಾತು ಫಲಕದಲ್ಲಿ ಯಾವಾಗಲೂ ಆಂಗ್ಲ  ಭಾಷೆಯ ಕಾರ್ಯಕ್ರಮಗಳನ್ನೇ ಪ್ರಸಾರ ಮಾಡಲಾಗುತ್ತಿದೆ. ಅದೇ ರೀತಿ ಮುಕ್ತ ವಿಶ್ವವಿದ್ಯಾ ನಿಲಯದ ಮುಂಭಾಗದಲ್ಲಿ ಕೆ. ಎಸ್. ಓ. ಯು ಎಂಬಂತೆ ಆಂಗ್ಲ ಭಾಷಾ ಅಕ್ಷರಗಳ ನಾಮಫಲಕ ಇದೆ. ಈ ಎರಡೂ ಸಂಸ್ಥೆಗಳಲ್ಲೂ ಕನ್ನಡ  ಭಾಷೆ ಬಳಕೆ ಬಗ್ಗೆ ಬೇಜವಾಬ್ದಾರಿ ತೋರಿಸಲಾಗಿದೆ. ಹಲವು ಖಾಸಗಿ ವಿದ್ಯಾ ಸಂಸ್ಥೆ ಗಳೂ ಸಹ ತಮ್ಮ ಸಂಸ್ಥೆಯ ನಾಮಫಲಕಗಳಲ್ಲಿ ಕನ್ನಡ ಭಾಷೆ ಬಳಕೆ ಬಗ್ಗೆ  ಬೇಜವಾಬ್ದಾರಿ ತೋರುತ್ತಿವೆ.ಕರ್ನಾಟಕ ಸುವರ್ಣ ಮಹೋತ್ಸವ ಆಚರಣೆ ಸಂದರ್ಭದಲ್ಲಿ ಕನ್ನಡ ಭಾಷೆ ಬಳಸದಿರುವ ನಾಮಫಲಕಗಳ ವಿರುದ್ದ, ಕನ್ನಡದ ಬಗ್ಗೆ  ಅಸಡ್ಡೆ ತೋರುತ್ತಿರುವ ಸಂಸ್ಥೆಗಳ ವಿರುದ್ಧ ಕನ್ನಡ ಅಭಿವೃದ್ಧಿ  ಪ್ರಾಧಿಕಾರವು ಶಿಸ್ತು ಕ್ರಮ ಕೈಗೊಳ್ಳಬೇಕು. ಅಂತಹ ಸಂಸ್ಥೆಗಳು ಕಡ್ಡಾಯವಾಗಿ ಕನ್ನಡ ನಾಮಫಲಕ ಬಳಸುವಂತೆ  ಆದೇಶ ನೀಡಬೇಕು  ಎಂದವರು ಅಗ್ರಹಪಡಿಸಿದ್ದಾರೆ.