ಮೂಡಲಗಿ: ರಕ್ತದಾನ ಮಾಡುವುದರಿಂದ ದಾನಿಯ ಆರೋಗ್ಯ ವೃದ್ಧಿಯಾಗುವುದಲ್ಲದೆ ಜೀವ ಉಳಿಸಿದ ಸಾರ್ಥಕ ಭಾವ ದೊರೆಯುವುದು’ ಎಂದು ಬೆಳಗಾವಿಯ ರಕ್ತ ಭಂಡಾರದ (ಬಿಮ್ಸ್) ಡಾ. ಶಕುಂತಲಾ ಪಾಟೀಲ ಹೇಳಿದರು.
ಇಲ್ಲಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬೀಮ್ಸ್, ಲಯನ್ಸ್ ಕ್ಲಬ್ ಆಫ್ ಮೂಡಲಗಿ ಪರಿವಾರ ಹಾಗೂ ಬಿಜೆಪಿ ಅರಭಾವಿ ಘಟಕ ಇವುಗಳ ಸಹಯೋಗದಲ್ಲಿ ಬುಧವಾರ ಏರ್ಪಡಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ರಕ್ತದಾನದಿಂದ ರಕ್ತದ ಒತ್ತಡ ಮತ್ತು ಹೃದಯ ಸಂಬಂಧಿ ಕಾಯಲೆಗಳು ಕಡಿಮೆಯಾಗುತ್ತವೆ ಎಂದರು.
ಲಯನ್ಸ್ ಕ್ಲಬ್ ಪರಿವಾರದ ಅಧ್ಯಕ್ಷ ಬಾಲಶೇಖರ ಬಂದಿ ಮಾತನಾಡಿ, ರಕ್ತದಾನವು ಶ್ರೇಷ್ಠ ದಾನವಾಗಿದೆ. ಜಾತಿ, ಧರ್ಮ, ಮೇಲು, ಕೀಳು ಎನ್ನುವುದು ರಕ್ತದಾನದಲ್ಲಿ ಇರುವುದಿಲ್ಲ. ರಕ್ತದಾನ ಮಾಡುವುದು ಸಮಾಜಕ್ಕೆ ನೀಡುವ ಬಹುದೊಡ್ಡ ಕಾಣಿಕೆಯಾಗಿದೆ ಎಂದರು.
ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ. ಭಾರತಿ ಕೋಣಿ ಮಾತನಾಡಿ, ಶಿಬಿರದ ಯಶಸ್ಸಿಯಲ್ಲಿ ವಿವಿಧ ಸಂಘಟನೆಗಳ ಸಹಕಾರವು ಪ್ರಮುಖವಾಗಿದೆ. ಇಂಥ ಆರೋಗ್ಯ ಸಂಬಂಧಿ ಶಿಬಿರಗಳಿಗೆ ಸಂಘ, ಸಂಸ್ಥೆಗಳ ಸಹಕಾರ ಅವಶ್ಯವಿದೆ ಎಂದರು.
ಡಾ. ರೋಹಿತ, ಆಪ್ತ ಸಮಾಲೋಚಕ ಶಂಕರ ಬಾರಿಗಿಡದ, ವೈಶಾಲಿ ಸಣ್ಣಕ್ಕಿ, ಬಸವಂತಪ್ಪ, ಹನಮಂತ ದರ್ಶನ ಕೊಳ್ಳ, ಜನಿಫರ್, ಶಿವಲಿಂಗ ಪಾಟೀಲ, ಸರೋಜಿನಿ ಕಲ್ಲಟ್ಟಿ, ನದೀರ ಅಸೂಲ್, ಇಂಚಲಮಠ, ಲಯನ್ಸ್ ಪರಿವಾರದ ಡಾ. ಸಂಜಯ ಶಿಂಧಿಹಟ್ಟಿ, ಡಾ. ಎಸ್.ಎಸ್. ಪಾಟೀಲ, ಡಾ. ಪ್ರಕಾಶ ನಿಡಗುಂದಿ, ಶಿವಾನಂದ ಗಾಡವಿ, ಮಹಾಂತೇಶ ಹೊಸೂರ, ಶಿವಾನಂದ ಕಿತ್ತೂರ, ಬಿಜೆಪಿ ಅರಭಾವಿ ಮಂಡಳ ಅಧ್ಯಕ್ಷ ಮಹಾದೇವ ಶೆಕ್ಕಿ, ಬಿಜೆಪಿ ರಾಜ್ಯ ಮೋರ್ಚಾ ಸಂಚಾಲಕ ರಾಜಕುಮಾರ, ರಾಜ್ಯ ಕಾರ್ಯದರ್ಶಿ ಈರಣ್ಣ ಅಂಗಡಿ, ಮಹಾಂತೇಶ ಕುಡಚಿ, ಪ್ರಮೋದ ನುಗ್ಗಾನಟ್ಟಿ, ಈರಪ್ಪ ಢವಳೇಶ್ವರ, ಮಹಾಲಿಂಗ ವಂಟಗೋಡಿ ಇದ್ದರು.