ಮೂಡಲಗಿ – ನಮ್ಮ ನಾಡಿನ ಹೆಸರಾಂತ ಯುಗದ ಕವಿ ಜಗದ ಕವಿ ಎಂದು ಬಿರುದು ಪಡೆದು ಮಲೆನಾಡಿನ ಸೆರಗಿನಲ್ಲಿ ನಿಸರ್ಗದ ಕವಿಯಾಗಿ ಸಾಹಿತ್ಯದ ವಿವಿಧ ಮಜಲುಗಳನ್ನು ಸವಿಸ್ತಾರವಾಗಿ ಬಣ್ಣಿಸಿ ಓ ನನ್ನ ಚೇತನ ಆಗು ನೀ ಅನಿಕೇತನವೆಂದು ಸಾರಿ ವಿಶ್ವ ಮಾನವ ಸಂದೇಶ ನೀಡಿ, ಹುಟ್ಟಿದ ಪ್ರತಿಯೊಬ್ಬ ಮನುಷ್ಯನು ವಿಶ್ವಮಾನವನಾಗಬೇಕು ಜೊತೆಗೆ ಅವರ ತತ್ವ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕಾಗಿದೆ ಎಂದು ಶಿವಾನಂದ ಚಂಡಕೆ ಕನ್ನಡ ಪ್ರಾಧ್ಯಾಪಕರು ತಿಳಿಸಿದರು.
ಸ್ಥಳೀಯ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಆಯ್.ಕ್ಯೂ.ಎ.ಸಿ. ಹಾಗೂ ಕನ್ನಡ ವಿಭಾಗದ ವತಿಯಿಂದ ಹಮ್ಮಿಕೊಂಡ ರಸಋಷಿ ರಾಷ್ಟ್ರಕವಿ ಕುವೆಂಪುರವರ 119 ನೇ ಜನ್ಮದಿನಾಚರಣೆ ಪ್ರಯುಕ್ತ ಹಮ್ಮಿಕೊಂಡ ವಿಶ್ವಮಾನವ ದಿನಾಚರಣೆಯ ಕಾರ್ಯಕ್ರಮದಲ್ಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, ವೈಚಾರಿಕತೆಯ ಪ್ರಖರ ಅಂಶಗಳುಳ್ಳ ಅವರ ಎಲ್ಲಾ ಕೃತಿಗಳು ಇಡೀ ವಿಶ್ವಕ್ಕೇ ಮಾದರಿಯಾಗಿವೆ ಅವರ ಮೇರು ಕೃತಿಗಳಾದ ಮಲೆಗಳಲ್ಲಿ ಮದುಮಗಳು ಕಾನೂರು ಸುಬ್ಬಮ್ಮ ಹೆಗ್ಗಡತಿ ಕೃತಿಗಳಲ್ಲಿ ಮಲೆನಾಡಿನ ಆಚರಣೆಗಳನ್ನು ಸವಿಸ್ತಾರವಾಗಿ ಬಣ್ಣಿಸಿದ್ದಾರೆ. ಅವರ ಕೃತಿಗಳುದ್ದಕ್ಕೂ ನಾವೆಲ್ಲಾ ಜಾತಿ ಮತ ಧರ್ಮಗಳನ್ನು ಮೀರಿ ಬೆಳೆಯಬೇಕು ಎಂಬ ಸಂದೇಶಗಳನ್ನು ರವಾನಿಸಿವೆ. “ ಅವರ ಬದುಕಿನ ವಿವಿಧ ಮಜಲುಗಳ ಚಿಂತನೆಯನ್ನು ನಾವೆಲ್ಲ ಅಳವಡಿಸಿಕೊಳ್ಳೋಣ “ಎಂದು ಕರೆ ನೀಡಿದರು.
ಪ್ರಾಂಶುಪಾಲರಾದ ಮಹೇಶ ಕಂಬಾರ ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, “ ಕುವೆಂಪುರವರ ಕೃತಿಗಳಲ್ಲಿ ಬರುವ ಎಲ್ಲಾ ಪಾತ್ರಗಳು ಮುಖ್ಯವಾಗಿವೆ ಅವುಗಳಿಂದ ನಾವೆಲ್ಲಾ ಪಾಠಗಳನ್ನು ಕಲಿತು ಮುನ್ನೆಡೆಯಬೇಕಿದೆ ಅವರ ಕೃತಿಗಳಲ್ಲಿ ಕಂಡು ಬರುವ ಮಾನವೀಯತೆಯನ್ನು ನಾವೆಲ್ಲಾ ಅಳವಡಿಸಿಕೊಂಡು ಸಾಗಬೇಕಿದೆ ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾದ ಬಿ.ಸಿ ಹೆಬ್ಬಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಇನ್ನೋರ್ವ ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಶಿವಕುಮಾರ ಅವರು ಕುವೆಂಪು ಅವರ ಬಗ್ಗೆ ಸ್ವರಚಿತ ಕವನ ವಾಚಿಸಿ ನುಡಿನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಆಯ್.ಕ್ಯೂ.ಎ.ಸಿ. ಸಂಯೋಜಕರಾದ ಚೇತನ್ ರಾಜ್ ಬಿ, ಇತಿಹಾಸ ಪ್ರಾಧ್ಯಾಪಕರಾದ ಶ್ರೀ ಬಿ.ಎಸ್ ಕೆಸರಗೊಪ್ಪ , ಮಲ್ಲಿಕಾರ್ಜುನ ಸಜ್ಜನವರ ಭಾಗವಹಿಸಿದ್ದರು. ಪಾರ್ವತಿ ಬಿಜಗುಪ್ಪಿ ಸ್ವಾಗತಿಸಿದರು. ರಾಧಿಕಾ ಹಾಗೂ ರೇಣುಕಾ ವ್ಯಾಪಾರಿ ಪ್ರಾರ್ಥಿಸಿದರು. ಹಾಗೂ ರತ್ನಾ ಹೊರಗಿನಮನಿ ನಿರೂಪಿಸಿದರು. ಬಸಯ್ಯ ಹಿರೇಮಠ ವಂದಿಸಿದರು.