ಮೂಡಲಗಿ: ಜಗತ್ತು ತಾಂತ್ರಿಕವಾಗಿ ಎಷ್ಟೇ ಮುಂದುವರಿದಿದ್ದರೂ ರಕ್ತವನ್ನು ತಯಾರಿಸಲು ಸಾಧ್ಯವಿಲ್ಲ. ರಕ್ತಕ್ಕೆ ಪರ್ಯಾಯವಾಗಿ ಏನೂ ಇಲ್ಲ. ಒಬ್ಬರು ನೀಡುವ ರಕ್ತ ಇನ್ನೊಬ್ಬರ ಜೀವ ಉಳಿಸಲಿದ್ದು, ರಕ್ತದಾನದಂತಹ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ಮಂಗಳವಾರ ಜೂ-18 ರಂದು ಕಲ್ಲೋಳಿ ಪಟ್ಟಣದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಗೋಕಾಕ ಲಯನ್ಸ್ ಕ್ಲಬ್, ವಿಶ್ವ ಹಿಂದೂ ಪರಿಷತ್ ಭಜರಂಗದಳ ಕಲ್ಲೋಳಿ ಹಾಗೂ ಗೋಕಾಕ ರಕ್ತ ಭಂಡಾರ ಕೇಂದ್ರದ ಸಂಯುಕ್ತಾಶ್ರಯದಲ್ಲಿ ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಆಯೋಜಿಸಿದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ರಕ್ತದಾನ ಮಾಡುವುದು ಸಮಾಜದ ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯ ಕರ್ತವ್ಯವೆಂದು ಭಾವಿಸಬೇಕು. ಆರೋಗ್ಯವಂತರು ರಕ್ತದಾನ ಮಾಡಿದರೆ ಮಾತ್ರ ರೋಗಗ್ರಸ್ಥರು, ಅಪಘಾತಕ್ಕೀಡಾಗಿ ಜೀವ ಸಂಕಷ್ಟಕ್ಕೀಡಾದವರ ಜೀವ ಉಳಿಸಲು ಸಾಧ್ಯ. ರಕ್ತದಾನದಿಂದ ಯಾವುದೇ ಅಪಾಯವಿಲ್ಲ. ಯಾವುದೇ ಆರೋಗ್ಯವಂತ ವ್ಯಕ್ತಿ ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು ಎಂದರಲ್ಲದೇ ಲಯನ್ಸ್ ಕ್ಲಬ್ ಸಂಸ್ಥೆಯು ವಿವಿಧ ಚಟುವಟಿಕೆಗಳ ಮೂಲಕ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಇನ್ನೂ ಹೆಚ್ಚಿನ ಸಮಾಜ ಸೇವೆ ಮಾಡುವಂತಾಗಲಿ ಎಂದು ಹಾರೈಸಿದರು.
ಗೋಕಾಕ ಲಯನ್ಸ್ ಕ್ಲಬ್ ಅಧ್ಯಕ್ಷ ಅಶೋಕ ಶಿ ಪಾಟೀಲ, ಮಹೇಂದ್ರ ಪೋರವಾಲ, ಅಶೋಕ ಬಿ.ಪಾಟೀಲ, ಸೂರಜ ದಿವಸೆ, ರವೀಂದ್ರ ಸೊರಗಾಂವಿ, ಸಂತೋಷ ಉಪ್ಪಿನ, ರಾಕೇಶ ಆಡಿನವರ, ಅಡಿವೆಪ್ಪ ಕುರಬೇಟ, ಅಜೀತ ಚಿಕ್ಕೋಡಿ, ಶಿವಾನಂದ ಹೆಬ್ಬಾಳ, ಪರಪ್ಪ ಗಿರೆಣ್ಣವರ ಸೇರಿದಂತೆ ಲಯನ್ಸ್ ಕ್ಲಬ್ ಸಿಬ್ಬಂದಿಗಳು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.