ಸಿಂದಗಿ; ಕನ್ನಡ ಭಾಷೆಯ ಬೆಳವಣಿಗೆ ಮತ್ತು ಉಳಿವಿಗೆ ಸಾಹಿತಿಗಳ ಶ್ರಮ ಸಾಕಷ್ಟಿದೆ. ಹೀಗಾಗಿ ಪ್ರತಿಯೊಬ್ಬರ ಕನ್ನಡತನ ಗಟ್ಟಿತನಗೊಳಿಸಲು ಪ್ರಯತ್ನಿಸಬೇಕು. ಸಾಹಿತ್ಯ ಪರಿಷತ್ತಿಗೆ ತನ್ನದೇಯಾದ ಹಿರಿಮೆ ಇದೆ. ನಾಡಿನ ಎಂಟು ಜನ ಸಾಹಿತಿಗಳು ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಭಾಷೆಯ ಶ್ರೀಮಂತಿಕೆ ಹೆಚ್ಚಿದೆ ಎಂದು ಶಾಸಕ ರಮೇಶ ಭೂಸನೂರ ಹೇಳೀದರು.
ಪಟ್ಟಣದ ಮಾಂಗಲ್ಯ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಜಿಲ್ಲಾಧ್ಯಕ್ಷರ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಮಾತೃಭಾಷೆ ಗೌರವ ಹೆಚ್ಚಿಸುವ ಕಾರ್ಯ ಮಾಡಬೇಕು. ಕನ್ನಡದ ತಾಯಿಬೇರು ಹಳ್ಳಿಗಳು. ಹಾಗಾಗಿ ಕನ್ನಡ ಸಾಹಿತ್ಯ-ಸಂಸ್ಕೃತಿ ಜನಪದ ಉಳಿವಿಗಾಗಿ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಹೆಚ್ಚು ಹೆಚ್ಚು ಗ್ರಾಮಾಂತರ ಪ್ರದೇಶಗಳಲ್ಲಿ ಇರುವ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಸೂಕ್ತ ವೇದಿಕೆ ಕಲ್ಪಿಸಿ ಅವರಲ್ಲಿರುವ ಕನ್ನಡ ಸಾಹಿತ್ಯದ ಸೊಗಡನ್ನು ಹೊರತರಬೇಕು. ಆ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗ್ರಾಮೀಣ ಘಟಕವು ತುಂಬಾ ಕ್ರಿಯಾಶೀಲವಾಗಿ ಕೆಲಸ ಮಾಡಬೇಕು. ಪ್ರತಿಯೊಬ್ಬರೂ ಕನ್ನಡ ಭಷೆ ಉಳಿಸಿ, ಬೆಳೆಸುವ ಕಾಯಕ ಮಾಡಬೇಕು ಎಂದರು.
ಜೆಡಿಎಸ್ ಮುಖಂಡ ಶಿವಾನಂದ ಪಾಟೀಲ ಸೋಮಜ್ಯಾಳ ಮಾತನಾಡಿ, ಕನ್ನಡ ಕೇವಲ ಕಟ್ಟಡದೊಳಗೆ ಸೀಮಿತವಾಗಿರದೇ ಕಟ್ಟಡದ ಹೊರಗೆ ಬೆಳೆಯುವಂತಾಗಬೇಕು. ಅಂದಾಗ ಮಾತ್ರ ಕನ್ನಡಕ್ಕೆ ಗೌರವ ಸಿಕ್ಕಂತಾಗುತ್ತದೆ. ಕನ್ನಡ ಭಾಷೆಯಲ್ಲಿರುವ ಹಿತ ಬೇರೆ ಯಾವ ಭಾಷೆಯಲ್ಲೂ ಇಲ್ಲ. ಕನ್ನಡ ನಮ್ಮ ಮಾತೃ ಭಾಷೆ ಕನ್ನಡಕ್ಕೆ ಎಂದಿಗೂ ಮೋಸ ಮಾಡಬಾರದು ಎಂದರು.
ಹಿರಿಯ ಸಾಹಿತಿ ಹ.ಮ.ಪೂಜಾರ ಮಾತನಾಡಿ, ಕನ್ನಡ ಭಾಷಾ ಸಂಪತ್ತು ಹಾಗೂ ಜ್ಞಾನ ಸಂಪತ್ತನ್ನು ಹೆಚ್ಚಿಸಬೇಕು ಎಂಬ ಉದ್ದೇಶದೊಂದಿಗೆ ಹುಟ್ಟಿಕೊಂಡಿದ್ದು ಕನ್ನಡ ಸಾಹಿತ್ಯ ಪರಿಷತ್ತು. ಇದು ಪ್ರತಿ ಕನ್ನಡಿಗನ ಪ್ರಾತಿನಿಧಿಕ ಸಂಸ್ಥೆ. ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿಯೂ ಕನ್ನಡವನ್ನು ಪಸರಿಸುವ ನೆಲೆಯಲ್ಲಿ ಒಂದಿಷ್ಟು ಕೆಲಸಗಳಾಗಿವೆ. ಮಕ್ಕಳಲ್ಲಿ ಓದುವ ಸಂಸ್ಕೃತಿ ಬೆಳೆಸುವ ನಿಟ್ಟಿನಲ್ಲಿ ಸಾಹಿತ್ಯ ರಚನಾ ಕಮ್ಮಟಗಳನ್ನು ಹಿರಿಯ ಸಾಹಿತಿಗಳ ಮಾರ್ಗದರ್ಶನದಲ್ಲಿ ಹಮ್ಮಿಕೊಂಡು ಮಕ್ಕಳಲ್ಲಿ ಕಾವ್ಯ, ಕಾದಂಬರಿ ಓದುವ ಹವ್ಯಾಸ ಬೆಳೆಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ಸಾಹಿತ್ಯ ಪರಿಷತ್ತೆಂದರೆ ಸಾಹಿತ್ಯ ಹಾಗೂ ಸಾಹಿತಿಗಳಿಗೆ ಮಾತ್ರ ಸೀಮಿತವಾದುದಲ್ಲ. ಅದು ನಾಡು, ನುಡಿ, ಸಂಸ್ಕೃತಿ, ಸಾಹಿತ್ಯಕ್ಕೆ ಸಂಬಂಧಿಸಿದ್ದು. ಎಲ್ಲರನ್ನೂ ಒಳಗೊಳ್ಳುವ ಪ್ರಾತಿನಿಧಿಕ ಸಂಸ್ಥೆಯಾಗಿ ಕನ್ನಡ ಸಾಹಿತ್ಯ ಪರಿಷತ್ತು ಬೆಳೆದು ಬಂದಿದ್ದು ಅದು ಹೀಗೆಯೇ ಮುಂದುವರಿಯಬೇಕಿದೆ ಎಂದರು.
ಸಾನ್ನಿಧ್ಯ ವಹಿಸಿದ ಮನಗೂಳಿ ಆಶ್ರಮದ ಪೀಠಾಧಿಕಾರಿ ಡಾ. ಫೈರೋಜ್ ಹುಸೇನಿ, ಮಾಜಿ. ಶಾಸಕ ಶರಣಪ್ಪ ಸುಣಗಾರ ಮಾತನಾಡಿದರು.
ನಿಕಟಪೂರ್ವ ಅಧ್ಯಕ್ಷ ಸಿದ್ದಲಿಂಗ ಚೌಧರಿ ಅವರು ಕನ್ನಡ ಧ್ವಜ ನೀಡುವ ಮೂಲಕ ನೂತನ ಅಧ್ಯಕ್ಷ ರಾಜಶೇಖರ ಕೂಚಬಾಳ ಅವರಿಗೆ ಅಧಿಕಾರ ಹಸ್ತಾಂತರ ಮಾಡಿ, ಭಾಷೆಯನ್ನು ಬೆಳೆಸುವ ದಿನಗಳ ಬದಲಾಗಿ ಉಳಿಸಿಕೊಳ್ಳುವ ದಿನಗಳು ಬಂದಿವೆ. ಜಾಗತೀಕರಣ, ಉದಾರೀಕರಣದ ಕಾರಣದಿಂದ ಕೊಚ್ಚಿ ಹೋಗುತ್ತಿರುವ ಕನ್ನಡ ಭಾಷೆಯನ್ನು ಮತ್ತಷ್ಟು ಸಮೃದ್ಧಗೊಳಿಸುವ ಅಗತ್ಯತೆ ನಮ್ಮ ಮುಂದಿದೆ ಎಂದರು.
ಸಾರಂಗಮಠದ ಪೀಠಾಧಿಪತಿ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು, ಬೋರಗಿ- ಪುರದಾಳ ವಿಶ್ವರಾಧ್ಯ ಮಠದ ಪೂಜ್ಯರಾದ ಶ್ರೀ ಶ್ರೀ ಶ್ರೀ ತಪೋರತ್ನ ಮಹಾಲಿಂಗೇಶ್ವರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.
ರಾಗರಂಜಿನಿ ಸಂಚಾಲಕ ಡಾ .ಪ್ರಕಾಶ ಪ್ರಾರ್ಥಿಸಿದರು. ಪ್ರಲ್ಹಾದ ಜಿ.ಕೆ.ನಾಡಗೀತೆ ಹಾಡಿದರು. ತಾಲೂಕು ಅಧ್ಯಕ್ಷ ರಾಜಶೇಖರ ಕೂಚಬಾಳ ಸ್ವಾಗತಿಸಿದರು. ರವಿ ಗೋಲಾ ಹಗೂ ಜಗದೀಶ ಸಿಂಗೆ ನೀರೂಪಿಸಿದರು. ಮಾಧ್ಯಮ ಪ್ರತಿನಿಧಿ ಪಂಡಿತ ಯಂಪೂರೆ ವಂದಿಸಿದರು.