ಜನವರಿ 10- ತ್ಯಾಗವೀರ ಶಿರಸಂಗಿ ಲಿಂಗರಾಜರ ಜನ್ಮದಿನದ ನಿಮಿತ್ತ ಪ್ರಸ್ತುತ ಲೇಖನ
ಭಾರತದ ಸಾಮಾಜಿಕ ಇತಿಹಾಸದಲ್ಲಿ ಕೆಲವು ವ್ಯಕ್ತಿತ್ವಗಳು ತಮ್ಮ ಅಧಿಕಾರ ಅಥವಾ ಸಂಪತ್ತಿನಿಂದಲ್ಲ, ತ್ಯಾಗ ಮತ್ತು ಸೇವಾ ಮನೋಭಾವದಿಂದಲೇ ಅಮರರಾಗುತ್ತಾರೆ. ಅಂತಹ ಅಪರೂಪದ ಮಹಾನ್ ಪುರುಷರಲ್ಲಿ ಒಬ್ಬರು ತ್ಯಾಗವೀರ ಶಿರಸಂಗಿ ಲಿಂಗರಾಜ ದೇಸಾಯಿ. 1861ರ ಜನವರಿ 10 ರಂದು ಲಿಂಗಾಯತ ಕುಡುಒಕ್ಕಲಿಗ ಸಮಾಜದಲ್ಲಿ ಜನಿಸಿದ ಲಿಂಗರಾಜ ದೇಸಾಯಿ ಅವರು, ಶಿರಸಂಗಿ, ನವಲಗುಂದ ಮತ್ತು ಸವದತ್ತಿ ಪ್ರದೇಶಗಳ ಪ್ರಾಂತಾಧಿಪತಿಯಾಗಿದ್ದರು. ಆದರೆ ಅಧಿಕಾರದ ಶಿಖರದಲ್ಲಿದ್ದರೂ, ಅವರು ಐಶ್ವರ್ಯಕ್ಕೆ ಮಾರು ಹೋಗದೆ, ಸಮಾಜದ ಹಿತವೇ ಜೀವನದ ಪರಮ ಗುರಿ ಎಂದು ನಂಬಿದ ಮಹಾನ್ ಚೇತನ.
● ಈ ಮಹಾನ ಚೇತನ ಬದುಕಿದ್ದು ಕೇವಲ 45ವರ್ಷಗಳು ಮಾತ್ರ. ಆದರೆ ತೆಗೆದುಕೊಂಡ ನಿರ್ಣಯ ಸೂರ್ಯ ಚಂದ್ರರು ಇರುವಷ್ಟು ಕಾಲ ಶಾಶ್ವತವಾಗಿ ಬಾಳಿ ಬದುಕುವ ನಿರ್ಣಯ. ಸಮಾಜದ ಸರ್ವತೋಮುಖ ಚಿಂತನೆಯ ಮೂಸೆಯಲ್ಲಿ ಅವರು ಸ್ಥಾಪಿಸಿದ ಶಿರಸಂಗಿ ಲಿಂಗರಾಜ ಟ್ರಸ್ಟ್ ಪೋರ್ಡ ಫೌಂಡೇಷನ್ ಭಾರತೀಯ ಜ್ಞಾನಪೀಠ ದತ್ತಿ ನಿದಿಗೆ ಸಮನಾಗಿ ನಿಲ್ಲುವ “ನವಲಗುಂದ ಶಿರಸಂಗಿ ಲಿಂಗರಾಜ ಟ್ರಸ್ಟ”
● ದತ್ತಕ ತಾಯಿಯಾದ ಉಮಾಬಾಯಿಯವರ ಉಪದ್ರವ (ಲಿಂಗರಾಜ ದೇಸಾಯಿಯವರಿಗೆ) ಊಟದಲ್ಲಿ ವಿಷ ಹಾಕುವಷ್ಟರಮಟ್ಟಿಗೆ ವಿಪರಿತವಾಗಿತ್ತು. ಮಗನ ಸಂಸ್ಥಾನವನ್ನೆ ಲೂಟಿ ಮಾಡಿಸಿದ ಬುದ್ದಿಗೇಡಿ ತಾಯಿ ಉಮಾಬಾಯಿ. ಉಮಾಬಾಯಿ ಬೆನ್ನಿಗೆ ನಿಂತ ಲಂಪಟ ಸಿದ್ದಲಿಂಗ ಸ್ವಾಮಿ. ಇವರ ನೀಡಿದ ಕಷ್ಠದಿಂದ ತ್ಯಾಗವೀರ ಶಿಕ್ಷಣವನ್ನು ಅರ್ಧದಲ್ಲಿ ನಿಲ್ಲಿಸಿ ಕೊಲ್ಲಾಪುರದಲ್ಲಿ ಪಡೆಯುತ್ತಿದ್ದ ಶಿಕ್ಷಣವನ್ನು ಮೊಟಕುಗೂಳಿಸಿ ಶಿರಸಂಗಿಗೆ ಮರಳಬೇಕಾಯಿತು.
● ಆದರೆ ಇನ್ನೂರ್ವ ತಾಯಿ ಗಂಗಾಬಾಯಿ ವಾತ್ಸಲ್ಯ ಗಂಗಾನದಿಯಷ್ಟೆ ವಿಶಾಲವಾಗಿದ್ದಿತ್ತು. ಗಂಗಾ ಬಾಯಿಯ ವಾತ್ಸಲ್ಯದಲ್ಲಿ ಪತ್ನಿ ಸುಂದರಾಬಾಯಿ ಕೂಳೆ ಕೊಚ್ಚಿ ಹೋಗಿತ್ತು. ಕಾರಣ ಲಿಂಗರಾಜರಿಗೆ ಬದುಕಿ ನಲ್ಲಿ ಆಶಾವಾದದ ಕೋಲ್ಮಿಂಚು ಬೆಳಕು ನೀಡಿತ್ತು. ಲಿಂಗರಾಜ ದೇಸಾಯಿಯವರಿಗೆ ಮಕ್ಕಳು ಆಗದೇ ಇದ್ದಾಗ ಈ ದೈತ್ಯ ಸಂಸ್ಥಾನದ ಆಸ್ತಿ ಯಾರ ವೈಯಕ್ತಿಕ ಸ್ವತ್ತಾಗಬಾರದು. ಸಮಸ್ತ ಸಮಾಜಮುಖಿಯಾಗಿ ಸಂಸ್ತಾನದ ಆಸ್ತಿ ಮತ್ತು ಅದರ ಲಾಭ ಬಳಕೆಯಾಗಲಿ ಎಂದು ಸಿರಸಂಗಿ ನವಲಗುಂದ ಟ್ರಸ್ಟ ಸ್ಥಾಪಿಸಬೇಕು ಎಂದು ತಮ್ಮ ಮರಣ ಪತ್ರದಲ್ಲಿ ಬರೆದರು.
● ತಮ್ಮ ಜೀವದ ಗೆಳೆಯ ರಾವ ಬಹದ್ದೂರ ಅರಟಾಳ ರುದ್ರಗೌಡ್ರರಿಗೆ ಮಾತ್ರ ಇದನ್ನು ತಿಳಿಸಿದ್ದರು. ಇದಕ್ಕೆ ಬೆಳಗಾವ ಜಿಲ್ಲಾಧಿಕಾರಿ ಅಧ್ಯಕ್ಷರಾಗಿ ಕಾರ್ಯನಿರ್ವಾಹಿಸಬೇಕು ಎಂದು ಜವಾಬ್ದಾರಿ ಹೊರಿಸಿದರು ಲಿಂಗರಾಜರು. ಶಿರಸಂಗಿ ಲಿಂಗರಾಜರು ತಮ್ಮ ಮರಣದ ನಂತರ ತಮ್ಮ ಮೃತ್ಯು ಪತ್ರವನ್ನು ತೆಗೆದು ಓದಬೇಕು ಎಂಬ ಷರತ್ತು ಹಾಕಿದ್ದರು. 1906ರ ಅಗಸ್ಟ 23 ರಂದು ತ್ಯಾಗವೀರ ಶಿರಸಂಗಿ ಲಿಂಗರಾಜರು ನಿಧನರಾದರು.
● ಆ ಸಂದರ್ಭದಲ್ಲಿ ಅಂದರೆ 1906ರಲ್ಲಿ ಬೆಳಗಾವಿ ಜಿಲ್ಲೆಯ ಜಿಲ್ಲಾಧಿಕಾರಿ ಜಾಕ್ಸನ ಸಮಾಜದ ಗಣ್ಯರ ಸಮುಖದಲ್ಲಿ ತ್ಯಾಗವೀರ ಶಿರಸಂಗಿ ಲಿಂಗರಾಜರ ಮರಣ ಪತ್ರವನ್ನು ನೂರಾರು ಗಣ್ಯರ ಸಮುಖದಲ್ಲಿ ಓದಿ ನೂರಾರು ವರ್ಷ ಕಳೆದರೂ ಇಂತಹ ದಾನಿಗಳು ಹುಟ್ಟುವುದು ವಿರಳ ಎಂದು ಉದ್ಗಾರ ತೆಗೆದರು ಅಂದಿನ ಬೆಳಗಾವಿಯ ಜಿಲ್ಲಾಧಿಕಾರಿ ಜಾಕ್ಸನರು.
● ಲಿಂಗರಾಜ ದೇಸಾಯಿಯವರ ಅಂತಿಮ ಆಶಯಗಳನ್ನು ಮುಂದೆ ನಿಂತು ಅಕ್ಷರಶಃ ಅನುಷ್ಟಾನಕ್ಕೆ ತಂದವರು ಅಂದಿನ ಬೆಳಗಾವಿಯ ಡೆಪ್ಯೂಟಿ ಜಿಲ್ಲಾ ಕಲೆಕ್ಟರ್ ರಾವಬಹದ್ದೂರ್ ಅರಟಾಳ ರುದ್ರಗೌಡರು. ಕಾರಣ ಶಿರಸಂಗಿ ಲಿಂಗರಾಜರ ಮೃತ್ಯುಪತ್ರ ಅನುಷ್ಠಾನಕ್ಕೆ ಅರಟಾಳ ರುದ್ರಗೌಡರು ಮುಂದಾದಾಗ ಪತ್ನಿ ಸುಂದರಾಬಾಯಿ ಶಿರಸಂಗಿ ಲಿಂಗರಾಜರ ಮೃತ್ಯುಪತ್ರದ ಆಶಯಗಳನ್ನು ಅನುಷ್ಠಾನ ಗೊಳಿಸದಂತೆ ನ್ಯಾಯಾಲಯದ ಮುಂದೆ ಹೋದರು. ಕಾರಣ ಸುಂದರಾಬಾಯಿ ತನ್ನ ಅಣ್ಣನಾದ ಕಲ್ಲಪ್ಪ ಗೌಡನನ್ನು 1906 ಡಿಸೆಂಬರ್ 6 ರಂದು ದತ್ತಕ ತೆಗೆದುಕೊಂಡಳು.
● ತಾನು ದತ್ತಕ ತೆಗೆದುಕೊಂಡಿರುವುದನ್ನು ಮಾನ್ಯ ಮಾಡಬೇಕು ,ಲಿಂಗರಾಜರ ಇಚ್ಚಾಪತ್ರವನ್ನು ರದ್ದುಗೊಳಿಸಬೇಕು ಎಂದು ಬಾಗಿರಥಿಬಾಯಿಯವರು ಬೆಳಗಾವಿಯ ಜಿಲ್ಲಾಧಿಕಾರಿಗಳಲ್ಲಿ 1907 ಜುಲೈ18 ರಂದು ಮನವಿ ಸಲ್ಲಿಸಿದಳು.ಬೆಳಗಾವಿಯ ಪ್ರಥಮದರ್ಜೆಯ ನ್ಯಾಯಾಲಯ ಸುಂದರಾಬಾಯಿಯವರು ತೆಗೆದುಕೊಂಡ ದತ್ತಕವನ್ನು ಮಾನ್ಯ ಮಾಡಿತು.ಇದರಿಂದಾಗಿ ಲಿಂಗರಾಜರ ಮೃತ್ಯು ಪತ್ರದ ಆಶಯಗಳ ಅನುಷ್ಠಾನ ಮತ್ತಷ್ಟು ಜಟಿಲವಾಯಿತು. ಆಗ ಇದನ್ನು ಗಂಭಿರವಾಗಿ ಪರಿಗಣಿಸಿ ಲಿಂಗರಾಜರ ಪತ್ನಿ ಸುಂದರಾಬಾಯಿ ವಿರುದ್ದ ಲಿಂಗರಾಜರ ಮೃತ್ಯುಪತ್ರದ ಅನುಷ್ಠಾನಕ್ಕೆ ಪಣ ತೂಟ್ಟು ನಿಂತವರು ರಾವ್ ಬಹದ್ದೂರ ಅರಟಾಳ ರುದ್ರಗೌಡರು.
● ಲಿಂಗರಾಜರ ಮೃತ್ಯಪತ್ರದ ಮೂಕದ್ದೆಮೆ ಲಂಡನಿನ ಪ್ರಿವಿ ಕೌನ್ಸಿಲ್ ಮುಂದೆ ಹೋದಾಗ ಅದರ ಪರವಾಗಿ ವಾದಿಸಲು ಅರಟಾಳ ರುದ್ರಗೌಡರು ಅಂದಿನ ಪ್ರಭಾವಿ ವಕೀಲರಾಗಿದ್ದ “ಸರ್ ಸಿದ್ದಪ್ಪ ಕಂಬಳಿಯವರನ್ನು” ಲಂಡನಿಗೆ ಕಳುಹಿಸುವ ವಿಚಾರ ಮಾಡಿದರು. ಕೊನೆಗೆ ಬೆಳಗಾವಿಯ ಕೇಶವ ಗಣೇಶ ಅಜರೆಕರ ಅವರಿಗೆ ಹದಿನೈದು ಸಾವಿರ ಶುಲ್ಕವನ್ನು ಶಿರಸಂಗಿ ಟ್ರಸ್ಟ್ ವತಿಯಿಂದ ನೀಡಿ ಲಂಡನಿಗೆ ವಾದ ಮಾಡಲು ಕಳುಹಿಸಿದರು. ಕೊನೆಗೆ ಲಂಡನಿನ ಪ್ರೀವಿ ಕೌನ್ಸಿಲ್‌ನ ಲ್ಲಿ ಲಿಂಗರಾಜ ರ ಮೃತ್ಯು ಪತ್ರವೇ ಸರಿ, ಅದನ್ನು ಅದರ ಆಶಯಗಳನ್ನು ಅನುಷ್ಠಾನಕ್ಕೆ ತರಲು ಆದೇಶಿಸಿತು. ಇಲ್ಲಿಗೆ ಲಿಂಗರಾಜರ ಆತ್ಮಕ್ಕೆ ಶಾಂತಿ ಲಭಿಸಿದಂತಾಯಿತು.
● ಅರಟಾಳ ರುದ್ರಗೌಡರು ಮತ್ತು ಶಿರಸಂಗಿ ಲಿಂಗರಾಜರು ಜೀವಸ್ಯ ಗಳಸ್ಯ ಸ್ನೇಹಿತರು- ಶಿರಸಂಗಿ ಲಿಂಗರಾಜರು ನೀಡಿದ 50 ಸಾವಿರ ರೂಪಾಯಿಗಳ ನೆರವಿನಿಂದ ಪ್ರಾರಂಭ ಮಾಡಿರುವ ಕಾರಣಕ್ಕೆ ಕೆ.ಎಲ್.ಇ ಯ ಪ್ರಥಮ ಪದವಿ ಕಾಲೇಜಗೆ ಲಿಂಗರಾಜ ಕಾಲೇಜ ಎಂದು ನಾಮಕರಣ ಮಾಡಲಾಯಿತು. ಕೆ.ಎಲ್.ಇ ಯ ಪ್ರಥಮ ಪದವಿ ಮಹಾವಿದ್ಯಾಲಯ ಸ್ಥಾಪನೆಗೆ ಪುಣೆ ಸರಕಾರದಲ್ಲಿ ಕನ್ನಡ ವೀರೋಧಿಗಳು ಉದ್ದೇಶಪೂರ್ವಕವಾಗಿ ತೊಂದರೆ ಸೃಷ್ಟಿ ಮಾಡಿದ್ದರು, ಅದನ್ನು ಅಂದಿನ ಖ್ಯಾತ ರಾಜಕೀಯ ನೇತಾರರು ಮತ್ತು ಮುಂಬೈ ಸರಕಾರದಲ್ಲಿ ಏಳು ಮಂತ್ರಿ ಖಾತೆಗಳನ್ನು ಹೊಂದಿದ್ದ ಸರ್ ಸಿದ್ದಪ್ಪ ಕಂಬಳಿಯವರು ನಿವಾರಿಸಿದರು.
● ತ್ಯಾಗದ ಅಪೂರ್ವ ಉದಾಹರಣೆ:- ಲಿಂಗರಾಜ ದೇಸಾಯಿ ಅವರ ಜೀವನದ ಅತ್ಯಂತ ವಿಶಿಷ್ಟ ಗುಣವೇ ಸಂಪೂರ್ಣ ತ್ಯಾಗ. ತಮ್ಮ ಬಳಿ ಇದ್ದ ಭೂಮಿ, ಆಸ್ತಿ, ಸಂಪತ್ತು ಎಲ್ಲವನ್ನೂ ಅವರು ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ದಾನ ಮಾಡಿದರು.
“ಸಂಪತ್ತು ನನ್ನದೇ ಅಲ್ಲ, ಸಮಾಜದದು” ಎಂಬ ದೃಢ ನಂಬಿಕೆಯೊಂದಿಗೆ ಅವರು ಬದುಕಿದರು. 1906 ರಲ್ಲಿ ಸ್ಥಾಪಿತವಾದ ನವಲಗುಂದ–ಶಿರಸಂಗಿ ಟ್ರಸ್ಟ್ ಸಾವಿರಾರು ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆಶಾಕಿರಣವಾಯಿತು. ಈ ಟ್ರಸ್ಟ್ ಮೂಲಕ ಹಲವು ದಶಕಗಳಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಸಾಲ ಸಹಾಯ, ವಿದ್ಯಾರ್ಥಿವೇತನ ಮತ್ತು ಶೈಕ್ಷಣಿಕ ನೆರವು ದೊರೆತಿದೆ.
● ಶಿಕ್ಷಣದ ಮಹತ್ವದ ದೃಷ್ಟಿ:- ಶಿಕ್ಷಣವೇ ಸಮಾಜದ ನಿಜವಾದ ಶಕ್ತಿ ಎಂದು ನಂಬಿದ ಲಿಂಗರಾಜ ದೇಸಾಯಿ ಅವರು, ವೀರಶೈವ–ಲಿಂಗಾಯತ ಸಮುದಾಯ ಮಾತ್ರವಲ್ಲದೆ ಎಲ್ಲಾ ಸಮುದಾಯಗಳ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯ ಮಾಡಿದರು. ಬೆಳಗಾವಿಯಲ್ಲಿ ಸ್ಥಾಪಿತವಾದ ಲಿಂಗರಾಜ ಕಾಲೇಜು (ಕೆ.ಎಲ್.ಇ ಸಂಸ್ಥೆಯ ಮೊದಲ ಕಾಲೇಜು) ಅವರ ಶಿಕ್ಷಣ ಪ್ರೇಮಕ್ಕೆ ಶಾಶ್ವತ ಸ್ಮಾರಕವಾಗಿದೆ.
● ಸಮಾಜ ಸುಧಾರಣೆಯ ನಾಯಕ:- ಅವರು ಕೇವಲ ದಾನಶೀಲರಾಗಿರಲಿಲ್ಲ, ಜೊತೆಜೊತೆಗೆ ಬಾಲ್ಯವಿವಾಹವನ್ನು ವಿರೋಧಿಸಿದರು, ನೈತಿಕ ಮೌಲ್ಯಗಳ ಬೋಧನೆ ಮಾಡಿದರು, ಸಮಾನತೆ ಮತ್ತು ಸಮಾಜ ಏಕತೆಗಳಿಗಾಗಿ ಸದಾ ಧ್ವನಿ ಎತ್ತುತ್ತಿದ್ದರು. ಅಖಿಲ ಭಾರತ ವೀರಶೈವ ಮಹಾಸಭೆಯಂತಹ ಮಹತ್ವದ ವೇದಿಕೆಗಳಲ್ಲಿ ಅವರು ಸಮಾಜ ಸುಧಾರಣೆಯ ಚಿಂತನೆಗಳನ್ನು ಮುನ್ನಡೆಸಿದರು.
● ನವಲಗುಂದ ಶಿರಸಂಗಿ ಲಿಂಗರಾಜ ಟ್ರಸ್ಟ್ ಭಾರತದ ಜ್ಞಾನಪೀಠ ದತ್ತಿ ನಿದಿ, ಪೋರ್ಡ ಫೌಂಡೆಷನಗೆ ಸಮನಾಗಿ ನಿಲ್ಲುವ ಆರ್ಥಿಕ ಶಕ್ತಿ ಇರುವಂತದು. ಆದರೆ ಅದರ ಸದಸ್ಯರು ಮಾತ್ರ ಅದನ್ನು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಸುವಲ್ಲಿ ಹೂಳಪು ನೀಡುವಲ್ಲಿ ವಿಫಲವಾಗಿರುವುದಂತು ಖಂಡಿತ ಮೆಚ್ಚಲಾರದ ನಡೆ. ಇದನ್ನು ಲಿಂಗರಾಜ ದೇಸಾಯಿಯವರ ಆತ್ಮ ಮೆಚ್ಚಲಾರದು ಎಂಬ ಭಾರವಾದ ಭಾವನೆ ಗಳೂಂದಿಗೆ ನಮಗೆಲ್ಲ ಶಿರಸಂಗಿ ಲಿಂಗರಾಜರ ಆದರ್ಶಗಳು ನಮಗೆ ದಾರಿ ದೀಪವಾಗಲಿ.
● ಜಯಂತಿ ಸ್ಮರಣೆ:- ಇಂದು ಅವರ ಜಯಂತಿಯ ಸಂದರ್ಭದಲ್ಲಿ, ತ್ಯಾಗವೀರ ಲಿಂಗರಾಜ ದೇಸಾಯಿ ಅವರ ಆದರ್ಶಗಳನ್ನು ಸ್ಮರಿಸುವುದು ಮಾತ್ರವಲ್ಲ, ಅವರ ಮಾರ್ಗವನ್ನು ನಮ್ಮ ಜೀವನದಲ್ಲೂ ಅಳವಡಿಸಿಕೊಳ್ಳುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ. ಇಂತಹ ಮಹಾನ್ ಚೇತನಕ್ಕೆ ನಮ್ಮೆಲ್ಲರ ಶತ ಶತ ನಮನಗಳು.
ಎನ್.ಎನ್.ಕಬ್ಬೂರ
ಶಿಕ್ಷಕರು ಮತ್ತು ಬರಹಗಾರರು.
ತಾ-ಸವದತ್ತಿ ಜಿ-ಬೆಳಗಾವಿ
ಮೊಬೈಲ್-9740043452
mutturaj.kabbur@gmail.com

