ಬೆಂಗಳೂರಿನ ರಂಗಭೂಮಿಯಲ್ಲಿ ನಿರಂತರ ಸಂಘಟನೆ ನಟನೆಯಲ್ಲಿ ತೊಡಗಿಸಿಕೊಂಡಿರುವ ಸಿ.ಎ.ರಾಮಚಂದ್ರರಾವ್ ನನಗೆ ಪರಿಚಿತರೇನಲ್ಲ. ಅವರು ಒಂದು ತಿಂಗಳ ಹಿಂದೆ ನಾನು ಮಾಯಸಂದ್ರದ ನಟರು ಟಿ ನಾಗರಾಜ್ ಬಗೆಗೆ ಬರೆದಿದ್ದ ಕಲಾ ಪರಿಚಯ ಲೇಖನ ಓದಿ ಮೆಚ್ಚುಗೆಯ ಮಾತನಾಡಿದರು. ತುಮಕೂರಿನಲ್ಲಿ ನಮ್ಮ ತಂಡದ ನಾಟಕ ಇದೆ ಎ೦ದು ಕರಪತ್ರ ಕಳಿಸಿದ್ದರು. ಅದನ್ನು ಪತ್ರಿಕೆಗೆ ವರದಿ ಮಾಡಿದ್ದೆ. ಅದಾಗಿ ಇಂದು ಫೋನ್ ಮಾಡಿ ಜುಲೈ 9ಕ್ಕೆ ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ನಮ್ಮ ಬೆಂಗಳೂರು ತಂಡದಿಂದ ನಾಟಕ ಇದೆ ಬನ್ನಿ ಎಂದರು. ಕಲಾವಿದ ಡಿ. ವಿ.ನಾಗಮೋಹನ್ ಶ್ರೀ ಅನ್ನಪೂರ್ಣೇಶ್ವರಿ ಕಲಾ ಸಂಘದಿ೦ದ ಜುಲೈ 4 ರಿಂದ 9 ವರೆಗೆ ಹಮ್ಮಿಕೊಂಡಿರುವ ಆರು ದಿನಗಳ ಪೌರಾಣಿಕ ನಾಟಕೋತ್ಸವದಲ್ಲಿ ಇವರ ತಂಡದ ನಾಟಕ ಪ್ರದರ್ಶನ ಏರ್ಪಾಡಾಗಿದೆ.
ಸಿ.ಎ.ರಾಮಚಂದ್ರರಾವ್ ನನಗೆ ಅವರ ನಟನೆಯ ವಿಡಿಯೇ ಕಳಿಸಿದರು. ಅವರು ಪೌರಾಣಿಕ ರಂಗಭೂಮಿಯಲ್ಲಿ ತುಂಬಾ ಕೆಲಸ ಮಾಡಿರುವುದು ಅವರು ಕಳಿಸಿದ ಮಾಹಿತಿಯಿoದ ತಿಳಿದುಬಂತು
ಇವರು ತುಮಕೂರು ಜಿಲ್ಲೆ ತುಮಕೂರು ತಾಲ್ಲೂಕು ಹೆಬ್ಬೂರು ಹೋಬಳಿ ನಾಗವಲ್ಲಿ ಅಂಚೆ ಚಿಕ್ಕಯನಪಾಳ್ಯದ ಅಪ್ಪುರಾವ್ ಹಾಗೂ ಶ್ರೀಮತಿ ಬೈನಾಬಾಯಿ ಅವರ ಐದನೇ ಸುಪುತ್ರನಾಗಿ ಜನಿಸಿ 12 ವರ್ಷ ಬಾಲಕನಿದ್ದಾಗಲೇ ಗುಬ್ಬಿ ಕಂಪನಿಯ ಹೆಸರಂತ ಸಂಗೀತ ನಿರ್ದೇಶಕರಾದ ವಿರುಪಸಂದ್ರ ದಾಸೇಗೌಡರ ಸಂಗೀತ ನಿರ್ದೇಶನದಲ್ಲಿ ಕವಿರತ್ನ ಕಾಳಿದಾಸ ಪೌರಾಣಿಕ ನಾಟಕದ ಬಾಲ ಭೋಜನ ಪಾತ್ರದಲ್ಲಿ ಅಭಿನಯಿಸಿ ರಂಗಪ್ರವೇಶ ಮಾಡಿದರು. ತದನಂತರ ಅದೇ ದಾಸೇಗೌಡರ ಸಂಗೀತ ನಿರ್ದೇಶನದಲ್ಲಿ ಶ್ರೀ ಕೃಷ್ಣಗಾರುಡಿ ಎಂಬ ನಾಟಕದಲ್ಲಿ ಮಾಯಾಮೋಹಿನಿ ಪಾತ್ರವನ್ನು ಮಾಡಿ ಪಾಂಡು ವಿಜಯ ನಾಟಕದಲ್ಲಿ ಅರ್ಜುನ ಪಾತ್ರವನ್ನು ಹತ್ತು ಬಾರಿ ಮಾಡಿದ್ದಾರೆ. ಅಂದಿನ ಕಾಲಕ್ಕೆ ಸುತ್ತ ಮುತ್ತಲಿನ ಹಳ್ಳಿಗಾಡಿನ ಜನರ ಮನಸೂರೆಗೊಂಡ ನಾಟಕ ಇದು. ಕುರುಕ್ಷೇತ್ರ ನಾಟಕದಲ್ಲಿ ಶ್ರೀ ಕೃಷ್ಣ, ಅರ್ಜುನ, ದುರ್ಯೋಧನ, ಭೀಮ, ಕರ್ಣ, ಅಭಿಮನ್ಯು ಈ ಒಂದೊಂದು ಪಾತ್ರವನ್ನು ಹಲವಾರು ಬಾರಿ ಮಾಡಿದ್ದಾರೆ. ರಾಮಾಯಣದಲ್ಲಿ ದಶರಥ, ಶ್ರೀರಾಮ, ಆಂಜನೇಯ, ರಾವಣ, ಭರತ ಇಷ್ಟು ಪಾತ್ರಗಳನ್ನು ಹಲವು ಬಾರಿ ಮಾಡಿದ್ದಾರೆ. ರಾಜ ವಿಕ್ರಮ ನಾಟಕದಲ್ಲಿ ವಿಕ್ರಮ, ಶನೇಶ್ವರನ ಪಾತ್ರಗಳನ್ನು, ದಾನ ಶೂರ ವೀರ ಕರ್ಣ ನಾಟಕದಲ್ಲಿ ಭೀಮನ ಪಾತ್ರ ಮಾಡಿದ್ದಾರೆ.
1985ರಲ್ಲಿ ಮಾರುತಿ ಕಲಾಬಳಗ, ಎಲೆಕ್ಟ್ರಾನಿಕ್ ಸಿಟಿ ಎಂಬ ಸಂಘ ಸ್ಥಾಪಿಸಿ, ಈ ಸಂಘದಿಂದ ಕಳೆದ 25 ವರ್ಷಗಳಿಂದ ಅನೇಕ ನಾಟಕಗಳನ್ನು ಕರ್ನಾಟಕದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಪ್ರದರ್ಶನ ಮಾಡಿ ಜನವನ ಸೆಳೆದಿದ್ದಾರೆ. ಈ ಮಾರುತಿ ಕಲಾ ಬಳಗದಲ್ಲಿ ಸಾವಿರಾರು ಕರ್ನಾಟಕದ ಎಲ್ಲಾ ಜಿಲ್ಲೆಯ ಕಲಾವಿದರಿಗೂ ನಟಿಸಲು ಅವಕಾಶ ಕಲ್ಪಿಸಿದ್ದಾರೆ. ನಲ್ಲಾತಂಗ ಎಂಬ ನಾಟಕದಲ್ಲಿ ರಾಮಸಿಂಹ, ವಂಗರಾಜ, ನಲರಾಜ ವಿಜಯಸಿಂಹ, ಶ್ರೀ ಶನೇಶ್ವರ ಪಾತ್ರಗಳನ್ನು ಒಂದೊಂದು ಪಾತ್ರಗಳನ್ನು 25 ಬಾರಿ ಮಾಡಿದ್ದಾರೆ. ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ 2007ರಿಂದ ಈವರೆಗೆ 150 ನಾಟಕ ಪ್ರದರ್ಶಿಸಿದ್ದಾರೆ. ತುಮಕೂರು ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ 50 ಪ್ರದರ್ಶನವಾಗಿದೆ. ಪ್ರಚಂಡ ರಾವಣ ನಾಟಕದಲ್ಲಿ ರಾವಣ, ಆಂಜನೇಯ ಪಾತ್ರಗಳಲ್ಲಿ ಅನೇಕ ಬಾರಿ ಅಭಿನಯಿಸಿದ್ದಾರೆ. ಸುಭದ್ರ ಕಲ್ಯಾಣ ನಾಟಕದಲ್ಲಿ ಅರ್ಜುನ ಪಾತ್ರವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಅಭಿನಯಿಸಿದ್ದಾರೆ. ಇದೇ ರವೀಂದ್ರ ಕಲಾಕ್ಷೇತ್ರದಲ್ಲಿ ತಾ. 3-2-2025 ರಂದು ಭಾರತದ ಮಹಾಕಾವ್ಯಗಳು ರಾಮಾಯಣ ಮಹಾಭಾರತ ಆಧರಿಸಿ ಹೆಸರಾಂತ ರಂಗ ಕಲಾವಿದರು ರಂಗಶ್ರೀ ರಂಗಸ್ವಾಮಿ ಅವರ ಪರಿಕಲ್ಪನೆಯಲ್ಲಿ ಹೆಸರಾಂತ ರಂಗಕರ್ಮಿ ಎಸ್.ಎಲ್.ಎನ್. ಸ್ವಾಮಿ ನಿರ್ದೇಶನದಲ್ಲಿ ಪ್ರದರ್ಶನಗೊಂಡ ಯುಗೇ ಯುಗೇ ಪೌರಾಣಿಕ ನಾಟಕವು ಇಂಡಿಯನ್ ಬುಕ್ ಅಫ್ ರೆಕಾರ್ಡ್ ನಲ್ಲಿ ದಾಖಲಾಗಿದೆ. ಈ ನಾಟಕದಲ್ಲಿ ತ್ರೇತ, ದ್ವಾಪರ ಯುಗಗಳ ರಾವಣ ದುರ್ಯೋಧನ ಒಂದೇ ವೇದಿಕೆಯಲ್ಲಿ ಬಂದು ಈ ಎರಡೂ ಪಾತ್ರಗಳನ್ನು ಇವರು ಯಶಸ್ಸಿಯಾಗಿ ನಿಭಾಯಿಸಿದ್ದಾರೆ. ಬೆಂಗಳೂರಿನ ಪುರಭವನದಲ್ಲಿ 2013ರಲ್ಲಿ ಸತತ 108 ಗಂಟೆಗಳ ಕಾಲ ಪ್ರದರ್ಶಿತ ಸಮಗ್ರ ಮಹಾಭಾರತ ಪೌರಾಣಿಕ ನಾಟಕದಲ್ಲಿ ಬಬ್ರುವಾಹನ ಪಾತ್ರ ನಿರ್ವಹಿಸಿದ್ದಾರೆ. ಹಲವಾರು ಸಂಘ ಸಂಸ್ಥೆಗಳು ಕಲಾವಿದರು ಇವರಿಗೆ ಇವರ ತಂಡಕ್ಕೆ ಪ್ರಶಸ್ತಿ. ಪುರಸ್ಕಾರ ನೀಡಿ ಸನ್ಮಾನಿಸಿವೆ. ಈವರೆಗೆ 250 ನಾಟಕಗಳನ್ನು ಶ್ರೀ ಮಾರುತಿ ಕಲಾ ಬಳಗದಿಂದ ಪ್ರದರ್ಶನ ಕೊಟ್ಟಿದ್ದಾರೆ.
ತುಮಕೂರು ಸಿದ್ಧಗಂಗ ಮಠದಲ್ಲಿ ಬಿಕಾಂ ಪದವಿ ಮಾಡಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸನ್ ವೇರ್ ಗ್ರೂಪ್ ಆಫ್ ಕಂಪನೀಸ್ ಎಚ್.ಆರ್. ಮೇನೇಜರ್ ಆಗಿ 16 ವರ್ಷ ಸೇವೆ ಸಲ್ಲಿಸಿ ಈಗ ಜೆಡಿಎಸ್ ಪಕ್ಷದ ಬೆಂಗಳೂರು ಮಹಾನಗರ ಪ್ರಧಾನ ಕಾರ್ಯದರ್ಶಿ ಆಗಿದ್ದಾರೆ. ನಾನು ರೈತ ಕುಟುಂಬದಿಂದ ಬಂದು ಈಗಲೂ ಹಳ್ಳಿಗೆ ಹೋಗಿ ಕೃಷಿ ಕೆಲಸ ಮಾಡುತ್ತೇನೆ, ನನ್ನ ಜೀವಿತ ಕಾಲದಲ್ಲಿ ಇನ್ನೂ 250 ನಾಟಕಗಳನ್ನು ಅಭಿನಯಿಸುವ ಅಭಿಲಾಷೆ ಇದೆ ಎನ್ನುತ್ತಾರೆ.
– –
ಗೊರೂರು ಅನಂತರಾಜು, ಹಾಸನ
ಹುಣಸಿನಕೆರೆ ಬಡಾವಣೆ,
29ನೇ ವಾರ್ಡ್, 3 ನೇ ಕ್ರಾಸ್
ಹಾಸನ – 573201