ಮೂಡಲಗಿ – ಗೋಕಾಕ ತಾಲೂಕು ವ್ಯಾಪ್ತಿಯ ಅರಭಾವಿ ಕ್ಷೇತ್ರದಲ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಬೆಳೆ ಹಾನಿ ಪರಿಹಾರ ಪಡೆದುಕೊಂಡ ರೈತರ ಹೆಸರುಗಳನ್ನು ಹಾಗೂ ಅವರು ಪಡೆದ ಮೊತ್ತದ ವಿವರಗಳನ್ನು ಜಿಲ್ಲಾಧಿಕಾರಿಗಳ ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿ, ತಹಶೀಲ್ದಾರ ಕಚೇರಿ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರಕಟಿಸಬೇಕೆಂಬ ಆದೇಶವಿದ್ದರೂ ಪ್ರಕಟಿಸದ ಅಧಿಕಾರಿಗಳ ವಿರುದ್ಧ ಕೇಂದ್ರ ಕೃಷಿ ಸಚಿವಾಲಯಕ್ಕೆ ದೂರು ಸಲ್ಲಿಸಲಾಗುವುದು ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಹೇಳಿದ್ದಾರೆ.
ದಿ. ೦೨.೦೫.೨೦೨೪ ರಂದು ಸರ್ಕಾರ ಹೊರಡಿಸಿರುವ ಸುತ್ತೋಲೆಯಲ್ಲಿ ರೈತರು ಪಡೆದುಕೊಂಡ ಬೆಳೆ ಹಾನಿ ಪರಿಹಾರದ ವಿವರಗಳನ್ನು ಎಲ್ಲ ಇಲಾಖೆಗಳಲ್ಲಿ ಪ್ರಕಟಿಸಬೇಕು ಎಂದಿದ್ದರೂ ಈ ಎಲ್ಲ ಕಚೇರಿಗಳಲ್ಲಿ ಪ್ರಕಟಿಸಿಲ್ಲ. ರೈತರಿಗೂ ಸರಿಯಾದ ಮಾಹಿತಿ ನೀಡಿಲ್ಲ ಇದರಿಂದ ಈ ವಿಷಯದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿರುವ ಶಂಕೆಯಿದೆ ಎಂದು ಅವರು ಪ್ರಕಟಣೆಯೊಂದರಲ್ಲಿ ಹೇಳಿದ್ದಾರೆ.
ಅಲ್ಲದೆ ತಾವು ಮಾಹಿತಿ ಹಕ್ಕಿನ ಅಡಿಯಲ್ಲಿ ಕೇಳಿದ ಮಾಹಿತಿಯನ್ನು ಸರಿಯಾಗಿ ಕೊಡದೆ ಕೃ ಇಲಾಖೆಯ ಅಧಿಕಾರಿಗಳು ಕಂದಾಯ ಇಲಾಖೆಯ ಕಡೆಗೆ ಬೊಟ್ಟು ಮಾಡಿದರೆ, ಕಂದಾಯ ಇಲಾಖೆಯ ಅಧಿಕಾರಿಗಳು ಕೃಷಿ ಇಲಾಖೆಯ ಕಡೆಗೆ ಬೊಟ್ಟು ಮಾಡುತ್ತಿದ್ದು ಸರ್ಕಾರದ ಆದೇಶದ ಉಲ್ಲಂಘನೆಯಾಗಿದೆ. ಈ ಬಗ್ಗೆ ಕೇಂದ್ರ ಗೃಹ ಮಂತ್ರಾಲಯಕ್ಕೆ ದೂರು ನೀಡಲಾಗುವುದು ಹಾಗೂ ಅಧಿಕಾರಿಗಳ ವಿರುದ್ಧ ನ್ಯಾಯಲಯಕ್ಕೂ ದೂರು ನೀಡಲಾಗುವುದು ಎಂದು ಭೀಮಪ್ಪ ಗಡಾದ ತಿಳಿಸಿದ್ದಾರೆ.
ಈ ಬಗ್ಗೆ ಮುಖ್ಯ ಕಾರ್ಯದರ್ಶಿಗಳಿಗೆ ಹಾಗೂ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಯವರಿಗೆ ಪತ್ರವನ್ನೂ ಬರೆಯಲಾಗಿದ್ದು, ರೈತರಿಗೆ ಬೆಳೆ ಪರಿಹಾರ ವಿತರಣೆ ಮಾಡುವಲ್ಲಿ ಬೆಳಗಾವಿ ಜಿಲ್ಲೆಯ ಅಧಿಕಾರಿಗಳು ಸರ್ಕಾರದ ಷರತ್ತುಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿದ್ದಾರೆ, ರಾಜಕೀಯ ಒತ್ತಡಕ್ಕೆ ಮಣಿದು ಪರಿಹಾರ ನೀಡುವಲ್ಲಿ ಪಾರದರ್ಶಕತೆ ಕಾಯ್ದುಕೊಂಡಿಲ್ಲ, ಬೆಳೆ ಪರಿಹಾರ ವಿತರಣೆಯಲ್ಲಿ ತಾರತಮ್ಯ ನೀತಿ ಅನುಸರಿಸಿದ್ದಾರೆ, ಇದರಿಂದಾಗಿ ಆಯಾ ತಹಶಿಲ್ದಾರರ ಕಚೇರಿಗಳ ಮುಂದೆ ರೈತರು ಪ್ರತಿಭಟನೆ ನಡೆಸಿರುವುದನ್ನೂ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮುಖ್ಯವಾಗಿ ರೈತರ ಪರಿಹಾರದ ಬಗ್ಗೆ ಮಾಹಿತಿ ಹಕ್ಕಿನಡಿ ಕೇಳಲಾದ ಅರ್ಜಿಗೆ ಉತ್ತರ ನೀಡದೆ ಕೃಷಿ ಇಲಾಖೆಯವರು ತಹಶೀಲ್ದಾರರಿಗೂ ಹಾಗೂ ತಹಶೀಲ್ದಾರರು ಕೃಷಿ ಇಲಾಖೆಗೂ ಜವಾಬ್ದಾರಿ ಹಸ್ತಾಂತರಿಸಿದ್ದು ಅನುಮಾನಕ್ಕೆ ಕಾರಣವಾಗಿದ್ದು ರೈತರ ಬೆಳೆ ಹಾನಿ ಪರಿಹಾರದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿರುವ ಶಂಕೆಯನ್ನು ಗಡಾದ ಅವರು ವ್ಯಕ್ತಪಡಿಸಿದ್ದಾರೆ.