ರೈತನಿಗೆ ಅನ್ಯಾಯವಾಗಬಾರದಂತೆ ನಡೆದುಕೊಳ್ಳಬೇಕಾಗಿದೆ
ನಮ್ಮ ದೇಶದಲ್ಲಿ ಅನ್ನದಾತನೆಂದು ಕರೆಯಲ್ಪಡುವ ರೈತನಿಗೆ ಇನ್ನೊಂದು ಹೆಸರೆಂದರೆ ದೇಶದ ಬೆನ್ನೆಲುಬು ಅಂತ ಇದೆ. ಆದರೆ ಇಂದಿನ ಭ್ರಷ್ಟ ರಾಜಕೀಯ ವ್ಯವಸ್ಥೆ, ಭ್ರಷ್ಟ ಆಡಳಿತ ವ್ಯವಸ್ಥೆ ರೈತನ ಬೆನ್ನೆಲುಬನ್ನೇ ಮುರಿದು ಹಾಕಿದೆಯೆಂದರೆ ತಪ್ಪಾಗಲಾರದು. ಇದಕ್ಕೆ ಕಾರಣವೆಂದರೆ ಸರ್ಕಾರ ರೈತನ ಹೆಸರಿನಲ್ಲಿ ಜಾರಿಗೆ ತರುವ ಅನೇಕ ಯೋಜನೆಗಳ ಅರಿವು ರೈತನಿಗೆ ಇರದೇ ಇರುವುದು ಒಂದು ವೇಳೆ ಅರಿವಿದ್ದರೂ ಅದನ್ನು ಜಾರಿಗೆ ತರುವಾಗ ಆಡಳಿತ ವ್ಯವಸ್ಥೆ ಹಾಗೂ ಅಧಿಕಾರಿಗಳು ರೈತನ ದಾರಿ ತಪ್ಪಿಸುವುದು.
ಮಾತೆತ್ತಿದರೆ ಇಂದಿನ ರಾಜಕಾರಣಿಗಳು ತಾವು ರೈತನಿಗಾಗಿ ಇಂದ್ರನ ಅರಮನೆಯನ್ನೇ ಕೊಡುತ್ತೇವೆಂಬ ಭರವಸೆ ಕೊಡುತ್ತಾರೆ. ಅನೇಕ ಯೋಜನೆಗಳನ್ನು ಜಾರಿಗೆ ತಂದು ರೈತನ ಬಾಳನ್ನು ಹಸನು ಮಾಡುತ್ತೇವೆ ಎಂಬುದಾಗಿ ಬೊಗಳೆ ಬಿಡುತ್ತಾರೆ. ಅಷ್ಟೇ ಯಾಕೆ ತಾವೂ ಕೂಡ ರೈತ ಕುಟುಂಬದಿಂದ ಬಂದಿದ್ದು ತಮಗೆ ರೈತರ ಎಲ್ಲಾ ಕಷ್ಟಗಳು ಗೊತ್ತಿವೆಯೆಂಬಂತೆ ತಮ್ಮನ್ನೇ ಬಿಂಬಿಸಿ ರೈತನ ಕಣ್ಣಲ್ಲಿ ಧೂಳು ಎರಚುತ್ತಾರೆ.
ರೈತನ ಬಾಳು ಬಂಗಾರವಾಗಿಸಲು ಕೃಷಿ ಸಚಿವಾಲಯವೇ ಇದೆ, ದೇಶದ ತುಂಬೆಲ್ಲ ಹೋಬಳಿ ಅಷ್ಟೇ ಯಾಕೆ ಗ್ರಾಮ ಗ್ರಾಮಗಳಿಗೂ ಒಂದು ರೈತ ಕಲ್ಯಾಣ ಕೇಂದ್ರಗಳಿವೆ ಆದರೂ ಸ್ವಾತಂತ್ರ್ಯ ಸಿಕ್ಕು ಇಷ್ಟು ವರ್ಷಗಳಾದರೂ ರೈತರ ಹೆಸರಿನಲ್ಲಿ ಅಧಿಕಾರಿಗಳು, ರಾಜಕಾರಣಿಗಳ ಕಲ್ಯಾಣವಾಯಿತೇ ಹೊರತು ರೈತನ ಕಲ್ಯಾಣವಾಗಲೇ ಇಲ್ಲವೆಂಬುದನ್ನು ವಿಷಾದದಿಂದ ಹೇಳಬೇಕಾಗಿದೆ.
ಭ್ರಷ್ಟಾಚಾರದ ವಿಷಯ ಬಂದಾಗ ಒಂದು ಮಾತು ಹೇಳಬೇಕೆನಿಸುತ್ತದೆ. ಕೃಷಿ ಇಲಾಖೆಯಲ್ಲಿ, ಕಂದಾಯ ಇಲಾಖೆಯಲ್ಲಿ ಸಾಕಷ್ಟು ಭ್ರಷ್ಟಾಚಾರ ತಾಂಡವವಾಡುತ್ತಿದೆ. ಆದರೆ ರೈತನ ವಿಷಯಕ್ಕೆ ಬಂದಾಗಲಾದರೂ ಅಧಿಕಾರಿಗಳು ತಮ್ಮ ಲಂಚಕೋರತನವನ್ನು ಕಡಿಮೆ ಮಾಡಿಕೊಳ್ಳಬಹುದಿತ್ತು ಆದರೆ ಹಾಗಾಗಿಲ್ಲ ಅತಿ ಹೆಚ್ಚು ಲಂಚಕೋರತನ ನಡೆಯುವುದೇ ಕೃಷಿ ಸಂಬಂಧಿತ ಕಂದಾಯ ಇಲಾಖೆಗಳಲ್ಲಿ !
ರೈತನ ಜಮೀನು ಮೋಜಣಿ ಮಾಡುವುದಿರಲಿ, ಫೋಡಿ ಪ್ರಕರಣವಿರಲಿ ಹೆಸರು ದಾಖಲಾತಿ ಇರಲಿ ಟಿ ಸಿ ಸಮಸ್ಯೆ ಇರಲಿ ಮಾಡಿಕೊಡಬೇಕಾದರೆ ರೈತನನ್ನು ನಾಯಿಯಂತೆ ಅಲೆಸಲಾಗುತ್ತಿದೆ. ಉತಾರ, ಪಿಟಿ ಶೀಟ್ ಅಂಥ ಒಂದೊಂದು ದಾಖಲೆಗಳಿಗೂ ಸಾವಿರಾರು ರೂಪಾಯಿಗಳನ್ನು ರೈತರ ಜೇಬಿನಿಂದ ಕದಿಯಲಾಗುತ್ತಿದೆ. ರೈತ ಕಷ್ಟ ಪಟ್ಟು ಬೆಳೆದ ಕಬ್ಬು ಕೊಂಡು ಬೆಳೆದ ರೈತನಿಗಿಂತ ಹತ್ತು ಪಟ್ಟು ಲಾಭ ಮಾಡಿಕೊಳ್ಳುವ ಸಕ್ಕರೆ ಕಾರ್ಖಾನೆಯವರು ರೈತನ ಕಬ್ಬಿಗೆ ಯೋಗ್ಯ ದರ ನೀಡಲು ಅದೂ ಸರಿಯಾದ ಸಮಯದಲ್ಲಿ ನೀಡಲು ಮೀನ ಮೇಷ ಎಣಿಸುತ್ತಾರೆ. ಕೆಲವೊಮ್ಮೆ ಇಂದು ಕಳಿಸಲಾದ ಕಬ್ಬಿನ ಬಿಲ್ ಮೂರ್ನಾಲ್ಕು ತಿಂಗಳು ಕಳೆದ ನಂತರ ಬರುತ್ತದೆ. ಕೆಲವೊಂದು ಕಾರ್ಖಾನೆಯವರು ಬಿಲ್ಲನ್ನೇ ಕೊಡದೇ ರೈತನ ಬದುಕನ್ನೇ ಉದ್ಧಾರ ಮಾಡಿದ ಘಟನೆಗಳೂ ಜರುಗಿಹೋಗಿವೆ.
ಇದರಂಥ ವಿಪರ್ಯಾಸ ಬೇರೆ ಇದೆಯೇ ?
ಗ್ರಾಮ, ಹೋಬಳಿ ಮಟ್ಟದಲ್ಲಿ ರೈತ ಕಲ್ಯಾಣ ಕೇಂದ್ರ, ಸಂಪರ್ಕ ಕೇಂದ್ರಗಳನ್ನು ತೆರೆದುಕೊಂಡು ಕುಳಿತವರು ರೈತನಿಗೆ ಸಿಗಬೇಕಾದ ಸರ್ಕಾರಿ ಸೌಲಭ್ಯಗಳ ಬಗ್ಗೆ ಮಾಹಿತಿ ಕೊಡದೇ ತಾವೋ ಅಥವಾ ತಮ್ಮ ಸಂಬಂಧಿಗಳಿಗಷ್ಟೇ ನೀಡಿ ಗುಳುಂ ಮಾಡುತ್ತಾರೆ. ಸರ್ಕಾರದಿಂದ ನ್ಯಾಯವಾಗಿ ಬಡ ರೈತನಿಗೆ ಸಿಗಬೇಕಾದ ಸಬ್ಸಿಡಿ ಹಣ ಪಟ್ಟಭದ್ರರಿಗೆ ಹೋಗುತ್ತದೆ. ಕಡಿಮೆ ಬಡ್ಡಿ ಅಥವಾ ಶೂನ್ಯ ಬಡ್ಡಿ ದರದ ಸಾಲ ಕೇವಲ ಶ್ರೀಮಂತ ರೈತರಿಗೆ ಸಿಗುತ್ತದೆ…..
ಹೀಗೆ ಅನ್ನದಾತ ಎನಿಸಿಕೊಂಡ ರೈತನಿಗೆ ಹೆಜ್ಜೆ ಹೆಜ್ಜೆಗೂ ಅನ್ಯಾಯವಾಗುತ್ತಿದೆ. ಇದು ನಿಲ್ಲಬೇಕಾದರೆ ರೈತನಲ್ಲಿ ಜಾಗೃತಿ ಮೂಡಬೇಕು, ರೈತರಲ್ಲಿ ಒಗ್ಗಟ್ಟು ಸಂಘಟನಾ ಭಾವ ಮೂಡಬೇಕು. ಯಾರಿಗಾದರೂ ಒಬ್ಬ ರೈತನಿಗೆ ಅನ್ಯಾಯವಾದಾಗ ಉಳಿದ ರೈತರು ಒಂದಾಗಿ ಪ್ರತಿಭಟಿಸಬೇಕು. ಸರ್ಕಾರದ ಕಿವಿ ಹಿಂಡಬೇಕು, ಅಧಿಕಾರಿಗಳ ದರ್ಪ, ದೌಲತ್ತನ್ನು ಖಂಡಿಸಬೇಕು. ಹಾಗೆಯೇ ಅಧಿಕಾರಿಗಳು ತಮ್ಮ ಸೇವೆ ಅನ್ನದಾತನಿಗೆ ಸರಿಯಾಗಿ ಸಿಗಬೇಕು ಎಂಬ ಭಾವನೆಯಿಂದ ಕೆಲಸ ಮಾಡಿದರೆ ಅವರ ನೌಕರಿಯೇ ಸಾರ್ಥಕವಾದಂತಾಗುತ್ತದೆ. ರೈತರ ಬಾಳೂ ಹಸನಾಗುತ್ತದೆ.
ಉಮೇಶ ಬೆಳಕೂಡ,
ತಾಲೂಕಾ ಅಧ್ಯಕ್ಷರು, ಭಾರತೀಯ ಕಿಸಾನ ಸಂಘ, ಮೂಡಲಗಿ