ಮೂಡಲಗಿ: ರೈತರ ನೀರಾವರಿ ಸಮಸ್ಯೆಗಳು ಮತ್ತು ಜಮೀನುಗಳಿಗೆ ಹೋಗುವ ರಸ್ತೆಗಳು, ಈ ಎಲ್ಲ ಸಮಸ್ಯೆಗಳಿಗೆ ಪರಿಹಾರಾರ್ಥವಾಗಿ ರೈತರೇ ನೇತೃತ್ವ ವಹಿಸುವ ನೀರಾವರಿ ಸಂಘಗಳ ರಚನೆಗೆ ಸರ್ಕಾರ ಆದ್ಯತೆ ನೀಡಿತ್ತು. ಆದರೆ ನೀರಾವರಿ ಸಂಘಗಳ ಪರಿಕಲ್ಪನೆ ಇಂದು ವಿಫಲವಾಗಿದೆ. ಹೀಗಾಗಿ ಈ ಬಗ್ಗೆ ಸರ್ಕಾರ ಗಂಭೀರವಾದ ಚಿಂತನೆ ಮಾಡಬೇಕಾದ ಅಗತ್ಯವಿದೆ ಎಂದು ರಾಜ್ಯಸಭಾ ಸಂಸದ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಅವರು ಹೇಳಿದರು.
ಶನಿವಾರ ಮಾ-5 ರಂದು ಕರ್ನಾಟಕ ನೀರಾವರಿ ನಿಗಮದ ಅನುದಾನದಡಿ ತುಕ್ಕಾನಟ್ಟಿ ಗ್ರಾಮದ ಹತ್ತಿರ ಆನೆನ್ನವರ ಕಾಲುವೆ ಪಕ್ಕದ ಸೇವಾ ರಸ್ತೆ ದುರಸ್ತಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು ಸರ್ಕಾರವೇ ಎಲ್ಲ ಸಮಸ್ಯೆಗಳನ್ನು ಪರಿಹಾರ ಮಾಡಲು ಸಾಧ್ಯವಿಲ್ಲದ ಕಾರಣದಿಂದ ರೈತರಲ್ಲಿಯೇ ಈ ರೀತಿಯಾದ ನೀರಾವರಿ ಸಂಘಗಳನ್ನು ಸ್ಥಾಪನೆ ಮಾಡಿ ಅವುಗಳಿಗೆ ನೀರಾವರಿ ನಿರ್ವಹಿಸುವಂತ ಹೊಣೆಯನ್ನು ನೀಡಲಾಗಿತ್ತು, ಆದರೆ ಇವು ವಿಫಲವಾದ ಕಾರಣ ಸಂಘಗಳು ರೈತರ ಸಹಾಯಕ್ಕೆ ಧಾವಿಸುತ್ತಿಲ್ಲ, ಸರ್ಕಾರವು ಕೂಡ ರೈತರ ಸಹಾಯಕ್ಕೆ ಧಾವಿಸುತ್ತಿಲ್ಲ ಹೀಗಾಗಿ ನೀರಾವರಿ ಪ್ರದೇಶಕ್ಕೆ ಒಳಪಟ್ಟಂತಹ ರೈತರು ತ್ರಿಶಂಕು ಪರಿಸ್ಥಿತಿಗೆ ಒಳಗಾಗಿದ್ದಾರೆ.
ಈ ಸಮಸ್ಯೆ ಹೊಗಲಾಡಿಸುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮಕೈಗೊಂಡು ಆ ಸಂಘಗಳನ್ನು ಸಶಕ್ತಿಕರಣಗೊಳಿಸಬೇಕಾಗಿದೆ. ಇಲ್ಲವೇ ಸರ್ಕಾರ ಸಂಘಗಳನ್ನು ವಿಸರ್ಜನೆ ಮಾಡಿ ನೇರವಾಗಿ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾದ ದಿಶೆಯಲ್ಲಿ ಪ್ರಯತ್ನ ಮಾಡಬೇಕು. ಈ ಎರಡು ಇಲ್ಲದೇ ರೈತರ ಕಷ್ಟಗಳು ತ್ರಿಶಂಕು ಸ್ಥಿತಿಯಲ್ಲಿ ಇದ್ದಾವೆ, ಇದರ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತನೆ ಮಾಡಬೇಕಾದ ಅಗತ್ಯ ಇವತ್ತು ಬಹಳ ಇದೆ ಎಂದರು.
ಪ್ರಗತಿಪರ ರೈತರಾದ ಭೀಮಪ್ಪ ಕಂಕಣವಾಡಿ ಚಂದ್ರಪ್ಪ ಬಾಗೇವಾಡಿ, ಪುಂಡಲಿಕ ಅರಭಾಂವಿ, ಕುಮಾರ ಮರ್ದಿ, ಸಿದ್ದಾರೂಡ ಗದಾಡಿ, ಅಜ್ಜಪ್ಪಾ ಮನ್ನಿಕೇರಿ, ಸತ್ತೆಪ್ಪ ಮಲ್ಲಾಪೂರ, ಪ್ರಕಾಶ ಅರಭಾಂವಿ, ಕೃಷ್ಣಪ್ಪ ಗದಾಡಿ, ಬಸವರಾಜ ಕಡಾಡಿ, ಆನಂದ ಹೆಬ್ಬಾಳ, ಪಂಚಾಯತ ಅಭಿವೃದ್ಧಿ ಅಧಿಕಾರಿ ವೀರಭದ್ರ ಗುಂಡಿ, ಗುತ್ತಿಗೆದಾರ ಈರಣ್ಣ ಮುನ್ನೋಳಿಮಠ, ಮಹಾಂತೇಶ ಬಿ.ಪಾಟೀಲ. ಸೇರಿದಂತೆ ಗ್ರಾಮ ಪಂಚಾಯತ ಸದಸ್ಯರು, ಪ್ರಗತಿಪರ ರೈತರು ಉಪಸ್ಥಿತರಿದ್ದರು.