ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ. ವಿ ಎಸ್ ಮಾಳಿ
ಡಾ.ವಿ.ಎಸ್.ಮಾಳಿ ಅವರು ಕವಿಯಾಗಿ ಕಥೆಗಾರರಾಗಿ, ಕಾದಂಬರಿಕಾರರಾಗಿ, ಅಂಕಣಕಾರರಾಗಿ, ವಿಮರ್ಶಕರಾಗಿ, ಸಂಶೋಧಕರಾಗಿ, ಜಾನಪದ ವಿದ್ವಾಂಸರಾಗಿ,, ಸಂಪಾದಕರಾಗಿ, ಸಾರಸ್ವತ ಲೋಕದಲ್ಲಿ ಚಿರಪರಿಚಿತರು. ಬಹುಮುಖ ವ್ಯಕ್ತಿತ್ವದ ದೈವ ಪ್ರತಿಭೆಯ ಮಾಳಿ ಅವರು ಹಾರೂಗೇರಿಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ವೃಷಭೇಂದ್ರ ಪದವಿ ಕಾಲೇಜು ಪ್ರಾಂಶುಪಾಲರಾಗಿ, ಬಿ ಆರ್ ಜರೂರು ಸಂಶೋಧನಾ ಕೇಂದ್ರದ ನಿರ್ದೇಶಕರಾಗಿ, ದರೂರ ಶಿಕ್ಷಣ ಸಂಸ್ಥೆಯ ಆಡಳಿತಗಾರರಾಗಿ ಮಾಡಿರುವ ಕಾರ್ಯ ವೈಶಿಷ್ಟ್ಯಪೂರ್ಣವಾಗಿದೆ.
ಕನ್ನಡ ವಿಷಯದ ವಿದ್ಯಾರ್ಥಿಗಳಿಗೆ ಆದರ್ಶವಾಗಿ, ಕನ್ನಡ ಪ್ರಾಧ್ಯಾಪಕರಿಗೆ ರೋಲ್ ಮಾಡೆಲ್, ಬಹುಶ್ರುತ ಸಾಹಿತಿ, ಅಪ್ರತಿಮ ವಾಗ್ಮಿ ,ಶ್ರೇಷ್ಠ ಆಡಳಿತಗಾರ ,ಸವ್ಯಸಾಚಿ ಬರಹಗಾರ, ಅತ್ಯುತ್ತಮ ಸಂಘಟಕ ಮುಂತಾದ ಉಪಾಧಿಗಳಿಗೆ ಭಾಜನರಾಗಿದ್ದಾರೆ. ಅಪ್ಪಟ ಗ್ರಾಮೀಣ ಪ್ರಜ್ಞೆಯ ದೇಸೀ ಪ್ರತಿಭೆಯ ಡಾ .ಮಾಳಿ ಅವರು ಹಾರೂಗೇರಿಯಲ್ಲಿ ಜರುಗಲಿರುವ ಬೆಳಗಾವಿ ಜಿಲ್ಲೆಯ ೧೭ ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸುತ್ತಿರುವದು ಸುವರ್ಣಕೆ ಸುಗಂಧ ಬೆರೆಸಿದಂತಾಗಿದೆ.
ಹಾರೂಗೇರಿಯಂಥ ಹಳ್ಳಿಗಾಡಿನ ಪದವಿ ಕಾಲೇಜದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಸಂಶೋಧನಾ ಕೇಂದ್ರ ಆರಂಭಿಸಿ, ಗ್ರಾಮೀಣ ಭಾಗದ ಉಪನ್ಯಾಸಕರಿಗೆ ಎಂಎ, ಎಂಫಿಲ್. ಪಿಎಚ್ಡಿ ಪದವಿಯನ್ನು ಪಡೆಯಲು ಪೂರಕವಾಗಿದ್ದು ಮಹತ್ವದ ಅಂಶವಾಗಿದೆ. ಇಂದು ನೂರಾರು ಜನರು ಡಾಕ್ಟರೇಟ್ ಪದವಿ ಪಡೆದು, ಕಾಲೇಜು ಗಳಲ್ಲಿ ಪ್ರಾಧ್ಯಾಪಕರಾಗಿ, ತಮ್ಮ ಭವಿಷ್ಯರೂಪಿಸಿಕೊಳ್ಳಲು ಕಾರಣವಾಗಿದೆ. ಸಂಶೋಧನೆ ಕೇಂದ್ರದ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಶಿಬಿರ ನಡೆಸಿ, ಸಾವಿರಾರು ವಿದ್ಯಾರ್ಥಿಗಳ ಬದುಕು ಕಟ್ಟಿಕೊಳ್ಳಲು ಭದ್ರ ಬುನಾದಿಯಾಗಿದೆ.
ಡಾ.ವಿಠ್ಠಲ ಸದಾಶಿವ ಮಾಳಿ ಅವರು ಮೂಲತಃ ಅಥಣಿ ತಾಲೂಕಿನ ಜಂಬಗಿ ಗ್ರಾಮದಲ್ಲಿ ಜೂನ್ ಒಂದು ೧೯೬೨ ರಲ್ಲಿ ಜನಿಸಿದರು, ತಂದೆ ಸದಾಶಿವ ತಾಯಿ ದಾನಮ್ಮ.ತಮ್ಮ ಪ್ರಾಥಮಿಕ ಶಿಕ್ಷಣವನ್ನು ಜಂಬಗಿ ಯಲ್ಲಿ, ಪ್ರೌಢಶಾಲೆ ಮದಭಾವಿಯಲ್ಲಿ, ಪಪೂ ಅಥಣಿಯ ಜೆಎ ಜೂನಿಯರ್ ಕಾಲೇಜದಲ್ಲಿ, ಪದವಿಯನ್ನು ಅಥಣಿಯ ಶ್ರೀ ಶಿವಯೋಗಿ ಮುರುಘೇಂದ್ರ ಪದವಿ ಕಾಲೇಜದಲ್ಲಿ ಪೂರೈಸಿದರು. ಎಂಎ ಹಾಗೂ ಡಾಕ್ಟರೇಟ್ ಪದವಿಯನ್ನು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಂಪಾದಿಸಿದರು.ಆರಂಭದಿಂದಲೂ ಪ್ರಥಮ ದರ್ಜೆಯಲ್ಲಿ ಆಯಾ ಸಂಸ್ಥೆ ಗೆ ಪ್ರಥಮರಾಗಿ ತೇರ್ಗಡೆಯಾಗಿ, ಎಂಎ ಪದವಿಯನ್ನು ಸುವರ್ಣ ಪದಕದೊಂದಿಗೆ ಪಡೆದದ್ದು ಗ್ರಾಮೀಣ ಭಾಗದವರಿಗೆ ಬಹುದೊಡ್ಡ ಆದರ್ಶವಾಗಿ ಪರಿಣಮಿಸಿತ್ತು.
ಶ್ರೇಷ್ಠ ವಿದ್ವಾಂಸರಾಗಿದ್ದ ಡಾ .ಬಿ.ಆರ್. ಹಿರೇಮಠರ ಮಾರ್ಗದರ್ಶನದಲ್ಲಿ – “ಕನ್ನಡ ಸಾಹಿತ್ಯ ದಲ್ಲಿ ಕರ್ಣ ” ವಿಷಯದಲ್ಲಿ ಮಹಾಪ್ರಬಂಧ ಮಂಡಿಸಿ, ಡಾಕ್ಟರೇಟ್ ಪದವಿ ಸಂಪಾದಿಸಿದರು.ಶತಮಾನದ ಸಂಶೋಧಕ ಪಾಂಡಿತ್ಯದ ಪರ್ವತವೆಂಬ ಅಭಿದಾನಹೊತ್ತ ಡಾ.ಎಂ.ಎಂ.ಕಲ್ಬುರ್ಗಿ ಮಹಾಗುರುಗಳ ಮಾರ್ಗದರ್ಶನದಂತೆ ಸಂಶೋಧನಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಕೊಕಟನೂರ ಗ್ರಾಮದ ಸಾಂಸ್ಕೃತಿಕ ಅಧ್ಯಯನ, ಠಾಣಾ ದೀವಿಗೆ, ಜನಪದ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು, ಲಿಂಗಾಯತ ಮಾಲಗಾರರು ಮುಂತಾದ ಶ್ರೀಯುತರ ಸಂಶೋಧನಾ ಗ್ರಂಥಗಳನ್ನು ರಚಿಸಿದ್ದಾರೆ.
ಡಾ. ಮಾಳಿ ಅವರು ಹಾರೂಗೇರಿ ಶ್ರೀ ವೃಷಭೇಂದ್ರ ಪದವಿ ಕಾಲೇಜದಲ್ಲಿ ೧೯೮೫ ರಲ್ಲಿ ಉಪನ್ಯಾಸಕ ವೃತ್ತಿಯನ್ನು ಆರಂಭಿಸಿ., ಸಹಾಯಕ ಪ್ರಾಧ್ಯಾಪಕ.ಸಹ ಪ್ರಾಧ್ಯಾಪಕರಾಗಿ, ಕನ್ನಡ ವಿಭಾಗದ ಮುಖ್ಯಸ್ಥರಾಗಿ, ಕಾಲೇಜು ಪ್ರಾಚಾರ್ಯರಾಗಿ, ಸಂಶೋಧನಾ ಕೇಂದ್ರದ ನಿರ್ದೇಶಕರಾಗಿ, ಶಿಕ್ಷಣ ಸಂಸ್ಥೆಯ ಆಡಳಿತಗಾರರಾಗಿ ಕಾರ್ಯ ನಿರ್ವಹಿಸಿದ್ದು ಅಪೂರ್ವ. ಮಾರ್ಗದರ್ಶಕರಾಗಿ ಹದಿನೆಂಟು ಎಂಫಿಲ್, ಇಪ್ಪತ್ತು ವಿದ್ಯಾರ್ಥಿಗಳಿಗೆ ಪಿಎಚ್ಡಿ ಪದವಿ ಪಡೆಯಲು ಕಾರಣರಾಗಿದ್ದಾರೆ. ಹಾರೂಗೇರಿಯಲ್ಲಿ ಅಖಂಡ ನಲವತ್ತು ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿದ್ದಾರೆ. ಪದವಿ ಕಾಲೇಜಗಳಲ್ಲಿ ದೆಹಲಿ ಯುಜೀಸಿಯ ಕಡ್ಡಾಯವಾಗಿ ನಡೆಯುವ ನ್ಯಾಕ್ ಪರೀಶೀಲನ ಸಮಿತಿ ಸಂಯೋಜಕರಾಗಿ, ವೃಷಭೇಂದ್ರ ಪದವಿ ಕಾಲೇಜ್ ಗೆ ” ಎ” ಗ್ರೇಡ್ ಪಡೆಯಲು ಸಮರ್ಥ ಮಾರ್ಗದರ್ಶನ ಮಾಡಿದ್ದು ವಿಶೇಷವಾಗಿದೆ. ಡಾ. ಮಾಳಿ ಅವರು ಮಹಾನ್ ಸಂಘಟಕರು ಎಂಬುದಕ್ಕೆ ಹಾರೂಗೇರಿಯಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಕಾರ್ಯಾಗಾರ, ರಾಷ್ಟ್ರೀಯ ವಿಚಾರ ಸಂಕಿರಣಗಳು ಸಮ್ಯಕ್ ಸಾಕ್ಷಿ ಆಗಿವೆ.
ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನ, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ.,ರಾಜ್ಯಮಟ್ಟದ ಜಾನಪದ ಸಮಾವೇಶ, ಶರಣ ಸಾಹಿತ್ಯ ಪರಿಷತ್ತಿನ ಸಮ್ಮೇಳನ, ಕುವೆಂಪು ರಾಷ್ಟ್ರೀಯ ಸಾಂಸ್ಕೃತಿಕ ಶಿಬಿರ, ಕುವೆಂಪು ಕಾವ್ಯ ಕಮ್ಮಟ, ಸಂಶೋಧನಾ ತರಬೇತಿ ಶಿಬಿರ. ಹಸ್ತಪ್ರತಿ ಸಮಾವೇಶ. ,ಇತಿಹಾಸ ಉಳಿಸಿ ಸಪ್ತಾಹ, ಕನ್ನಡ ಮರಾಠಿ ಭಾಷಾಂತರ ಕಮ್ಮಟ, ಗಡಿನಾಡ ಭಾಷಾ ಬಾಂಧವ್ಯ ಮುಂತಾದವು ಪ್ರಮುಖವಾಗಿವೆ. ಅಥಣಿ ವಿಮೋಚನಾ ಸಂಸ್ಥೆಯ ಪ್ರಸಾರಾಂಗದ ನಿರ್ದೇಶಕರಾಗಿ, ಕನ್ನಡ ಜಾಗೃತಿ ಸಮಿತಿಯ ಸದಸ್ಯರಾಗಿ, ಬೆಳಗಾವಿ ಜಿಲ್ಲೆ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಶರಣ ಚೇತನ ಪತ್ರಿಕೆ ಸಲಹೆಗಾರರಾಗಿ,ಲಿಂಗಾಯತ ಮಾಸಪತ್ರಿಕೆ ಸಲಹಾ ಸಮಿತಿ ಸದಸ್ಯರಾಗಿ ನಿರ್ವಹಿಸಿದ ಕಾರ್ಯ ಅಪ್ರತಿಮ. ಡಾ. ಮಾಳಿ ಸವ್ಯಸಾಚಿ ಬರಹಗಾರರು, ಬಹುಶ್ರುತ ಸಾಹಿತಿಗಳು. ಸೃಜನಶೀಲ ಮತ್ತು ಸೃಜನೇತರ ಸಾಹಿತ್ಯದಲ್ಲಿ ಅಪಾರವಾದ ಕೃಷಿ ಮಾಡಿದ್ದಾರೆ.
‘ಮುತ್ತು’ ಕಥಾಸಂಕಲನ, ಕೂಡಲದ ಕಲ್ಪತರು ಕಾದಂಬರಿಯಾಗಿದೆ. ರಸಾಲ, ಸ್ಪಂದನ, ಮರಾಳ, ಅಮೃತದ ಬೆಳೆಸು, ಸಂವಾದ, ಕನ್ನಡಿ, ಸಖ್ಯದ ಆಖ್ಯಾನ, ಪ್ರಾಚೀನ ಕನ್ನಡ ಸಾಹಿತ್ಯದ ಒಳನೋಟಗಳು ವಿಮರ್ಶಾ ಸಂಕಲನಗಳಾಗಿವೆ. ಅಥಣೀಶ,ಡಾ .ಡಿ .ಎಸ್ .ಕರ್ಕೀ, ಶ್ರೀ ಮುರುಘೇಂದ್ರ ಶಿವಯೋಗಿ, ಬಿ.ಆರ್.ಪಾಟೀಲ, ಶರಣ ಆಯ್ .ಆರ್ .ಮಠಪತಿ. ಸಿದ್ದಣ್ಣ ಉತ್ನಾಳ, ಉಮೇಶ್ ಕತ್ತಿ ವ್ಯಕ್ತಿ ಚಿತ್ರ ಸಂಪುಟ ಗಳು. ಅರಳು, ಭೂಮಿ ವಿಸ್ತಾರ, ಐನಾಪುರ ಸಾಂಸ್ಕೃತಿಕ ಅಧ್ಯಯನ,ಡಾ. ಫ.ಗು .ಹಳಕಟ್ಟೀ ಸಮಗ್ರ ಸಂಪುಟ -೫,ನೆಲ ಜಲ ಕನ್ನಡ, ಭಗವಂತ, ಮಲ್ಲಿಕಾ ಲತೆ, ಬಸವಾದರ್ಶ, ಅಥಣಿ ಪುಣ್ಯ ಪುರುಷರು, ಡಾ.ಕಲ್ಬುರ್ಗಿ ಸಮಗ್ರ ಸಂಪುಟ -೩೨, ಶರಣರು ಮತ್ತು, ನಿಜ ಶರಣ ಆಯ್. ಆರ್ .ಮಠಪತಿ, ಹಳಗನ್ನಡ ಕಾವ್ಯ ಸಂಪುಟ,ಅಶೋಕ ನರೋಡೆ ಅವರ ಕಾವ್ಯದ ಪ್ರಯಾಣ, ಅಥಣೀಶರ ಕಾವ್ಯೋದ್ಯಾನ, ಹತ್ತರ ಹಬ್ಬ,ಉತ್ತರ ಕರ್ನಾಟಕದ ಕನಸುಗಾರ ಸಂಪಾದನಾ ಸಂಪುಟಗಳಾಗಿವೆ. ಹಳಗನ್ನಡ ಸಾಹಿತ್ಯ ಸಂಚಯ, ಸಾಹಿತ್ಯ ಸಿರಿ ೧&೨, ಜಾಣ ವೀಳೆಯ ಹಿಡಿಯ, ಕನ್ನಡ ನುಡಿ ಮತ್ತು ನಾಡು, ಯುವ ಭಾರತಿ ೧&೨, ಮುತ್ತಿನ ಹಾರ, ಸಮೂಹ ಸಂವಹನ ಮಾಧ್ಯಮಗಳು ಶ್ರೀಯುತರ ಪಠ್ಯ ಪುಸ್ತಕ ಸಂಪಾದನೆಗಳು.
ಕವಿವಿ ಧಾರವಾಡ, ರಾಣೀ ಚೆನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ, ಮಹಾರಾಷ್ಟ್ರ ರಾಜ್ಯದ ಹೈಯರ್ ಸೆಕೆಂಡರಿ ಬೋರ್ಡ್ ದ ಪದವಿ ಪೂರ್ವ ವಿಭಾಗದ ಪಠ್ಯ ಪುಸ್ತಕಗಳನ್ನು ಸಂಪಾದಿಸಿದ್ದು, ವಿದ್ವತ್ತಿಗೆ ನಿದರ್ಶನವಾಗಿದೆ. ಕಡೇಗೀಲು ಅಂಕಣ ಬರಹಗಳ ಸಂಕಲನ, ಕನ್ನಡ ವ್ಯಾಕರಣ ಮತ್ತು ರಚನಾಗಂಧ, ಕನ್ನಡ ನಾಡು ನುಡಿ, ಅಥಣಿ ದನಿ ಬನಿ ಇತ್ಯಾದಿ ಸಂಕೀರ್ಣ ಕೃತಿಗಳು.ಹಲವಾರು ಪತ್ರಿಕೆಗಳಿಗೆ ಅಂಕಣ ಬರಹಗಾರರಾಗಿ, ಸಂಯುಕ್ತ ಕರ್ನಾಟಕ ಪತ್ರಿಕೆಯ ವರದಿಗಾರರಾಗಿ ಕಾರ್ಯ ನಿರ್ವಹಿಸಿದ್ದು ದಾಖಲಾರ್ಹವಾಗಿದೆ. ಅಧ್ಯಯನ ಅಧ್ಯಾಪನ ಸಾಹಿತ್ಯ ಸಂಸ್ಕೃತಿಯ ಸಂಘಟಕರಾದ ಡಾ ಮಾಳಿ ಅವರಿಗೆ, ಸಾಹಿತ್ಯಶ್ರೀ, ವಾಗ್ ಭೂಷಣ, ಬಸವಶ್ರೀ, ಹಳಕಟ್ಟಿಶ್ರೀ, ಸಿರಿಗನ್ನಡ ಪುಸ್ತಕ ಪ್ರಶಸ್ತಿ, ಆಜೂರೆ ಪುಸ್ತಕ ಪ್ರಶಸ್ತಿ, ಲಿಂಗರಾಜ ಪ್ರತಿಷ್ಠಾನದ ಪ್ರಶಸ್ತಿ,ಕರ್ನಾಟಕ ಸಾಹಿತ್ಯ ಅಕಾಡೆಮಿಯ ೨೦೧೯ ರ ಪ್ರತಿಷ್ಠಿತ ಸಾಹಿತ್ಯ ಸಿರಿ, ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಪ್ರಶಸ್ತಿ ಪುರಸ್ಕಾರಗಳು ಸಂದಿವೆ.
ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿ ಬೇಕಿತ್ತು. ಅಕಾಡೆಮಿಗಳ ಅಧ್ಯಕ್ಷರಾಗಿ ಬೇಕಿತ್ತು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಗೆ ಭಾಜನರಾಗಬೇಕಿತ್ತು ಎಂಬ ಕೊರಗು ಅವರ ವಿದ್ಯಾರ್ಥಿ ಸಮುದಾಯದ್ದು.ಆದರೆ ಸಮಕಾಲೀನ ವ್ಯವಸ್ಥೆ ಪೂರಕವಾಗಿಲ್ಲವೆಂಬುದು ಸರ್ವರಿಗೂ ಗೊತ್ತು. ಮಾಳಿ ಅವರಿಗೆ ಅದರ ಬಗ್ಗೆ ಹೇಳುವಂತಿಲ್ಲ, ಅವರದು ಶರಣರ ಜೀವನ . ಸಂತನ ಬದುಕು , ನಿಷ್ಕಾಮ ಕರ್ಮ. ಅಥಣಿ ತಾಲೂಕಿನ ಪ್ರಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ಗೌರವ, ಇದೀಗ ಬೆಳಗಾವಿ ಜಿಲ್ಲೆ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಧ್ಯಕ್ಷತೆ ಒಲಿದು ಬಂದಿರುವುದು ಅಪ್ಪಟ ದೇಸೀ ಪ್ರತಿಭೆಗೆ ಸಂದ ಗೌರವವಾಗಿದೆ. ವೈಯಕ್ತಿಕವಾಗಿ ನೂರೊಂದು ನಮನಗಳು.ಸಮಸ್ತ ಕನ್ನಡಿಗರ ಪರವಾಗಿ ವಂದನೆ ಅಭಿನಂದನೆಗಳು.
– ಡಾ ಅಶೋಕ ನರೋಡೆ

