ಬೈಲಹೊಂಗಲ: ಸೋಲನ್ನು ಒಪ್ಪಿಕೊಳ್ಳದೇ ನಿರಂತರವಾಗಿ ಪ್ರಯತ್ನಿಸುವ ಮನೋಭಾವವೇ ಸಾಧನೆಯ ಸೂತ್ರ ಎಂದು ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷರಾದ ಎನ್.ಆರ್.ಠಕ್ಕಾಯಿ ಹೇಳಿದರು.
ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ, ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ಪ್ರತಿಷ್ಠಾನ ಬೆಂಗಳೂರು ಹಾಗೂ ಉಪನಿರ್ದೇಶಕರ ಕಾರ್ಯಾಲಯ, ಶಾಲಾ ಶಿಕ್ಷಣ ಇಲಾಖೆ ಬೆಳಗಾವಿ (ದಕ್ಷಿಣ) ಇವರ ಸಹಯೋಗದಲ್ಲಿ ಪ್ರೌಢಶಾಲಾ ಶಿಕ್ಷಕರಿಗಾಗಿ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾದ ತಾಲೂಕಿನ ನಯಾನಗರ ಸರ್ಕಾರಿ ಪ್ರೌಢಶಾಲೆಯ ಸಮಾಜ ವಿಜ್ಞಾನ ಶಿಕ್ಷಕರಾದ ಬಸವರಾಜ ಪತ್ತಾರ ಅವರಿಗೆ ಕೇಂದ್ರ ಬಸವ ಸಮಿತಿ ವತಿಯಿಂದ ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಸನ್ಮಾನಿಸಿ ಅವರು ಮಾತನಾಡಿದರು.
ಗೆಲ್ಲುವ ಛಲ ಗಟ್ಟಿಯಾಗಿದ್ದರೆ ಸೋಲಿನ ಭಯ ಮಾಯವಾಗಿ ಯಶಸ್ಸಿನ ಹಾದಿ ಸುಲಭವಾಗುತ್ತದೆ. ಅವಕಾಶ ಸಿಕ್ಕಾಗ ಶಿಕ್ಷಕರು ತಮ್ಮ ಪ್ರತಿಭೆಗಳನ್ನು ಹೊರಹಾಕಿ ಸಾಧನೆ ಮಾಡುವುದರ ಮೂಲಕ ವಿದ್ಯಾರ್ಥಿಗಳಿಗೂ ಸ್ಪೂರ್ತಿಯಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು. ಬೋಧನೆಯ ಜೊತೆಗೆ ಪತ್ತಾರ ಅವರ ಬರವಣಿಗೆಯೂ ಸತ್ವಭರಿತವಾಗಿದೆ ಎಂದು ಅವರು ಹೇಳಿದರು.
ಬೆಂಗಳೂರಿನ ಕೇಂದ್ರ ಬಸವ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯರಾದ ಮೋಹನ ಬಸನಗೌಡ ಪಾಟೀಲ ಅವರು ಮಾತನಾಡಿ ಪತ್ತಾರ ಅವರ ಸಾಧನೆ ನಯಾನಗರ ಪ್ರೌಢಶಾಲೆಯ ಕೀರ್ತಿಯನ್ನು ಹೆಚ್ಚಿಸಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಶಿಕ್ಷಕರಿಗಾಗಿ ಸ್ಪರ್ಧೆಗಳು ಆರಂಭವಾದಾಗಿನಿಂದಲೂ ಬಸವರಾಜ ಪತ್ತಾರ ಅವರು ಪ್ರಬಂಧ ಸ್ಪರ್ಧೆಯಲ್ಲಿ ಸತತವಾಗಿ ಭಾಗವಹಿಸುವುದಲ್ಲದೇ ಪ್ರತಿವರ್ಷವೂ ಉತ್ತಮ ಸಾಧನೆ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದು ಅವರು ಹೇಳಿದರು.
ನಯಾನಗರ ಪ್ರೌಢಶಾಲೆಯ ಮುಖ್ಯಶಿಕ್ಷಕರಾದ ನಾಗೇಶ ಮಾಳನ್ನವರ ಮಾತನಾಡಿ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾದ ಪತ್ತಾರ ಅವರು ಉತ್ತಮ ಲೇಖಕರೂ ಹೌದು. ಅವರು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು ನಮಗೆಲ್ಲ ಅತ್ಯಂತ ಖುಷಿ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಸಿದ್ದು ನೇಸರಗಿ ಮಾತನಾಡಿ ಪತ್ತಾರ ಅವರು ಶಿಕ್ಷಣ ಇಲಾಖೆಯ ಹೆಮ್ಮೆಯ ಶಿಕ್ಷಕರಾಗಿದ್ದು ಅವರ ವಿಷಯ ಜ್ಞಾನ, ವಿವರಣಾ ಶೈಲಿ, ಅಂದವಾದ ಕೈಬರಹ ಎಲ್ಲ ವಿದ್ಯಾರ್ಥಿಗಳಿಗೆ ಮಾದರಿಯಾಗಲಿ ಎಂದು ಹೇಳಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಬಸವರಾಜ ಪತ್ತಾರ ನನ್ನ ಸಾಧನೆಗೆ ಎಲ್ಲ ಸಿಬ್ಬಂದಿಗಳ ಸಹಕಾರ, ಎಸ್.ಡಿ.ಎಂ.ಸಿಯವರ ಬೆಂಬಲ ಹಾಗೂ ಗ್ರಾಮಸ್ಥರ ಪ್ರೋತ್ಸಾಹವೇ ಕಾರಣ ಎಂದು ಹೇಳಿದರು. ಎಲ್ಲರ ಅಭಿಮಾನ ಮತ್ತು ಪ್ರೀತಿ ಮನಸ್ಸಿಗೆ ಆನಂದ ಉಂಟುಮಾಡಿದೆ ಎಂದರು. ಶಿಕ್ಷಕರಾದ ಶಿವಾನಂದ ಕೊಳ್ಳಿ ಮಾತನಾಡಿ ಪತ್ತಾರ ಅವರು ರಾಜ್ಯಮಟ್ಟದಲ್ಲಿಯೂ ಉತ್ತಮ ಸಾಧನೆ ಮಾಡಲಿ ಎಂದು ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಬ್ರಹ್ಮಾನಂದ ಕಡ್ಲಿಬುಡ್ಡಿ, ರವೀಂದ್ರಕುಮಾರ ಹಾದಿಮನಿ, ಸಿದ್ದಯ್ಯ ಹಿರೇಮಠ, ಸುನಿತಾ ಪತ್ತಾರ, ಪ್ರಥಮ ದರ್ಜೆ ಸಹಾಯಕರಾದ ಮಂಜುಳಾ ಕರವಿನಕೊಪ್ಪ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.