ಸಿಂದಗಿ– ತಾಲೂಕಿನಲ್ಲಿ ನಡೆಯುತ್ತಿರುವ ಅನಧಿಕೃತ ಕೋಚಿಂಗ್ ಶಾಲೆಗಳನ್ನು ಬಂದ್ ಮಾಡುವಂತೆ ಆಗ್ರಹಿಸಿ ಕರವೇ ಕಾರ್ಯಕರ್ತರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ ಮುತ್ತಿಗೆ ಹಾಕಿ ಶಿಕ್ಷಣಾಧಿಕಾರಿ ಆರಿಫ್ ಬಿರಾದಾರ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ಶ್ರೀಕಾಂತ ಬಿಜಾಪುರ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಪಡೆದ ಮಕ್ಕಳು ಅನಧಿಕೃತ ಕೋಚಿಂಗ ಶಾಲೆಗೆ ಹೋಗುತ್ತಿರುವುದರಿಂದ ಸಾಕಷ್ಟು ಸರಕಾರಿ ಶಾಲೆಗಳು ಮುಚ್ಚುವ ಹಂತ ತಲುಪುತ್ತಿವೆ ಕಾರಣ ಅನಧಿಕೃತ ಕೋಚಿಂಗ ಶಾಲೆಗಳನ್ನು ಕೂಡಲೇ ಬಂದ್ ಮಾಡಿಸದಿದ್ದರೆ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಉಗ್ರ ಹೋರಾಟಕ್ಕೆ ಇಳಿಯಬೇಕಾಗುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ತಾಲೂಕಿನ ಸಾಸಾಬಾಳ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸುಮಾರು 200 ಮಕ್ಕಳು ಹಾಜರಾತಿ ಇದ್ದು ಕೆಲವು ವಿದ್ಯಾರ್ಥಿಗಳು ಅಲ್ಲಿನ ಅನಧಿಕೃತ ಯತಿರಾಜ ಕೋಚಿಂಗ ಶಾಲೆ ಸೇರಿದರೆ ಇನ್ನು ಕೆಲವರು ಬೇರೆ ಕಡೆ ಕೋಚಿಂಗ್ ಶಾಲೆಗಳಿಗೆ ಸೇರಿ ಶಿಕ್ಷಣ ಪಡೆಯುತ್ತಿದ್ದಾರೆ. ಅದರಲ್ಲಿ ಬಹುತೇಕರು ಅನಧಿಕೃತ ಕೋಚಿಂಗ ಸೆಂಟರಗೆ ಹೊಗುತ್ತಿದ್ದು, ಇದರಿಂದ ಸರ್ಕಾರದ ಸೌಲಭ್ಯಗಳು ದುರುಪಯೊಗವಾಗುತ್ತಿವೆ. ಅಧಿಕಾರಿಗಳು ಇದನ್ನು ಕಂಡೂ ಕಾಣದಂತೆ ಕುಳಿತಿರುವುದು ವಿಷಾದದ ಸಂಗತಿಯಾಗಿದೆ. ಈ ಹಿಂದೆ ಮಕ್ಕಳ ಹಾಜರಾತಿ ಕಡಿಮೆಯಿದ್ದ ಕಾರಣದಿಂದ ತಾಲೂಕು ಶಿಕ್ಷಣಾಧಿಕಾರಿಗಳ ನೊಟೀಸಿಗೆ ಹೆದರಿ ಮುಖ್ಯ ಶಿಕ್ಷಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದ ತಾಜಾ ಉದಾಹರಣೆ ಕಣ್ಣ ಮುಂದೆ ಇದ್ದಾಗ ಮುಂಜಾಗೃತ ಕ್ರಮಕ್ಕಾಗಿ ಅಧಿಕಾರಿಗಳು ಪರಿಶೀಲಿಸಿ ಅನಧಿಕೃತ ಶಾಲೆಗಳನ್ನು ಬಂದ್ ಮಾಡಿಸಬೇಕು ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ರೋಡಿಗಿಳಿದು ಹೋರಾಟ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿಗೆ ಬರಬೇಕಾಗುತ್ತದೆ ಎಂದರು.
ಮನವಿ ಸ್ವೀಕರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಆರಿಫ್ ಬಿರಾದಾರ ಮಾತನಾಡಿ, ಅನಧಿಕೃತ ಕೋಚಿಂಗ್ ಶಾಲೆಗಳು ನಡೆಯುತ್ತಿರುವ ಬಗ್ಗೆ ನನ್ನ ಗಮನಕ್ಕಿಲ್ಲ ಕೂಡಲೇ ಬಿಆರ್ಪಿಗಳ ಮೂಲಕ ಮಾಹಿತಿ ಸಂಗ್ರಹಿಸಿ ಕ್ರಮ ಜರುಗಿಸಲು ಮುಂದಾಗುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತನ್ವಿರ ಬೈರಾಮಡಗಿ, ಶ್ರೀಶೈಲ ಚಳ್ಳಗಿ, ಆರೀಫ್ ಆಲಮೇಲ, ಪಿಂಟು ಹೊಸಮನಿ, ಪೀರು ಕೆರೂರ, ಮೈನುದ್ದಿನ ಮುಲ್ಲಾ, ದತ್ತುಗೌಡ ಪಾಟೀಲ, ಪ್ರಕಾಶ ಬಡಿಗೇರ, ಸಿದ್ದು ಕಲಾಲ ಸೇರಿದಂತೆ ಹಲವರಿದ್ದರು.