ಜನಪದ ಪ್ರಕಾರಗಳಲ್ಲಿ ವಿಭಿನ್ನ ಶೈಲಿಯ ಕಲೆ ಎನಿಸಿಕೊಂಡಿರುವ ತಂಬೂರಿ ಜನಪದ ಕಲೆಯನ್ನು ಕರಗತ ಮಾಡಿಕೊಂಡಿರುವ ಕಲಾವಿದರಲ್ಲಿ ಮಹದೇವ ಪೂರಿಗಾಲಿ ಕೂಡ ಒಬ್ಬರು. ಜನಪದ ಕ್ಷೇತ್ರಕಾರ್ಯದಲ್ಲಿ ಕ್ರಿಯಾಶೀಲರಾಗಿರುವ ಮಳವಳ್ಳಿಯ ಪಿ.ನಾಗರತ್ನಮ್ಮನವರು ಇವರನ್ನು ನನಗೆ ಪರಿಚಯಿಸಿ ಇವರು ಈ ಭಾಗದಲ್ಲಿ ಹೆಸರು ಮಾಡಿರುವ ಜನಪದ ಕಲಾವಿದರು ಎಂದು ತಿಳಿಸಿದರು.
ಮಳವಳ್ಳಿ ತಾಲ್ಲೂಕು ಬಿ.ಜಿ.ಪುರ ಹೋಬಳಿ ಪೂರಿಗಾಲಿ ಗ್ರಾಮದ ತಮ್ಮಣ್ಣಯ್ಯ ಮತ್ತು ಗೌರಮ್ಮ ದಂಪತಿಗಳ ಸುಪುತ್ರರಾದ ಮಹದೇವ ದಿನಾಂಕ ೧-೧-೧೯೭೮ರಂದು ಜನಿಸಿದರು. ಇವರ ತಂದೆ ತಮ್ಮಣ್ಣಯ್ಯನವರು, ಪೂರಿಗಾಲಿ ಬೊಮ್ಮೇಗೌಡರು ಮತ್ತು ಹುಲ್ಲಂಬಳ್ಳಿ ಮಹದೇವಪ್ಪನವರಿಂದ ತಮ್ಮ ನಾಲ್ಕನೇ ವಯಸ್ಸಿನಲ್ಲೇ ಜನಪದ ಕಲೆಯನ್ನು ಒಲಿಸಿಕೊಳ್ಳಲು ಹೊರಟು ಓದು ನಾಲ್ಕನೇ ತರಗತಿಗೆ ನಿಂತು ಸುಮಾರು ೪೦ ವರ್ಷಗಳಿಂದ ನಾಡಿನಾದ್ಯಂತ ಜನಪದ ಹಾಡುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆಕಾಶವಾಣಿ, ದೂರದರ್ಶನ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯಕ್ರಮಗಳು, ಕಪ್ಪಡಿ ಚಿಕ್ಕಲ್ಲೂರು, ಬೊಪ್ಪೇಗೌಡನಪುರ, ಚಾಮರಾಜನಗರ, ಮಹದೇಶ್ವರ ಬೆಟ್ಟದ ದೇವಸ್ಥಾನಗಳಲ್ಲಿ ಕಾರ್ಯಕ್ರಮ ನೀಡಿ ಜನಮನ್ನಣೆಗೆ ಪಾತ್ರರಾಗಿದ್ದಾರೆ.
ಇವರು ಹಾಡುವ ಜನಪದ ಮಹಾಕಾವ್ಯಗಳು ಮಲೆ ಮಹದೇಶ್ವರ ಕಾವ್ಯ, ಶಂಕಮ್ಮನ ಕಥೆ, ಮಂಟೇಸ್ವಾಮಿ ಸಿದ್ದಪ್ಪಾಜಿ ಕಥೆ, ಮೈದಾಳ ರಾಮನ ಕಥೆ, ಬಿಳಿಗಿರಿ ರಂಗನಾಥಸ್ವಾಮಿ ಕಥೆ, ನಂಜುಂಡೇಶ್ವರ ಕಥೆ, ಚಾಮುಂಡೇಶ್ವರಿ ಕಥೆ, ಅರ್ಜುನ ಜೋಗಿ ಕಥೆ, ಬಾಲನಾಗಮ್ಮ ಕಥೆ, ಚೆನ್ನಿಗರಾಮನ ಕಥೆ, ಬಸವಣ್ಣನ ಕಥೆ, ನಿಂಗರಾಜಮ್ಮನ ಕಥೆ, ಮುಡುಕುತೊರೆ ಮಲ್ಲಿಕಾರ್ಜುನಸ್ವಾಮಿ ಕಥೆ. ಕಲೆಯ ಪ್ರದರ್ಶನ ಮಾತ್ರವಲ್ಲದೆ ಕಲೆಯ ಉಳಿವಿಕೆಗಾಗಿ ಗುರುಶಿಷ್ಯ ಪರಂಪರೆಯ ಯೋಜನೆಯಡಿ ಮಂಟೇಸ್ವಾಮಿ ಪ್ರತಿಷ್ಠಾನದ ಅಡಿಯಲ್ಲಿ ಸುಮಾರು ೪೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕಥೆ ಕಲಿಸಿದ್ದಾರೆ. ಮೈಸೂರು ಕಲಾ ಮಂದಿರ, ಬೆಂಗಳೂರು ರವೀಂದ್ರ ಕಲಾಕ್ಷೇತ್ರ, ಹಂಪಿ ವಿಶ್ವವಿದ್ಯಾಲಯ, ಬಿಳಿಗಿರಿ ರಂಗನಾಥಸ್ವಾಮಿ, ಆದಿಚುಂಚನಗಿರಿ ಜಾತ್ರಗಳಲ್ಲಿ ರಂಗವಾಹಿನಿ ಚಾಮರಾಜನಗರ, ಜಾನಪದ ಲೋಕ, ನೀಲಗಾರ ಸಮ್ಮೇಳನ ಕೂಡ್ಲೂರು, ಮಂಟೇಸ್ವಾಮಿ ಪ್ರತಿಷ್ಠಾನ ಮೈಸೂರು ಇವರು ಭಾಗವಹಿಸಿರುವ ಇನ್ನಿತರೆ ಕಾರ್ಯಕ್ರಮಗಳು.
ಇವರ ಕಲಾ ಸೇವೆಗೆ ಶ್ರೀ ಮಂಟೇಸ್ವಾಮಿ ಮಠ ಕಪ್ಪಡಿ ಜಾತ್ರೆ-೨೦೨೨ ಪ್ರಶಸ್ತಿ ಪತ್ರದೊಂದಿಗೆ ಸನ್ಮಾನಿಸಲಾಗಿದೆ. ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟ, ಕನ್ನಡ ಸಂಸ್ಕೃತಿ ಇಲಾಖೆ ಗೀತಗಾಯನ ಪ್ರಶಸ್ತಿ, ಚಾಮರಾಜನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಕಲಾ ಸಾಂಸ್ಕೃತಿಕ ಟ್ರಸ್ಟ್ ಮೈಸೂರು ರಾಜ್ಯಮಟ್ಟದ ಕರುನಾಡ ರತ್ನ ಪ್ರಶಸ್ತಿ, ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಮೈಸೂರು, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ನೀಲಗಾರ ಪ್ರಶಸ್ತಿ, ಜೈ ಭೀಮ್ ಗ್ರಾಮೀಣಾಭಿವೃದ್ಧಿ ಸಂಸ್ಥೆ ರಂಗಗೀತೆ ಪ್ರಶಸ್ತಿ, ವೈರಮುಡಿ ಬ್ರಹ್ಮೋತ್ಸವ, ಮಂಡ್ಯ ಜಿಲ್ಲಾ ಕಲಾವಿದರ ಸಮ್ಮೇಳನ, ನನ್ನವ್ವ ಸಾಂಸ್ಕೃತಿಕ ಉತ್ಸವ, ಮೈಸೂರು ದಸರಾ ಮಹೋತ್ಸವ-೨೦೨೨ ಮೈಸೂರು ವಿಶ್ವವಿದ್ಯಾನಿಲಯ ಕಲಾ ಪ್ರಶಸ್ತಿ ಹೀಗೆ ಪಟ್ಟಿ ಸಾಕಷ್ಟಿದೆ.
ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.