ಬೆಟಗೇರಿ: ಕೇಂದ್ರ ಸರಕಾರ ಕೃಷಿ ಪತ್ತಿನ ಸಹಕಾರಿ ಸಂಘಗಳನ್ನು ಗ್ರಾಮೀಣ ಭಾಗದ ರೈತ ಸೇವಾ ಕೇಂದ್ರಗಳಾಗಿ ಮಾರ್ಪಾಡುಗೊಳಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೆ ತಂದಿದ್ದು ಸಹಕಾರಿ ಸಂಸ್ಥೆಗಳು 150 ಬಗೆಯ ವಿವಿಧ ಕೃಷಿ ಉಪಯೋಗಿ ಮತ್ತು ವ್ಯವಹಾರಿಕ ಚಟುವಟಿಕೆಗಳನ್ನು ಪ್ರಾರಂಭಿಸಲು ಅನುಮೋದನೆ ನೀಡಿದೆ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸತೀಶ ಕಡಾಡಿ ಹೇಳಿದರು.
ಅರಭಾವಿ ವಿಧಾನಸಭಾ ಮತಕ್ಷೇತ್ರದ ಬೆಟಗೇರಿ ಗ್ರಾಮದ ವಿವಿಧೋದ್ದೇಶ ಗ್ರಾಮೀಣ ಕೃಷಿ ಸಹಕಾರಿ ಸಂಘದ ಪ್ರಧಾನ ಮಂತ್ರಿ ಜನ ಔಷಧಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು ಬೆಟಗೇರಿ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯ ಶ್ಲಾಘನೀಯವಾಗಿದ್ದು ಗ್ರಾಮೀಣ ಭಾಗದ ಜನರಿಗೆ, ರೈತರಿಗೆ ಅನುಕೂಲವಾಗುವಂಥ ಯೋಜನೆಗಳನ್ನು ಜಾರಿಗೆ ತಂದು ಮಾದರಿ ಸಂಸ್ಥೆಯಾಗಿ ಬೆಳೆಯುತ್ತಿದೆ ಎಂದರು.
ರೈತರಿಗೆ ದಿನನಿತ್ಯದ ಬಳಕೆಗೆ ಅಗತ್ಯವಿರುವ ಬೀಜ, ರಸಗೊಬ್ಬರ, ಸಾವಯವ ಗೊಬ್ಬರ, ಕ್ರಿಮಿನಾಶಕ, ಕಳೆನಾಶಕಗಳನ್ನು ಮಾರಾಟ ಮಾಡಲು ಗೋದಾಮುಗಳನ್ನು ನಿರ್ಮಿಸಲು, ಕೋಲ್ಡ್ ಸ್ಟೋರೇಜ್ ಗಳನ್ನು ನಿರ್ಮಿಸಲು, ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಯಂತ್ರೋಪಕರಣಗಳನ್ನು ಖರೀದಿಸಲು 2 ಕೋಟಿ ರೂಪಾಯಿವರೆಗಿನ ಸಾಲವನ್ನು ನಬಾರ್ಡ್ ಬ್ಯಾಂಕ್ ನ ಮೂಲಕ ನೀಡಲು ಯೋಜನೆ ರೂಪಿಸಿದ್ದು ಸಹಕಾರಿ ಸಂಘಗಳು ಇದರ ಸದ್ಬಳಕೆ ಮಾಡಿಕೊಂಡಲ್ಲಿ ಗ್ರಾಮೀಣ ಪ್ರದೇಶದ ರೈತರು ಸ್ವಾವಲಂಬಿಯಾಗಿ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಲು ನೆರವಾಗುತ್ತದೆ ಎಂದರು.
ಕಳೆದ ಐದು ವರ್ಷಗಳಲ್ಲಿ ಡಿಸಿಸಿ ಬ್ಯಾಂಕ್‌ನ ನಿರ್ದೇಶಕನಾಗಿ ತಾಲೂಕಿನ ರೈತರಿಗೆ ಮತ್ತು ಸಹಕಾರಿ ಸಂಘಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಹೆಚ್ಚಿನ ಸಾಲವನ್ನು ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಅದರ ಪ್ರತಿಫಲವಾಗಿಯೇ 2020 ಮಾರ್ಚನ ಅಂತ್ಯಕ್ಕೆ 176 ಕೋಟಿಗಳಷ್ಟು ಇದ್ದ ಕೃಷಿ ಪತ್ತು 2025 ಮಾರ್ಚನ ಅಂತ್ಯಕ್ಕೆ 412 ಕೋಟಿ ರೂಗಳಿಗೆ ಹೆಚ್ಚಳವಾಗಿ ಶೇ 135 ರಷ್ಟು ಪ್ರಗತಿ ಸಾಧಿಸಲು ಅನುಕೂಲವಾಗಿದೆ. ಇದೆ ಸಾಲ 2015 ಮತ್ತು 20ರ ಅವಧಿಯಲ್ಲಿ ಕೇವಲ 50 ಕೋಟಿಗಳಷ್ಟು ಮಾತ್ರ ಹೆಚ್ಚಳವಾಗಿದ್ದನ್ನು ತಾಲೂಕಿನ ಸಹಕಾರಿ ಧುರೀಣರು ಮತ್ತು ರೈತರು ಈ ಬೆಳವಣಿಯನ್ನು ಗಮನಿಸಬೇಕೆಂದು ವಿನಂತಿಸಿದರು.
ಸ್ವತಂತ್ರವಾಗಿ ಮುಕ್ತ ಅಭಿವೃದ್ಧಿ ಪರವಾದ ಆಲೋಚನೆಗಳೊಂದಿಗೆ ಸಹಕಾರಿ ಸಂಘಗಳ ಆಡಳಿತ ಮಂಡಳಿ ಮತ್ತು ಸಿಬ್ಬಂದಿಯವರು ಕಾರ್ಯ ಯೋಜನೆಗಳನ್ನು ರೂಪಿಸಿಕೊಂಡು ಕೆಲಸ ಮಾಡಿದ್ದಲ್ಲಿ ಗುಜರಾತ್ ಮಾದರಿಯಲ್ಲಿ ಸಹಕಾರಿ ಸಂಘಗಳನ್ನು ಇನ್ನಷ್ಟು ಬಲಗೊಳಿಸಲು ಸಾಧ್ಯವಾಗುತ್ತದೆ ತಾಲೂಕಿನ ರೈತರ ಮತ್ತು ಸಹಕಾರಿ ಧುರಿಣರ ಆಶೀರ್ವಾದ ದೊರೆತರೆ ಮುಂದಿನ ಅವಧಿಗೂ ಸಹಕಾರ ರಂಗದ ಸೇವೆ ಸಲ್ಲಿಸಲು ಕಂಕಣ ಬದ್ಧನಾಗಿರುತ್ತೇನೆ ಎಂದು ಹೇಳಿದರು.
ಸುಣಧೋಳಿ ಪೂಜ್ಯಶ್ರೀ ಶಿವಾನಂದ ಮಹಾಸ್ವಾಮಿಗಳು ಹಾಗೂ ಸತ್ತಿಗೇರಿ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು, ಈರಯ್ಯ ಹಿರೇಮಠ, ಹನುಮಂತ ಒಡೆಯರ ಸಂಗಯ್ಯ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಬಸವಂತ ಕೋಣಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಡಾ. ರಾಜೇಂದ್ರ ಸಣ್ಣಕ್ಕಿ, ಸರ್ವೋತ್ತಮ ಜಾರಕಿಹೊಳಿ. ಲಕ್ಷ್ಮಣ ನೀಲನ್ನವರ, ರೇವನಸಿದ್ದ ಸವತೆಕಾಯಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಲ್ಲವ್ವ ಚಂದರಗಿ, ಉಪಾಧ್ಯಕ್ಷೆ ಸಾವಕ್ಕ ಬಾನಸಿ, ಸಿ.ಡಿ.ಓ.ಎಸ್ ವಿ ಬಿ ಪಾಟೀಲ ಬಿಡಿಸಿಸಿ ಬ್ಯಾಂಕ್ ಶಾಖಾ ವ್ಯವಸ್ಥಾಪಕ ವಿನೋದಕುಮಾರ ವಾಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ರಮೇಶ ಮುಧೋಳ ಸ್ವಾಗತಿಸಿದರು. ಬಸವರಾಜ ಪನದಿ ಕಾರ್ಯಕ್ರಮವನ್ನು ನಿರೂಪಿಸಿದರು ಅಡಿವೆಪ್ಪ ಮುರಗೋಡ ವಂದಿಸಿದರು