ಹೌದು, ನಗಬೇಕು. ನಕ್ಕು ನಗಿಸುತಲಿರಬೇಕು. ಎಂತಾ ನಗೆ ಎಂದರೆ ನಮ್ಮ ಸುತ್ತಲೂ ನಗೆಬುಗ್ಗೆ ಚೆಲ್ಲಬೇಕು. ನಮ್ಮ ಪೂರ್ವಜರೆಲ್ಲರೂ ಮನಸ್ಫೂರ್ವಕವಾಗಿ ನಗ್ತಿದ್ರು, ನಗೆಹಬ್ಬವನ್ನೇ ಮಾಡ್ತಿದ್ರು. ದೈನೇಸಿ ಬದುಕಿನಲ್ಲಿ ಅದೆಷ್ಟೇ ದೇಹ ದಂಡಿಸಿ, ಮೈಮುರಿದು ದಣಿದಿದ್ರು ನಗೋದನ್ನ ಮರಿತಿರ್ಲಿಲ್ಲ. ಹಬ್ಬ, ಹರಿದಿನ, ಪರಿಷೆ ಅಂತ ಎಲ್ಲರೂ ಆ ಮೂಲಕ ಸೇರಿ ಸಂಭ್ರಮಪಡುವ ಕಾಲವೂ ಒಂದಿತ್ತು. ನಾವು ನಮ್ಮವರು ಎಂಬ ಭಾವನಾತ್ಮಕ ಸಂಬಂಧಗಳನ್ನು ಬೆಸೆಯುವುದಲ್ಲದೆ, ನಮ್ಮವರೆಲ್ಲರೂ ಎಂಬಂತೆ ಬಳಿಗರೆದು ಆತ್ಮೀಯತೆಯ ಅಪ್ಪುಗೆಯನ್ನು ನೀಡುವ ಆ ಕಾಲಕ್ಕೆ ಎಲ್ಲವೂ ಚಂದವೆನಿಸುತ್ತಿತ್ತು. ಮೊಬೈಲ್ ಗೀಳು, ನವಮಾಧ್ಯಮಗಳ ಹಾವಳಿ ಅಷ್ಟೇನೂ ಪ್ರಭಾವ ಬೀರಿಲ್ಲದ ಆ ಸಮಯದಲ್ಲಿ ಒಟ್ಟಾಗಿ ಕುಳಿತು ಹರಟೆ, ಹಾಡು, ಕಥೆ, ಪುರಾಣಗಳನ್ನು ಹಾಡುತ್ತಾ, ಕೇಳುತ್ತಾ ಆ ಖುಷಿಯೇ ಬೇರೆ ಎಲ್ಲರೂ ಒಮ್ಮೆಗೆ ಗೊಳ್ ಎಂದು ನಗುವಂತಹ ನಗುವು ಇತ್ತೀಚೆಗೆ ಎಲ್ಲೋ ಕಳೆದುಹೋಗಿದೆ ಎನಿಸುತ್ತಿದೆ.
ನಗು ಹೇಗಿರಬೇಕು ಅಂದ್ರೆ ಪಾದರಸ ಪುಟಿದಂತಿರಬೇಕು ಆದರೆ ಈಗೀಗ ಎಲ್ಲರಲ್ಲೂ ನಗು ಕಳೆದುಹೋಗಿದೆ. ಅಂತೆ, ಸಂತೆ, ಕಂತೆ, ಚಿಂತೆಗಳು ಯಾರನ್ನೂ ಕಾಡದೆ ಬಿಟ್ಟಿಲ್ಲ ಅವುಗಳ ಕುರಿತು ಹೆಚ್ಚು ಚಿಂತನೆಯ ಕೂಪದಲ್ಲಿ ಬಿದ್ದು ನೆಮ್ಮದಿ ಕಳೆದುಕೊಳ್ಳಬಾರದು. ದೊಡ್ಡವರು ಸದಾ ಒಂದು ಮಾತು ಹೇಳ್ತಿರ್ತಾರೆ. “ನಗೆ ಕೊಲ್ಲುವಷ್ಟು ಹಗೆ ಕೊಲ್ಲಲಾರದು” ಅಂದರೆ ನಮಗೆ ಅವರನ್ನ ಕಂಡ್ರೆ ಆಗಲ್ಲ, ಇವರನ್ನ ಕಂಡ್ರೆ ಆಗಲ್ಲ ಅಂತ ಯಾವುದೋ ಕಾರಣಕ್ಕೆ ಹೃದಯದಲ್ಲೆಲ್ಲ ಹಗೆಯನ್ನೇ ತುಂಬಿಕೊಂಡಿದ್ದರೆ ಪ್ರೀತಿ, ವಿಶ್ವಾಸ, ನಂಬಿಕೆಗಳಿಗಿನ್ನೆಲ್ಲಿ ಜಾಗವಿದ್ದೀತು. ನಮ್ಮನ್ನು ಕಂಡರೆ ಕೆಂಡಕಾರುವವರಿಗೆ ಯಾವ ಅಸ್ತ್ರಗಳಿಂದಲೂ ಹಿರಿಯುವ ಅಗತ್ಯವಿಲ್ಲ, ಮೊಗದಲ್ಲೊಂದು ಸಣ್ಣ ನಗೆ ಇದ್ದರೆ ಅದು ಹಗೆಗಿಂತಲೂ ಹೆಚ್ಚು ಎದುರಿಗಿರುವ ವ್ಯಕ್ತಿಯನ್ನು ಹಿರಿಯಬಲ್ಲದು. ನಮ್ಮನ್ನು ಸದಾ ಕುಗ್ಗಿಸುವ ಕೈ ಮತ್ತು ಮನಸ್ಸುಗಳಿಗೆ ಉತ್ತರ ಸದಾ ಚಿಂತನಾಶೀಲ ಮತ್ತು ಕಾರ್ಯಶೀಲರಾಗಿರಬೇಕಾಗುತ್ತದೆ. ನಗೆ ಉತ್ತಮ ವ್ಯಕ್ತಿತ್ವವನ್ನು ರೂಪಿಸಬಲ್ಲದು, ಆದರೆ ಹಗೆ ಉತ್ತಮ ವ್ಯಕ್ತಿತ್ವಕ್ಕೆ ದಕ್ಕೆ ತರುತ್ತದೆ. ಇರುವ ಚೂರು ಪಾರು ನೆಮ್ಮದಿಯನ್ನು ಕಸಿಯುವ ಶಕ್ತಿ ಹಗೆಗಿದೆ ಆದರೆ ಬಂದು ಹೋಗುವ ಸಮಸ್ಯೆಗಳಿಗೂ ಮದ್ದು ತರುವ ಶಕ್ತಿ ನಗೆಗಿದೆ ನಗೆ ಮೊಗದಲ್ಲಿ ಮಾಸದಿರುವಂತೆ ಬದುಕಬೇಕು. ನಗು ಎಂದರೆ ಎಲ್ಲ ಸಮಯದಲ್ಲೂ ಕಾರಣವಿಲ್ಲದೆ, ಸಮಯ ಸಂಧರ್ಭ ಪರಿಗಣಿಸದೆ ನಗುವುದಲ್ಲ. ನಗುವಿನಲ್ಲೂ ಸಾಕಷ್ಟು ಬಗೆಗಳಿವೆ. ಮುಗುಳು ನಗೆ, ಹೂನಗೆ, ಮುಗ್ಧನಗೆ, ಅಟ್ಟಹಾಸ ನಗೆ, ಪರಿಹಾಸ ನಗೆ, ಕುಹಕ ನಗೆ, ವ್ಯಂಗ್ಯನಗೆ, ನಿಷ್ಕಳಂಕನಗೆ, ಕಣ್ಣಂಚಿನ ನಗೆ, ಮೊಗದಗಲ ನಗೆ, ಸಂಕೋಚದ ನಗೆ, ನಾಚಿಕೆಯ ನಗೆ, ರಸಿಕ ನಗೆ, ವಿರಹ ಹಾಸ, ನಗುವಲ್ಲದ ನಗೆ ಹೀಗೆ ಸಾಕಷ್ಟು ಬಗೆಯ ನಗೆ ಇದೆ ಇವೆಲ್ಲವುಗಳನ್ನು ಸದಾ ಕಾಲ ವ್ಯಕ್ತಪಡಿಸಬೇಕೆಂದೇನಿಲ್ಲ. ಸಣ್ಣದೊಂದು ಮುಗುಳ್ನಗೆ ಮನಸ್ಸಿನಿಂದ ಮೊಗದಲ್ಲಿ ನಗೆಯಾಗಿ ಬಂದರೆ ನಮ್ಮ ಗುರಿ ಸಾಧನೆಗಳಿಗೂ ನಮ್ಮ ನಗೆ ಸಾಕ್ಷಿಯಾಗಿ ನಿಲ್ಲುತ್ತದೆ. ನಾವು ನಕ್ಕಿದ್ದೇವೆ ಎನ್ನುವುದಕ್ಕೆ ಮುಖದ ಮೇಲೆ ಮೂಡುವ ಗೆರೆಗಳೇ ಸಾಕ್ಷಿ. ಮುಪ್ಪು ಆವರಿಸಿದೆ ಎಂಬುದಕ್ಕೆ ಮುಖದ ಮೇಲಿನ ಸುಕ್ಕುಗಳೇ ಸಾಕ್ಷಿ. ಆದರೆ ಆ ನಗುವಿನ ಮುಂದೆ ಅವುಗಳು ಎಂದೆಂದಿಗೂ ಶೂನ್ಯ. ಭರಭಸೆಯ ನಾಳೆಗಳಿಗಾಗಿ ನಮ್ಮನ್ನ ನಾವೇ ಸಂಭ್ರಮಿಸಬೇಕು .ಆಗಾಗ ಸಣ್ಣ ಸಣ್ಣ ಖುಷಿಗಳನ್ನು ತಬ್ಬಿಕೊಳ್ಳಬೇಕು. ಬರುವ ನೋವುಗಳನ್ನು ಬಿಗಿದಪ್ಪಿ ಕೈಬಿಟ್ಟುಬಿಡಬೇಕು. ಬರಲಿರುವ ಕಷ್ಟಗಳು ಮೊಗದಲ್ಲಿನ ಸಣ್ಣ ನಗು ಕಂಡು ಬಳಿ ಬಾರದೆ ಹಿಂದಿರುಗಬೇಕು.
ಇನ್ನು ಕೆಲವರು ಇರ್ತಾರೆ. ನಗುವನ್ನು ಕೊಂದವರು, ನಗುವುದನ್ನೇ ಮರೆತವರು. ನಮ್ಮ ಮನೆಯ ಪಕ್ಕದವರೋ, ನಮ್ಮ ಜೊತೆಗಿರುವವರೋ ಏನೋ ಸಾಧನೆ ಮಾಡಿದ್ದಾರೆ ಎಂದಾದರೆ ಅವರನ್ನು ಕಂಡರೆ ಸಂತೋಷಪಡುವುದಕ್ಕಿಂತ ಹೆಚ್ಚಾಗಿ ಅಸೂಯೆ, ನಾಟಕದ ನಗೆ ಬಿರುವವರೇ ಹೆಚ್ಚು. ಎಲ್ಲರೂ ಒಂದು ದಿನ ಭೂಲೋಕ ತೊರೆಯಲೇಬೇಕು, ಹಗೆ, ಅಹಂ ಗಳನ್ನು ಕೊಂದು ಬದುಕುವುದನ್ನು ನಾವು ಕಲಿಯಬೇಕು. ತಮ್ಮ ಭವಿಷ್ಯದ ವಾಣಿಯನ್ನು ಅರಿಯದವರು, ತಮ್ಮ ಬದುಕಿನ ಭವಿಷ್ಯಕ್ಕಾಗಿ ಶ್ರಮಿಸದವರು ಹಲವರಲ್ಲಿ ಕೆಲವರು. ಮತ್ತೊಬ್ಬರ ಹಣೆಬರಹ ಕಾಣದಿದ್ದರೂ ಹಣೆಬರಹ ಓದುತ್ತಾರೆ. ಪಾಪ ಅವರಿಗೂ ಗೊತ್ತಿಲ್ಲ ಅವರ ಹಣೆಬರಹವನ್ನು ಮತ್ತೊಬ್ಬರು ಓದುತ್ತಾರೆ ಎಂದು. ನಾನೆ ಸರಿ ಎನ್ನುವ ಭ್ರಮೆ ತೊರೆದು ನಾವು ಎನ್ನುವ ಭಾವನೆ ಮೂಡಬೇಕಿದೆ. ಇರಬೇಕು ಇದ್ದರೆ ಪರರ ನಿಂದನೆ ಮಾಡದಂತೆ. ಇದ್ದರೆ ಇರಬೇಕು ಪರರ ನಿಂದನೆಗೆ ಕಿವಿಗೊಡದಂತೆ. ಜನ ಗೆದ್ದರು ಮಾತನಾಡುತ್ತಾರೆ, ಸೋತರು ಮಾತನಾಡುತ್ತಾರೆ. ಈ ಅಂತೆ ಸಂತೆಗಳ ನಡುವೆ ಬದುಕಬೇಕು ಮನಸಿಗೊಪ್ಪಿದಂತೆ. ಸದಾ ಸಣ್ಣದೊಂದು ನಗೆ ಮೊಗದಲ್ಲಿರಬೇಕು ಮಾಸದಂತೆ. ಯಾರು ಕೂಡ ನೆಮ್ಮದಿ ತಂದುಕೊಡಲಾರರು ಅದನ್ನು ನಾವೇ ಕಂಡುಕೊಳ್ಳಬೇಕು. ಖುಷಿ ಮಾರಾಟಕ್ಕಿಲ್ಲ ಹಾಗಾಗಿ ನಮ್ಮ ಖುಷಿಗಾಗಿ ನಾವು ಬದುಕಬೇಕು. ನಾಟಕೀಯ ಪ್ರಪಂಚದಲ್ಲಿ ಯಾರನ್ನೂ ನಂಬಿಸುವ ಅವಶ್ಯಕತೆ ಇಲ್ಲ, ನಗು ಮಾರಾಟಕ್ಕಿಲ್ಲ, ನಿಂದಕರೆದುರು ಮಂದಹಾಸ ಬೀರಿ ಮುಂದೆ ಸಾಗುವುದು ಲೇಸು. ಯಾಕೆಂದರೆ ಎಲ್ಲರೂ ನಮ್ಮವರೇ ನಾವು ಅವ್ರಿಗೆ ಹೇಗೆ ಬೇಕು ಹಾಗೆ ಇರೋತನಕ. ನಾವು ನಾವಾಗಿದ್ರೆ ಯಾರು ನಮ್ಮವರಲ್ಲ. ಇಂದು ಜನರು ಸ್ವಾರ್ಥವನ್ನೇ ಅಡಿಯಿಂದ ಮುಡಿವರೆಗೂ ತುಂಬಿಕೊಂಡಿದ್ದಾರೆ. ತುಟಿಗೆ ಸಕ್ಕರೆ ಲೇಪಿಸಿಕೊಂಡವರಂತೆ ಸಿಹಿಯಾಗಿ ಮಾತನಾಡುವ ಜನರೇ ಹೆಚ್ಚಾಗಿದ್ದಾರೆ. ಸಕ್ಕರೆ ಲೇಪಿತ ಜನರ ನಡುವೆ ಅಕ್ಕರೆಯ ಪ್ರೀತಿ ತೋರುವವರೇ ನಮ್ಮವರು, ನಕ್ಕು ಮುಂದೆ ಸಾಗಬೇಕು ಸುಮ್ಮನೆ. ಕೆಲವು ಸಂಧರ್ಭಗಳಲ್ಲಿ ಮೌನ ಮಾತಿಗಿಂತಲೂ ಅರಿತವಾದದ್ದು ಹಾಗೂ ಅರ್ಥ ಹೊಂದುವಂತದ್ದು. ಕೆಲವು ಸಂಧಿಗ್ಧ ಪರಿಸ್ಥಿತಿಗಳಲ್ಲಿ ಪ್ರತಿಕ್ರಿಯಿಸದೆ ಸಣ್ಣ ನಗೆಯೊಂದಿಗೆ ಮೌನದಿಂದಿರುವುದು ಲೇಸು. ನಕ್ಕುಬಿಡಿ ಹಾಗೊಮ್ಮೆ ಹೀಗೊಮ್ಮೆ ನಕ್ಕರು ಮನಸಾರೆ, ಮನದುಂಬಿ ನಕ್ಕುಬಿಡಿ. ಬಿಡುವಿಲ್ಲದ ಬದುಕಿನಲ್ಲಿ ನಗುವಿಗೂ ಮದ್ದಾಕದಿರಿ, ಮಾನಸಿಕ ನೆಮ್ಮದಿಯ ಮುಂದೆ ಹಣದ ಬಣವೆಯೂ ಶೂನ್ಯ. ಯಾರಿಗಿಲ್ಲ ಕಷ್ಟ ಎಲ್ಲರಿಗೂ ಇವೆ. ಕಷ್ಟಗಳು ಮನುಷ್ಯನನ್ನು ಬಾಧಿಸುತ್ತವೆ ಹೊರತು ಬೆಳೆದು ನಿಂತ ಮರವನ್ನಲ್ಲ. ಬರುವ ನೋವುಗಳನ್ನು ಗುಣಿಸಿ ಬಂದ ಸಮಸ್ಯೆಗಳನ್ನು ಭಾಗಿಸಿ, ಅಳಿದು ಹೋದ ದಿನಗಳನ್ನು ಕಳೆದು. ಶ್ರಮದಿಂದ ಖುಷಿಯನ್ನು ಕೂಡಿಡಬೇಕು. ಕನಸುಗಳಿಗೆ ಗೋರಿ ಕಟ್ಟಿ, ನಗುವನ್ನೆಲ್ಲ ಗಿರವಿಗಿಟ್ಟು ಬದುಕಿದ್ದು ಇಲ್ಲದವರಂತೆ ಬದುಕುವ ಬದುಕು ಬದುಕೇ? ಕಳೆದುಕೊಂಡ ಚಿಗುರನ್ನು ಬರುವ ವಸಂತ ಮತ್ತೆ ಹೊತ್ತು ತರುವುದು ಮರೆಯದಿರು ಜೋಕೆ. ಖಾಲಿ ಪೀಲಿ ಚಿಂತೆಗಳನ್ನು ಪಾಲಿಗಿರದ ಹರುಷವನು ಹೊತ್ತು ಚಿಂತಿಸದಿರು ಗೆದ್ದಾಗ ಬಿರಿ ಬಿರಿ ಹಿಗ್ಗಿ ಮಾತನಾಡಿಸುವ ಜನರು ಸೋತಾಗ ಬಿದ್ದು ಬಿದ್ದು ನಗುವರು. ನಕ್ಕವರಾರು ಅಕ್ಕರೆ ತೋರುವವರಲ್ಲ. ಅವೆಲ್ಲವುಗಳನ್ನು ಖುಷಿ ಮತ್ತು ನೋವುಗಳೊಂದಿಗೆ ಮಿಂದೇಳಿಸಿ ಬಂದ ಖುಷಿ, ಹೇಳಿ ಕೇಳದೆ ಬರುವ ದುಃಖಗಳನ್ನು ಬಿಗಿದಪ್ಪಿ ಕೈಬಿಡಬೇಕು.ಶುದ್ಧ ಬದುಕಿನ ಸಿದ್ಧಾಂತಗಳು ಅವು.
ಉದಾ :ಹೀಗೆ ಒಮ್ಮೆ ಆಕಸ್ಮಿಕವಾಗಿ ಒಂದು ಬುಡಕಟ್ಟು ಕುಟುಂಬವನ್ನು ನನ್ನ ಮಾರ್ಗದರ್ಶಕರು ಮತ್ತು ಅವರ ತಂಡದೊಂದಿಗೆ ಕ್ಷೇತ್ರಕಾರ್ಯಕ್ಕೆಂದು ಹೋದಾಗ ಭೇಟಿಯಾದಾಗಿನ ಒಂದು ಘಟನೆ ನನ್ನನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ನಾವು ಅಂದುಕೊಂಡಿರ್ತೀವಿ ನಮಗೆ ಕಷ್ಟ ಇದೆ ಅಂತ ಆದ್ರೆ ನಮಗಿಂತ ಕಷ್ಟದಲ್ಲಿರೋರು ಇರ್ತಾರೆ ಅಂತ ಹೊರಗೆ ನಾಲ್ಕರು ಕಡೆ ಹೋದಾಗ ತಿಳಿಯುತ್ತೆ. ಯಾಕೆ ಹೀಗೆ ಗರ ಬಡಿದಿರೋರ ತರ ಇದೀಯ ಅಂತ ಸುಮ್ನೆ ಮಾತಿಗೆ ಯಾರಾದ್ರೂ ಕೇಳ್ದಗ ಅಯ್ಯೋ ನಮ್ದೇನ್ ಕಥೆ ಕೇಳ್ತಿಯಾ ಕಷ್ಟದ ಮೇಲೆ ಕಷ್ಟ ಅಂತ ತಲೆಮೇಲೆ ಕೈ ಹೊತ್ತು ಮುಖದ ಮೇಲೆ ಗಂಟು ಹಾಕೊಂಡೋರನ್ನೇ ಹೆಚ್ಚು ನೋಡ್ತಿವಿ ಅಂತವರ ಮಧ್ಯೆ ಇಲ್ಲಿ ನಗು ನಗ್ತಾ ಬದುಕೋ ಒಂದು ಗುಪನ್ನ ನೋಡಿದೆ. ಅವರ ಬಳಿ ಸುಮ್ನೆ ಮಾತಾಡ್ತಾ ಇದ್ದಾಗ ನಮಗೆ ಗುರುತಿನ ಚೀಟಿಗಳಿಲ್ಲ, ಮನೆಗಳಿಲ್ಲ ಟೆಂಟ್ ಗಳಲ್ಲಿ ನಮ್ಮ ವಾಸ ಅಂತ ಅವ್ರು ನೋವಿನಿಂದ ಹೇಳ್ಕೊಂಡ್ರು. ಆದ್ರೆ ನಿಮಗೆ ಕಷ್ಟ ಆಗ್ತಿದೆ ಅಲ್ವಾ ಅಂದದ್ದಕ್ಕೆ ಅವರ ಉತ್ತರ ಏನಿತ್ತು ಅಂದ್ರೆ ಒಂದೇ ಹೊತ್ತು ತಿಂದ್ರು, ಅಂದು ದುಡಿದದ್ದು ಅಂದೆ ಆದ್ರೂ ಪರವಾಗಿಲ್ಲ ನೆಮ್ಮದಿಯಾಗಿದೀವಿ ಅಂದ್ರು. ಅಂದ್ರೆ ಹರಿದ ಜೋಪಡಿಯೊಳಗಿನ ರಂದ್ರಗಳು ಹೇಳುತ್ತಿವೆ ಅವರ ಕಥೆಯನ್ನ, ಭೂಮಿಯನ್ನೇ ಹಾಸಿಗೆ, ಆಕಾಶವನ್ನೇ ಹೊದಿಕೆ ಎಂದು ಭಾವಿಸಿ ತಮಗೆ ಕನಿಷ್ಠಪಕ್ಷ ಗುರುತ್ವವು ಇಲ್ಲದಂತೆ ಬದುಕುವವರು ನಮ್ಮ ಮಧ್ಯೆ ಇದ್ದರೂ ಅವರ ಮೊಗದಲ್ಲಿ ನಗು ಮಾತ್ರ ಮಾಸದೆ ಇದ್ದದ್ದು ಇವರಿಗಿರುವ ಕಷ್ಟ ನಮಗಿದೆಯಾ? ಎಂಬ ಪ್ರಶ್ನೆಯನ್ನು ಮತ್ತೆ ಮತ್ತೆ ಆ ಸನ್ನಿವೇಶ ಗಟ್ಟಿತನ ತುಂಬಿ ನಗುವುದನ್ನು ನಗೆ ಮಾಸದಿರುವಂತೆ ಬದುಕುವುದನ್ನು ಹೇಳಿಕೊಡುತ್ತದೆ.
ಯಾರೊಂದಿಗೆ ಯಾರೇ ರಾಜಿಯಾಗಲಿ ಸಮಯ ಮಾತ್ರ ಯಾರೊಂದಿಗೂ ರಾಜಿ ಮಾಡಿಕೊಳ್ಳದೆ ಸದ್ದಿಲ್ಲದೆ, ಸುದ್ದಿ ಕೊಡದೆ ಸಾಗುತ್ತದೆ. ಅವರಿವರ ಕೊಂಕು ಮಾತುಗೆಳಿಗೆ ಕಿವಿಗೊಡದೆ ನಾವು ಮುಗುಳ್ನಕ್ಕು ಸಾಗಬೇಕಿದೆ. ಇರೋಬರೋರಿಗೆಲ್ಲ ಮೆಚ್ಚುಗೆಯಾಗಿ ಬದುಕೋಕೆ ಬದುಕಿಗೇನು ಬಣ್ಣ ಹಚ್ಚಿಲ್ಲ, ನಮ್ಮ ಸ್ವಾಭಿಮಾನ ನೋಡುಗರಿಗೆ ಆತ್ಮರತಿ ಎನಿಸಿದರು ಪರವಾಗಿಲ್ಲ. ಬಹುತೇಕರಲ್ಲಿ ಕೆಲವರು ಖುಷಿಯಾಗಿದ್ರೆ ಸಹಿಸ್ಕೊಳಲ್ಲ ನೋವು ಪಡೋ ವಿಚಾರ ಇದ್ದಾಗ ಯಾರು ಬಂದು ಸಮಾಧಾನ ಹೇಳಿ ಹಂಚ್ಕೊಳಲ್ಲ ಅಂತ ಪ್ರಪಂಚಕ್ಕೆ ನಮ್ಮನ್ನ ಅರ್ಥಮಾಡಿಸೋ ಅವಶ್ಯಕತೆ, ಅನಿವಾರ್ಯ, ಅಗತ್ಯ ಇವ್ಯಾವು ಇಲ್ಲ. ನಗು ಎಷ್ಟು ಅಂದ್ರೆ ನಮ್ಮನ್ನ ನೋಡಿದ್ರೆ ನಗುನೆ ಸಾಲ ಕೇಳುವಷ್ಟು, ನಮ್ಮ ಕಷ್ಟ ನೋಡಿದ್ರೆ ದುಃಖನು ಅಳುವಷ್ಟು, ನಮ್ಮನ್ನ ನೋಡಿ ಸಹಿಸ್ಕೊಳೊಕಾಗ್ದೆ ಇರೋರು ಇನ್ನಷ್ಟು ಅಡುಗೆ ಮನೇಲಿ ಇರೋ ಬೆಂಕಿ ತರ ಉರಿಯೋವಷ್ಟು, ಬೇಜಾರಿಗೂ ಸಾಕಾಗೋವಷ್ಟು ಖುಷಿಯಾಗಿದೀವಿ ಅಂದ್ರೆ ಕಷ್ಟಗಳು, ಸಂಕಟಗಳು ಪರಮಾತ್ಮನನ್ನು ಬಿಡದೆ ಬಾಧಿಸಿವೆ ಇನ್ನು ನಾವೆಲ್ಲ ಏನೂ ಅಲ್ಲ ಅಂತ ನಗ್ತಿರ್ಬೇಕು ಬದುಕಲ್ಲಿ ಬಂದಿದ್ದನ್ನೆಲ್ಲ ಅಪ್ಪಿಕೊಳ್ಳೋವಷ್ಟು, ಒಪ್ಪಿಕೊಳ್ಳೋವಷ್ಟು ಭಗವಂತ ಇಟ್ಟಂಗೆ ನಡೀತೀವಿ ಅನ್ನೋವಷ್ಟು. ಬಿಟ್ಬಿಡ್ಬೇಕು ಜುಜುಬಿ ತುಕ್ಕಿಡಿದ ಮನಸ್ಸುಗಳು ಮತ್ತು ಅವ್ರಿವ್ರ ಸಂತೆ, ಜಾತ್ರೆಗಳಿಗೆ ತಲೆ, ಕಿವಿ ಕೊಡದಷ್ಟು ಅಂತ. ಇನ್ನಾದ್ರೂ ನಕ್ರೆ ಮನಸಿಂದ ನಕ್ಕುಬಿಡಿ. ಮನಸ್ಸಿನ ಮಾನಸಿಕ ಕಾಯಿಲೆ, ಚಿಂತೆಗಳಿಗೆಲ್ಲ ಮದ್ದು ನಗು. ಮೊಗದಲ್ಲಿನ ಒಂದು ಸಣ್ಣ ನಮ್ಮ ಬದುಕನ್ನೇ ಬದಲಿಸಬಲ್ಲದು. ನಿಮ್ಮ ಮೊಗದಲ್ಲಿಯೂ ನಗೆ ಮಾಸದಿರಲಿ ನಗ್ತಾ ಇರಿ ಮನಸಾರೆ.
ಡಾ ಮೇಘನ ಜಿ
ಉಪನ್ಯಾಸಕರು