ಮೂಡಲಗಿ – ಮೂಡಲಗಿ ತಾಲೂಕಿನ ಅಧಿಕಾರಿಗಳು ತಾಲೂಕಾ ಕೇಂದ್ರ ಸ್ಥಾನದಲ್ಲಿ ವಾಸ್ತವ್ಯ ಮಾಡದೇ ಬೇರೆ ಬೇರೆ ತಾಲೂಕುಗಳಿಂದ ಬರುತ್ತಿದ್ದು ಇದರಿಂದ ಸರ್ಕಾರ ನಿಯಮಗಳ ಉಲ್ಲಂಘನೆಯಾಗುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ಗುರು ಗಂಗಣ್ಣವರ ಆರೋಪಿಸಿದ್ದಾರೆ.
ಈ ಕೂಡಲೇ ಎಲ್ಲ ಮೂಡಲಗಿ ತಾಲೂಕಾ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಇದ್ದುಕೊಂಡು ಕರ್ತವ್ಯ ನಿರ್ವಹಿಸುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ತಹಶೀಲ್ದಾರರಿಗೆ ಮನವಿ ನೀಡಿದ್ದಾರೆ.
ಕರ್ನಾಟಕ ನಾಗರಿಕ ಸೇವಾ ನಿಯಮಗಳ ಪ್ರಕಾರ ಸರ್ಕಾರಿ ಅಧಿಕಾರಿಗಳು ತಮ್ಮ ಕರ್ತವ್ಯದ ಕೇಂದ್ರ ಸ್ಥಾನದಲ್ಲಿದ್ದುಕೊಂಡು ಕರ್ತವ್ಯ ನಿರ್ವಹಿಸಬೇಕು. ಇದರಿಂದ ಕೆಲವು ತುರ್ತು ಪರಿಸ್ಥಿತಿಗಳಲ್ಲಿ ಅನುಕೂಲವಾಗುತ್ತದೆ. ಬೇರೆ ತಾಲೂಕಿನಿಂದ ಬರುವ ಅಧಿಕಾರಿಗಳು ಇದ್ದರೆ ಸಾರ್ವಜನಿಕ ಸೇವೆಗೆ ಚ್ಯುತಿಯುಂಟಾಗುತ್ತದೆ ಆದ್ದರಿಂದ ಮೂಡಲಗಿ ತಾಲೂಕಿನ ಎಲ್ಲ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದುಕೊಂಡು ಕರ್ತವ್ಯ ನಿರ್ವಹಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ತಹಶೀಲ್ದಾರರು, ಸಿಡಿಪಿಒ ಅಧಿಕಾರಿ, ಪುರಸಭೆಯ ಮುಖ್ಯಾಧಿಕಾರಿ, ಸಿಪಿಐ, ಉಪ ನೋಂದಣಾಧಿಕಾರಿ, ಬಿಇಓ, ಹೆಸ್ಕಾಂ ಅಧಿಕಾರಿಗಳು, ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ, ಪಶು ವೈದ್ಯಾಧಿಕಾರಿ, ನಾಗನೂರ, ಕಲ್ಲೋಳಿ, ಅರಭಾವಿ ಮುಖ್ಯಾಧಿಕಾರಿಗಳು ಇವರೆಲ್ಲ ಒಂದು ವಾರದಲ್ಲಿ ಮೂಡಲಗಿ ಕೇಂದ್ರ ಸ್ಥಾನದಲ್ಲಿ ವಾಸ್ತವ್ಯ ಮಾಡುವ ಸಿದ್ಧತೆ ಮಾಡಿಕೊಳ್ಳದಿದ್ದಲ್ಲಿ ತಹಶೀಲ್ದಾರ ಕಚೇರಿಯ ಎದುರು ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಗುರು ಗಂಗಣ್ಣವರ ಎಚ್ಚರಿಕೆ ನೀಡಿದ್ದಾರೆ.
ಮೂಡಲಗಿಯು ತಾಲೂಕಾಗಿ ಎಂಟು ವರ್ಷಗಳಾದರೂ ಇನ್ನೂ ಅಧಿಕಾರಿಗಳು ಬೇರೆ ಬೇರೆ ತಾಲೂಕಿನಿಂದ ಬರುತ್ತಾರೆ. ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಇರಲು ಯಾರಿಗೆ ಹೆದರುತ್ತಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು. ಇವರು ಈ ರೀತಿ ಮಾಡಿದರೆ ಸಾರ್ವಜನಿಕರ ಕೆಲಸವನ್ನು ಯಾರು ಮಾಡುತ್ತಾರೆ ? ಸರ್ಕಾರದ ನಿಯಮಗಳ ಪ್ರಕಾರ ಇವರು ಕೇಂದ್ರ ಸ್ಥಾನದಲ್ಲಿಯೇ ವಾಸ್ತವ್ಯ ಮಾಡಬೇಕು ಹಾಗೆ ಮಾಡದಿದ್ದರೆ ನಾವು ಪ್ರತಿಭಟನೆ ಮಾಡಬೇಕಾಗುತ್ತದೆ.
ಗುರು ಗಂಗಣ್ಣವರ

