ಕಗದಾಳ(ಸವದತ್ತಿ ತಾಲೂಕು ) – ಪಾಲಕರು ಶಿಕ್ಷಕರ ಜೊತೆ ಕೈ ಜೋಡಿಸಿದಲ್ಲಿ ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ಉತ್ತುಂಗಕ್ಕೆ ಒಯ್ಯಲು ಸಾಧ್ಯವಿದೆ ಎಂದು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಕೃಷ್ಣರಡ್ಡಿ ಹ ಸವದತ್ತಿರವರು ಅಭಿಪ್ರಾಯ ವ್ಯಕ್ತಪಡಿಸಿದರು.
ಸರ್ಕಾರಿ ಪ್ರೌಢಶಾಲೆ ಕಗದಾಳದಲ್ಲಿ ಮಕ್ಕಳ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ “ಶಿಕ್ಷಕ-ಪೋಷಕರ ಮಹಾಸಭೆ” ಉದ್ಘಾಟಿಸಿ ಪಾಲಕರು ತಮ್ಮ ಮಕ್ಕಳನ್ನು ಕೇವಲ ಶಾಲೆಗೆ ದಾಖಲು ಮಾಡಿ ಕೈ ತೊಳೆದುಕೊಳ್ಳದೇ ,ಶಾಲೆ ಮತ್ತು ಶಿಕ್ಷಕರ ಜೊತೆ ನಿರಂತರ ಸಂಪರ್ಕ ಇಟ್ಟುಕೊಂಡು, ಮಕ್ಕಳ ಪ್ರಗತಿಗೆ ಕೈಜೋಡಿಸಲು ಕರೆನೀಡಿದರು.
ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯೋಪಾಧ್ಯಾಯರಾದ ಆರ್ ಸಿ ರಾಠೋಡ ಮಾತನಾಡಿ, ಮಕ್ಕಳ ಪ್ರಗತಿಗೆ ನಿರಂತರ ಪ್ರಯತ್ನ ಮಾಡುವ ಜೊತೆಗೆ ಸರ್ಕಾರ ಜಾರಿಗೆ ತಂದ ಪರಿಹಾರ ಬೋಧನೆ,ಎಫ ಎಲ್ ಎನ್,ಎಲ್ ಬಿ ಎ,ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ 29 ಅಂಶಗಳ ಅನುಷ್ಠಾನ ಇತ್ಯಾದಿ ಕಾರ್ಯಕ್ರಮಗಳನ್ನು ಶಿಕ್ಷಕರ ನಿರಂತರ ಪ್ರಯತ್ನದಿಂದ ಅನುಷ್ಠಾನಗೊಳಿಸಲಾಗುತ್ತಿದೆ. ಆದರೆ ಮಕ್ಕಳ ಗೈರು ಹಾಜರಾತಿ ಮತ್ತು ಪಾಲಕರ ಸಹಕಾರದ ಕೊರತೆಯಿಂದ ಸಮರ್ಪಕ ಅನುಷ್ಠಾನ ಆಗುತ್ತಿಲ್ಲ.ಕಾರಣ ನಿರಂತರ ಶಾಲೆಗೆ ಕಳುಹಿಸಲು ಕರೆ ನೀಡಿದರು.
ಎಸ್ ವ್ಹಿ ಶೆಟ್ಟರ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಬಿ ಜಿ ಪಾಟೀಲ ಶಿಕ್ಷಕರು ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ,ಪೋಕ್ಸೋ ಕಾಯ್ದೆ,ಬಾಲ್ಯ ವಿವಾಹ ನಿಷೇಧ, ಬಾಲಕಾರ್ಮಿಕ ಪದ್ಧತಿ ನಿಷೇಧದ ಬಗ್ಗೆ,ಎಚ್ ಎನ್ ಯಡ್ರಾಂವಿ ಶಿಕ್ಷಕರು ಕಲಿಕೆಯ ಪ್ರಗತಿ ಮತ್ತು ಹಾಜರಾತಿ ಬಗ್ಗೆ,ಜೆ ಕೆ ಪಾಟೀಲ ಶಿಕ್ಷಕರು ಎಸ್ ಎಸ್ ಎಲ್ ಸಿ ಫಲಿತಾಂಶದ ವಿಶ್ಲೇಷಣೆ,ಎಫ ಎಲ್ ಎನ್,ಎಲ್ ಬಿ ಎ ಬಗ್ಗೆ ಮಾತನಾಡಿದರು.
ವೇದಿಕೆಯ ಮೇಲೆ ಮುಖ್ಯ ಅತಿಥಿಗಳಾಗಿ ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಮಾಯಪ್ಪ ರಾ ಜೋತೆನ್ನವರ, ಗ್ರಾಮ ಪಂಚಾಯಿತಿಯ ಸದಸ್ಯರಾದ ಮುತ್ತು ಗುಡೆನ್ನವರ, ಪ್ರಾಥಮಿಕ ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಬಸವರಾಜ ಕುಂಬಾರ ಹಾಗೂ ಪಾಲಕ ಪ್ರತಿನಿಧಿಗಳು ಉಪಸ್ಥಿತರಿದ್ದರು.ಎಸ್ ವ್ಹಿ ಶೆಟ್ಟರ್ ಶಿಕ್ಷಕರ ಪ್ರಯತ್ನದಿಂದಾಗಿ ನೂರಕ್ಕೆ ನೂರರಷ್ಟು ಪಾಲಕರು ಸಭೆಗೆ ಹಾಜರಾಗಿದ್ದು ವಿಶೇಷವಾಗಿತ್ತು.ಡಿ ಬಿ ಕೊಡ್ಲಿ ಶಿಕ್ಷಕರು ಕಾರ್ಯಕ್ರಮ ನಿರೂಪಿಸಿದರು.

