ಮೂಡಲಗಿ-ಗುರ್ಲಾಪೂರ ಜನರಲ್ ಕೆಟಗರಿಯಲ್ಲಿ ನೀರವ ಮೌನ
ಮೂಡಲಗಿ – ಸ್ಥಳೀಯ ಪುರಸಭೆಯ ಅಧ್ಯಕ್ಷ ಸ್ಥಾನವು ಸಾಮಾನ್ಯ (ಜನರಲ್) ಕೆಟಗರಿಯ ಅಭ್ಯರ್ಥಿಗೇ ಮೀಸಲು ಎಂದು ಸರ್ಕಾರದ ಆದೇಶವಿದ್ದರೂ ಮೂಡಲಗಿ ಪುರಸಭಾ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯೇತರ ಕೆಟಗರಿಯ ಅಭ್ಯರ್ಥಿಗೆ ಹೋಗಿದ್ದರಿಂದ ಮೂಡಲಗಿ, ಗುರ್ಲಾಪೂರದ ಜನತೆ ಹುಬ್ಬೇರಿಸುವಂತಾಗಿದೆ.
ಅಧ್ಯಕ್ಷರಾಗಿ ಶ್ರೀಮತಿ ಖುರಶಾದ ಬೇಗಂ ನದಾಫ, ಉಪಾಧ್ಯಕ್ಷರಾಗಿ ಶ್ರೀಮತಿ ಭೀಮವ್ವ ದುರಗಪ್ಪ ಪೂಜೇರಿ ಆಯ್ಕೆಯಾದರು.
ಪುರಸಭೆಯ ಅಧ್ಯಕ್ಷ ಸ್ಥಾನ ಜನರಲ್ ಕೆಟಗರಿಗೆ ಮೀಸಲಾಗಿತ್ತು. ಅದರಂತೆ ಜನತಾ ದಳ ಬೆಂಬಲಿತ ಶ್ರೀಮತಿ ಸತ್ಯವ್ವಾ ಅರಮನಿ ನಾಮಪತ್ರ ಸಲ್ಲಿಸಿದ್ದರು ಆದರೆ ಜೆಡಿಎಸ್ ನಲ್ಲಿನ ನಾಲ್ವರು ಅಭ್ಯರ್ಥಿಗಳು ಅಡ್ಡ ಮತದಾನ ಮಾಡಿದರೆನ್ನಲಾಗಿದ್ದು ಅರಮನಿಯವರಿಗೆ ಕೇವಲ ಎರಡು ಮತಗಳು ಸಿಕ್ಕಿವೆ ಅಧ್ಯಕ್ಷರಾಗಿ ಆಯ್ಕೆಯಾದ ಖುರಷಾದ ಬೇಗಂ ಅವರಿಗೆ ೧೬ ಮತಗಳು ಬಿದ್ದವು ಒಬ್ಬರು ಮತ ಹಾಕದೇ ಉಳಿದರು. ಒಟ್ಟು ೨೩ ಸದಸ್ಯರಲ್ಲಿ ನಾಲ್ಕು ಜನ ಮತದಾನಕ್ಕೆ ಗೈರು ಹಾಜರಾಗಿದ್ದರು.
ಇನ್ನು ಜೆಡಿಎಸ್ ದಿಂದ ಆಯ್ಕೆ ಆಗಿದ್ದ ಏಳು ಜನರ ಪೈಕಿ ಈರಣ್ಣಾ ಶಿವರುದ್ರಪ್ಪ ಕೊಣ್ಣೂರ,
ಶ್ರೀಮತಿ ಸತ್ಯವ್ವ ಶಿವಬಸು ಅರಮನಿ ಪರವಾಗಿ ಮತ ನೀಡಿದರೆ, ಆದಮ್ ತಾಂಬೂಳೆ ಮತದಾನದಿಂದ ಹೊರಗೆ ಉಳಿದರು, ಶಿವಾನಂದ ಜಯಪ್ಪ ಸಣ್ಣಕ್ಕಿ,
ಶ್ರೀಮತಿ ರೇಣುಕಾ ಶಿವಲಿಂಗ ಹಾದಿಮನಿ
ಶ್ರೀಮತಿ ಶಾಂತವ್ವ ಖಾಶಪ್ಪ ಝಂಡೆಕುರುಬರ, ಶ್ರೀಮತಿ ಪಾರ್ವತಿ ಸಿದ್ದಪ್ಪ ಅಥಣಿ ಅವರೂ ಅಡ್ಡ ಮತದಾನ ಮಾಡಿದರೆನ್ನಲಾಗಿದ್ದು ಸದಸ್ಯತ್ವದಿಂದ ಅನರ್ಹ ಆಗುವ ಭೀತಿ ಎದುರಿಸುತ್ತಿದ್ದಾರೆ. ಯಾಕೆಂದರೆ ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯ ಹಿನ್ನೆಲೆಯಲ್ಲಿ ಜೆಡಿಎಸ್ ಅರಭಾವಿ ಘಟಕದಿಂದ ಜೆಡಿಎಸ್ ಸದಸ್ಯರಿಗೆ ತಮ್ಮ ಅಭ್ಯರ್ಥಿಗೇ ಮತ ಚಲಾಯಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿತ್ತಾದರೂ ಅದನ್ನು ಮೀರಿ ಬಿಜೆಪಿ ಅಭ್ಯರ್ಥಿಗೆ ಮತ ನೀಡಿದ ನಾಲ್ವರು ಹಾಗೂ ದೂರ ಉಳಿದ ಒಬ್ಬರು ಜೆಡಿಎಸ್ ಸದಸ್ಯರನ್ನು ಅನರ್ಹಗೊಳಿಸಲಾಗುತ್ತದೆಯೇ ಕಾದು ನೋಡಬೇಕು.
ಈ ಬಗ್ಗೆ ಜೆಡಿಎಸ್ ಗೌರವ ಅಧ್ಯಕ್ಷ ಪ್ರಕಾಶ ಸೋನವಾಲಕರ ಅವರು ಪ್ರತಿಕ್ರಿಯೆ ನೀಡಿ, ಪಕ್ಷದ ನಿಯಮಾವಳಿಗಳಂತೆ ಅಡ್ಡ ಮತದಾನ ಮಾಡಿದ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಇನ್ನೊಂದು ಅರ್ಥವಾಗದ ವಿಷಯವೆಂದರೆ ಪುರಸಭೆಯಲ್ಲಿ ಬಿಜೆಪಿ ಬಹುಮತವಿದ್ದರೂ ಪಕ್ಷದ ಏಕೈಕ ಜನರಲ್ ಅಭ್ಯರ್ಥಿ ಶ್ರೀಮತಿ ಗಂಗವ್ವಾ ಶಿವಲಿಂಗಪ್ಪ ಮುಗಳಖೋಡ ಯಾಕೆ ನಾಮಪತ್ರ ಸಲ್ಲಿಸಲಿಲ್ಲ ಎನ್ನುವುದು. ಒಂದು ಮಾಹಿತಿಯ ಪ್ರಕಾರ ತಮಗೇ ಅಧ್ಯಕ್ಷ ಸ್ಥಾನವನ್ನು ಶಾಸಕರು ನೀಡುತ್ತಾರೆ ಎಂದು ಮುಗಳಖೋಡ ಅವರು ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದರೆನ್ನಲಾಗಿದ್ದು ಅವರ ಭರವಸೆಯ ಮೇಲೆಯೇ ನಾಮಪತ್ರವನ್ನೂ ಕೂಡ ಸಲ್ಲಿಸದೇ ಇದ್ದರೆನ್ನುವ ಮಾಹಿತಿ. ಇದೇ ಅವರಿಗೆ ಮುಳುವಾಗಿದ್ದು ಜನರಲ್ ಕೆಟಗರಿಯಿಂದಲೇ ಈಗಿನ ಅಧ್ಯಕ್ಷರು ಆಯ್ಕೆಯಾಗಿದ್ದು ಮಾತ್ರ ಮೂಡಲಗಿ, ಗುರ್ಲಾಪೂರಗಳ ಸಾಮಾನ್ಯ ವರ್ಗದ ಜನತೆ ಇನ್ನೂ ಶಾಕ್ ನಲ್ಲಿದ್ದಾರೆನ್ನಲಾಗಿದೆ.
ಉಮೇಶ ಬೆಳಕೂಡ, ಮೂಡಲಗಿ