ಶರಣೆ ಸತ್ಯಕ್ಕ ಅವರು ಶಿರಾಳಕೊಪ್ಪದವರು, ಅಲ್ಲಿ ಶಂಭು ಜಕ್ಕೇಶ್ವರನ ದೇವಸ್ಥಾನವಿದೆ. ಅದು ಶಿವಭಕ್ತಿಗೆ ಹೆಸರುವಾಸಿಯಾದದ್ದು. ಶಿವಶರಣರ ಅಂಗಳ ಕಸಗುಡಿಸುವ ಕಾಯಕದ ಶರಣೆ ಸತ್ಯಕ್ಕ, ಜೊತೆ ಜೊತೆಗೆ ಶಿವಶರಣರ
ಮನದ ಆಮಿಷ, ಕಲ್ಮಶಗಳನ್ನೂ ಕಳೆಯುವ ನೇಮವನ್ನು ಮಾಡಿಕೊಂಡಿದ್ದರು ಎಂದು ಶರಣೆ ರತ್ಬಕ್ಕ ಕಾದ್ರೊಳ್ಳಿಯವರು ತಮ್ಮ ಉಪನ್ಯಾಸ ಆರಂಭಿಸಿದರು
ವಚನ ಅಧ್ಯಯನ ವೇದಿಕೆ, ಬಸವಾದಿ ಶರಣರ ಚಿಂತನಕೂಟ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಶರಣೆ ಸುಧಾ ಪಾಟೀಲ ಅವರ ತಂದೆಯವರಾದ ಲಿಂ. ಶರಣ ಬಿ. ಎಂ. ಪಾಟೀಲ ಮತ್ತು ತಾಯಿಯವರಾದ ಲಿಂ. ಶರಣೆ ಅಕ್ಕಮಹಾದೇವಿ ಪಾಟೀಲ ಅವರ ಸ್ಮರಣಾರ್ಥ ನಡೆದ ಶ್ರಾವಣ ಮಾಸದ ದತ್ತಿ ಉಪನ್ಯಾಸದ 24 ನೆಯ ದಿನ ಅವರು ಮಾತನಾಡಿದರು
ಅವರದು ಏನಿದ್ದರೂ ಏಕದೇವತಾ ನಿಷ್ಠೆ. ಹರನಲ್ಲದೆ ಪರದೈವವಿಲ್ಲವೆಂಬ ಸಂಪೂರ್ಣ ನಂಬಿಕೆಯಲ್ಲಿ ಬೆಳೆದವರು.
” ಶಿವತತ್ವ ಚಿಂತಾಮಣಿ ” “ಚೆನ್ನಬಸವಪುರಾಣ ” ” ಭೈರವೇಶ್ವರ ಕಾವ್ಯ ಕಥಾಮಣಿ ಸೂತ್ರ ರತ್ನಾಕರ ” ಮೊದಲಾದ ಕೃತಿಗಳಲ್ಲಿ ಸತ್ಯಕ್ಕನವರ ಜೀವನದ ವಿವರಗಳು ನೋಡಲು ಸಿಗುತ್ತವೆ ಎಂದು ಸ್ಮರಿಸಿದರು.
ಸತ್ಯಕ್ಕನವರು ಬರೆದ 32 ವಚನಗಳನ್ನು ಬರೆದಿದ್ದಾರೆ ಎಂದು ಹೇಳುತ್ತಾ, ಮಧ್ಯ ಮಧ್ಯ ವಚನ ವಿಶ್ಲೇಷಣೆ ಮಾಡುತ್ತ, ಅವರ ವಚನಗಳಲ್ಲಿನ ವ್ರತನಿಷ್ಠೆ ಅರಿವಿನ ಮಾರ್ಗ, ತೊಳಲಾಟ,
ಜಾತಿ -ವರ್ಗ -ವರ್ಣ ಭೇದವನ್ನು ಬಿಟ್ಟು ಸಾಮರಸ್ಯದ ಸೂತ್ರದಲ್ಲಿ ಒಂದುಗೂಡಿಸುವ ವಚನಗಳು,
ಬಹಿರಂಗ ಢಾoಬಿಕ ಆಚರಣೆಯನ್ನು ಕಟುವಾಗಿ ಟೀಕಿಸುವ ವಚನಗಳು, ಅವರು ಬದುಕಿದ ರೀತಿ, ಹೀಗೆ ಬೇರೆ ಬೇರೆ ವಿಷಯಗಳನ್ನು ಒಳಗೊಂಡ ವಚನಗಳನ್ನು ರಚಿಸುತ್ತಿದ್ದರು ಎಂದು ಹೇಳುತ್ತಾ ತಮ್ಮ ಮಾತು ಮುಗಿಸಿದರು.
ಶರಣೆ ಇಂದಿರಾ ಹೋಳ್ಕರ ಅವರು ವಚನ ಸಾಹಿತ್ಯ ಕರ್ನಾಟಕದ ಬಹುದೊಡ್ಡ ಸಾಂಸ್ಕೃತಿಕ ಸಂಪತ್ತು, ಎಲ್ಲರನ್ನೂ ಮನಸೂರೆಗೊಂಡ ಸಾಹಿತ್ಯ ಪ್ರಕಾಶ,ಭಾಷೆಯಲ್ಲಿ ಸರಳತೆ, ಸಮಾನತೆಯನ್ನು ಮೈಗೂಡಿಸಿಕೊಂಡ ಗದ್ಯವೂ ಮತ್ತು ಪದ್ಯವೂ ಆದ ವಚನ ಸಾಹಿತ್ಯದ ಮಹತ್ವ ತಿಳಿಸುತ್ತಾ, ತಮ್ಮ ಉಪನ್ಯಾಸ ಪ್ರಾರಂಭ ಮಾಡಿದರು.
ಜಾತಿ -ಮತ-ಪಂಥ-ಲಿಂಗಭೇದಗಳ ತಾರತಮ್ಯ ಹೋಗಲಾಡಿಸಿ ಆತ್ಮ ಕಲ್ಯಾಣದತ್ತ ನಮ್ಮನ್ನೆಲ್ಲ ಕರೆದುಕೊಂಡು ಹೋದ ಶರಣರ ಬಗೆಗೆ ಹೇಳುತ್ತಾ, ವಚನ ಚಳುವಳಿ ವ್ಯಾಪಕವಾಗಿ ಹಬ್ಬಿ, ಸ್ತ್ರೀಯರಿಗೂ ಸಮಾನ ಸ್ಥಾನಮಾನ ಕೊಟ್ಟಿದ್ದನ್ನು ಸ್ಮರಿಸಿದರು.
ಮೋಳಿಗೆ ಮಹಾದೇವಿಯವರು ಮೋಳಿಗೆ ಮಾರಯ್ಯನವರ ಪತ್ನಿ, ಕಾಶ್ಮೀರ ದ ರಾಜದಂಪತಿಗಳು ಎಂದು ಉಲ್ಲೇಖಿಸುತ್ತಾ, ಬಸವಣ್ಣನವರ ಹೆಸರು ಕೇಳಿ ಕಲ್ಯಾಣಕ್ಕೆ ಬಂದು ನೆಲೆಸಿ, ಕಟ್ಟಿಗೆ ಮಾರುವ ಕಾಯಕ ಪ್ರಾರಂಭ ಮಾಡಿದ್ದು, ಆರು ಸಾವಿರ ಜನರಿಗೆ ದಾಸೋಹ ಮಾಡುತ್ತಿದ್ದುದನ್ನು ನೆನಪಿಸಿದರು.
ಮೋಳಿಗೆ ಮಹಾದೇವಿಯವರು 69 ವಚನಗಳನ್ನು ಬರೆದಿದ್ದಾರೆ. ಅವರ ಅಂಕಿತನಾಮ ” ಇಮ್ಮಡಿ ನಿ:ಕಳಂಕ ಮಲ್ಲಿಕಾರ್ಜುನ ” ಎಂಬುದನ್ನು ಹೇಳುತ್ತಾ, ವೈಚಾರಿಕತೆ, ಆಧ್ಯಾತ್ಮಿಕತೆ, ಇಷ್ಟಲಿಂಗ, ಕ್ರಿಯಾಜ್ಞಾನದ ಬಗೆಗಿರುವ ಅವರ ವಚನಗಳನ್ನು ಹಂಚಿಕೊಂಡರು. ನಡೆ -ನುಡಿ ಶುದ್ಧವಾಗಿರಬೇಕು, ಕ್ರಿಯೆ ಮತ್ತು ಜ್ಞಾನ ಒಂದಕ್ಕೊಂದು ಪೂರಕವಾಗಿರಬೇಕು, ನಮ್ಮಲ್ಲೇ ಬೆಳಕಿದೆ, ಕೈಲಾಸವೂ ನಮ್ಮಲ್ಲೇ ಅಡಗಿದೆ ಎಂದು ಹೇಳುತ್ತಾ, ನಾಲ್ಕೈದು ವಚನ ವಿಶ್ಲೇಷಣೆ ಮಾಡಿದರು.
ಪರಿವರ್ತನೆ ನಮ್ಮಿಂದಲೇ ಆಗಬೇಕು, ಸ್ವವಿಮರ್ಶೆ ಮಾಡಿಕೊಳ್ಳಬೇಕು, ಅಂದಾಗಲೇ ಬದಲಾವಣೆ ಸಾಧ್ಯ ಎನ್ನುವ ಕಿವಿಮಾತು ಹೇಳುತ್ತಾ, ತಮ್ಮ ಉಪನ್ಯಾಸ ಮುಗಿಸಿದರು.
ಡಾ. ಗೀತಾ ಡಿಗ್ಗೆ ಅವರು ಶರಣ ಸಾಹಿತ್ಯದಿಂದ ಚಿಂತನ-ಮಂಥನ ಮಾಡಿ ಎಲ್ಲರೂ ಜ್ಞಾನವನ್ನು ಪಡೆಯಬೇಕು. ಅಂತರಂಗ -ಬಹಿರಂಗ ಶುದ್ಧಿಯಿಂದ ಒಂದೇ ಥರನಾಗಿ ಇದ್ದುಕೊಂಡು ಶರಣ ಸಾಹಿತ್ಯವನ್ನು ಮೆಲುಕುಹಾಕಿ, ನಮ್ಮ ಪ್ರತಿನಿತ್ಯದ ಜೀವನದಲ್ಲಿ ಅದನ್ನು ಅಳವಡಿಸಿಕೊಳ್ಳಬೇಕು
ಸಾರ್ವತ್ರಿಕ ಮೌಲ್ಯಗಳನ್ನು ಪಾಲಿಸಬೇಕು, ಯುಗಧರ್ಮದ ಜೀವನವನ್ನು ಅನುಸರಿಸಬೇಕು ಎನ್ನುವದನ್ನು ಹಂಚಿಕೊಳ್ಳುತ್ತಾ, ಇಬ್ಬರೂ ಶರಣೆಯರ ಇನ್ನಷ್ಟು ವಿಷಯಗಳನ್ನು ತಮ್ಮ ಮಾರ್ಗದರ್ಶನದ ನುಡಿಗಳಲ್ಲಿ ಹೇಳಿದರು.
ಡಾ. ಶಶಿಕಾಂತ ಪಟ್ಟಣ ಅವರು ಶರಣರು ಹೇಗೆ ತಳಸಮುದಾಯದ ಜನರಿಗೆ ಮಾನಸಿಕವಾಗಿ ಧೈರ್ಯ ಕೊಟ್ಟರು ಮತ್ತು ವಚನಗಳ ಕಟ್ಟುಗಳನ್ನು ಉಳಿಸಲು ಹೇಗೆ ಎಲ್ಲ ಭಾಗಗಳಲ್ಲಿ ಶರಣರು ತಂಡ -ತಂಡವಾಗಿ ಚದುರಿದರು ಎಂದು ಉಲ್ಲೇಖಿಸುತ್ತಾ ಶರಣೆ ಸತ್ಯಕ್ಕ ಮತ್ತು ಮೋಳಿಗೆ ಮಹಾದೇವಿಯವರ ಬಗೆಗೆ ಮತ್ತಷ್ಟು ಮಾತುಗಳನ್ನು
ಉಲ್ಲೇಖಿಸಿದರು.
ಶರಣ ಮಂಜು ಮಡಿವಾಳ ಅವರ ವಚನ ಪ್ರಾರ್ಥನೆ, ಶರಣೆ ಶಾಂತಾ ಧುಳoಗೆ ಅವರ ಸ್ವಾಗತ -ಪ್ರಾಸ್ತಾವಿಕ-ಪರಿಚಯ, ಶರಣೆ ಬಸಮ್ಮ ಭರಮಶೆಟ್ಟಿ ಅವರ ಶರಣು ಸಮರ್ಪಣೆ, ಶರಣೆ ಅನ್ನಪೂರ್ಣ ಅಗಡಿ ಅವರ ವಚನ ಮಂಗಳದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯವಾಯ್ತು. ಶರಣೆ ವಿಜಯಲಕ್ಷ್ಮಿ ಕಲ್ಬುರ್ಗಿ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.
ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು ಅಧ್ಯಯನ ಕೇಂದ್ರ -ಪುಣೆ