spot_img
spot_img

ನಿಚ್ಚಳ ನಿರೂಪಕ ಲಿಂಗಾರೆಡ್ಡಿ‌ ಆಲೂರು ಸುನೀತದ‌ ವಿವರಣೆ

Must Read

spot_img
- Advertisement -

ಹನುಮ ನಾಡಲಿ ಬಂದ ವೀರಭದ್ರನ ಗಿರಿಗೆ            ಸೇರಿದನು ವೀರಣ್ಣನಾ ರೆಡ್ಡಿಬಳಗವನು                ಸಾವಯವ ಸಂಪದದಿ ಕೃಷಿಸುದ್ದಿ ಮಾಡಿದನು                ಕೃಷಿ ದರ್ಶನವ ತಂದ ಚಂದನದ ವಾಹಿನಿಗೆ

ಇವರ ಮೂಲ ಮುಂಡರಗಿ ತಾಲೂಕಿನ ಪೇಠಾಲೂರು.ಅಲ್ಲಿ
ಇವರ ಆಸ್ತಿಪಾಸ್ತಿಗಳು ಇವೆ. ಇವರ ತಂದೆಯವರಾದ ವೀರಭದ್ರಪ್ಪ ಬದುಕು ಕಟ್ಟಿಕೊಳ್ಳಲು ಹನುಮನ (ಹನುಮವ್ವ ಆಲೂರರ ತಾಯಿ ಹೆಸರು)ನಾಡಾದ ಗಂಗಾವತಿ ತಾಲೂಕಿನ
ಮಲ್ಲಾಪುರಕ್ಕೆ ಸತಿ ಹನುಮವ್ವಳೊಂದಿಗೆ ಬಂದು ನೆಲೆಸಿ ಬಟ್ಟೆ ಹೊಲಿಯುವ ಕಾಯಕ ಮಾಡುತ್ತ ಬದುಕು ಸಾಗಿಸುತ್ತಾರೆ
ಇವರಿಗೆ ಮರಿಚಲ ಮಗನಾಗಿ‌ ಲಿಂಗಾರೆಡ್ಡಿ ೫.೯.೧೯೬೬ರಲ್ಲಿ
ಜನಿಸುತ್ತಾರೆ‌.ಮಲ್ಲಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆಯಲ್ಲಿ ೧ ರಿಂದ ೭ನೆ ತರಗತಿವರೆಗೆ,ಗಂಗಾವತಿಯ
ಶ್ರೀ ಕೊಟ್ಟೂರೇಶ್ವರ ಹೈಸ್ಕೂಲಲ್ಲಿ ಎಸ್.ಎಸ್.ಎಲ್.ಸಿ.ವರೆಗೆ,
ಗಂಗಾವತಿಯ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಪಿ.ಯು.ಸಿ ವರೆಗೆ, ಗಂಗಾವತಿಯ ಶ್ರೀರಾಮುಲು ಕಾಲೇಜಿನಲ್ಲಿ ಬಿ.ಎ‌. ಪದವಿ ಪಡೆದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂ.ಎ. ಕನ್ನಡ ಪಡೆದು‌ ಮತ್ತೆ ಗಂಗಾವತಿಯ ಟಿಎಮ್ಎಇ ಬಿ.ಎಡ್.ತರಬೇತಿ ಪಡೆದು
ಉತ್ತೀರ್ಣರಾಗುತ್ತಾರೆ. ವೀರಭದ್ರನ ಗಿರಿಗೆ ಅಂದರೆ ತಂದೆಯ
ಹೆಸರು ಮತ್ತು ಹಿರೆಜಂತಕಲ್ಲಿನಲ್ಲಿರುವ ವೀರಭದ್ರನ ಬೆಟ್ಟಕ್ಕೆ
ಎಂದರೆ ಮಲ್ಲಾಪುರದಲ್ಲಿದ್ದ ತಮ್ಮ ಹಳೆ ಮನೆ ಮಾರಿ ಗಂಗಾವತಿಗೆ ಬಂದು ನೆಲೆಸುತ್ತಾರೆ.

ಕಾರಟಿಗೆಯ ಶರಣಬಸವೇಶ್ವರ ಪ್ರೌಢಶಾಲೆಯಲ್ಲಿ ಕನ್ನಡ ಉಪನ್ಯಾಸಕರಾಗಿ ೩ ವರ್ಷ ಮತ್ತು ಮಲ್ಲಿಕಾರ್ಜುನ‌ನಾಗಪ್ಪ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ೩ ವರ್ಷ ಮತ್ತೆ
( ವೀರಣ್ಣನಾ ರೆಡ್ಡಿಬಳಗ)ರೆಡ್ಡಿವೀರಣ್ಣ ಸಂಜೀವಪ್ಪ ವಸತಿ ಪ್ರೌಢಶಾಲೆಯಲ್ಲಿ ಕನ್ನಡ ಉಪಾಧ್ಯಾಯರಾಗಿ ೧೦ ವರ್ಷ ಸೇವೆ ಸಲ್ಲಿಸುತ್ತಾರೆ. ಈಗ ಕೇಸರಟ್ಟಿಯ ಸ್ವಾಮಿ‌ ವಿವೇಕಾನಂದ ಆಂಗ್ಲ‌ ಮಾಧ್ಯಮ‌ ಶಾಲೆಯ ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಧ್ಯದಲ್ಲಿ ಎಸ್.ವಿ.ಪಾಟಿಲ‌ ಗುಂಡೂರ ಸಹಾಯದಿಂದ ದೂರದರ್ಶನದ ಚಂದನವಾಹಿನಿಗೆ ರೈತರ ಕೃಷಿ ದರ್ಶನ ಎಂಬ ಸಾವಿರಕ್ಕೂ ಹೆಚ್ಚು ಕಾರ್ಯಕ್ರಮ‌ದಲ್ಲಿ ನಿರೂಪಣೆ ಮಾಡಿದ್ದಾರೆ‌. ಅದರ ಅನುಭವದಿಂದ ಸಾವಯವ
ಸಂಪದ ಮಾಸಿಕ ಪತ್ರಿಕೆಯನ್ನು ೮ ವರ್ಷ ಸಂಪಾದಕರಾಗಿ,
ರೆಡ್ಡಿ‌ಬಳಗ ಮಾಸಪತ್ರಿಕೆಯನ್ನು ೨ ವರ್ಷ ಸಂಪಾದಕರಾಗಿ
ಪತ್ರಿಕೆಯಲ್ಲಿ ಸ್ವತಃ ಪ್ರಕಾಶಕರಾಗಿ ಪ್ರಕಟಿಸಿದ್ದಾರೆ.ಈಗಲೂ
ಕೃಷಿಸುದ್ದಿ ಪತ್ರಿಕೆ ಸಂಪಾದಕಾಗಿದ್ದಾರೆ. ಅಲ್ಲದೆ ಕೃಷಿಮಿತ್ರ ಲೇಖನಗಳು ವಿಜಯವಾಣಿ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿವೆ.

- Advertisement -

ಅರವತ್ತು‌ ಮನಸುಗಳ ಕೂಡಿಸಿದ ನಾಡಿನಲಿ
ನನ್ನೊಳಗಿರುವ‌ ಕಥೆಗಳೊರೆಯುವೆನು‌ ನಾನೆಂದ
ಕರುನಾಡ‌ ಮಕ್ಕಳಿಗೆ ರಸಪ್ರಶ್ನೆಗಳ ತಂದ
ಹಿಮ್ಮೇಳ ಹಾಡಿದನು ಆ ಕೆರೆಗೆ ಹಾರದಲಿ

೧೯೯೦ – ೯೩ ಅವಧಿಯಲ್ಲಿ ಅವಿಭಜಿತ ರಾಯಚೂರು ಜಿಲ್ಲೆ ಇದ್ದಾಗ ಗಂಗಾವತಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಅರವತ್ತು ಮನಸುಗಳು ಎಂಬ ಜಿಲ್ಲಾ ಮಟ್ಟದ ಕವನಸಂಕಲನ ಮತ್ತು ಸಿರಿಗನ್ನಡನಾಡಿ ಮತ್ತು‌ ನನ್ನೊಳಗಿನ
ಕಥೆಗಳು ಎಂಬ ತಾವು ರಚಿಸಿದ ಪುಸ್ತಕ ಪ್ರಕಟಿಸಿದ್ದಾರೆ.
೧೯೯೩- ೯೬ರವರೆಗೆ ಸ್ಪಂದನಾ ಸಾಹಿತ್ಯ ವೇದಿಕೆ ಕಾರಟಗಿಯ ಅಧ್ಯಕ್ಷರಾಗಿ ಮತ್ತು ೧೯೯೬ -೯೭ರವರೆಗೆ ಹೈದರಾಬಾದ್ ಕರ್ನಾಟಕ ಸಾಹಿತ್ಯ ಮಂಟಪದ ಅಧ್ಯಕ್ಷರಾಗಿ‌ ಕೆಲಸ ಮಾಡಿದ್ದಾರೆ.ಆಮೇಲೆ‌ ಮಕ್ಕಳಿಗಾಗಿ ರಸಪ್ರಶ್ನೆಗಳ ೧)ನೂತನ ರಸಪ್ರಶ್ನೆ ೨ )ಕರ್ನಾಟಕ ಕ್ವಿಜ್ ೩‌)ವಿಜ್ಞಾನ ವಿಸ್ಮಯ ಕ್ವಿಜ್, ೪)ಭಾರತ ಕ್ವಿಜ್ ಟೈಮ್,೫)ಪ್ರಪಂಚ ಕ್ವಿಜ್ ಟೈಮ್, ೬)ಮಹಾಭಾರತ ರಾಮಾಯಣ ಕ್ವಿಜ್ ಮುಂತಾದ‌ ಪುಸ್ತಕಗಳನ್ನು‌ ಪ್ರಕಟಿಸಿದ್ದಾರೆ.೧೩ಕ್ಕು ಹೆಚ್ಚು ಕಥೆಗಳು
ಕರ್ಮವೀರ ತರಂಗ‌ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕೆರೆಗೆ
ಹಾರ ನಾಟಕದಲ್ಲಿ ಹಿಮ್ಮೇಳದಲ್ಲಿ ಸುಮಧುರವಾಗಿ ಹಾಡಿದ್ದಾರೆ. ಕೃಷಿಗೀತೆ ರಚಸಿ ಆಕಾಶವಾಣಿಯಲ್ಲಿ ಹಾಡಿದ್ದಾರೆ. ಅನೇಕ ಕಿರುಚಿತ್ರ ರಚಸಿ ಅಭಿನಯಿಸಿದ್ದಾರೆ.

ಎಂಥ ಕಂಚಿನ ಕಂಠ ಗಂಟೆ ಬಾರಿಸಿದಂತೆ
ಸವಿನಾದ ಕಿವಿಯಲ್ಲಿ ಸುರಿಯುವುದು ಮಕರಂದ
ಅದ್ಭುತ ನಿರೂಪಣೆಯ ಶೈಲಿ ಮನಕಾನಂದ
ಕನ್ನಡದ ಶಬ್ಧಗಳು ಮಿಂಚಿ ಬೆಳಕಾದಂತೆ

- Advertisement -

ಸಾವಿರಾರು ದೂರದರ್ಶನ, ಸಾಹಿತ್ಯ ಸಮ್ಮೇಳನ ಮತ್ತು ಇತರೆ ಸಂಗೀತ ,ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕಂಚಿನ
ಕಂಠದಲ್ಲಿ‌ ಸುಂದರವಾಗಿ ನಿರೂಪಣೆ‌ ಮಾಡಿ ಸೈ ಎನಿಸಿಕೊಂಡಿದ್ದಾರೆ. ದೇವರು ಕೊಟ್ಟ ಅವರ ಕಂಚಿನ ಕಂಠ
ಓಂಕಾರ ತರಂಗವೆಬ್ಬಿಸುವ ಗುಡಿಯಲ್ಲಿಯ ಗಂಟೆಯಂತೆ
ಕಿವಿಗಳಿಗೆ ನಾದಾಮೃತವನ್ನು ಸುರಿಸಿ ಕೇಳಗರ ಮನವನ್ನು
ಹೃದಯವನ್ನು‌ ಮುದಗೊಳಿಸುತ್ತದೆ. ಅವರ ನಿರೂಪಣೆಯ
ಶೈಲಿ ಅಚ್ಚಕನ್ನಡ ಪದಗಳ ಉಚ್ಛಾರ ಮೋಡದಲ್ಲಿ
ಮಿಂಚಿ ಮಾಯವಾಗುವ ಕೋಲ್ಮಿಂಚಿನಂತೆ ಸಭೆಯಲ್ಲಿ
ಬೆಳಕು‌ ಮತ್ತು ಬೆರಗು ಮೂಡಿಸುತ್ತದೆ.ಅವರ ಶೈಲಿ ಸಿನಿಮಾ
ನಟಿ ಅಪರ್ಣಾಳ ನಿರೂಪಣೆಯಂತೆ ಕಿವಿಗಳಿಗಾನಂದ
ನೀಡುತ್ತದೆ.

ಉತ್ಸವದಿ ಉತ್ಸಾಹ ಉಕ್ಕಿಸುವ ಸರದಾರ
ಕನ್ನಡದಿ ನಿಚ್ಚಳ ನಿರೂಪಣೆಯ ಹರಿಕಾರ

ಯಾವುದೇ ಸಾಹಿತ್ಯೋತ್ಸವವಿರಲಿ, ಸಂಗೀತೋತ್ಸವವಿರಲಿ,
ಸಾಂಸ್ಕೃತಿಕೋತ್ಸವವಿರಲಿ ಕೇಳುಗರಲ್ಲಿ ಉತ್ಸಾಹವನ್ನು
ಉಕ್ಕಿಸುವ ಸರದಾರನೀತ.ಅಚ್ಚ ಕನ್ನಡ ಪದಗಳನ್ನು
ನಿಚ್ಚಳವಾಗಿ ಉಚ್ಛರಿಸಿ ನಿರೂಪಣೆ ಮಾಡುವುದರಲ್ಲಿ
ಹರಿಕಾರನೀತ.

ಎನ್.ಶರಣಪ್ಪ‌ ಮೆಟ್ರಿ

- Advertisement -
- Advertisement -

Latest News

ಜಾನುವಾರುಗಳಿಗೆ ಉಚಿತ ತಪಾಸಣಾ ಶಿಬಿರ

ಶ್ರೀಮತಿ ಸೋಮವ ಚನ್ನಬಸಪ್ಪ ಅಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೆ ಕೆ ಕೊಪ್ಪ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದ ವತಿಯಿಂದ ಜಾನುವಾರುಗಳಿಗೆ...
- Advertisement -

More Articles Like This

- Advertisement -
close
error: Content is protected !!
Join WhatsApp Group