ಹೆಣ್ಣುಮಕ್ಕಳಿದ್ದವರಿಗೆ ಮುಕ್ತಿ ಸಿಗೋದಿಲ್ಲವಂತೆ ಅಂತೆ ಕಂತೆಗಳ ಸಂತೆಯೊಳಗೆ ಇಂದು ಮನುಕುಲ ನರಳುತ್ತಿದೆ. ಭೂಮಿಯ ಮೇಲೆ ನಿಂತು ಹೆಣ್ಣನ್ನು ಕೀಳಾಗಿ ಕಂಡು ಮುಕ್ತಿಯ ಮಾರ್ಗ ಹಿಡಿದವರೆಷ್ಟೋ ಮಂದಿಗೆ ಮುಕ್ತಿ ಸಿಕ್ಕಿದೆ ಎಂದರೆ ನಂಬಬಹುದೆ? ಮಾನವ ಮುಖ್ಯವಾಗಿ ಭೂಮಿಗೆ ಬರೋದಕ್ಕೆ ಕಾರಣವೆ ಜೀವ.
ಆ ಜೀವವನ್ನು ತನ್ನ ಒಡಲಲ್ಲಿ ಹಿಡಿದಿಟ್ಟುಕೊಂಡು ಹೊತ್ತು, ಹೆತ್ತು,ಸಾಕಿ ಸಲಹಿದ ತಾಯಿಯೂ ಹೆಣ್ಣು. ಇವಳಿಲ್ಲದೆ ಜೀವ ಇರಲಿಲ್ಲ. ಜೀವ ಕೊಟ್ಟು ಬೆಳೆಸಿದ ತಾಯಿಯ ನಂತರ ಬಂದ ಜೀವನ ಕೊಟ್ಟ ಹೆಣ್ಣು ಹೆಚ್ಚಾದಾಗಲೆ ಸಮಸ್ಯೆ ಬೆಳೆಯೋದು. ಇಬ್ಬರನ್ನೂ ಸರಿಸಮನಾಗಿ ತಿಳಿದು ಗೌರವ ದಿಂದ ಜೀವನ ನಡೆಸೋರೆ ನಿಜವಾದ ಮುಕ್ತಿ ಗೆ ಅರ್ಹರಾಗಿರುತ್ತಾರೆ.
ಇದನ್ನು ಸಂನ್ಯಾಸಿಗಳು ಮಾಡಲು ಸಾಧ್ಯವಿಲ್ಲ. ಸಂಸಾರ ತೊರೆದು ವಿಶೇಷವಾದ ಆಧ್ಯಾತ್ಮ ಜ್ಞಾನದಿಂದ ಭೂಮಿಯಲ್ಲಿ ಧರ್ಮ ರಕ್ಷಣೆ ಮಾಡಬಹುದು. ಆದರೆ, ಭೂಮಿಯನ್ನು ಆಳೋದಕ್ಕೆ ಸಂನ್ಯಾಸಿಗಳಿಗೆ ಅಸಾಧ್ಯ. ಹೀಗಾಗಿ ಆಧ್ಯಾತ್ಮ ಜ್ಞಾನಿಗಳು ರಾಜಕೀಯದಿಂದ ದೂರವಿದ್ದರು. ಹಿಂದಿನ ರಾಜರ ಕಾಲ ಇಂದಿನ ಪ್ರಜಾಪ್ರಭುತ್ವದಲ್ಲಿ ನಡೆಯುತ್ತಿಲ್ಲವಾದರೂ ರಾಜಕೀಯದಲ್ಲಿ ಸಂನ್ಯಾಸಿಗಳೂ ಬೆರೆತುಹೋಗಿರುವುದು ಸತ್ಯ.
ಹಾಗಾದರೆ ರಾಜಕೀಯ ನಡೆಸಲು ಹೆಣ್ಣು ಮುಂದೆ ಬಂದಿರುವುದು ತಪ್ಪಲ್ಲ. ತನ್ನ ದೇಶವನ್ನು, ತನ್ನ ಭೂಮಿಯನ್ನು, ತನ್ನ ನಾಡನ್ನು, ತನ್ನ ದೇಹವನ್ನು ರಕ್ಷಣೆ ಮಾಡಿಕೊಳ್ಳಲು ಸ್ತ್ರೀ ಗೆ ಅಗತ್ಯವಿದೆ. ಯಾವಾಗ ಸ್ತ್ರೀ ಪುರುಷನ ಅಧರ್ಮಕ್ಕೆ ಸಹಕರಿಸಿದಳೋ ಆಗಲೆ ಅವಳ ಕಷ್ಟ ಪ್ರಾರಂಭ ವಾಗಿದೆ. ಆ ಜನ್ಮದಲ್ಲಿ ತಪ್ಪಿಸಿಕೊಂಡರೂ ಅದರ ಫಲ ಮುಂದಿನ ಜನ್ಮದಲ್ಲಿ ಅನುಭವಿಸಲೇಬೇಕೆನ್ನುವ ಆಧ್ಯಾತ್ಮ ಸತ್ಯವನ್ನು ಭೌತಿಕ ವಿಜ್ಞಾನ ಒಪ್ಪಲು ಕಷ್ಟವೆ.
ಪುರಾಣ,ಇತಿಹಾಸದ ಕಥೆಗಳೇ ತಿಳಿಸುವಂತೆ ಪ್ರತಿಯೊಂದು ಸಮಸ್ಯೆಯ ಹಿಂದೆ ಒಂದು ಕರ್ಮಫಲ ಇದೆ. ಸ್ತ್ರೀ ಚಂಚಲೆಯಾದ್ದರಿಂದ ಮನಸ್ಸನ್ನು ಹೊರ ಬಿಟ್ಟು ತನ್ನ ಮೂಲ ಶಕ್ತಿಯನ್ನು ಹಿಂದುಳಿಸಿಕೊಂಡು ಭೂಮಿಯಲ್ಲಿ ಸುಖವಾಗಿರಬೇಕೆನ್ನುವಾಗ ಎಷ್ಟೋ ಅಸತ್ಯ, ಅನ್ಯಾಯ, ಅಧರ್ಮಕ್ಕೆ ಅಪರೋಕ್ಷವಾಗಿ ಸಹಕರಿಸುತ್ತಾಳೆ. ಹೀಗಾಗಿ ಭೂಮಿಯಲ್ಲಿ ಕೆಟ್ಟ ಪರಿಣಾಮ ಹೆಚ್ಚಾಗುತ್ತದೆ. ಅಸುರಶಕ್ತಿ ಬೆಳೆಯುತ್ತದೆ. ಈ ಕಾರಣಕ್ಕಾಗಿಯೇ ಹೆಣ್ಣು ಮಕ್ಕಳಿದ್ದವರಿಗೆ ಮುಕ್ತಿ ಇಲ್ಲ ಎಂದಿರಬೇಕು. ಆದರೆ ಕಾಲಬದಲಾಗಿದೆ.
ಪೋಷಕರನ್ನು ಉತ್ತಮವಾಗಿ ನೋಡಿಕೊಂಡು ಸ್ವಯಂ ಪ್ರಕಾಶಕರಾಗಿ ಜೀವನ ನಡೆಸುವವರು ಹೆಣ್ಣು ಮಕ್ಕಳೆ.ಆದರೆ ಅವರಿಗೆ ಸಂಸ್ಕಾರಯುತ, ಧರ್ಮಯುಕ್ತ ದಾರಿಯಲ್ಲಿ ನಡೆಯಲು ಬಿಟ್ಟಾಗ ಮಾತ್ರ. ಇತ್ತೀಚಿನ ದಿನಗಳಲ್ಲಿ ಪುರುಷರಿಗೇ ಆಧ್ಯಾತ್ಮದ ದಾರಿಯಲ್ಲಿ ನಡೆಯಲಾಗದೆ ಅತಂತ್ರಸ್ಥಿತಿಗೆ ತಲುಪಿದ್ದಾರೆ. ಹಿಂದಿನ ಶಾಸ್ತ್ರ, ಪುರಾಣಗಳೆಲ್ಲವೂ ಹಿಂದೆ ನಿಂತು ಪ್ರಚಾರಕ್ಕಷ್ಟೇ ಸೀಮಿತವಾಗಿದೆ. ಹೆಣ್ಣನ್ನು ಆಳೋದೆಂದರೆ ಹೆಚ್ಚು ಹಣ ಸಂಪಾದಿಸೋದು ಎನ್ನುವ ಮಟ್ಟಿಗೆ ವಿಪರೀತ ಸಂಪಾದನೆ ಮಾಡಿದವರಿಗೂ ಸ್ತ್ರೀಯನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾಗಿದೆ.
ಹಾಗಾದರೆ ಮುಕ್ತಿ, ಮೋಕ್ಷ ಪಡೆಯಲು ಹೆಣ್ಣಿನ ಅಗತ್ಯವಿಲ್ಲವೆ? ಅಥವಾ ಇದೆಯೆ? ಭೂಮಿ ಮೇಲೆ ಬಂದ ಜೀವಾತ್ಮನಿಗೆ ಭೂಮಿ ಋಣ ತೀರಿಸದೆ ಮುಕ್ತಿ ಸಿಗುವುದೆ? ದೇವರು ಅನೇಕ ದೇವರ ಮುಂದೆ ಭೂಮಿ ಒಂದೆ ಇರೋದಲ್ಲವೆ? ಭೂಮಿ ಮೇಲಿರುವ ಸ್ತ್ರೀ ಕುಲವನ್ನು ಸನ್ಮಾನದಿಂದ ಸನ್ಮಾರ್ಗದಲ್ಲಿ, ಸತ್ಸಂಗ ದಲ್ಲಿ , ಸದ್ವಿದ್ಯೆ ನೀಡೋದಕ್ಕೂ ಹಲವರಿಗೆ ಮನಸ್ಸಿಲ್ಲ ಅಥವಾ ಜ್ಞಾನವಿಲ್ಲ.
ಎಲ್ಲಿವರೆಗೆ ಜ್ಞಾನ ಬರುವುದಿಲ್ಲವೋ ಅಲ್ಲಿಯವರೆಗೆ ಭೂಮಿ ಋಣ ತೀರಿಸಲಾಗದು. ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸ್ವತಂತ್ರ ಜ್ಞಾನದೆಡೆಗೆ ನಡೆಸಬೇಕಾವರೆ ಅವಳನ್ನು ಆಳಿ ಅಳಿಸಿ ಹೋದರೆ ಮುಕ್ತಿ ಸಿಗೋದಿಲ್ಲ. ಇದಕ್ಕೆ ಸಹಕಾರ ನೀಡಿದವರೂ ಹೆಣ್ಣೇ ಆಗಿರುತ್ತಾರೆ. ಹೀಗಾಗಿ ಹೆಣ್ಣಿನ ಸಮಸ್ಯೆಗಳಿಗೆ ಪರಿಹಾರವಿಲ್ಲದೆ ಹೊರಗೆ ಹೋರಾಟ ಮಾಡಬೇಕಾಗಿದೆ. ಒಳಗೇ ಅಡಗಿದ್ದ ಅಜ್ಞಾನವನ್ನು ಉತ್ತಮ ಶಿಕ್ಷಣದಿಂದ ಬಿಡುಗಡೆ ಮಾಡಿಕೊಳ್ಳಲು ಹೆಣ್ಣು ತನ್ನ ಸ್ವಾರ್ಥ, ಅಹಂಕಾರ ಬಿಟ್ಟು ಸತ್ಯದೆಡೆಗೆ ನಡೆದರೆ ಸಮಸ್ಯೆಗೆ ಪರಿಹಾರ ಒಗ್ಗಟ್ಟಿನಲ್ಲಿರುತ್ತದೆ. ಯಾವಾಗ ಸ್ತ್ರೀ ಸಂಘಟನೆಗಳು ಜ್ಞಾನದ ಮಾರ್ಗ ಹಿಡಿಯುವುದೋ ಆಗ ಹೊರಗಿನ ಯಾವ ದುಷ್ಟ ಶಕ್ತಿಯೂ ಹತ್ತಿರ ಸುಳಿಯದು.
ಒಲಿದರೆ ನಾರಿ ಮುನಿದರೆ ಮಾರಿ ಎಂದ ಹಾಗೆ ನಾರಿಯರಾದವರು ತಮ್ಮೊಳಗೇ ಅಡಗಿರುವ ಜ್ಞಾನಶಕ್ತಿಯನ್ನು ಸಮಾಜದ ಉದ್ದಾರಕ್ಕಾಗಿ ಬಳಸಿದರೆ ಸಂಸಾರದಲ್ಲಿಯೂ ನೆಮ್ಮದಿ, ಶಾಂತಿ, ಸಮೃದ್ದಿ. ತನಗೆ ಮಾತ್ರ ಬಳಸಿದರೆ ಕಷ್ಟ ನಷ್ಟ ಕಟ್ಟಿಟ್ಟ ಬುತ್ತಿ. ಇದು ಪುರುಷರಿಗೂ ಅನ್ವಯಿಸುತ್ತದೆ. ಭೂಮಿಗೆ ಜೀವ ಬರೋ ಉದ್ದೇಶ. ತನ್ನ ಹಿಂದಿನ ಋಣ ಅಥವಾ ಸಾಲ ತೀರಿಸುವುದಾದರೆ ಮನುಕುಲ ಸಾಲ ಮಾಡಿಟ್ಟು ಸ್ತ್ರೀಯನ್ನು ದುಡಿಯಲು ಬಿಟ್ಟು ಮನರಂಜನೆಯಲ್ಲಿದ್ದರೆ ಗಂಡು ಮಕ್ಕಳ ಪೋಷಕರಿಗೆ ಮುಕ್ತಿ ಸಿಗುವುದೆ?
ಈಗ ಹೆಚ್ಚಾಗಿ ಸಮಾಜದಲ್ಲಿ ಒಳಗೂ ಹೊರಗೂ ದುಡಿದು ಸಂಸಾರ ನಡೆಸುತ್ತಿರುವ ಸ್ತ್ರೀ ಯರನ್ನು ಕೊನೆಪಕ್ಷ ಗೌರವದಿಂದ ಪವಿತ್ರಬಾವನೆಯಿಂದ ನೋಡೋದಕ್ಕೆ ಗಂಡುಮಕ್ಕಳಿಗೆ ಪೋಷಕರಾದವರು ಕಲಿಸಿಕೊಟ್ಟರೆ ಉತ್ತಮ. ಪೋಷಕರೆ ಸರಿದಾರಿಯಲ್ಲಿ ನಡೆಯದಿದ್ದರೆ ಮಕ್ಕಳು ನಡೆಯುವುದು ಕಷ್ಟವೆ. ಇಲ್ಲಿ ಮುಕ್ತಿ ಗಳಿಸಲು ಧರ್ಮ ಮಾರ್ಗ ಅಗತ್ಯವಿದೆ. ಧರ್ಮ ಯಾವುದು? ಮಾನವಧರ್ಮ. ಮಾನವನಾಗಿ ಜೀವಿಸಲು ಸಾಮಾನ್ಯಜ್ಞಾನ ದ ಅಗತ್ಯವಿದೆ.
ಜ್ಞಾನಕ್ಕೆ ಅಧಿದೇವತೆಯೇ ಸ್ತ್ರೀ ಯಾಗಿರುವಾಗ ಅವಳನ್ನು ಹೆತ್ತ ಪೋಷಕರು ಜ್ಞಾನ ನೀಡದಿದ್ದರೆ ನಿಜವಾಗಿಯೂ ಮುಕ್ತಿ ಸಿಗದು. ಪುರುಷಪ್ರಧಾನ ಸಮಾಜವೆಂದು ಧಾರ್ಮಿಕ ಕ್ಷೇತ್ರದಲ್ಲಿ ಪುರುಷರಿಗೆ ಧಾರ್ಮಿಕ ಶಿಕ್ಷಣ ನೀಡಿ ಸ್ತ್ರೀ ಯನ್ನು ಹಿಂದುಳಿಸಿ ಆಳಿದ ಪರಿಣಾಮ ಇಂದು ಸ್ತ್ರೀ ಸಿಡಿದೆದ್ದು ಪ್ರತಿಯೊಂದು ಕ್ಷೇತ್ರದಲ್ಲಿಯೂ ಮುಂದೆ ನಡೆದು ತನ್ನ ಶಕ್ತಿಪ್ರದರ್ಶನ ಮಾಡಿರೋದು. ಆದರೆ ಸಮಸ್ಯೆ ಮನೆಯೊಳಗೇ ಬೆಳೆಯುತ್ತಿರುವುದು ಸಂಸಾರಕ್ಕೆ ಧಕ್ಕೆಯಾಗಿದೆ.
ಒಳಗಿದ್ದ ಮಹಾಶಕ್ತಿಯನ್ನು ಹೊರಗೆಳೆದು ರಾಜಕೀಯ ನಡೆಸಿದರೆ ಮುಕ್ತಿ ಸಿಗುವುದೆ? ವೈದೀಕ ಪರಂಪರೆಯ ಉದ್ದೇಶ ಪಿತೃಗಳಲ್ಲಿ ಬೇಧಭಾವ ತೋರದೆ ಗೌರವದಿಂದ, ಭಕ್ತಿಯಿಂದ ನೋಡುವುದಾಗಿತ್ತು. ಆದರೀಗ ಲಿಂಗತಾರತಮ್ಯದಿಂದ ಸ್ತ್ರೀ ಜ್ಞಾನ ಹಿಂದುಳಿಸಿ ಪ್ರತಿಮೆಯನ್ನು ಪೂಜಿಸಿದರೆ ಹೊರಗಿನ ಪ್ರತಿಭೆ ಅಡ್ಡದಾರಿ ಹಿಡಿಯುತ್ತದಲ್ಲವೆ? ಮಕ್ಕಳ ಜ್ಞಾನ ಗುರುತಿಸಿ ಸನ್ಮಾರ್ಗದಲ್ಲಿ ನಡೆಸಲು ಹೆಣ್ಣು ಗಂಡಿನ ತಾರತಮ್ಯದ ಅಗತ್ಯವಿಲ್ಲ. ಆತ್ಮಜ್ಞಾನ ಎಲ್ಲರಿಗೂ ಸರಿಸಮಾನ. ಭಾರತೀಯರಲ್ಲಿರುವ ದೋಷ ಸ್ತ್ರೀ ಶಕ್ತಿಯನ್ನು ಹಿಂದುಳಿಸಿ ಪರಕೀಯರಿಗೆ ಅವಕಾಶ ನೀಡುತ್ತಿದೆ ಎಂದರೂ ತಪ್ಪಾಗುತ್ತದೆಯೆ? ಸತ್ಯ ಸ್ತ್ರೀಗೆ ತಿಳಿಸದಿರೋದೆ ಎಲ್ಲಾ ಸಮಸ್ಯೆಗಳಿಗೆ ಕಾರಣ. ಸತ್ಯವೆ ದೇವರೆಂದಮೇಲೆ ಸ್ತ್ರೀ ಶಕ್ತಿಗೆ ಸತ್ಯದ ಅಗತ್ಯವಿಲ್ಲವೆ? ಎಲ್ಲಿ ಸ್ತ್ರೀ ಯನ್ನು ಪೂಜನೀಯವಾಗಿ ನಡೆಸಿಕೊಳ್ಳುವರೋ ಅಲ್ಲಿ ದೇವತೆಗಳಿರುತ್ತಾರಂತೆ.
ಆದರೆ ಭಾರತದಲ್ಲಿ ಉದ್ಯೋಗವಿಲ್ಲದೆ ಗೃಹಿಣಿಯಾಗಿದ್ದು ಸಂಸಾರದ ಸೇವೆ ಮಾಡಿಕೊಂಡ ಸ್ತ್ರೀ ಹಿಂದುಳಿದ ಮಹಿಳೆಯಾಗಿ ಕಾಣುತ್ತಿರುವುದೆ ಅಜ್ಞಾನ. ಹೀಗೆ ಕಾಣುತ್ತಿರುವವರಿಗೆ ಮುಕ್ತಿ ಸಿಗೋದಿಲ್ಲ ಎನ್ನಬಹುದಷ್ಟೆ. ಅತಿಯಾಗಿ ಮೇಲೇರಿಸಿದರೂ ತಪ್ಪು. ಕಾರಣ ಭೂಮಿ ಇರೋದು ಮದ್ಯದಲ್ಲಿ. ಸ್ತ್ರೀ ಗೆ ಸ್ತ್ರೀ ಯೆ ವೈರಿಯಾಗದಂತೆ ಜ್ಞಾನದಿಂದ ಮುನ್ನೆಡೆದರೆ ಭೂಮಿಯ ಸಮಸ್ಯೆಗೆ ಪರಿಹಾರವಿದೆ. ಹಣದಿಂದಲ್ಲ ಜ್ಞಾನದಲ್ಲಿದೆ. ಹೊರಗಿಲ್ಲ ಒಳಗೇ ಇದೆ. ಮಕ್ಕಳು ಸ್ತ್ರೀ ಯರು ಪ್ರದರ್ಶನದ ವಸ್ತುವಲ್ಲ. ಲಕ್ಮಿಯ ಮೊದಲು ಸರಸ್ವತಿಯ ಆರಾಧನೆಯಿದ್ದರೆ ಮನುಕುಲಕ್ಕೆ ಉತ್ತಮ.ಸರಸ್ವತಿಯಿಂದ ಜ್ಞಾನ,ಜ್ಞಾನದಿಂದ ಹಣ, ಹಣದಿಂದ ದಾನಧರ್ಮ,ದಾನಧರ್ಮದಿಂದ ಸದ್ಗತಿ, ಮುಕ್ತಿ.
ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು.