ಮೂಡಲಗಿ: ಮಕ್ಕಳ ಕಲಿಕಾ ಪ್ರಗತಿ, ಶಾಲಾ ದಾಖಲಾತಿ, ಬಿಸಿಯೂಟ, ಮೂಲಭೂತ ಸೌಲಭ್ಯಗಳು, ಶಾಲಾ ಸಮಗ್ರ ಹಾಗೂ ಸಿಬ್ಬಂದಿಗಳ ಪಾಲ್ಗೊಳ್ಳುವಿಕೆ ಪ್ರಶಂಸಾರ್ಹವಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿಗಳಾದ ರಿತೇಶಕುಮಾರ ಸಿಂಗ ಹರ್ಷವ್ಯಕ್ತಪಡಿಸಿದರು.
ಅವರು ಬುಧವಾರದಂದು ಮೂಡಲಗಿ ಶೈಕ್ಷಣಿಕ ವಲಯದ ಮೆಳವಂಕಿಯ ಸಿದ್ದಾರೂಢ ಮಠ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಡೇರಟ್ಟಿಯ ಸಮೂಹ ಸಂಪನ್ಮೂಲ ಕೇಂದ್ರ, ಕಸ್ತೂರಿ ಬಾ ಗಾಂಧೀ ಬಾಲಿಕೆಯರ ವಸತಿ ನಿಲಯ, ಸರಕಾರಿ ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ಶಾಲೆಗಳಿಗೆ ಆಕಸ್ಮಿಕ ಭೇಟಿ ನೀಡಿದರು.
ಸರಕಾರಿ ಶಾಲೆಗಳಲ್ಲಿ ದಾಖಲಾತಿಯ ಕೊರತೆ ಎದ್ದು ಕಾಣುವ ಸಂದರ್ಭದಲ್ಲಿ ಅತೀ ಹೆಚ್ಚು ದಾಖಲಾತಿ ಹೊಂದುವುದು ಅತ್ಯವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಮೆಳವಂಕಿಯ ಸಿದ್ದಾರೂಢ ಮಠ ಶಾಲೆಯು ೭೨೮ ಮಕ್ಕಳನ್ನು ಹಾಗೂ ೧೦ ಜನ ಶಿಕ್ಷಕರನ್ನು ಹೊಂದುವದರ ಮೂಲಕ ಮಾದರಿ ಶಾಲೆಯಾಗಿದೆ. ಕಲಿಕೆ ಫಲಪ್ರದವಾಗುವ ನಿಟ್ಟಿನಲ್ಲಿ ಶಿಕ್ಷಕ ಸಮೂಹದ ಪಾತ್ರ ಮೆಚ್ಚವಂತಾಗಿದೆಯೆoದರು.
ಸರಕಾರಿ ಶಾಲೆಗಳಲ್ಲಿ ಅನೇಕ ಕಲಿಕಾ ಕಾರ್ಯಚಟುವಟಿಕೆಗಳು, ಪಠ್ಯದ ಜೊತೆಗೆ ಸಹ ಪಠ್ಯ ಚಟುವಟಿಕೆಗಳು ಹಾಗೂ ಪೌಷ್ಠಿಕಾಂಶಯುಕ್ತ ಉಪಾಹಾರದ ವ್ಯವಸ್ಥೆ ಉತ್ತಮ ರೀತಿಯದಾಗಿದೆ. ಉತ್ತಮ ರೀತಿಯಾದ ಕಲಿಕಾ ಪರಿಸರ ಸೃಷ್ಟಿಸಿದರೆ ಮಕ್ಕಳ ನಲಿವಿನ ಕಲಿಕೆಗೆ ಸಹಾಯಕವಾಗುವದು. ಮಕ್ಕಳ ಕಲಿಕೆಗೆ ಪೂರಕ ಚಟುವಟಿಕೆಗಳನ್ನು ಒದಗಿಸುವದು ಅತ್ಯವಶ್ಯಕವಾಗಿದೆ ಎಂದರು.
ಈ ಸಂದರ್ಭದಲ್ಲಿ ಅತೀ ಹೆಚ್ಚು ದಾಖಲಾತಿ ಹೊಂದಿರುವ ಮೆಳವಂಕಿಯ ಸಿದ್ದಾರೂಢ ಮಠ ಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯ ಈರಣ್ಣ ಕಡಕೋಳ ಹಾಗೂ ಶಾಲಾ ಸಿಬ್ಬಂದಿಯವರನ್ನು ಪ್ರಶಂಸಿಸಿ ಅಭಿನಂದನಾ ಪತ್ರ ನೀಡಿದರು.
ಈ ಸಂದರ್ಭದಲ್ಲಿ ಧಾರವಾಡ ಅಪರ ಆಯುಕ್ತರಾದ ಜಯಶ್ರೀ ಶಿಂತ್ರಿ, ಅಪರ ಆಯುಕ್ತರಾದ ಆಕಾಶ, ಚಿಕ್ಕೋಡಿಯ ಡಿಡಿಪಿಐ ಪಾಂಡುರoಗ ಭಂಡಾರೆ, ದಾರವಾಡದ ಡಿಡಿಪಿಐ ಸಂಜೀವ ಬೆಂಗೇರಿ, ಮೂಡಲಗಿ ಬಿಇಒ ಅಜೀತ ಮನ್ನಿಕೇರಿ ಗೋಕಾಕ ಬಿಇಒ ಜಿ.ಬಿ ಬಳಿಗಾರ, ಮಧ್ಯಾಹ್ನ ಉಪಹಾರ ಯೋಜನೆಯ ಸಹಾಯಕ ನಿರ್ದೇಶಕ ಎ.ಬಿ ಮಲಬನ್ನವರ, ಸಿ.ಆರ್.ಪಿ ಎಮ್.ಎಲ್ ಅಮಣಿ ಹಾಜರಿದ್ದರು.