ಮೈಸೂರು – ಪದವಿ ಪೂರ್ವ ಶಿಕ್ಷಣ ಇಲಾಖೆ, ಮೈಸೂರು ಜಿಲ್ಲಾ ಘಟಕದ ಕನ್ನಡ ಉಪನ್ಯಾಸಕರ ವೇದಿಕೆ ವತಿಯಿಂದ ಕನ್ನಡ ಹಬ್ಬ ಹಾಗೂ ಕಾರ್ಯಾಗಾರವನ್ನು ಇಂದು ವಿಜಯ ವಿಠಲ ಕಾಲೇಜಿನ ಆವರಣದಲ್ಲಿ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಿದ್ವಾಂಸ ಡಾ.ಮೈಸೂರು ಕೃಷ್ಣಮೂರ್ತಿಯವರು ಜ್ಯೋತಿ ಬೆಳಗಿಸಿ ಮಾತನಾಡುತ್ತಾ, ಕನ್ನಡವನ್ನು ಉಳಿಸಿ ಬೆಳೆಸಬೇಕಾದರೆ ನಿತ್ಯವೂ ನಾವು ಕನ್ನಡ ಭಾಷೆಯನ್ನು ಬಳಸಬೇಕು. ಹಾಗಾದಾಗ ಮಾತ್ರ ಅದು ತನ್ನ ಅಸ್ತಿತ್ವವನ್ನು ಎಂದಿಗೂ ಬಿಡುವುದಿಲ್ಲ. ನಿತ್ಯ ನೂತನವಾಗಿ ಉಳಿಯುತ್ತದೆ. ಕನ್ನಡ ಭಾಷೆಗೆ ತನ್ನದೇ ಆದ ಇತಿಹಾಸ ಮತ್ತು ಪರಂಪರೆ ಇದೆ. ಆದ್ದರಿಂದ ಭಾರತಕ್ಕೆ ವಿಶ್ವ ಗುರುವಿನ ಸ್ಥಾನವನ್ನು ತಂದು ಕೊಡುವುದರಲ್ಲಿ ಕನ್ನಡದ ಕೊಡುಗೆ ಅಪಾರವಾದುದು ಎಂದು ಅಭಿಪ್ರಾಯಿಸಿ, ಇದಕ್ಕೆ ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಹಾಗೂ ಕೇಂದ್ರ ಸಾಹಿತ್ಯ ಮತ್ತು ರಾಜ್ಯ ಸಾಹಿತ್ಯ ಪ್ರಶಸ್ತಿಗಳು ಬಂದಿರುವುದೇ ಸಾಕ್ಷಿಯಾಗಿದೆ ಎಂದರು. ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ವೈವಿಧ್ಯತೆ ಇದೆ. ಈ ವೈವಿಧ್ಯತೆಯನ್ನು ಉಳಿಸಿ ಬೆಳೆಸುವಂತಹ ಕಾರ್ಯವನ್ನು ಇಂದಿನ ಯುವ ಜನಾಂಗ ಮಾಡಬೇಕಿದೆ ಎಂದು ತಿಳಿಸಿದರಲ್ಲದೇ, ಕನ್ನಡದ ಅಭಿಮಾನವನ್ನು ಕನ್ನಡಿಗರು ಮಾತ್ರವಲ್ಲದೇ ಕನ್ನಡೇತರರೂ ಕೂಡ ತೋರಬೇPಕೆಂದ ಅವರು, ಇಲ್ಲದಿದ್ದರೆ ಕನ್ನಡ ಭಾಷೆ ನಿಂತ ನೀರಾಗಿ ಉಳಿಯುತ್ತದೆ. ಮಾತೃಭಾಷೆ ಮರೆತರೆ ನಾವು ನಮ್ಮ ಹೆತ್ತವರನ್ನು ಮರೆತಂತೆ. ಆದ್ದರಿಂದ ಕನ್ನಡ ಭಾಷೆಗೆ ಯಾರೇ ಆಗಲಿ ದ್ರೋಹ ಬಗೆದರೆ ಸಹಿಸಲಾಗದು. ನಮ್ಮ ಮಕ್ಕಳಿಗೆ ಕನ್ನಡ ಭಾಷೆಯನ್ನು ಪ್ರಾಥಮಿಕ ಹಂತದಲ್ಲಿಯೇ ಕಲಿಸುವ ಕಾರ್ಯಕ್ಕೆ ನಾವೆಲ್ಲರೂ ಮುಂದಾಗಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪ್ರಾಂಶುಪಾಲರಾದ ಪುಟ್ಟಗೌರಮ್ಮ ಅವರು ಮಾತನಾಡಿ, ಅಂಕಗಳ ದೃಷ್ಟಿಯಿಂದ ಇಂದಿನ ಯುವಕರು ಇತರ ಭಾಷೆಗಳನ್ನು ಕಲಿಯುತ್ತಿರುವುದು ಬೇಸರದ ಸಂಗತಿ. ಕನ್ನಡ ಭಾಷೆಯನ್ನು ಮೊದಲು ಕಲಿತು ನಂತರ ಇತರ ಭಾಷೆಗಳನ್ನು ಕಲಿತಾಗ ಮಾತೃಭಾಷಾ ವ್ಯಾಮೋಹ ಹೆಚ್ಚುತ್ತದೆಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕವಿ ಹಾಗೂ ಪ್ರಾಂಶುಪಾಲರಾದ ಡಾ.ಸಂತೋಷ್ ಚೊಕ್ಕಾಡಿ ಅವರು ಮಾತನಾಡಿ, ಕನ್ನಡ ವೇದಿಕೆಯ ಕಾರ್ಯಕ್ರಮಗಳು ಸೃಜನಶೀಲತೆಯಿಂದ ಕೂಡಿದಾಗ ಹೊಸ ಸಾಧ್ಯತೆಗಳನ್ನು ಹುಟ್ಟು ಹಾಕಲು ಸಾಧ್ಯವಾಗುತ್ತದೆ. ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳಿಗೆ ಪುನಶ್ಚೇತನ ಕಾರ್ಯಾಗಾರಗಳು ಹೊಸ ಹೊಸ ಆವಿಷ್ಕಾರಗಳನ್ನು ಸೃಷ್ಟಿಸಲು ಮಾರ್ಗವಾಗುತ್ತದೆಂದು ಅಭಿಪ್ರಾಯಿಸಿದರು.
ವೇದಿಕೆಯಲ್ಲಿ ಕನ್ನಡ ಸಾಹಿತ್ಯದ ಸಿರಿವಂತಿಕೆಯನ್ನು ಸಾರುವ ಗಮನ ವಾಚನ ಮತ್ತು ವ್ಯಾಖ್ಯಾನವನ್ನು ವಿದುಷಿ ಧರಿತ್ರಿ ಆನಂದರಾವ್ ಹಾಗೂ ವ್ಯಾಖ್ಯಾನವನ್ನು ವಿದ್ವಾನ್ ಕೃಪಾ ಮಂಜುನಾಥ್ ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ ಖ್ಯಾತ ಜಾನಪದ ಗಾಯಕ ಅಮ್ಮ ರಾಮಚಂದ್ರ ಅವರು ಕನ್ನಡ ಕಂಪನ್ನು ಸಾರುವ ಅನೇಕ ಸುಪ್ರಸಿದ್ದ ಗೀತೆಗಳನ್ನಾಡಿ ಸಭಿಕರನ್ನು ಸಂತೋಷಪಡಿಸಿದರು. ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಕನ್ನಡ ರಸಪ್ರಶ್ನೆ, ಗೀತಗಾಯನ, ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿತ್ತು. ವೇದಿಕೆಯಲ್ಲಿ ಕನ್ನಡ ಉಪನ್ಯಾಸಕರ ಸಂಘದ ಅಧ್ಯಕ್ಷ ಕ್ಯಾತಮಾರನಹಳ್ಳಿ ಎಂ.ಮಹೇಶ್, ಪ್ರಧಾನ ಕಾರ್ಯದರ್ಶಿ ಕೆಂಪಯ್ಯ, ಖಜಾಂಚಿ ಡಾ.ಬೇವಿನಹಳ್ಳಿ ಉಮೇಶ್, ಗೌರವ ಅಧ್ಯಕ್ಷರುಗಳಾದ ಪುಟ್ಟಗೌರಮ್ಮ, ಬಾಲಸುಬ್ರಹ್ಮಣ್ಯಂ, ವಿಶಕಂಠಮೂರ್ತಿ, ನೀ.ಗು.ರಮೇಶ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.