ಸಿಂದಗಿ: ರಾಜ್ಯದಲ್ಲಿ ಯುರಿಯಾ ಹಾಗೂ ರಸಗೊಬ್ಬರ ಅಭಾವಕ್ಕೆ ರಾಜ್ಯ ಸರ್ಕಾರದ ಅಸಹಕಾರ ಹಾಗೂ ನಿರ್ಲಕ್ಷ್ಯವೇ ಕಾರಣ. ಈ ವಿಚಾರವಾಗಿ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದು ತಾಲ್ಲೂಕ ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ ಮಾಗಣಗೇರವರು ಸರ್ಕಾರದ ಮೇಲೆ ಕಿಡಿಕಾರಿದರು
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯದಲ್ಲಿ ಈ ಬಾರಿ ಸರ್ಕಾರದ ಅಸಹಕಾರ ಮತ್ತು ನಿರ್ಲಕ್ಷ್ಯದಿಂದ ಯುರಿಯಾ ಗೊಬ್ಬರ ಅಭಾವ ಉಂಟಾಗಿದ್ದು, ಇದರಿಂದ ಕೆಲವು ಕಡೆಗಳಲ್ಲಿ ರೈತರಿಗೆ ಕೃಷಿ ಚಟುವಟಿಕೆ ನಡೆಸಲು ಸಮಸ್ಯೆಯಾಗುತ್ತಿದೆ. ಇನ್ನೂ ಅನೇಕ ಕಡೆಗಳಲ್ಲಿ ಯುರಿಯಾ ಗೊಬ್ಬರಕ್ಕಾಗಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರ ಮುಂಗಾರು ಪ್ರಾರಂಭದಲ್ಲೇ ಮಳೆಯ ಹವಾಮಾನ ವೈಪರೀತ್ಯವನ್ನು ತಜ್ಞರಿಂದ ಮಾಹಿತಿ ಪಡೆದು ಹೆಚ್ಚಿನ ದಾಸ್ತಾನು ತರಿಸಲು ಮುತುವರ್ಜಿ ವಹಿಸಬೇಕಾಗಿತ್ತು, ಈಗ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುವುದು ಸರಿಯಲ್ಲ, ಈಗಲೂ ಈ ವಿಚಾರವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ಒಂದು ವಾರದ ಒಳಗಡೆ ಹೆಚ್ಚಿನ ದಾಸ್ತಾನು ತರಿಸುವ ಮೂಲಕ ರೈತರಿಗೆ ನೆರವಾಗುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.