ಮೂಡಲಗಿ:-ಪಂಚಮಸಾಲಿ ಸಮಾಜದ ಮೇಲೆ ಲಾಠಿ ನಡೆಸಿದ, ಕೈಯಿಂದಲೇ ವಿಜಯಪುರದಲ್ಲಿ ರಾಣಿ ಚೆನ್ನಮ್ಮಳ ಪುತ್ಥಳಿ ಅನಾವರಣ ಮಾಡುತ್ತಿರುವುದು ಗೌರವವಲ್ಲ, ಶುದ್ಧ ದ್ವಂದ್ವ ರಾಜಕಾರಣ ಇದು ಖಂಡನೀಯ ಎಂದು ಪಂಚಮಸಾಲಿ ಮುಖಂಡ ನಿಂಗಪ್ಪ ಫಿರೋಜಿ ಹೇಳಿದ್ದಾರೆ.
ಬೆಳಗಾವಿಯಲ್ಲಿ ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದ ಪಂಚಮಸಾಲಿ ಸಮಾಜ ಬಾಂಧವರ ಮೇಲೆ ಪೊಲೀಸರ ಮೂಲಕ ಲಾಠಿಚಾರ್ಜ್ ನಡೆಸಿದ ಸಿದ್ದರಾಮಯ್ಯ ಸರ್ಕಾರದ ಮುಖ್ಯಮಂತ್ರಿ ಕೈಯಿಂದ ವಿಜಯಪುರದಲ್ಲಿ ರಾಣಿ ಚೆನ್ನಮ್ಮಳ ಪುತ್ಥಳಿ ಅನಾವರಣ ಮಾಡಿಸುವುದು ದ್ವಂದ್ವ, ನಾಟಕ ಮತ್ತು ಜನವಂಚನೆಯ ಪರಮಾವಧಿಯಾಗಿದೆ.
ಈ ಕಾಂಗ್ರೆಸ್ ಸರ್ಕಾರಕ್ಕೆ ಕಿತ್ತೂರ ಚನ್ನಮ್ಮಳ, ಸಂಗೊಳ್ಳಿ ರಾಯಣ್ಣ, ಅಂಬಿಗರ ಚೌಡಯ್ಯ ಸಮಾಜಗಳ ಮತಗಳು ಬೇಕು. ಆದರೆ ಅವರ ಹಕ್ಕು, ಗೌರವ ಮತ್ತು ಬದುಕಿನ ಪ್ರಶ್ನೆ ಬಂದಾಗ ಸರ್ಕಾರ ಸಂಪೂರ್ಣ ಮೌನ ವಹಿಸುತ್ತದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಇದು ಸ್ಪಷ್ಟವಾಗಿ ವೋಟ್ ಬ್ಯಾಂಕ್ ರಾಜಕಾರಣವಲ್ಲದೇ ಮತ್ತೇನು? ಬಸವಣ್ಣನವರ ತತ್ವಗಳನ್ನು ವೇದಿಕೆಯಲ್ಲಿ ಉಚ್ಚರಿಸುವ ಕಾಂಗ್ರೆಸ್ ಸರ್ಕಾರ, ಅದೇ ಬಸವಣ್ಣನವರ ಅನುಯಾಯಿಗಳು ಇಂದಿನ ಕಾಲದ ಅಗತ್ಯಕ್ಕೆ ತಕ್ಕಂತೆ
ಮೀಸಲಾತಿ ಹಕ್ಕು ಕೇಳಿದರೆ, ಅದನ್ನು ಸಂವಿಧಾನ ವಿರೋಧಿ ಎಂದು ಮುದ್ರೆ ಹೊಡೆದು ಲಾಠಿ, ದಮನ ಮತ್ತು ದೌರ್ಜನ್ಯದಿಂದ ಉತ್ತರ ನೀಡುತ್ತದೆ.
ಕೇಂದ್ರ ಸರ್ಕಾರ ನೀಡಿರುವ ಅಂಬಿಗರ ಚೌಡಯ್ಯ ಸಮಾಜದ ಎಸ್ ಟಿ (ST) ಮೀಸಲಾತಿಗೆ ರಾಜ್ಯ ಸರ್ಕಾರ ತೊಂದರೆ ನೀಡುತ್ತಿರುವುದೇಕೆ?
ಕುರುಬ ಸಮುದಾಯದ ಎಸ್ ಟಿ ಮೀಸಲಾತಿಗೂ ಇನ್ನೂ ಶಿಫಾರಸು ಮಾಡದಿರುವುದು ಏಕೆ?
ಇದು ಬಸವಣ್ಣನವರ ತತ್ವವೇ?
ಇದು ಸಾಮಾಜಿಕ ನ್ಯಾಯವೇ?
ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಾಹೇಬರೇ,
ನೀವು ಹೇಳುವ ಬಸವಣ್ಣನವರ ಅನುಯಾಯಿಗಳೇ
ಕಾಯಕನಿಷ್ಠ ಲಿಂಗಾಯತ ರೈತಾಪಿ ವರ್ಗ. ಆದರೆ ನಿಮ್ಮ ಸರ್ಕಾರದ ನೀತಿಗಳಿಂದ ರೈತರ ಹೊಲಗಳು ಹರಾಜಾಗುತ್ತಿವೆ
ಬೆಳೆದ ಬೆಳೆಗೆ ಬೆಲೆ ಇಲ್ಲ, ಕೆಲಸಕ್ಕೆ ಕೂಲಿ ಇಲ್ಲ ಬದುಕು ದಿನೇ ದಿನೇ ಅಸಹನೀಯವಾಗುತ್ತಿದೆ
ನಮ್ಮ ಸಮಾಜದಲ್ಲಿ ಯಾರೋ ನಾಲ್ಕು ಜನ ರಾಜಕೀಯವಾಗಿ ಬೆಳೆದಿರಬಹುದು. ಆದರೆ 99% ಬಸವಣ್ಣನವರ ಅನುಯಾಯಿಗಳು ನಿಮ್ಮ ಸರ್ಕಾರದ ತಪ್ಪು ನೀತಿಗಳಿಂದ ದಿಕ್ಕುತೋಚದೆ ನರಳುತ್ತಿದ್ದಾರೆ. ಬಸವಣ್ಣನವರ ಹೆಸರನ್ನು ಕೇವಲ ರಾಜಕೀಯ ಲಾಭಕ್ಕೆ ಬಳಸುವುದನ್ನು ತಕ್ಷಣ ನಿಲ್ಲಿಸಿ. ಬಾಯಲ್ಲಿ ಬಸವಣ್ಣ, ಕೈಯಲ್ಲಿ ಲಾಠಿ —
ಈ ದ್ವಂದ್ವ ನೀತಿಗೆ ರಾಜ್ಯದ ಜನತೆ ಸಾಕ್ಷಿಯಾಗಿದೆ.
ಈ ಹಿನ್ನೆಲೆಯಲ್ಲೇ ಸ್ಪಷ್ಟವಾಗಿ ಹೇಳುತ್ತೇವೆ:
ಸಿದ್ಧರಾಮಯ್ಯ ಸರ್ಕಾರದ ಮುಖ್ಯಮಂತ್ರಿಯವರು ರಾಣಿ ಚೆನ್ನಮ್ಮಳ ಮೂರ್ತಿ ಅನಾವರಣ ಕಾರ್ಯಕ್ರಮಕ್ಕೆ ಹಾಜರಾಗುವುದಾದರೆ, ಲಿಂಗಾಯತ ಸಮುದಾಯದ ಅನುಯಾಯಿಗಳು ಹಾಗೂ ಸ್ವಾಮೀಜಿಗಳು ಇಂತಹ ದ್ವಂದ್ವ ರಾಜಕಾರಣದ ವೇದಿಕೆಗೆ ಹೋಗಬಾರದು. ಇದು ಗೌರವದ ಪ್ರಶ್ನೆ — ರಾಜಕೀಯ ಪ್ರದರ್ಶನಕ್ಕೆ ಅವಕಾಶ ನೀಡುವ ವಿಚಾರವಲ್ಲ. ಬಸವಣ್ಣನವರ ತತ್ವಗಳನ್ನು ಆಚರಣೆಯಲ್ಲಿ ತೋರಿಸಲು ಸಾಧ್ಯವಿಲ್ಲದಿದ್ದರೆ, ಅವರ ಹೆಸರನ್ನು ಉಚ್ಚರಿಸುವ ನೈತಿಕ ಹಕ್ಕನ್ನೇ ಸಿದ್ದರಾಮಯ್ಯ ಸರ್ಕಾರ ಕಳೆದುಕೊಂಡಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು
ಬಸವಣ್ಣನವರ ಅನುಯಾಯಿಗಳ ಹಕ್ಕು, ಗೌರವ ಮತ್ತು ಬದುಕಿನ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡಬೇಕು. ಇಲ್ಲವಾದರೆ ಈ ದಮನಕಾರಿ ಆಡಳಿತಕ್ಕೆ ಜನತೆ ಹೋರಾಟದ ಮೂಲಕ ತಕ್ಕ ಉತ್ತರ ನೀಡುವುದು ಖಚಿತ.
ಶರಣ ನಿಂಗಪ್ಪ ತಿ.ಫಿರೋಜಿ
ಅಧ್ಯಕ್ಷರು
ಬೆಳಗಾವಿ ಜಿಲ್ಲಾ ಪಂಚಮಸಾಲಿ ಸಮಾಜ

