ಮೂಡಲಗಿ: ರಾಜ್ಯದ ಬುಡಕಟ್ಟು ಪ್ರದೇಶಗಳಲ್ಲಿ ಶಿಕ್ಷಣ, ಆರೋಗ್ಯ, ಮೂಲಸೌಕರ್ಯ, ಕೃಷಿ ಮತ್ತು ನೀರಾವರಿ ಸಂಬಂಧಿತ ಯೋಜನೆಗೆ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ವನಬಂಧು ಕಲ್ಯಾಣ್ ಯೋಜನೆ (ಪಿಎಂವಿಕೆವೈ) 2021-22 ಸಾಲಿಗೆ ಕರ್ನಾಟಕ ರಾಜ್ಯಕ್ಕೆ 21,787.84 ಲಕ್ಷ ರೂ ಅನುದಾನ ಬಿಡುಗಡೆಯಾಗಿದೆ ಎಂದು ಬುಡಕಟ್ಟು ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವೆ ರೇಣುಕಾ ಸಿಂಗ್ ಸರುತ ಅವರು ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದ್ದಾರೆ ಎಂದು ಸಂಸದ ಈರಣ್ಣ ಕಡಾಡಿ ಹೇಳಿದರು.
ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಪ್ರಧಾನ ಮಂತ್ರಿ ವನಬಂಧು ಕಲ್ಯಾಣ್ ಯೋಜನೆಯ ಕುರಿತು ಸಂಸದ ಈರಣ್ಣ ಕಡಾಡಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು ದೇಶಾದ್ಯಂತ ಬುಡಕಟ್ಟು ಜನರ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರವು 2021-22 ರಿಂದ 2025-26ರ ಸಾಲಿಗೆ ಪ್ರಧಾನ ಮಂತ್ರಿ ವನಬಂಧು ಕಲ್ಯಾಣ್ ಯೋಜನೆ ಅನುಷ್ಠಾನಕ್ಕೆ ಅನುಮೋದನೆ ನೀಡಲಾಗಿದ್ದು, ಕರ್ನಾಟಕ ರಾಜ್ಯಕ್ಕೆ 2021-22 ನೇ ಸಾಲಿನಲ್ಲಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕಾಗಿ 1753.16 ಲಕ್ಷ ರೂ., ಪೋಸ್ಟ್-ಮೆಟ್ರಿಕ್ ವಿದ್ಯಾರ್ಥಿ ವೇತನಕ್ಕಾಗಿ 17081.51 ಲಕ್ಷ ರೂ. ಬುಡಕಟ್ಟು ಸಂಶೋಧನಾ ಸಂಸ್ಥೆ ಅಭಿವೃದ್ಧಿಗೆ 152 ಲಕ್ಷ ರೂ. ದುರ್ಬಲ ಬುಡಕಟ್ಟು ಗುಂಪುಗಳ ಅಭಿವೃದ್ದಿಗೆ 661.17 ಲಕ್ಷ ರೂ. ರಾಜ್ಯದ 210 ಗ್ರಾಮಗಳಲ್ಲಿ ಪ್ರಧಾನ ಮಂತ್ರಿ ಆದಿ ಆದರ್ಶ ಗ್ರಾಮ ಯೋಜನೆ (ಪಿಎಂಎಎಜಿವೈ) 2140 ಲಕ್ಷ ರೂ, ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ಉತ್ತರಿಸಿದ್ದಾರೆ ಎಂದು ಸಂಸದ ಈರಣ್ಣ ಕಡಾಡಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.