ನಾವು ಬೇಲಗೂರಿನಲ್ಲಿ ದೇವಾಲಯಗಳನ್ನು ದರ್ಶಿಸಿ ಹಾಲು ರಾಮೇಶ್ವರ ಕ್ಷೇತ್ರ ತಲುಪಿದಾಗ ಮದ್ಯಾಹ್ನ ಒಂದು ಕಾಲು ಗಂಟೆ. ಬಿರು ಬಿಸಿಲಿಗೆ ನಮ್ಮ ಕಾಲುಗಳು ಬೆಂದು ಬಳಲಿದವು. ದೇವಸ್ಥಾನದ ಬಾಗಿಲು ತೆರೆಯುವುದು ಎರಡೂವರೆ ಗಂಟೆ ಮೇಲೆ ಎಂದರು ಅಲ್ಲಿಯ ಟೀ ಅಂಗಡಿಯವರು. ಅಲ್ಲಿಯವರೆಗೂ ಏನು ಮಾಡುವುದು? ಟೀ ಕುಡಿದು ಟೈಂ ಪಾಸ್ ಮಾಡದೇ ಅಲ್ಲೇ ಹೊರಗೆ ಅಡ್ಡಾಡಿದೆವು.
ದೇವಾಲಯದ ಹೊರಗೆ ಚಿತ್ರದುರ್ಗ ಪ್ರವಾಸೋದ್ಯಮ ಇಲಾಖೆಯು ಹಾಕಿಸಿರುವ ಕಲ್ಲಿನ ಫಲಕದಲ್ಲಿ ಕ್ಷೇತ್ರದ ಬಗ್ಗೆ ಒಂದಿಷ್ಟು ಮಾಹಿತಿ ಸಿಕ್ಕಿತು. ಹೊಸದುರ್ಗ ತಾಲ್ಲೂಕಿನಲ್ಲಿರುವ ಹಾಲು ರಾಮೇಶ್ವರವು ಚಿತ್ರದುರ್ಗದಿಂದ 50 ಕಿ.ಮೀ. ದೂರದಲ್ಲಿದೆ. ಸುಂದರ ಪ್ರಕೃತಿಯ ಮಡಿಲಲ್ಲಿರುವ ಈ ತಾಣ ಅನೇಕ ದೇವಾಲಯಗಳನ್ನು ಒಳಗೊಂಡ ಪ್ರಾಕಾರಗಳನ್ನು ಹೊಂದಿದೆ. ಇಲ್ಲಿರುವ ಉದ್ಭವ ಗಂಗೆಯಿಂದ ಈ ತಾಣ ಪ್ರಸಿದ್ಧವಾಗಿದೆ. ಕೊಳದ ತಳದಿಂದ ಮೇಲೆ ಬರುವ ಫಲಸಂಕೇತಗಳೇ ಇಲ್ಲಿಯ ಆಕರ್ಷಣೆ. ಇಲ್ಲಿಯ ಮುಖ್ಯ ದೇವಾಲಯದೊಳಗೆ ಹೊಯ್ಸಳ ಕಾಲದ ಕೆಲವು ಮೂರ್ತಿಗಳಿವೆ. ಇಲ್ಲಿಯ ಗಂಗಾದೇವಿ ಗುಡಿ ಮತ್ತು ಉಯ್ಯಾಲೆ ಕಂಬ ಇವು ಚಿತ್ರದುರ್ಗ ಪಾಳೆಯಗಾರರ ಕೊಡುಗೆಗಳಾಗಿವೆ. ಹೆಚ್ಚುವರಿಯಾದ ಉದ್ಭವ ಜಲ ಹಂತ ಹಂತವಾಗಿ ಮುಂದೆ ಹರಿದು ಸಾಗಲು ಮೂರು ಪುಷ್ಕರಿಣಿಗಳನ್ನು ಬಹು ಹಿಂದೆಯೇ ಇಲ್ಲಿ ಮಾಡಲಾಗಿದೆ.
ಹೊಸ ದುರ್ಗ ದಿಂದ 12 ಕಿ.ಮೀ. ದೂರದ ಈ ಕ್ಷೇತ್ರಕ್ಕೆ ಚಿತ್ರದುರ್ಗದಿಂದ ತಾಳ್ಯದವರೆಗೆ ಬಸ್ ವ್ಯವಸ್ಥೆ ಇದೆ. ತಾಳ್ಯದಿಂದ ಹಾಲು ರಾಮೇಶ್ವರ ಹತ್ತಿರವಿದೆ. ಶಿವಮೊಗ್ಗ ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಶಿವಗಂಗೆಯಲ್ಲಿ ಇಳಿದು ರಿಕ್ಷಾದಲ್ಲಿ ಇಲ್ಲಿಗೆ ಬರಬಹುದು. ನಾವು ಕಾರಿನಲ್ಲಿ ಇತ್ತ ಕಡೆಯಿಂದ ಬಂದೆವು ಅತ್ತ ಹಾಲು ರಾಮೇಶ್ವರ ದರ್ಶಿಸಿ ಚಿತ್ರದುರ್ಗಕ್ಕೆ ಹೋಗುವಾಗ ಈ ಊರುಗಳು ಸಿಕ್ಕವು.
ತ್ರೇತಾಯುಗದಲ್ಲಿ ಶ್ರೀರಾಮಚಂದ್ರನ ಕೈಯಿಂದ ಪ್ರತಿಷ್ಠೆಯಾಗಿದೆ ಎಂದು ಹೇಳಲಾದ ಶಿವಲಿಂಗ ಉದ್ಭವಮೂರ್ತಿ ಎಂಬ ನಂಬಿಕೆ ಇದೆ. ದೇವಾಲಯದ ಮುಂದೆ ನಂದಿ ಮೂರ್ತಿಯಿದೆ. ಗಂಗಾ ಕೊಳ ಇಲ್ಲಿಯ ವಿಶೇಷ. ಇಲ್ಲಿಗೆ ಬರುವ ಭಕ್ತರು ಗಂಗಾಮಾತೆಗೆ ನಮಸ್ಕರಿಸಿ ಕೊಳದಲ್ಲಿ ಸ್ನಾನ ಮಾಡಿ ತಮ್ಮ ಮನಸ್ಸಿನಲ್ಲಿ ಕೋರಿಕೊಳ್ಳುತ್ತಾರೆ. ಸ್ವಲ್ಪ ಸಮಯದಲ್ಲಿ ಕೊಳದ ನೀರಿನ ಮೇಲೆ ವಸ್ತುಗಳು ತೇಲುತ್ತಾ ಬರುತ್ತವೆ. ಅರ್ಚಕರು ಈಡೇರುವ ಬಯಕೆಗಳ ಬಗ್ಗೆ ತಿಳಿಸುತ್ತಾರೆ. ನೀರಿನಲ್ಲಿ ವಿಳೆಯದೆಲೆ, ಹೂವು, ನಿಂಬೆ ಹಣ್ಣು ತೆಂಗಿನಕಾಯಿ ತೇಲಿ ಬರುತ್ತವೆ. ಇವು ಬೇಡಿಕೆ ಈಡೇರುತ್ತದೆ ಎಂದು ಸಂಕೇತಿಸುತ್ತವೆ. ಯಾರೂ ಬೇಡಿಕೆ ಪ್ರಾರ್ಥಿಸಿರುತ್ತಾರೆ ಅವರೇ ಅದನ್ನು ಪಡೆಯಬೇಕು. ಬೇರೆಯವರು ಪಡೆದರೆ ನಿಷ್ಪ್ರಯೋಜಕ. ತೆಂಗಿನಚಿಪ್ಪು, ಕೂದಲು, ಬಾಳೆಹಣ್ಣಿನ ಸಿಪ್ಪೆ ಬಂದರೆ ಬೇಡಿಕೆ ಈಡೇರದು ಎಂಬ ಸಂಕೇತ. ಇದೇ ಈ ಗಂಗಾಕೊಳದ ವಿಶೇಷತೆ.
ವಾಲ್ಮೀಕಿ ಮಹರ್ಷಿಗಳ ಪತ್ನಿ ಸುದತಿದೇವಿ ಕಾಶಿಯಲ್ಲಿ ಗಂಗೆಗೆ ಬಾಗಿನ ರೂಪದಲ್ಲಿ ಸಮರ್ಪಿಸಿದ ಕಡಗ ಈ ಊರಿನ ಹುತ್ತದಲ್ಲಿ ದೊರಕಿ ಇಲ್ಲಿ ಗಂಗೋದ್ಭವ ಆಯಿತೆಂದು, ಈ ವಿಷಯ ತಿಳಿದ ವಾಲ್ಮೀಕಿ ಮಹರ್ಷಿಗಳು ಇಲ್ಲಿಯೇ ನೆಲೆ ನಿಂತು ಬರುವ ಭಕ್ತರ ಅದೃಷ್ಟಾನುಸಾರ ಬೇಡಿದ ಪ್ರಸಾದ ನೀಡೆಂದು ಗಂಗೆಗೆ ತಿಳಿಸಿ ಗಂಗಾಮಾತೆಯ ವಿಗ್ರಹ ಪ್ರತಿಷ್ಠಾಪಿಸಿ ರಾಮೇಶ್ವರದತ್ತ ಹೋಗುತ್ತಾರೆ. ಆಗ ಹಾಲಿನ ಬಣ್ಣದ ನೀರು ಉದ್ಭವಿಸಿದ ಈ ಕ್ಷೇತ್ರಕ್ಕೆ ತಾವು ಹೊರಟಿದ್ದ ರಾಮೇಶ್ವರದ ಹೆಸರು ಸೇರಿಸಿ ಹಾಲು ರಾಮೇಶ್ವರ ಎಂದು ನಾಮಕರಣ ಮಾಡಿದರೆಂದು ಪ್ರತೀತಿ ಇದೆ. ಈ ಕ್ಷೇತ್ರದಲ್ಲಿ ಗಂಗೆ ಆವಿರ್ಭವಿಸಲು ಕಾರಣರಾದ ವಾಲ್ಮೀಕಿ ಮಹರ್ಷಿಗಳ ಪತ್ನಿ ಸುದತದೇವಿಯ ವಿಗ್ರಹವಿದೆ.
ಈ ಕ್ಷೇತ್ರವನ್ನು ಹಿಂದೆ ವಿಜಯನಗರದ ಅರಸರು, ದುರ್ಗದ ಪಾಳೆಯಗಾರರು ಅಭಿವೃದ್ಧಿ ಪಡಿಸಿದ್ದಾರೆ. ಹಿಂದಿನ ಮೈಸೂರಿನ ಶ್ರೀ ಜಯಚಾಮರಾಜ ಒಡೆಯರು ಇಲ್ಲಿಗೆ ಬಂದು ಗಂಗೆಯನ್ನು ಪೂಜಿಸಿ ಸಂತಾನ ಕರುಣಿಸುವಂತೆ ಕೋರಿ ಆ ನಂತರವೇ ಶ್ರೀಕಂಠದತ್ತ ನರಸಿಂಹರಾಜ ಒಡೆಯರು ಜನಿಸಿದರೆಂದೂ ಹೇಳುತ್ತಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗೆಡೆಯವರು ಪ್ರಗತಿ ಗಂಗಾ ಯೋಜನೆ ಉದ್ಘಾಟಿಸಿ ಹಾಲು ರಾಮೇಶ್ವರ ಗಂಗಾ ಮಾತೆಯನ್ನು ಪೂಜಿಸಿ ಅವರಿಗೆ ಬಿಲ್ವಪತ್ರೆ ಪ್ರಸಾದವಾಗಿ ಇಲ್ಲಿ ಮಂಜುಶ್ರೀ ಭವನ ನಿರ್ಮಿಸಿದ್ದಾರೆ. ಪ್ರಸ್ತುತ ಈ ದೇವಾಲಯ ಮುಜರಾಯಿ ಇಲಾಖೆಗೆ ಸೇರಿದೆ. ಕರ್ನಾಟಕ ಅಷ್ಟೇ ಅಲ್ಲಾ ಹೊರ ರಾಜ್ಯಗಳಿಂದಲೂ ಭಕ್ತರು ಇಲ್ಲಿಗೆ ಬರುತ್ತಾರೆ. ನಾವು ಹೋದಾಗಲೂ ಪಕ್ಕದ ಆಂದ್ರಪ್ರದೇಶ ರಾಜ್ಯದ ರಾಜಕೀಯ ನಾಯಕರು ಬಂದಿದ್ದರು. ಗನ್‍ಮ್ಯಾನ್ ಜೊತೆಗಿದ್ದನು.
ಎರಡೂವರೆ ಗಂಟೆಗೆ ಬಾಗಿಲು ತೆಗೆಯುವ ಹೊತ್ತಿಗೆ ಸಾಕಷ್ಟು ಜನ ಜಮಾಯಿಸಿದ್ದರು. ಬೇಡಿಕೆ ಪ್ರಾರ್ಥನೆ ಇದ್ದವರು ನಿಧಾನಕ್ಕೆ ಬನ್ನಿ. ಹಾಗೆಯೇ ದೇವರು ನೋಡಿ ಹೋಗುವವರು ಒಳಗೆ ಬಂದು ದರ್ಶನ ಮಾಡಿ ಹೊರ ಹೋಗಿ ಎಂದು ಹೇಳಲು ಅಂತೆಯೇ ನಾವು ಒಳಹೋದೆವು. ಕೊಳಕ್ಕೆ ಇಳಿಯಲು ಮೆಟ್ಟಿಲುಗಳಿವೆ. ಐದು ಅಡಿ ಉದ್ದ ಅಗಲದ ಪುಟ್ಟ ಕೊಳ. ನಾನು ಇಳಿದು ಪವಿತ್ರ ನೀರನ್ನು ತಲೆಗೆ ಪ್ರೋಕ್ಷಿಸಿಕೊಂಡು ಗಂಗಾಮಾತೆಗೆ ಕೈ ಮುಗಿದು ಇನ್ನೊಂದು ಬಾಗಿಲಿನಿಂದ ಹೊರಬಂದೆನು. ಒಳಗೆ ಕೊಳದ ಮುಂದೆ ರಾಜಕೀಯ ಮಹನೀಯರು ನೀರಿನ ಮೇಲೆ ತೇಲಿ ಬರುವ ತಮ್ಮ ಫಲಾಪೇಕ್ಷೆಯ ನಿರೀಕ್ಷೆಯಲ್ಲಿ ಕೈಮುಗಿದು ಕುಳಿತಿದ್ದರು.
—
ಗೊರೂರು ಅನಂತರಾಜು, ಹಾಸನ.
ಮೊ: 9449462879
ವಿಳಾಸ: ಹುಣಸಿನಕೆರೆ ಬಡಾವಣೆ, 29ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.